ಬೆಂಗಳೂರು: ನಿಗದಿಪಡಿಸಿದ ಶುಲ್ಕಕ್ಕಿಂತ (Fee) ವಿದ್ಯಾರ್ಥಿಗಳಿಂದ (Students) ಹೆಚ್ಚುವರಿ ಶುಲ್ಕವನ್ನು ಪಡೆಯುವಂತಿಲ್ಲವೆಂದು ಮೆಡಿಕಲ್ ಕಾಲೇಜುಗಳಿಗೆ (Medical Colleges) ಸರ್ಕಾರ ಎಚ್ಚರಿಸಬೇಕೆಂದು ಕರ್ನಾಟಕ ಹೈಕೋರ್ಟ್ (High Court) ಸೂಚನೆ ನೀಡಿದೆ. ನ್ಯಾ.ಬಿ.ವೀರಪ್ಪ, ನ್ಯಾ.ಕೆ.ಎಸ್.ಹೇಮಲೇಖಾ ಅವರಿದ್ದ ಹೈಕೋರ್ಟ್ ಪೀಠ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ಅರ್ಜಿ ವಿಚಾರಣೆ ನಡೆಸಿದರು. ಸರ್ಕಾರ, ಕೆಇಎ ನಿಗದಿಪಡಿಸಿರುವ ಪ್ರವೇಶ ಶುಲ್ಕವನ್ನು ಮಾತ್ರ ವೈದ್ಯಕೀಯ ಕಾಲೇಜುಗಳು ಪಡೆಯಬೇಕು. ಹೆಚ್ಚಿನ ಶುಲ್ಕ ಪಡೆದ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು, ವಿದ್ಯಾರ್ಥಿಗಳಿಗೆ ಶುಲ್ಕವನ್ನು ಮರಳಿಸಬೇಕು. ವೈದ್ಯಕೀಯ ಕಾಲೇಜುಗಳಿಗೆ ಶಿಕ್ಷಣ ನೀಡುವ ಉದ್ದೇಶವಿರಬೇಕು. ಕಾಲೇಜುಗಳು ವಿದ್ಯಾರ್ಥಿಗಳಿಂದ ಹೆಚ್ಚಿನ ಶುಲ್ಕ ವಸೂಲು ಮಾಡಬಾರದು ಎಂದು ನಿರ್ದೇಶನ ನೀಡಿದೆ.
ಪ್ರಕರಣದ ಹಿನ್ನೆಲೆ
2017-18ರ ಶೈಕ್ಷಣಿಕ ವರ್ಷದಲ್ಲಿ 21 ವಿದ್ಯಾರ್ಥಿಗಳು ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಕೋರ್ಸ್‌ಗೆ ಸೇರಿದ್ದರು. ಆಗ ಕಾಲೇಜಿನ ಆಡಳಿತ ಮಂಡಳಿ ಸರ್ಕಾರ ನಿಗದಿ ಪಡಿಸಿದ್ದಕ್ಕಿಂತ ಹೆಚ್ಚುವರಿ ಶುಲ್ಕವನ್ನು ಪಡೆದುಕೊಂಡಿತ್ತು. ಈ ಮೊತ್ತವನ್ನು ಹಿಂದಿರುಗಿಸಬೇಕು ಎಂದು ಕೋರಿ ಎಲ್ಲ ವಿದ್ಯಾರ್ಥಿಗಳು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಹೈಕೋರ್ಟ್ ಈ ಅರ್ಜಿ ವಿಚಾರಣೆ ನಡೆಸಿ ವಿದ್ಯಾರ್ಥಿಗಳ ಮೇಲೆ ಸರ್ಕಾರಕ್ಕೆ ನಿಜಕ್ಕೂ ಕಾಳಜಿ ಇದ್ದಲ್ಲಿ ಖಾಸಗಿ ಕಾಲೇಜುಗಳ ಹೆಚ್ಚುವರಿ ಶುಲ್ಕಕ್ಕೆ ಕಡಿವಾಣ ಹಾಕಿ ಎಂದು ಸೂಚನೆ ನೀಡಿದೆ. ಹಾಗೇ ವಿದ್ಯಾರ್ಥಿಗಳಿಂದ ಹೆಚ್ಚುವರಿಯಾಗಿ ಪಡೆದಿರುವ ಶುಲ್ಕವನ್ನು ಮುಂದಿನ ಎರಡು ತಿಂಗಳಲ್ಲಿ ಯಾವುದೇ ಕಾರಣವನ್ನು ನೀಡದೇ ಶೇ.6 ರಷ್ಟು ಬಡ್ಡಿ ಸಮೇತವಾಗಿ ಕಾಲೇಜು ಹಿಂದಿರುಗಿಸಬೇಕೆಂದು ಹೈಕೋರ್ಟ್ ಕಾಲೇಜು ಆಡಳಿತ ಮಂಡಳಿಗೆ ಖಡಕ್ ಸೂಚನೆ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:23 pm, Wed, 16 November 22