ಬೆಂಗಳೂರು, ಜನವರಿ 15: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaih) ವಿರುದ್ಧ ಕೇಳಿಬಂದಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದ ತನಿಖೆಯನ್ನು ಸಿಬಿಐಗೆ (CBI) ವರ್ಗಾಯಿಸುವಂತೆ ಆರ್‌ಟಿಐ ಕಾರ್ಯರಕರ್ತ ಸ್ನೇಹಮಯಿ ಕೃಷ್ಣ (Snehamayi Krishaba) ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಜನವರಿ 27ಕ್ಕೆ ಮುಂದೂಡಿದೆ.
ಮುಖ್ಯಮಂತ್ರಿಗಳ ಪರವಾಗಿ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಮತ್ತು ಮನು ಸಿಂಘ್ವಿ, ರಾಜ್ಯ ಸರ್ಕಾರದ ಪರವಾಗಿ ಕಪಿಲ್ ಸಿಬಲ್, ಎಜಿ ಶಶಿಕಿರಣ್ ಶೆಟ್ಟಿ ಮತ್ತು ಹಿಂದಿನ ಭೂ ಮಾಲೀಕ ದೇವರಾಜು ಪರ ದುಷ್ಯಂತ್ ದವೆ ಮತ್ತು ದೂರುದಾರ ಸ್ನೇಹಮಯಿ ಕೃಷ್ಣ ಪರ ಮಣೀಂದರ್ ಸಿಂಗ್ ಅವರು ನ್ಯಾ.ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠದ ಮುಂದೆ ವಾದ ಮಂಡಿಸಿದರು.
ವಿಚಾರಣೆ ಆರಂಭದಲ್ಲೇ ಹೈಕೋರ್ಟ್, ಸಿಬಿಐ ತನಿಖೆಗೆ ವಹಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ವಾದ ಸೀಮಿತಗೊಳಿಸಿ ಎಂದು ಎರಡೂ ಕಡೆ ವಕೀಲರಿಗೆ ಸೂಚನೆ ನೀಡಿತು.
ಹೈಕೋರ್ಟ್: ಈವರೆಗಿನ ತನಿಖೆ ವರದಿ ಸಲ್ಲಿಸಿಲ್ಲವೇಕೆ? ನಾಳೆಯೊಳಗೆ ಈವರೆಗಿನ ತನಿಖೆ ವರದಿ ಸಲ್ಲಿಸಿ ಎಂದು ಲೋಕಾಯುಕ್ತ ಪೊಲೀಸರ ಪರ ವಕೀಲ ವೆಂಕಟೇಶ್ ಅರಬಟ್ಟಿ ಅವರಿಗೆ ಸೂಚಿಸಿತು.
ಇದನ್ನೂ ಓದಿ: ಮುಡಾ ಹಗರಣದಲ್ಲಿ ಜೆಡಿಎಸ್ ಶಾಸಕ ಜಿಟಿ ದೇವೇಗೌಡಗೂ ಸಂಕಷ್ಟ: ಸ್ನೇಹಮಯಿ ಕೃಷ್ಣ ದೂರು
ಸ್ನೇಹಮಯಿ ಕೃಷ್ಣ ಪರ ಮಣೀಂದರ್ ಸಿಂಗ್ ವಾದ: ತನಿಖೆ ನಿಷ್ಪಕ್ಷಪಾತವಾಗಿರಬೇಕು, ಜನರಲ್ಲಿ ವಿಶ್ವಾಸ ಮೂಡಿಸುವಂತಿರಬೇಕು. ರಾಜಕಾರಣಿಗಳು ಭಾಗಿಯಾಗಿರುವಾಗಿರುವಾಗ ನಿಷ್ಪಕ್ಷಪಾತ ತನಿಖೆ ಕಷ್ಟ. ಹೀಗಾಗಿ ಸ್ವತಂತ್ರ ತನಿಖೆ ನಡೆಸುವ ಅಗತ್ಯವಿದೆ. ಮೂವರು ಸದಸ್ಯರ ಕಮಿಟಿ ತನಿಖೆ ಉಸ್ತುವಾರಿ ತೆಗೆದುಕೊಂಡಿದೆ. ರಾಜ್ಯ ಸರ್ಕಾರದಿಂದ ನೇಮಕವಾದ ಪೊಲೀಸರೇ ಇಲ್ಲಿ ತನಿಖೆ ನಡೆಸುತ್ತಾರೆ. ಲೋಕಾಯುಕ್ತ ಪೊಲೀಸರು ನಿಯೋಜನೆ ಮೇಲೆ ಬಂದಿರುತ್ತಾರೆ. ಹೀಗಾಗಿ, ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. 56 ಕೋಟಿ ಮೊತ್ತದ ಸೈಟ್ಗಳನ್ನು ಅಕ್ರಮವಾಗಿ ಪಡೆದಿದ್ದಾರೆ. ಸಿಎಂ ಪತ್ನಿ ಈಗ 14 ಸೈಟ್ಗಳನ್ನು ಮಿಂಚಿನ ವೇಗದಲ್ಲಿ ಹಿಂತಿರುಗಿಸಿದ್ದಾರೆ. ರಾಜ್ಯ ಸರ್ಕಾರ ಈ ಕೇಸ್ನಿಂದ ಆರೋಪಿಗಳನ್ನು ರಕ್ಷಿಸಲು ಮುಂದಾಗಿದೆ. ಅದೇ ದಿನ ಸರ್ಕಾರ ಸೈಟ್ಗಳನ್ನು ಹಿಂಪಡೆಯಲು ಒಪ್ಪಿಗೆ ನೀಡಿದೆ ಎಂದು ವಾದ ಮಂಡಿಸಿದರು.
ಮಣೀಂದರ್ ಸಿಂಗ್ ವಾದ: ಮುಡಾ ವಿರುದ್ಧದ ಆರೋಪಗಳ ತನಿಖೆ ಲೋಕಾಯುಕ್ತರು ನಡೆಸಿದ್ದಾರೆ. ಸ್ವಯಂಪ್ರೇರಿತವಾಗಿ ಲೋಕಾಯುಕ್ತ ಮುಡಾ ಪ್ರಕರಣದ ತನಿಖೆ ನಡೆಸುತ್ತಿದೆ. ಮುಡಾದ ದಾಖಲೆಗಳನ್ನು ಸರ್ಕಾರ ರಚಿಸಿದ ಆಯೋಗ ತೆಗೆದುಕೊಂಡಿದೆ. ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು 145 ಫೈಲ್ ತೆಗೆದುಕೊಂಡಿದ್ದಾರೆ. ಮೈಸೂರಿನ ಲೋಕಾಯುಕ್ತ ಡಿವೈಎಸ್‌ಪಿಯೇ ಈ ಬಗ್ಗೆ ಪತ್ರ ಬರೆದಿದ್ದಾರೆ. ಐಎಎಸ್ ಅಧಿಕಾರಿ ನೇತೃತ್ವದಲ್ಲಿ ದಾಖಲೆ ವಶಕ್ಕೆ ಪಡೆದಿದ್ದಾರೆ. ನಗರಾಭಿವೃದ್ಧಿ ಸಚಿವರೂ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ತಂಡ ದಾಖಲೆ ಹೊತ್ತೊಯ್ದಿದ್ದಾರೆ ಎಂದು ಹೇಳಿದರು.
ಹೈಕೋರ್ಟ್: 14 ಸೈಟ್ ಹಂಚಿಕೆಗಳಿಗೂ ಇದಕ್ಕೂ ಸಂಬಂಧವಿದೆಯೇ?
ಮಣೀಂದರ್ ಸಿಂಗ್ ವಾದ: ಈ ಫೈಲ್ಗಳು ಯಾವುದೆಂದು ಲೋಕಾಯುಕ್ತ ಡಿವೈಎಸ್‌ಪಿ ಹೇಳಿಲ್ಲ. ಹೀಗಾಗಿ, ಈ ಫೈಲ್ಗಳೂ ಇದರಲ್ಲಿ ಸೇರಿರಬಹುದು. 145 ಫೈಲ್ಗಳ ಕಥೆ ಏನಾಗಿದೆ ಎಂಬುದು ಈವರೆಗೂ ತಿಳಿದಿಲ್ಲ. ಲೋಕಾಯುಕ್ತ ಕಚೇರಿಯೂ ಈ ಫೈಲ್ ಪಡೆಯಲು ಪ್ರಯತ್ನಿಸಿಲ್ಲ ಎಂದು ಉತ್ತರಿಸಿದರು.
ಸಿಎಂ ಪರ ಹಿರಿಯ ವಕೀಲ ರವಿವರ್ಮ ಕುಮಾರ್: ಸಂಬಂಧವಿಲ್ಲದ ವಾದಮಂಡನೆ ಮಾಡುತ್ತಿದ್ದಾರೆಂದು ಆಕ್ಷೇಪ ವ್ಯಕ್ತಪಡಿಸಿದರು.
ಇದೇ ವೇಳೆ ರಿಟ್ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಿಎಂ ಪರ ವಕೀಲ ಕಪಿಲ್ ಸಿಬಲ್ ಸಮಯ ಕೋರಿದರು. ಜನವರಿ 27ಕ್ಕೆ ವಿಚಾರಣೆ ಮುಂದೂಡುವಂತೆ ಮನವಿ ಮಾಡಿದರು. ಮನವಿ ಪರಿಗಣಿಸಿ ಹೈಕೋರ್ಟ್ ವಿಚಾರಣೆಯನ್ನು ಜನವರಿ 27ಕ್ಕೆ ಮುಂದೂಡಿತು.
ಹಾಗೇ, ಲೋಕಾಯುಕ್ತ ಎಡಿಜಿಪಿ ಇಲ್ಲಿಯವರೆಗಿನ ತನಿಖಾ ವರದಿಯನ್ನು ಮುಂದಿನ ವಿಚಾರಣೆಗೆ ಒಂದು ದಿನ ಮುನ್ನ ಸಲ್ಲಿಸಬೇಕು. ಅಲ್ಲಿಯವರೆಗೆ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಬಹುದು ಎಂದು ನ್ಯಾಯಪೀಠ ಹೇಳಿತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:29 am, Wed, 15 January 25