ನಾನೂ ಕಾಫಿ ಕುಡಿಯೋನೆ! ನಿಮಗೆ ಖಂಡಿತಾ ನ್ಯಾಯ ಕೊಡಿಸ್ತೇನೆ: ಕಾಫಿ ಬೆಳೆಗಾರರಿಗೆ ಕಂದಾಯ ಸಚಿವ ಆರ್ ಅಶೋಕ್ ಭರವಸೆ
ನಾನು ಬೆಂಗಳೂರಿನವನೇ ಆದರೂ ಬೆಳಿಗ್ಗೆ ಎದ್ದು ಕಾಫಿ ಕುಡಿತೀನಿ. ಕಾಫಿ ಕುಡಿದ ಮೇಲೆ ನನಗೆ ನಿಯತ್ತು ಬೇಡವಾ? ಕಾಫಿ ಬೆಳೆಗಾರರಿಗೆ ಸ್ಪಂದಿಸೋದು ನನ್ನ ಕರ್ತವ್ಯ -ಸಚಿವ ಆರ್ ಅಶೋಕ್
ಹಾಸನ: ನಮ್ಮ ಜಿಲ್ಲೆಯಿಂದ ಸಚಿವರಾದ್ರು, ಸಿಎಂ ಆದ್ರು, ಪ್ರಧಾನಿನೂ ಆದ್ರು ಆದ್ರೆ ಕಾಫಿ ಬೆಳೆಗಾರರ ಸಮಸ್ಯೆಗೆ ತಾತ್ವಿಕ ಅಂತ್ಯ ಕಾಣಿಸಲು ಪ್ರಯತ್ನ ಮಾಡಿಲ್ಲ. ಆದರೆ ನಮ್ಮ ನಾಯಕ ಆರ್ ಅಶೋಕ್ ತಾಯಿ ಹೃದಯದಿಂದ ಈ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ. ಕಳೆದ ಹದಿನೈದು ವರ್ಷಗಳ ಹಿಂದೆ ಇದ್ದ ಪುಣ್ಯಾತ್ಮರು ಕಾಫಿ ಬೆಳೆಗಾರರನ್ನು ಕಳ್ಳರಂತೆ ನೋಡೋಕೆ ಶುರುಮಾಡಿದ್ರು. ಕಾಫಿ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದು ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂಗೌಡ ಆರ್ ಅಶೋಕ್ರನ್ನು ಹೊಗಳಿದ್ದಾರೆ. ಹಾಗೂ ಪರೋಕ್ಷವಾಗಿ ದೇವೇಗೌಡರ ವಿರುದ್ಧ ಪ್ರೀತಂಗೌಡ ವಾಗ್ದಾಳಿ ನಡೆಸಿದ್ದಾರೆ.
ನೀವು ಕಳೆದ ಹಲವಾರು ವರ್ಷಗಳಲ್ಲಿ ಹಲವು ಸಚಿವರು, ಸಿಎಂರನ್ನ ಭೇಟಿ ಮಾಡಿದ್ದೀರಿ. ಆದರೆ ಯಾರೂ ನಿಮಗೆ ಸ್ಪಂದಿಸಿಲ್ಲ. ಉಳುವವನೆ ಭೂಮಿ ಒಡೆಯ ನಂತರ ಬಡವರ ಪರ ಕೆಲಸ ಮಾಡಿದ ನಾಯಕ ನಮ್ಮ ಅಶೋಕಣ್ಣ. ಕಾಪಿ ಬೆಳೆಗಾರರ ಸಮಸ್ಯೆ ಗೆ ನಮ್ಮ ಸರ್ಕಾರ ಸ್ಪಂದಿಸಿದೆ ಎಂದರು.
ಇನ್ನು ಮತ್ತೊಂದು ಕಡೆ ಹಾಸನದಲ್ಲಿ ಕಾಫಿ ಬೆಳಗಾರರ ಜೊತೆ ಸಚಿವ ಅಶೋಕ್ ಸಂವಾದ ನಡೆಸಿದ್ದಾರೆ. ಈ ವೇಳೆ ಮಾತನಾಡಿರುವ ಅವರು, ನಾನು ಬೆಂಗಳೂರಿನವನೇ ಆದರೂ ಬೆಳಿಗ್ಗೆ ಎದ್ದು ಕಾಫಿ ಕುಡಿತೀನಿ. ಕಾಫಿ ಕುಡಿದ ಮೇಲೆ ನನಗೆ ನಿಯತ್ತು ಬೇಡವಾ? ಕಾಫಿ ಬೆಳೆಗಾರರಿಗೆ ಸ್ಪಂದಿಸೋದು ನನ್ನ ಕರ್ತವ್ಯ ಎಂದರು.
ಹಾಸನದಲ್ಲಿ 30 ಸಾವಿರ ಎಕರೆ, ಚಿಕ್ಕಮಗಳೂರಿನಲ್ಲಿ 45 ಸಾವಿರ ಎಕರೆ ಒತ್ತುವರಿ ಎನ್ನೋದು ವರದಿ. ಸಣ್ಣ ಪುಟ್ಟ ಒತ್ತುವರಿ ಮಾಡಿದ ರೈತರು ಹೇಳಿಕೊಳ್ಳೋಕು ಆಗದೆ ಪರದಾಡುತ್ತಿದ್ದಾರೆ. ಒತ್ತುವರಿಮಾಡಿರೋರನ್ನ ಕಳ್ಳರಂತೆ ನೋಡ್ತಾರೆ. ಇದಕ್ಕೆ ಒಂದು ಮುಕ್ತಿ ಹಾಡಬೇಕಾಗಿದೆ. ಈ ಕಳಂಕ ತೆಗೆಯಲು ನಾನು ನಿಮ್ಮ ಮುಂದೆ ಬಂದಿದ್ದೀನಿ. ಇದಕ್ಕೆ ಪರಿಹಾರ ಕೊಡಲೇ ಬೇಕು ಕೊಟ್ಟೇ ಕೊಡ್ತೀನಿ. ಕೆಲ ಕಂಪನಿಯವರು 500-1000 ಎಕರೆ ಒತ್ತುವರಿ ಮಾಡಿರ್ತಾರೆ. ಅವರಿಗೆ ಯಾರೂ ನೊಟೀಸ್ ಕೂಡ ನೀಡಲ್ಲ, ಆದರೆ ಸಣ್ಣ ಪುಟ್ಟವರಿಗೆ ನೊಟೀಸ್ ನೀಡುತ್ತಾರೆ. ಭೂ ಕಬಳಿಕೆ ಕಾಯಿದೆಯನ್ನು ರೈತರಿಗೆ ಅನ್ವಯ ಆಗದಂತೆ ಮಾಡುತ್ತೇವೆ.
ಇದು ಕೇವಲ ನಗರ ಪ್ರದೇಶದ ಒತ್ತುವರಿ ದಾರರಿಗೆ ಅನ್ವಯ ಆಗುವಂತೆ ಮಾಡ್ತೀವಿ. ಪ್ರೀತಂಗೌಡ ಬೇರೆ ತರ ಶಾಸಕ ಅಲ್ಲಾ. ಏನಾದ್ರು ಕೆಲಸ ಆಗಬೇಕು ಅಂದ್ರೆ ನೇರ ಕಾಲಿಗೆ ಬೀಳ್ತಾರೆ. ಅಣ್ಣಾ ಇದು ಆಗಬೇಕು ಅಂತಾರೆ ಅದ್ಕೇ ನಾನು ಬಂದಿದ್ದು. ಕಾಫಿ ಬೆಳೆಗಾರರ ಅನಧಿಕೃತ ಸಾಗುವಳಿ ಸಕ್ತಮಮಾಡಲು ಕ್ರಮ ಕೈಗೊಳ್ಳುತ್ತೇವೆ. ಇದು ಆರು ತಿಂಗಳು ಮೂರು ತಿಂಗಳ ಪ್ರಶ್ನೆ ಇಲ್ಲ. ಶೀಘ್ರವಾಗಿ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಎಷ್ಟು ಎಕರೆ ಒತ್ತುವರಿ ಸಕ್ರಮ ಮಾಡಬೇಕು, ಎಷ್ಟು ವರ್ಷದ ಅವಧಿಗೆ ಲೀಸ್ ಗೆ ಕೊಡಬೇಕು. ಈ ಎಲ್ಲದರ ಬಗ್ಗೆ ಈಗಾಗಲೆ ಸಭೆ ನಡೆಸಿ ತೀರ್ಮಾನ ಮಾಡಲಾಗಿದೆ. ಇನ್ನೊಂದು ತಿಂಗಳಲ್ಲಿ ಕಾಯಿದೆ ಬದಲಾವಣೆ ಮಾಡೋ ಬಗ್ಗೆ ಡ್ರಾಫ್ಟ್ ಬಿಲ್ ರೆಡಿಯಾಗುತ್ತೆ. ನಿಮಗೆ ಖಂಡಿತಾ ನ್ಯಾಯ ಕೊಡೋ ಕೆಲಸ ಮಾಡುತ್ತೇನೆ ಎಂದು ಕಂದಾಯ ಸಚಿವ ಆರ್ ಅಶೋಕ್ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಅಧಿಕಾರ ಉಳಿಸಿಕೊಳ್ಳಲು ಕೊನೆ ಕ್ಷಣದವರೆಗೂ ಇಮ್ರಾನ್ ಖಾನ್ ಪಾಕಿಸ್ತಾನದ ಮಿಲಿಟರಿ ಬಳಿ ಬೇಡಿಕೊಂಡಿದ್ದರು; ಮರ್ಯಾಮ್ ನವಾಜ್ ಟೀಕೆ
Published On - 2:53 pm, Wed, 27 April 22