ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ದಾಖಲೆ ಬರೆದ ದೆಹಲಿ: ಒಂದೇ ದಿನ 17,000 ಮಂದಿಗೆ ಕೊವಿಡ್-19
ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಇಂದು 9925 ಪ್ರಕರಣಗಳು ವರದಿಯಾಗಿವೆ. ಮುಂಬೈನ ಸಂಖ್ಯೆಗೆ ಹೋಲಿಸಿದರೆ ದೆಹಲಿಯಲ್ಲಿ ದುಪ್ಪಟ್ಟು ಸಂಖ್ಯೆಯಷ್ಟು ಸೋಂಕು ಪ್ರಕರಣಗಳು ವರದಿಯಾದಂತೆ ಆಗಿದೆ.
ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬುಧವಾರ (ಏಪ್ರಿಲ್ 14) ಕೊರೊನಾ ಸೋಂಕು ಪ್ರಕರಣಗಳು ಹೊಸ ದಾಖಲೆ ಬರೆದಿವೆ. ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ನಂತರದ ಒಂದು ದಿನದ ಗರಿಷ್ಠ ಸಂಖ್ಯೆ ಎನಿಸಿದ 17,000 ಸೋಂಕು ಪ್ರಕರಣಗಳು ರಾಷ್ಟ್ರ ರಾಜಧಾನಿಯಲ್ಲಿ ಇಂದು ವರದಿಯಾಗಿವೆ. ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಇಂದು 9925 ಪ್ರಕರಣಗಳು ವರದಿಯಾಗಿವೆ. ಮುಂಬೈನ ಸಂಖ್ಯೆಗೆ ಹೋಲಿಸಿದರೆ ದೆಹಲಿಯಲ್ಲಿ ದುಪ್ಪಟ್ಟು ಸಂಖ್ಯೆಯಷ್ಟು ಸೋಂಕು ಪ್ರಕರಣಗಳು ವರದಿಯಾದಂತೆ ಆಗಿದೆ. ಮುಂಬೈನಲ್ಲಿ ಸೋಂಕಿನಿಂದ 54 ಮಂದಿ ಮೃತಪಟ್ಟಿದ್ದರೆ, ದೆಹಲಿಯಲ್ಲಿ ಇಂದು ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 104.
ಪರಿಸ್ಥಿತಿ ಗಂಭೀರವಾಗುತ್ತಿರುವುದನ್ನು ಅರಿತಿರುವ ದೆಹಲಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಾಳೆ ಸರಣಿ ಸಭೆಗಳನ್ನು ನಡೆಸಲಿದ್ದಾರೆ. ಲೆಫ್ಟಿನೆಂಟ್ ಜನರಲ್ ಅನಿಲ್ ಬೈಜಾಲ್ ಅವರನ್ನು ಮೊದಲು ಭೇಟಿಯಾಗಲಿರುವ ಕೇಜ್ರಿವಾಲ್ ನಂತರ ಆರೋಗ್ಯ ಸಚಿವ, ಮುಖ್ಯ ಕಾರ್ಯದರ್ಶಿ, ಆರೋಗ್ಯ ಕಾರ್ಯದರ್ಶಿ ಮತ್ತು ಇತರ ಉನ್ನತ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.
ಕೊರೊನಾದ 2ನೇ ಅಲೆ ದೆಹಲಿಯನ್ನು ತೀವ್ರವಾಗಿ ಬಾಧಿಸುತ್ತಿದೆ. ಕಳೆದ ಭಾನುವಾರದಿಂದ 10,000 ಪ್ರಕರಣಗಳು ವರದಿಯಾಗುತ್ತಿವೆ. ಮಂಗಳವಾರ ನಗರದಲ್ಲಿ 13,500 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿತ್ತು. ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 7,36,788ಕ್ಕೆ ಮುಟ್ಟಿದೆ.
ರಾಜಸ್ತಾನದ ಎಲ್ಲ ನಗರಗಳಲ್ಲಿ ರಾತ್ರಿ ಕರ್ಫ್ಯೂ ಜೈಪುರ: ರಾಜಸ್ತಾನದ ಎಲ್ಲ ನಗರಗಳಲ್ಲಿ ಮುಂದಿನ ಶುಕ್ರವಾರದಿಂದ ರಾತ್ರಿ 6ರಿಂದ ಬೆಳಿಗ್ಗೆ 6ರವರೆಗೆ ಕರ್ಫ್ಯೂ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಈ ತಿಂಗಳ ಅಂತ್ಯದವರೆಗೂ ಈ ನಿರ್ಬಂಧದ ಆದೇಶ ಜಾರಿಯಲ್ಲಿರುತ್ತದೆ. ರಾಜ್ಯದ ಎಲ್ಲೆಡೆ ಮಾರುಕಟ್ಟೆಗಳನ್ನು ಸಂಜೆ 5 ಗಂಟೆಗೆ ಮುಚ್ಚಬೇಕು. ಶಿಕ್ಷಣ ಮತ್ತು ಕೋಚಿಂಗ್ ಸಂಸ್ಥೆಗಳು ಬಾಗಿಲು ತೆಗೆಯುವಂತಿಲ್ಲ ಎಂದು ರಾಜಸ್ತಾನ ಸರ್ಕಾರ ಹೇಳಿದೆ. ಕಾರ್ಖಾನೆ ಮತ್ತು ಬಸ್ ನಿಲ್ದಾಣಗಳಿಗೆ ಈ ಅದೇಶ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ರಾಜಸ್ತಾನ ಸರ್ಕಾರವು 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಿದೆ. ಕೊರೊನಾ ಸೋಂಕು ತಡೆ ಲಸಿಕೆಯ ಕೊರತೆ ಇದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು. ಇದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.
ಜೈಪುರದ ಹೆಚ್ಬಿ ಕಾನ್ವಾಟಿಯಾ ಆಸ್ಪತ್ರೆಯ ವೈದ್ಯರು ಕಳೆದ ರವಿವಾರ ಲಸಿಕೆಯ ದಾಸ್ತಾನು ಪರಿಶೀಲಿಸಿ 200 ಡೋಸ್ ಲಸಿಕೆಗಳು ದಾಸ್ತಾನಿವೆ ಎಂದು ದಾಖಲಿಸಿದ್ದರು. ಸೋಮವಾರ ಮತ್ತೆ 489 ಡೋಸ್ ಲಸಿಕೆ ಆಸ್ಪತ್ರೆಯನ್ನು ತಲುಪಿದ್ದು, ಎಲ್ಲಾ ಲಸಿಕೆಗಳ ಸಂಖ್ಯೆಯನ್ನು ಲೆಕ್ಕ ಮಾಡಿದಾಗ 320 ಡೋಸ್ ಲಸಿಕೆ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಈ ನಡುವೆ ರಾಜಸ್ಥಾನದ ಆಸ್ಪತ್ರೆಯೊಮದರಿಂದ ಲಸಿಕೆ ನಾಪತ್ತೆಯಾಗಿದೆ ಎಂದು ಅಲ್ಲಿನ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಮಧ್ಯಮವರ್ಗದ ಜನಸಾಮಾನ್ಯರು ವಾಸಿಸುವ ಪ್ರದೇಶದಲ್ಲಿ ಈ ಆಸ್ಪತ್ರೆ ಇದೆ ಎನ್ನಲಾಗಿದೆ. ಆಸ್ಪತ್ರೆಯಲ್ಲಿ ಲಸಿಕೆ ಕಳ್ಳತನವಾದ ಕುರಿತು ಎಫ್ಐಆರ್ ದಾಖಲಿಸಲಾಗಿದ್ದು, ಪೊಲೀಸರು ಸಿಸಿಟಿವಿ ವಿಡಿಯೋ ತುಣುಕು ಪರಿಶೀಲನೆ ನಡೆಸಿದ್ದಾರೆ.
(Delhi Reports Over 17000 Coronavirus Cases In New One-Day Record)
ಇದನ್ನೂ ಓದಿ: ಕರ್ಫ್ಯೂ ಜಾರಿಗೆಂದು ರಸ್ತೆಗಿಳಿದ 2 ಲಕ್ಷ ಪೊಲೀಸರು: ಮಹಾರಾಷ್ಟ್ರದಲ್ಲಿ ಇಂದಿನಿಂದ ಲಾಕ್ಡೌನ್ ಮಾದರಿ ನಿರ್ಬಂಧ