AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಜಿಯಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು: ಜಾತ್ರೆಯಿಂದ ಬಂದು ಸಾವಿನ ಮನೆ ಸೇರಿದ ಸೀಮಾ

ಆಕೆ ಇನ್ನೂ ಓದಿ ಬಾಳಿ ಬದುಕಬೇಕಾಗಿದ್ದ ವಿದ್ಯಾರ್ಥಿನಿ‌‌.ಜಾತ್ರೆಗೆ ಅಂತ ಊರಿಗೆ ಹೋಗಿ ನಿನ್ನೆಯಷ್ಟೇ (ಸೆಪ್ಟೆಂಬರ್ 25) ಮರಳಿ ಪಿಜಿಗೆ ಬಂದಿದ್ದಳು. ಆದ್ರೆ ಅದೇನಾಯ್ತು ಏನೋ ಗೊತ್ತಿಲ್ಲ ಪಿಜಿಯಲ್ಲಿ ದುರಂತ ಅಂತ್ಯಕಂಡಿದ್ದಾಳೆ. ಇನ್ನು ಮಗಳ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಡಿಸಿದ್ದು, ತನಿಖೆ ಮುಂದುವರೆದಿದೆ. ಇನ್ನೊಂದೆಡೆ ನೇತಾಡುತ್ತಿದ್ದ ಶವ ಕಂಡು ಇತರೆ ವಿದ್ಯಾರ್ಥಿನಿಯರು ಭಯಬಿದ್ದು ಅತ್ತಂದಿತ್ತ ಓಡಾಡಿದ್ದಾರೆ.

ಪಿಜಿಯಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು: ಜಾತ್ರೆಯಿಂದ ಬಂದು ಸಾವಿನ ಮನೆ ಸೇರಿದ ಸೀಮಾ
ಸೀಮಾ, (ಮೃತ ವಿದ್ಯಾರ್ಥಿನಿ)
ರವಿ ಹೆಚ್ ಮೂಕಿ, ಕಲಘಟಗಿ
| Updated By: ರಮೇಶ್ ಬಿ. ಜವಳಗೇರಾ|

Updated on: Sep 26, 2025 | 4:04 PM

Share

ಬಾಗಲಕೋಟೆ, (ಸೆಪ್ಟೆಂಬರ್ 26): ಖಾಸಗಿ ಪಿಜಿಯಲ್ಲಿ ವಿದ್ಯಾರ್ಥಿನಿ (Student) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಸೀಮಾ ರಾಠೋಡ (17) ಮೃತ ದುರ್ದೈವಿ. ಬಾಗಲಕೋಟೆ (Bagalkot) ಜಿಲ್ಲೆಯ ಬೀಳಗಿ ತಾಲ್ಲೂಕಿನ ಸುನಗ ತಾಂಡಾದ ನಿವಾಸಿಯಾಗಿರುವ ಸೀಮಾ ರಾಠೋಡ, ನಿನ್ನೆ (ಸೆಪ್ಟೆಂಬರ್ 25) ಊರಿನಲ್ಲಿ ಜಾತ್ರೆ ಮುಗಿಸಿಕೊಂಡು ವಾಪಸ್ ಪಿಜಿ ಬಂದಿದ್ದು, ನೇಣುಬಿಗಿದ ಸ್ಥಿತಿಯಲ್ಲಿ ಸೀಮಾ ಶವ ಪತ್ತೆಯಾಗಿದೆ. ಇನ್ನು ಸೀಮಾ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಮಗಳ ಸಾವಿಗೆ ನ್ಯಾಯ ಕೊಡಿಸಿ ಎಂದು ತಾಯಿ ಹಾಗೂ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಜಾತ್ರೆ ಮುಗಿಸಿಕೊಂಡು ಬಂದಾಕೆ ಸಾವಿನ ಮನೆಗೆ

ಬಾಗಲಕೋಟೆಯ ವಾಗ್ದೇವಿ ಸೈನ್ಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಸೀಮಾ, ಕಳೆದ ಮೂರು ದಿನಗಳ ಹಿಂದೆಯಷ್ಟೇ ಊರಿಗೆ ಬಂದು ಕುಟುಂಬಸ್ಥರ ಜೊತೆ ಜಾತ್ರೆ ಮಾಡಿ ಖುಷಿ ಖುಷಿಯಾಗಿದ್ದಳು.  ಬಳಿಕ ನಿನ್ನೆ (ಸೆ.25) ಅಷ್ಟೇ ತಾಯಿಗೆ ತಿಳಿಸಿ ಚಿಕ್ಕಪ್ಪನೊಂದಿಗೆ ಹಾಸ್ಟೆಲ್ ಗೆ ಬಂದಿದ್ದಳು. ಬಳಿಕ ಕೆಲ ಕಾಲ ಹಾಸ್ಟೆಲ್ ವಾರ್ಡನ್ ಜೊತೆ ಮಾತಾಡಿದ ಸೀಮಾ ಸಂಜೆ 4ಗಂಟೆ ಸುಮಾರಿಗೆ ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡಿದ್ದಾಳೆ.

ಇದನ್ನೂ ಓದಿ: ದೇವರ ಕಡೆಯಿಂದ ಹೊಡೆಸುತ್ತೇನೆ: ಚಿತ್ರ ವಿಚಿತ್ರವಾಗಿ ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ

ಇನ್ನು ಪಿಜಿಯಲ್ಲಿ ಸೀಮಾ ಆತ್ಮಹತ್ಯೆಗೂ ಮುನ್ನ ಸುಮಾರು ಹೊತ್ತು ಹೊರಗಡೆ ಕಟ್ಟೆ ಮೇಲೆ ಕುಳಿತು ಮಹಿಳಾ ವಾರ್ಡನ್ ಜೊತೆ ಮಾತನಾಡಿದ್ದಳು. ಆದ್ರೆ, ವಾರ್ಡನ್ ತನ್ನ ಮಗು ಎತ್ತಿಕೊಂಡು ಅಲ್ಲಿಂದ ಹೋದ ಮೇಲೆ ಸೀಮಾ ಸಹ ರೂಮ್​ ಗೆ ಬಂದು ನೇಣುಬಿಗಿದುಕೊಂಡಿದ್ದಾಳೆ. ಬಳಿಕ ಇತರೆ ವಿದ್ಯಾರ್ಥಿನಿಯರು ಹಾಸ್ಟೆಲ್ ರೂಮ್ ಗೆ ಹೋದಾಗ ಸೀಮಾ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಇದರಿಂದ ಭಯಬಿದ್ದ ವಿದ್ಯಾರ್ಥಿಗಳು ಗಾಬರಿಯಾಗಿ ಹೊರ ಬರುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇನ್ನು ಸೀಮಾಳನ್ನ ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲು ಮುಂದಾದ್ರು ಪ್ರಯೋಜನವಾಗಿಲ್ಲ. ಸ್ಥಳದಲ್ಲಿ ಮೃತ ಸೀಮಾಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ನಮಗೆ ಸಾವಿನಲ್ಲಿ ಸಂಶಯವಿದೆ ಸೂಕ್ತ ತನಿಖೆಯಾಗಬೇಕೆಂದು ಆಗ್ರಹ ಮಾಡಿದ್ದಾರೆ.

ಸೀಮಾ ಸಾವಿನ ಬಗ್ಗೆ ಅನುಮಾನವೇಕೆ?

ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಾಗ ಹಾಸ್ಟೆಲ್ ಸಿಬ್ಬಂದಿ ಸೀಮಾ ತಾಯಿ ಶಕುಂತಲಾಗೆ ಫೋನ್ ಮಾಡಿ ನಿಮ್ಮ ಮಗಳಿಗೆ ಫಿಟ್ಸ್ ಬಂದಿದೆ ಎಂದು ತಿಳಿಸಿದ್ದಾರೆ‌‌‌. ಆದರೆ ಸೀಮಾ ನೇಣು ಹಾಕಿದ ಸ್ಥಿತಿಯಲ್ಲಿ ಸಿಕ್ಕಿದ್ದಾಳೆ‌.ಇದು ಕುಟುಂಬಸ್ಥರಿಗೆ ಅನುಮಾನ ಹುಟ್ಟಲು ಕಾರಣವಾಗಿದೆ. ಸೀಮಾ ತಾಯಿ ಬಾಗಲಕೋಟೆ ನವನಗರ ಠಾಣೆಯಲ್ಲಿ ದೂರು ನೀಡಿದ್ದಾಳೆ. ಆದ್ರೆ ಸಾವಿಗೂ ಮುನ್ನ ಸೀಮಾ ತನ್ನ ತಾಯಿ ಜೊತೆ ಮಾತನಾಡಿದ್ದು, ಕೆಲವೊಂದು ಮನೆಯ ವಿಚಾರಕ್ಕೆ ವಾಗ್ವಾದ ಉಂಟಾಗಿದೆ ಎನ್ನಲಾಗಿದೆ.

ಪ್ರಕರಣ ಕುರಿತು ಪ್ರಾಥಮಿಕ ಹಂತದ ತನಿಖೆ ನಡೆಯುತ್ತಿದ್ದು, ವಿದ್ಯಾರ್ಥಿನಿ ನೇಣು ಹಾಕಿಕೊಂಡಿದ್ದಾಳೆ. ಸಿಸಿಟಿವಿ ಆಧರಿಸಿ ತನಿಖೆ ಮಾಡಿ ವಿದ್ಯಾರ್ಥಿನಿಗೆ ಯಾರಾದದರೂ ಒತ್ತಡವಿತ್ತಾ ಅಥವಾ ಬೇರೆ ಕಾರಣವೇನಾದ್ರೂ ಇತ್ತಾ ಎನ್ನುವುದನ್ನು ಪತ್ತೆ ಮಾಡುವುದಾಗಿ ಪೊಲೀಸರು ತಿಳಿಸಿದ್ದಾರೆ.

ಡಿಡಿಪಿಯು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಹ ಕಾಲೇಜು ಹಾಗೂ ಹಾಸ್ಟೆಲ್ ಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ‌.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ