45 ವರ್ಷದ ಒಳಗಿನವರಿಗೂ ಶೀಘ್ರ ಕೋವಿಡ್ ಲಸಿಕೆ: ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಸುಳಿವು
45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಇದೀಗ ಅವಕಾಶ ನೀಡಿದೆ. ಮುಂದಿನ ದಿನಗಳಲ್ಲಿ 45 ವರ್ಷದ ಒಳಗಿನವರಿಗೂ ಲಸಿಕೆ ನೀಡಲು ಕೇಂದ್ರ ಸರ್ಕಾರ ಇದ್ಧತೆ ಮಾಡಿಕೊಳ್ಳುತ್ತಿದೆ ಎಂದು ಸದಾನಂದಗೌಡ ತಿಳಿಸಿದರು.
ಬೆಂಗಳೂರು: ಕೋವಿಡ್ ಲಸಿಕೆಯನ್ನು 45 ವರ್ಷದ ಒಳಗಿನವರಿಗೂ ನೀಡುವ ಬಗ್ಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಬುಧವಾರ (ಏಪ್ರಿಲ್ 14) ಸುಳಿವು ನೀಡಿದರು. ನಗರದ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಇಂದು ಕೋವಿಡ್-19 ಲಸಿಕೆಯ 2ನೇ ಡೋಸ್ ತೆಗೆದುಕೊಂಡ ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಇದೀಗ ಅವಕಾಶ ನೀಡಿದೆ. ಮುಂದಿನ ದಿನಗಳಲ್ಲಿ 45 ವರ್ಷದ ಒಳಗಿನವರಿಗೂ ಲಸಿಕೆ ನೀಡಲು ಕೇಂದ್ರ ಸರ್ಕಾರ ಇದ್ಧತೆ ಮಾಡಿಕೊಳ್ಳುತ್ತಿದೆ ಎಂದರು.
ದೇಶದಲ್ಲಿ ಕೋವಿಶೀಲ್ಡ್ ಹಾಗೂ ಕೊವಾಕ್ಸಿನ್ ಲಸಿಕೆಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿವೆ. ಇದುವರೆಗೆ ಸುಮಾರು 22 ಕೋಟಿ ಡೋಸ್ ಉತ್ಪಾದನೆ ಮಾಡಲಾಗಿದೆ. ಈಗಾಗಲೇ 11ರಿಂದ 12 ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ. ಕೊರೊನಾ ನಿಯಂತ್ರಿಸಲು ಭಾರತದ ನೆರವು ಕೇಳಿದ 90 ದೇಶಗಳಿಗೆ 6 ಕೋಟಿ ಡೋಸ್ ಒದಗಿಸಲಾಗಿದೆ. ಈಗ ರಷ್ಯಾದಿಂದ ಸ್ಪುಟ್ನಿಕ್-V ಲಸಿಕೆ ಆಮದುಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಇದರಿಂದ ಮುಂಬರುವ ದಿನಗಳಲ್ಲಿ ಲಸಿಕಾ ಅಭಿಯಾನವನ್ನು ಇನ್ನೂ ವೇಗವಾಗಿ ಮತ್ತು ವಿಸ್ತೃತವಾಗಿ ಕೈಗೊಳ್ಳಲು ಸಾಧ್ಯವಾಗಲಿದೆ ಎಂದರು.
ಕೊರೊನಾ ಚಿಕಿತ್ಸೆಗೆ ಬಳಸುವ ರೆಮ್ಡೆಸಿವಿರ್ ಚುಚ್ಚುಮದ್ದಿನ ಕೊರತೆಯಾಗಬಾರದು ಎಂಬ ಉದ್ದೇಶದಿಂದ ಅದರ ರಫ್ತು ನಿಷೇಧಿಸಲಾಗಿದೆ. ದೇಶದ ಏಳು ಫಾರ್ಮಾ ಕಂಪನಿಗಳು ಇದರ ಉತ್ಪಾದನೆಯ ಲೈಸನ್ಸ್ ಹೊಂದಿವೆ. ರೆಮ್ಡೆಸಿವಿರ್ ಚುಚ್ಚುಮದ್ದನ್ನು ಹೆಚ್ಚು ದಿನ ಸಂಗ್ರಹಿಸಿಡಲು ಆಗುವುದಿಲ್ಲ. ಮೂರು ತಿಂಗಳೊಳಗೇ ಅದರ ಬಳಕೆಯಾಗಬೇಕು. ದೇಶೀಯವಾಗಿ ಬೇಡಿಕೆ ಕಡಿಮೆಯಾಗಿದ್ದರಿಂದ ತಮ್ಮಲ್ಲಿರುವ ದಾಸ್ತಾನನ್ನು ಈ ಕಂಪನಿಗಳು ರಫ್ತು ಮಾಡುತ್ತಿದ್ದವು. ಉತ್ಪಾದನೆಯನ್ನೂ ಕಡಿತಗೊಳಿಸಿದ್ದವು. ಆದರೆ ಈಗ ಸೋಂಕು ಹೆಚ್ಚಾಗುತ್ತಿರುವುದರಿಂದ ಉತ್ಪಾದನೆಯನ್ನು ಹೆಚ್ಚಿಸುವಂತೆ ಈ ಕಂಪನಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಫಾರ್ಮಾಸ್ಯುಟಿಕಲ್ ಇಲಾಖೆಯನ್ನೂ ನಿರ್ವಹಿಸುವ ಸದಾನಂದ ಗೌಡ ಹೇಳಿದರು.
ಲಸಿಕಾ ಅಭಿಯಾನ ಅತ್ಯಂತ ಚೆನ್ನಾಗಿ ನಡೆದಿದೆ. ಹೆಚ್ಚು ಜನರಿಗೆ ಲಸಿಕೆ ನೀಡುವುದಷ್ಟೇ ಇದರ ಉದ್ದೇಶ ಅಲ್ಲ. ಇದರ ಬಗ್ಗೆ ಅಪನಂಬಿಕೆ ವ್ಯಕ್ತಪಡಿಸುವಂತಹ ಕೆಲಸಗಳು ಆಗಬಾರದು. ಮೊದಲ ಡೋಸ್ ತೆಗೆದುಕೊಂಡ ಸುಮಾರು 40 ದಿನಗಳ ನಂತರ ನಾನು ಈಗ ಎರಡನೇ ಡೋಸ್ ತೆಗೆದುಕೊಂಡಿದ್ದೇನೆ. ಯಾವುದೇ ಅಡ್ಡ ಪರಿಣಾಮವಾಗಿಲ್ಲ. ಸುಮಾರು 11 ಸಾವಿರ ಜನರಿಗೆ ಯಶಸ್ವಿಯಾಗಿ ಲಸಿಕೆ ಹಾಕಿದ ಕೆಸಿ ಜನರಲ್ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಯನ್ನು ಅಭಿನಂದಿಸುವೆ ಎಂದರು.
ಬೆಂಗಳೂರು ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಇಂದು ಕೋವಿಡ್19 ಲಸಿಕೆಯ 2ನೇ ‘ಡೋಸ್’ ತೆಗೆದುಕೊಂಡೆ. ಕೋವಿಡ್ ಲಸಿಕಾ ಅಭಿಯಾನ ಯಶಸ್ವಿಯಾಗಲು ಎಲ್ಲರೂ ಸಹಕರಿಸಿ. 45 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ. ಕೊರೊನಾ 2ನೇ ಅಲೆ ಜೋರಾಗಿಯೇ ಇದೆ. ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸೋಣ. ದೇಶವನ್ನು ಕೊರೊನಾ ಮುಕ್ತವಾಗಿಸೋಣ. pic.twitter.com/U4b8Jukys5
— Sadananda Gowda (@DVSadanandGowda) April 14, 2021
(Govt of India is preparing to start vaccinating people below 45 years says Sadananda Gowda)
ಇದನ್ನೂ ಓದಿ: ಕರ್ಫ್ಯೂ ಜಾರಿಗೆಂದು ರಸ್ತೆಗಿಳಿದ 2 ಲಕ್ಷ ಪೊಲೀಸರು: ಮಹಾರಾಷ್ಟ್ರದಲ್ಲಿ ಇಂದಿನಿಂದ ಲಾಕ್ಡೌನ್ ಮಾದರಿ ನಿರ್ಬಂಧ
ಇದನ್ನೂ ಓದಿ: ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ದಾಖಲೆ ಬರೆದ ದೆಹಲಿ: ಒಂದೇ ದಿನ 17,000 ಮಂದಿಗೆ ಕೊವಿಡ್-19
Published On - 11:20 pm, Wed, 14 April 21