
ಬೆಂಗಳೂರು/ಕಾರವಾರ, (ಸೆಪ್ಟೆಂಬರ್ 26): ಚಿಕ್ಕ ಚಿಕ್ಕ ಮಕ್ಕಳೊಂದಿಗೆ ಗೋಕರ್ಣದ (Gokarna) ರಾಮತೀರ್ಥ ಬೆಟ್ಟದ ನಡುವಿನ ಗುಹೆಯೊಂದರಲ್ಲಿ (cave) ವಾಸವಾಗಿದ್ದ ರಷ್ಯಾ ಮಹಿಳೆಯನ್ನು ವಾಪಸ್ ಅವರ ದೇಶಕ್ಕೆ ಕಳುಹಿಸಲು ಹೈಕೋರ್ಟ್ (Karnataka High Court) ಅನುಮತಿ ನೀಡಿದೆ. ರಷ್ಯಾಗೆ ಮರಳುವ ಬಗ್ಗೆ ಮಹಿಳೆಯ ಇಚ್ಛೆ ಪರಿಗಣಿಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರಿದ್ದ ಹೈಕೋರ್ಟ್ ಪೀಠ ಈ ಆದೇಶ ಹೊರಡಿಸಿದ್ದು, ಮಹಿಳೆಗೆ ಅಗತ್ಯ ದಾಖಲಾತಿ ಒದಗಿಸಲು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಉತ್ತರ ಕನ್ನಡದ ಗೋಕರ್ಣ ಸಮುದ್ರ ತೀರದ ರಾಮತೀರ್ಥದ ಹತ್ತಿರದಲ್ಲಿರುವ ಗುಡ್ಡದ ಗುಹೆಯಲ್ಲಿ ರಷ್ಯನ್ ಮಹಿಳೆ ತನ್ನಿಬ್ಬರು ಮಕ್ಕಳೊಂದಿಗೆ ವಾಸವಾಗಿದ್ದಳು. ರಷ್ಯಾ ಮೂಲದ ನಿನಾ ಕುಟಿನಾ ಮತ್ತು ಆಕೆಯ 6 ಮತ್ತು 4 ವರ್ಷದ ಇಬ್ಬರು ಮಕ್ಕಳೊಂದಿಗೆ ಇದ್ದಿದ್ದು ಕಂಡುಬಂದಿದ್ದು, ಅವರನ್ನು ಪೊಲೀಸರು ಸುರಕ್ಷಿತವಾಗಿ ಕರೆತಂದಿದ್ದರು.
ಮಾಮೂಲಿನಂತೆ ಗಸ್ತು ತಿರುಗುತ್ತಿದ್ದಾಗ ಪೊಲೀಸರ ಕಣ್ಣಿಗೆ ಆ ದೂರದ ಬೆಟ್ಟದ ಗುಹೆಯ ಹೊರಗೆ ಬಟ್ಟೆ ಒಣಗಿ ಹಾಕಿದ್ದು ಕಾಣಿಸಿತ್ತು. ರೌಂಡ್ಸ್ ನಲ್ಲಿದ್ದ ಪೊಲೀಸರಿಗೆ ಗುಡ್ಡದ ಮೇಲಿನ ಲಿಂಗ ಪೂಜೆ ಮಾಡಿರುವುದು ಕಂಡಿದೆ. ಅನುಮಾನ ಬಂದು ಗುಹೆ ಒಳಗಡೆ ಹೋಗುತ್ತಿದ್ದಂತೆ ಬಟ್ಟೆ ಧರಿಸದ ಪುಟ್ಟ ಮಗು ಓಡಿ ಹೊರ ಬಂದಿದೆ. ಪೊಲೀಸರನ್ನು ನೋಡಿ ಒಳಗೆ ಓಡಿ ಹೋದ ಪುಟ್ಟ ಮಗುವಿನ ಹಿಂದೆ ಹೋದಾಗ ಚಿಕ್ಕ ದೀಪವನ್ನಿಟ್ಟುಕೊಂಡು ತನ್ನ ದೊಡ್ಡ ಮಗುವಿಗೆ ಚಿತ್ರ ಬಿಡಿಸುವುದನ್ನು ಹೇಳಿಕೊಡುತ್ತಿದ್ದ ಮಹಿಳೆ ಕಂಡಿದ್ದಳು.
ಈ ಗುಹೆ ಸಂಪೂರ್ಣವಾಗಿ ಕತ್ತಲಾಗಿದ್ದು ಗುಹೆಯ ಸುತ್ತ ಬೃಹತ್ ಗಾತ್ರದ ಸರ್ಪ ಗಳಿವೆ. ಆ ಪ್ರದೇಶದಲ್ಲಿ ಟ್ರೆಕ್ಕಿಂಗ್ ಕೂಡ ನಿಷೇಧಿಸಿ ಸುತ್ತಲೂ ಫೆನ್ಸಿಂಗ್ ಹಾಕಲಾಗಿದೆ. ಹೀಗಿದ್ದರೂ ಮಹಿಳೆ ವಾಸವಾಗಿದ್ದಾಳೆಂದು ಪೊಲೀಸರಿಗೆ ಅಚ್ಚರಿ ಆಗಿತ್ತು. ಇನ್ನು ಫೆನ್ಸಿಂಗ್ ಇದ್ದರೂ ಪಕ್ಕದ ಗುಡ್ಡದಿಂದ ಗುಹೆ ಒಳಗಡೆ ಹೋಗಿ ನೆಲೆಸಿದ್ದ ರಷ್ಯಾದ ಮಹಿಳೆ ಈ ಹಿಂದೆಯೂ ಬಹಳಷ್ಟು ಬಾರಿ ಈ ಗುಹೆಯಲ್ಲಿ ಬಂದು ನೆಲೆಸಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಳು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:29 pm, Fri, 26 September 25