ಮೊದಲು ದೇಶದ ಜನರಿಗೆ ಲಸಿಕೆ ಕೊಡಿ, ನಂತರ ವಿದೇಶಗಳಿಗೆ ರಫ್ತು ಮಾಡಿ: ಸೋನಿಯಾ ಗಾಂಧಿ ಆಗ್ರಹ

guruganesh bhat

guruganesh bhat | Edited By: ganapathi bhat

Updated on: Apr 10, 2021 | 5:23 PM

Corona Vaccine: ದೇಶ ಮತ್ತು ದೇಶದ ಜನರು ಮೊದಲು ಕೊರೊನಾ ಲಸಿಕೆ ಪಡೆಯಬೇಕು. ಆ ನಂತರವಷ್ಟೇ ವಿದೆಶಗಳಿಗೆ ರಫ್ತು ಮಾಡಬೇಕು. ಕೊರೊನಾ ಲಸಿಕೆಯನ್ನು ವಿದೇಶಗಳಿಗೆ ರಫ್ತು ಮಾಡಿ ದೇಶದ ಜನರ ಹಿತಾಸಕ್ತಿಯನ್ನು ಕಡೆಗಣಿಸಬಾರದು ಎಂದು ಅವರು ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ಮೊದಲು ದೇಶದ ಜನರಿಗೆ ಲಸಿಕೆ ಕೊಡಿ, ನಂತರ ವಿದೇಶಗಳಿಗೆ ರಫ್ತು ಮಾಡಿ: ಸೋನಿಯಾ ಗಾಂಧಿ ಆಗ್ರಹ
ಸೋನಿಯಾ ಗಾಂಧಿ

ದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೊರೊನಾ ಸೋಂಕಿನ ಲಸಿಕೆ ವಿತರಣೆ ಯೋಜನೆಯ ದಾರಿ ತಪ್ಪಿಸುತ್ತಿದೆ. ಮೊದಲು ದೇಶದ ನಾಗರಿಕರಿಗೆ ಲಸಿಕೆ ವಿತರಿಸಿ ಆನಂತರವಷ್ಟೇ ವಿದೇಶಗಳಿಗೆ ರಫ್ತು ಮಾಡಬೇಕು. ದೇಶದ ಎಲ್ಲ ರಾಜ್ಯಗಳಲ್ಲೂ ಕೊರೊನಾ ಸೋಂಕಿಗೆ ತುತ್ತಾದವರ ಮತ್ತು ಸಾವನ್ನಪ್ಪಿದವರ ನಿಜವಾದ ಸಂಖ್ಯೆಯನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಆಗ್ರಹಿಸಿದರು. ಕಾಂಗ್ರೆಸ್ ಪಕ್ಷದ ಸರ್ಕಾರಗಳು ಇರುವ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವರ್ಚುವಲ್ ಸಭೆ ನಡೆಸಿದ ನಂತರ ಅವರು ಕೇಂದ್ರ ಸರ್ಕಾರವನ್ನು ಈ ಕುರಿತು ಬಲವಾಗಿ ಆಗ್ರಹಿಸಿದರು.

ನಾವು ಮೊದಲು ದೇಶದಲ್ಲಿ ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಸಂಬಂಧಿಸಿ ಕ್ರಮ ಕೈಗೊಳ್ಳಬೇಕು. ಸೋಂಕಿನ ನಿಯಂತ್ರಣ ಹೇಗೆ ಮಾಡಬೇಕೆಂದು ಯೋಚಿಸಿ ಕಾರ್ಯಪ್ರವೃತ್ತರಾಗಬೇಕು. ಕೊರೊನಾ ಸೋಂಕು ತಡೆ ನಿಯಮಗಳ ಕುರಿತು ಸಾರ್ವಜನಿಕರಲ್ಲಿ ಜವಾಬ್ದಾರಿ ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ವರ್ಚುವಲ್ ಮೀಟಿಂಗ್​ನಲ್ಲಿ ಪ್ರತಿಪಾದಿಸಿದರು.

ದೇಶ ಮತ್ತು ದೇಶದ ಜನರು ಮೊದಲು ಕೊರೊನಾ ಲಸಿಕೆ ಪಡೆಯಬೇಕು. ಆ ನಂತರವಷ್ಟೇ ವಿದೇಶಗಳಿಗೆ ರಫ್ತು ಮಾಡಬೇಕು. ಕೊರೊನಾ ಲಸಿಕೆಯನ್ನು ವಿದೇಶಗಳಿಗೆ ರಫ್ತು ಮಾಡಿ ದೇಶದ ಜನರ ಹಿತಾಸಕ್ತಿಯನ್ನು ಕಡೆಗಣಿಸಬಾರದು ಎಂದು ಅವರು ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ದೇಶದಲ್ಲಿ ಕೊರೊನಾ ಸ್ಥಿತಿಗತಿಗಳ ಕುರಿತು ನಿಜವಾದ ಮಾಹಿತಿ ಬಹಿರಂಗವಾಗಬೇಕು. ಸರ್ಕಾರ ಯಾವುದೇ ಮುಚ್ಚುಮರೆಯಿಲ್ಲದೇ ಈ ದತ್ತಾಂಶಗಳನ್ನು ಸಾರ್ವಜನಿಕಗೊಳಿಸಬೇಕು ಎಂದು ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದರು. ಅಲ್ಲದೇ ದೇಶದ ವಿವಿಧ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿವೆ. ಇಂತಹ ಚುನಾವಣೆಗಳಲ್ಲಿ ಜನ ಅಪಾರ ಪ್ರಮಾಣದಲ್ಲಿ ಸೇರುತ್ತಾರೆ. ಈ ಕುರಿತು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಜವಾಬ್ದಾರಿ ಮೆರೆದು ಜನ ಒಂದೆಡೆ ಸೇರುವುದನ್ನು ನಿಯಂತ್ರಿಸಬೇಕು ಎಂದು ಸೂಚಿಸಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ತಕ್ಷಣದಿಂದ ಲಸಿಕೆ ರಫ್ತಿಗೆ ತಡೆ ನೀಡುವಂತೆ ಕೋರಿ ಪ್ರಧಾನಿಗೆ ಪತ್ರ ಬರೆದ ಒಂದು ದಿನದ ನಂತರ ಈ ಸಭೆ ನಡೆದಿದೆ. ಇದರ ಜತೆಗೆ ಇತರ ಲಸಿಕೆಗಳಿಗೆ ವೇಗವಾಗಿ ಅನುಮತಿ ನೀಡಬೇಕು ಹಾಗೂ ಅಗತ್ಯ ಇರುವ ಎಲ್ಲರಿಗೂ ಲಸಿಕೆ ಸಿಗಬೇಕು ಎಂದು ಅವರು ಕೇಳಿದ್ದರು. “ಪ್ರಚಾರ” ಗಿಟ್ಟಿಸಿಕೊಳ್ಳುವ ಸಲುವಾಗಿ ಲಸಿಕೆಯನ್ನು ರಫ್ತು ಮಾಡುತ್ತಿದ್ದೀರಾ ಎಂದು ಪ್ರಧಾನಿಯನ್ನು ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದರು.

ಏಪ್ರಿಲ್ 11ರಿಂದ 14ರ ತನಕ ಲಸಿಕೆ ಹಬ್ಬವನ್ನು ಆಯೋಜಿಸುವಂತೆ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದರು. ಲಸಿಕೆ ಕೊರತೆ ಮಧ್ಯೆ ಕೋವಿಡ್- 19 ಪ್ರಕರಣಗಳು ಹೆಚ್ಚುತ್ತಿರುವುದು ಬಹಳ ಗಂಭೀರವಾದ ವಿಚಾರ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ. ಇದೇ ವೇಗದಲ್ಲಿ ಭಾರತದಲ್ಲಿ ಲಸಿಕೆ ಹಾಕುತ್ತಾ ಸಾಗಿದರೆ ಜನಸಂಖ್ಯೆಯ ಶೇ 75ರಷ್ಟು ಮಂದಿಗೆ ಲಸಿಕೆ ಹಾಕುವುದಕ್ಕೆ ವರ್ಷಗಳು ಬೇಕಾಗುತ್ತವೆ. ಇದರಿಂದ ಭಾರತದ ಆರ್ಥಿಕತೆ ಮೇಲೆ ಕೆಟ್ಟ ಪರಿಣಾಮ ಆಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: Vaccine Utsav: ಭಾರತೀಯರೆಲ್ಲರಿಗೂ ಕೊರೊನಾ ಲಸಿಕೆ ನೀಡಬೇಕು; ಪ್ರಧಾನಿ ಮೋದಿಗೆ ಪತ್ರ ಬರೆದ ರಾಹುಲ್ ಗಾಂಧಿ

Covid 19 second wave: ಕೊರೊನಾ ಎರಡನೇ ಅಲೆಯಲ್ಲಿ ತತ್ತರಿಸಿದ ಭಾರತ; 10 ಲಕ್ಷ ದಾಟಿದ ಸಕ್ರಿಯ ಪ್ರಕರಣಗಳು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada