ಬುದ್ಧಿಮಾಂದ್ಯ ಹೆಣ್ಣುಮಕ್ಕಳನ್ನು ಹೆತ್ತ ಮಹಿಳೆಗೆ ಕಿರುಕುಳ ಕೊಟ್ಟು, ಸಾವಿಗೆ ಕಾರಣವಾದ ಆಕೆಯ ಅತ್ತೆ, ಪತಿ ಮತ್ತು ಅತ್ತಿಗೆಯನ್ನು ಅಪರಾಧಿಗಳು ಎಂದು ಘೋಷಿಸಿದ ಕರ್ನಾಟಕ ಹೈಕೋರ್ಟ್ ಈ ಮೂವರಿಗೂ ಒಂದು ವರ್ಷ ಜೈಲು ಶಿಕ್ಷೆ ಮತ್ತು ತಲಾ 20 ಸಾವಿರ ರೂಪಾಯಿ ದಂಡ ವಿಧಿಸಿದೆ. ಮಹಿಳೆ ತನಗೆ ತಾನೇ ಬೆಂಕಿ ಹಚ್ಚಿಕೊಂಡಿದ್ದಳು ಎಂದು ಈ ಆರೋಪಿಗಳು ಹೇಳಿದ್ದರು. ಆದರೆ ಅವರು ಮೂವರೇ ಸೇರಿ ಮಹಿಳೆಗೆ ಬೆಂಕಿ ಹಚ್ಚಿ ಕೊಂದಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು. ಸದ್ಯ ಈ ವಿಚಾರದಲ್ಲಿ ಮೂವರೂ ಪಾರಾಗಿದ್ದಾರೆ. ಮಹಿಳೆಯನ್ನು ಬೆಂಕಿ ಹಚ್ಚಿ ಇವರೇ ಕೊಂದಿದ್ದಾರೆ ಎಂಬುದಕ್ಕೆ ಸರಿಯಾದ ಸಾಕ್ಷಿ, ಪುರಾವೆಗಳು ಇಲ್ಲದೆ ಕಾರಣ ಹೈಕೋರ್ಟ್ ಆರೋಪಿಗಳ ಮೇಲಿನ ಕೊಲೆ ಕೇಸ್ನ್ನು ಖುಲಾಸೆಗೊಳಿಸಿದೆ. ಈ ಮೂಲಕ ಟ್ರಯಲ್ ಕೋರ್ಟ್ನ ಆದೇಶವನ್ನೇ ಎತ್ತಿ ಹಿಡಿದಿದೆ. ಹೈಕೋರ್ಟ್ನ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ಎಸ್.ರಾಚಯ್ಯ ಅವರನ್ನೊಳಗೊಂಡ ವಿಭಾಗೀಯ ಪೀಠ ಪ್ರಕರಣದ ವಿಚಾರಣೆ ನಡೆಸಿತ್ತು. ಮೃತ ಮಹಿಳೆಯ ಪತಿ, ಅತ್ತೆ ಮತ್ತು ಅತ್ತಿಗೆಯ ವಿರುದ್ಧ ಸೆಕ್ಷನ್ 498 ಎ( ಪತಿ ಅಥವಾ ಪತಿಯ ಸಂಬಂಧಿಗಳಿಂದ ಮಹಿಳೆ ಕಿರುಕುಳಕ್ಕೆ ಒಳಗಾಗುವುದು) ಅಡಿ ಶಿಕ್ಷೆ ವಿಧಿಸಿದೆ.
ಮಹಿಳೆ ಬುದ್ಧಿಮಾಂದ್ಯ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ ಎಂಬ ಕಾರಣಕ್ಕೆ ಆಕೆಯ ಅತ್ತೆ, ಪತಿ ಮತ್ತು ನಾದಿನಿ (ಪತಿಯ ಸೋದರಿ) ಸೇರಿ ಅವಳಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಕ್ಕೆ ಸ್ಪಷ್ಟ ಪುರಾವೆಗಳು ಇವೆ. ಪತಿಯಾದವನು ತನ್ನ ಪತ್ನಿಯನ್ನು ರಕ್ಷಿಸಿ, ಅವಳ ಪರ ಇರಬೇಕಿತ್ತು. ಆದರೆ ದುರದೃಷ್ಟಕ್ಕೆ ಆತನೂ ಕೂಡ ಮಹಿಳೆಗೆ ಕಿರುಕುಳ ನೀಡಿದ್ದಾನೆ. ಆಕೆಯ ಹೊಟ್ಟೆ ಮತ್ತು ಬೆನ್ನಿಗೆ ಒದ್ದಿದ್ದಕ್ಕೆ ಸಾಕ್ಷಿಯಿದೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದೆ. ಅಂದಹಾಗೇ ಈ ಪ್ರಕರಣದಲ್ಲಿ ಮೃತ ಮಹಿಳೆ ಸಾಯುವ ವೇಳೆ ನೀಡಿದ ಹೇಳಿಕೆಯ ಅನ್ವಯ ಆಕೆಯ ಪತಿ-ಅತ್ತೆ-ನಾದಿನಿ ವಿರುದ್ಧ ಕೇಸ್ ದಾಖಲಾಗಿತ್ತು. ಆದರೆ ವೈದ್ಯರು ನೀಡಿದ ಕೆಲವು ವರದಿಯನ್ವಯ ಆಕೆಯದ್ದು ಆತ್ಮಹತ್ಯೆ ಎಂದೇ ಹೇಳಲಾಗುತ್ತಿದೆ. ಯಾಕೆಂದರೆ ಆಕೆ ಸಾಯುವಾಗ ನನಗೆ ಮಾನಸಿಕ, ದೈಹಿಕ ಹಿಂಸೆ ನೀಡಲಾಗಿದೆ ಎಂದಷ್ಟೇ ಹೇಳಿದ್ದರು ಬಿಟ್ಟರೆ, ಅವರೇ ಬೆಂಕಿಯಿಟ್ಟ ಬಗ್ಗೆ ಎಲ್ಲಿಯೂ ಉಲ್ಲೇಖ ಮಾಡಿರಲಿಲ್ಲ. ಹೀಗಾಗಿ ಇವರೆಲ್ಲ ಸೇರಿ ಬೆಂಕಿ ಹಚ್ಚಿದ್ದಾರೆಂಬುದಕ್ಕೆ ಪುರಾವೆಗಳು ಇಲ್ಲದ ಕಾರಣ ಕೊಲೆ ಕೇಸ್ನಲ್ಲಿ ಇವರಿಗೆಲ್ಲ ರಿಲೀಫ್ ಸಿಕ್ಕಿದೆ. ಅಮ್ಮ ಸತ್ತು ಹೋದ ಮೇಲೆ ಇಬ್ಬರು ಬುದ್ಧಿಮಾಂದ್ಯ ಮಕ್ಕಳು ಈ ಆರೋಪಿಗಳೊಟ್ಟಿಗೇ ಇದ್ದರು. ಅವರಿಬ್ಬರನ್ನು ಗಮನದಲ್ಲಿಟ್ಟುಕೊಂಡು ಕೇವಲ 1 ವರ್ಷ ಮಾತ್ರ ಜೈಲು ಶಿಕ್ಷೆ ವಿಧಿಸಿದ್ದಾಗಿ ಕೋರ್ಟ್ ಹೇಳಿದೆ.
ಏನಿದು ಪ್ರಕರಣ?
ಈ ದಂಪತಿಗೆ ಮದುವೆಯಾಗಿ ಆರುವರ್ಷದ ನಂತರ ಇಬ್ಬರು ಮಕ್ಕಳಾದರು. ಆದರೆ ಇಬ್ಬರೂ ಹೆಣ್ಣು ಮಕ್ಕಳೂ ಬುದ್ಧಿಮಾಂದ್ಯರಾಗಿದ್ದರು. ಇಬ್ಬರು ಮಕ್ಕಳು ಹುಟ್ಟಿದ ಬಳಿಕ ಮಹಿಳೆಗೆ ಅತ್ತೆ, ಪತಿ ಮತ್ತು ಅವನ ಸಹೋದರಿಯಿಂದ ಹಿಂಸೆ ಹೆಚ್ಚಾಯಿತು. ಹೀಗೆ ಒಂದು ದಿನ ಮಹಿಳೆ ಪತಿಯ ಬಳಿ ಸ್ವಲ್ಪ ದುಡ್ಡು ಕೊಡುವಂತೆ ಕೇಳಿದಳು. ಅವನು ದುಡ್ಡು ಕೊಡುವುದನ್ನು ಬಿಟ್ಟು, ಆಕೆಗೆ ನಿಂದಿಸಲು ತೊಡಗಿದ. ಅಷ್ಟೇ ಅಲ್ಲ ಆಕೆಗೆ ಹೊಡೆದ. ಕೆಲವೇ ಹೊತ್ತಲ್ಲಿ ಪತಿಯ ತಾಯಿ ಮತ್ತು ಸೋದರಿಯೂ ಕೂಡಿಕೊಂಡರು. ಮೂವರೂ ಸೇರಿ ಮಹಿಳೆಗೆ ಕಿರುಕುಳ ನೀಡತೊಡಗಿದರು. ಬಳಿಕ ಒಂದು ಕ್ಯಾನ್ನಲ್ಲಿ ಸೀಮೆ ಎಣ್ಣೆ ತಂದು, ಮಹಿಳೆಯ ಮೇಲೆ ಸುರಿದು, ಬೆಂಕಿಯನ್ನು ಹಚ್ಚಿದರು. ಆಕೆ ದೊಡ್ಡದಾಗಿ ಕೂಗುತ್ತಿದ್ದಂತೆ ಪತಿ ನೀರನ್ನು ಹಾಕಿ ನಂದಿಸಲು ಪ್ರಯತ್ನಿಸಿದ. ಬಳಿಕ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಕೆಲ ದಿನಗಳ ನಂತರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆದರೆ ಆ ಮೂವರು ಸೇರಿ ಇವರನ್ನು ಕೊಲೆ ಮಾಡಿದ್ದಾರೆ ಎಂಬುದನ್ನು ಸಾಕ್ಷೀಕರಿಸಲು ಸಾಧ್ಯವಾಗದೆ ಇರುವುದಕ್ಕೆ ದೌರ್ಜನ್ಯದ ಪ್ರಕರಣವನ್ನಷ್ಟೇ ಕೋರ್ಟ್ ಪರಿಗಣಿಸಿದೆ.
ಇದನ್ನೂ ಓದಿ: ‘ಪುರುಷೋತ್ತಮ’ ಟ್ರೇಲರ್ ಲಾಂಚ್ ವೇಳೆ ಜಿಮ್ ರವಿ ಕಣ್ಣೀರು; ಬಡತನ ಕಲಿಸಿದ ಪಾಠಗಳ ಮೆಲುಕು
Published On - 2:55 pm, Wed, 27 April 22