ಉತ್ತರ ಕನ್ನಡ ಜಿಲ್ಲೆ ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿದ್ದು, ದೇಶ- ವಿದೇಶದ ಜನರು ಇಲ್ಲಿನ ಗೋಕರ್ಣ, ಮುರುಡೇಶ್ವರ, ಕಾರವಾರ, ಜೊಯಿಡಾ, ದಾಂಡೇಲಿ ಮುಂತಾದೆಡೆಗೆ ಭೇಟಿ ನೀಡುತ್ತಾರೆ. ಹೀಗಾಗಿ ಪ್ರವಾಸೋದ್ಯಮಕ್ಕೆ ಇನ್ನಷ್ಟು ಉತ್ತೇಜನ ನೀಡಲು ಜಿಲ್ಲಾಡಳಿತ ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಈ ನಡುವೆ ಇದೀಗ ಪ್ರವಾಸಿಗರಿಗೆ ಹೊಸ ಅನುಭವ ನೀಡಲು ಜಿಲ್ಲೆಯ ಕಾರವಾರದಲ್ಲಿ ಕ್ರೂಸ್ ತಯಾರಾಗಿದೆ.
ಕಾರವಾರದ ಕಾಳಿ ನದಿಯಲ್ಲಿ ತಿರುಗಾಡುತ್ತಾ ಅದ್ಭುತ ಸಮಯಗಳನ್ನು ಕಳೆಯಲು ಶಿಖರ ಕ್ರೂಸ್ ತಯಾರಾಗಿದೆ. ಈ ಹಿಂದೆ ಕಾಳಿ ನದಿಯ ಮಧ್ಯದಲ್ಲಿರುವ ಐಲ್ಯಾಂಡ್‌ನಲ್ಲಿ ಅರಣ್ಯ ಇಲಾಖೆ ಬೋರ್ಡ್ ವಾಕ್ ನಿರ್ಮಿಸಿತ್ತು. ಆದರೆ, ಇದೀಗ ಕಾಳಿ ರಿವರ್ ಗಾರ್ಡನ್ ಬಳಿ ಶಿಖರ ಕ್ರೂಸ್ ಪ್ರಾರಂಭಿಸಲಾಗಿದ್ದು, ಈ ಕ್ರೂಸ್ ಮೂಲಕ ಕಾಳಿ ನದಿಯಲ್ಲಿ ಓಡಾಡುವ ಅನುಭವ ನೀಡುವುದರೊಂದಿಗೆ ಐಲ್ಯಾಂಡ್‌ನಲ್ಲಿರುವ ಬೋರ್ಡ್ ವಾಕ್ ಹಾಗೂ ಕಾಳಿ ಮಾತಾ ದೇವಸ್ಥಾನಕ್ಕೂ ಇಲ್ಲಿಂದಲೇ ಹೋಗಿ ದೇವಿಯ ಆಶೀರ್ವಾದ ಪಡೆಯಬಹುದಾಗಿದೆ.
ಈ ಶಿಖರ ಕ್ರೂಸ್‌ನಲ್ಲಿ ತಿರುಗಾಡುವುದು ಮಾತ್ರವಲ್ಲದೇ, ಪಾರ್ಟಿ ಮಾಡುವುದಕ್ಕೂ ಅವಕಾಶವಿದೆ. ಕುಟುಂಬ ಸದ್ಯರು ಇಲ್ಲಿಗೆ ಬಂದು ತಮ್ಮ ಹುಟ್ಟಿನ ದಿನ ಅಥವಾ ಇತರ ಯಾವುದೇ ಕೌಟುಂಬಿಕ ಕಾರ್ಯಕ್ರಮಗಳನ್ನು ಈ ಕ್ರೂಸ್‌ನಲ್ಲಿ ಆರಾಮವಾಗಿ ನಡೆಸಬಹುದಾಗಿದೆ. ಗಂಟೆಗಳ ಮೇಲೆ, ಅರ್ಧ ದಿನ ಅಥವಾ ದಿನ-ರಾತ್ರಿ ಇದರಲ್ಲಿ ಪಾರ್ಟಿ ನಡೆಸಲು ಅವಕಾಶ ನೀಡಲಾಗಿದ್ದು, ಆರ್ಡರ್ ನಡೆಸಿದಲ್ಲಿ ಬೇಕಾದ ಆಹಾರವೂ ಪ್ರವಾಸಿಗರಿಗೆ ಇಲ್ಲಿ ಪೂರೈಕೆಯಾಗುತ್ತದೆ. ನದಿ ಮಧ್ಯೆ ತಂಗಾಳಿಯೊಂದಿಗೆ ಯಾವುದೇ ಕಿರಿ-ಕಿರಿಯಿಲ್ಲದೇ ಸಮಯ ಕಳೆಯಲು ಇದೊಂದು ಅದ್ಭುತ ಅವಕಾಶವಾಗಿದ್ದು, ಗೋವಾ- ಕೇರಳ ಹೊರತುಪಡಿಸಿದರೆ ಮಂಗಳೂರಿನಿಂದ ಕಾರವಾರದವರೆಗಿನ ಜನರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ ಎಂದು ಕ್ರೂಸ್ ಸೇವೆ ಆಯೋಜಕರಾದ ಸ್ಟೆಫಿ ಹೇಳಿದ್ದಾರೆ.
ಕಾಳಿ ನದಿಯ ಚಿತ್ರಣ
ಒಟ್ಟಿನಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪೂರಕವಾಗಿ ಶಿಖರ ಕ್ರೂಸ್ ಕಾರವಾರದಲ್ಲಿ ಪ್ರಾರಂಭಗೊಂಡಿದ್ದು, ಅದ್ಭುತ ಕ್ಷಣಗಳನ್ನು ಈ ಬೋಟ್‌ನಲ್ಲಿ ಕಳೆಯಲು ಪ್ರವಾಸಿಗರು ಕೂಡ ಸನ್ನದ್ಧಗೊಂಡಿದ್ದಾರೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಇನ್ನು ಹೆಚ್ಚಿನ ಬೆಂಬಲ ದೊರೆತಲ್ಲಿ ಜಿಲ್ಲೆಯು ಕೂಡಾ ಗೋವಾದಷ್ಟೇ ಖ್ಯಾತಿ ಪಡೆಯುವುದರಲ್ಲಿ ಎರಡು ಮಾತಿಲ್ಲ.
ಇದನ್ನೂ ಓದಿ:
ಕಾರವಾರದ ಕೊಂಕಣ ರೈಲ್ವೇ ಮಾರ್ಗದ ವಿದ್ಯುದೀಕರಣ; ಇಂಧನ ಉಳಿಸುವಲ್ಲಿ ಸಹಕಾರಿ
ಕರಾವಳಿ ಸಮುದ್ರಗಳಿಗೆ ಕಾಯಕಲ್ಪ; ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಲು ಮುಂದಾದ ಮಂಗಳೂರು ಜಿಲ್ಲಾಡಳಿತ
( Shikhara Cruiser is installed in Kali River to promote Tourism in Karwar)