ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್​​ ಚುನಾವಣೆ ಗೊಂದಲ ನಿವಾರಿಸಿದ ಹೈಕೋರ್ಟ್​​​, ಎಲೆಕ್ಷನ್ ಯಾವಾಗ?

ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ (ಕೆಎಸ್​ಸಿಎ) ಚುನಾವಣೆಗೆ ಸಂಬಂಧಿಸಿದಂತೆ ಉಂಟಾಗಿದ್ದ ಗೊಂದಲಕ್ಕೆ ಹೈಕೋರ್ಟ್ ಇಂದು ತೆರೆ ಎಳೆದಿದ್ದು, ನಿಗದಿತ ದಿನಾಂಕದಂತೆ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಿದೆ. ಹಾಲಿ ಬೈಲಾ, ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರವೇ ಚುನಾವಣೆ ನಡೆಸುವಂತೆ ಕೋರ್ಟ್​ ಆದೇಶ ಹೊರಡಿಸಿದೆ. ಹಾಗಾದ್ರೆ, ನಾಮಪತ್ರ ಸಲ್ಲಿಗೆ ಯಾವಾಗ? ಮತದಾನ, ಫಲಿತಾಂಶದ ವಿವರ ಇಲ್ಲಿದೆ.

ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್​​ ಚುನಾವಣೆ ಗೊಂದಲ ನಿವಾರಿಸಿದ ಹೈಕೋರ್ಟ್​​​, ಎಲೆಕ್ಷನ್ ಯಾವಾಗ?
Karnataka High Court
Updated By: ರಮೇಶ್ ಬಿ. ಜವಳಗೇರಾ

Updated on: Nov 21, 2025 | 7:16 PM

ಬೆಂಗಳೂರು, (ನವೆಂಬರ್ 21): ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ಚುನಾವಣೆಯನ್ನು ಡಿಸೆಂಬರ್ 7ಕ್ಕೆ ನಡೆಸಯವಂತೆ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ. ಡಿಸೆಂಬರ್ 30ಕ್ಕೆ ಚುನಾವಣೆ ಮುಂದೂಡಿ ಚುನಾವಣಾಧಿಕಾರಿ ಬರೆದಿದ್ದ ಪತ್ರ ಪ್ರಶ್ನಿಸಿ KSCA, B.K.ರವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಹೈಕೋರ್ಟ್ ಪೀಠ, ಡಿಸೆಂಬರ್ 7ರಂದು ಕೆಎಸ್‌ಸಿಎ ಚುನಾವಣೆಗೆ ನಿರ್ದೇಶನ ನೀಡಿದೆ. ಹಾಲಿ ಬೈಲಾ, ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರವೇ ಚುನಾವಣೆ ನಡೆಸಲು ಆದೇಶಿಸಿದೆ. ಈ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ.

ಹಾಲಿ ಬೈಲಾ, ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರವೇ ಚುನಾವಣೆ ನಡೆಸಲು ಸೂಚಿಸಿದ್ದು, ನಿವೃತ್ತ ನ್ಯಾಯಮೂರ್ತಿ ಸುಭಾಷ್ ಬಿ.ಆಡಿ ಉಸ್ತುವಾರಿಯಲ್ಲಿ ಚುನಾವಣೆ ನಡೆಸಲು ಕೋರ್ಟ್​ ಆದೇಶ ಹೊರಡಿಸಿದೆ. ಈ ಆದೇಶ ಹಿನ್ನೆಲೆಯಲ್ಲಿ ನಾಮಿನೇಷನ್ ಸಲ್ಲಿಸುವ ದಿನಾಂಕದಲ್ಲಿ ಬದಲಾವಣೆ ಇಲ್ಲ. ಡಿಸೆಂಬರ್ 7ರಂದೇ ಬೆಳಿಗ್ಗೆ 11 ರಿಂದ ಸಂಜೆ 7 ರವರೆಗೆ ಮತದಾನ ನಡೆಯಲಿದೆ.  ನಂತರ ಫಲಿತಾಂಶ ಪ್ರಕಟವಾಗಲಿದೆ.

ಕೋರ್ಟ್​ ನಿರ್ದೇಶನದಂತೆ ನಾಮಿನೇಷನ್ ಸಲ್ಲಿಸುವ ದಿನಾಂಕದಲ್ಲಿ ಬದಲಾವಣೆ ಇಲ್ಲ. ನವೆಂಬರ್ 24ರಂದು ಸಂಜೆ 4 ಗಂಟೆಯವರೆಗೆ ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.26ರಂದು ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ವಾಪಸ್​​​ಗೆ ಅವಕಾಶ. ಇನ್ನು ನವೆಂಬರ್ 26ರ ಸಂಜೆ 5 ಗಂಟೆಗೆ ಅಭ್ಯರ್ಥಿಗಳ ಅಂತಿಮಪಟ್ಟಿ ಪ್ರಕಟವಾಗಲಿದೆ. ಇನ್ನು ಡಿಸೆಂಬರ್ 7ರಂದು ಮತದಾನ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.

ಟೀಮ್‌ ಇಂಡಿಯಾದ ಮಾಜಿ ವೇಗಿ ಹಾಗೂ ಕೆಎಸ್​ಸಿಎ ಮಾಜಿ ಉಪಾಧ್ಯಕ್ಷ ವೆಂಕಟೇಶ್​ ಪ್ರಸಾದ್​ ಮತ್ತು ಮಾಜಿ ಖಜಾಂಚಿ ವಿನಯ್​ ಮೃತ್ಯುಂಜಯ ಬಣ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. 12 ವರ್ಷ ಬಳಿಕ ವೆಂಕಟೇಶ್‌ ಮತ್ತೆ ಕೆಎಸ್‌ಸಿಎಗೆ ಆಗಮಿಸುವ ನಿರೀಕ್ಷೆಯಲ್ಲಿದ್ದಾರೆ. ವೆಂಕಟೇಶ್‌ ಈ ಹಿಂದೆ 2010ರಿಂದ 2013ರ ವರೆಗೆ ಕೆಎಸ್‌ಸಿಎ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆಗ ಅನಿಲ್‌ ಕುಂಬ್ಳೆ ಅಧ್ಯಕ್ಷರಾಗಿದ್ದರು. ಜಾವಗಲ್‌ ಶ್ರೀನಾಥ್‌ ಕಾರ್ಯದರ್ಶಿಯಾಗಿದ್ದರು.