AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಮಟಾ ಬಳಿಯ ಗುಹೆಯೊಳಗೆ ಇಬ್ಬರು ಮಕ್ಕಳ ಜೊತೆ ರಷ್ಯಾದ ಮಹಿಳೆಯ ನಿಗೂಢ ವಾಸ

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಬಳಿಯ ಗುಹೆಯಲ್ಲಿ ಕೆಲವು ದಿನಗಳಿಂದ ರಷ್ಯಾದ ಮಹಿಳೆ ಮತ್ತು ಇಬ್ಬರು ಮಕ್ಕಳು ವಾಸವಾಗಿರುವುದು ಪತ್ತೆಯಾಗಿದ್ದು, ಅವರನ್ನು ರಕ್ಷಿಸಲಾಗಿದೆ. ಅವಧಿ ಮುಗಿದ ಬ್ಯುಸಿನೆಸ್ ವೀಸಾ ಹೊಂದಿರುವ ರಷ್ಯಾದ ಮಹಿಳೆ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕುಮಟಾದ ರಾಮತೀರ್ಥ ಬೆಟ್ಟದ ಅಪಾಯಕಾರಿ ಗುಹೆಯಲ್ಲಿ ವಾಸವಾಗಿದ್ದರು. ನಿಯಮಿತ ಗಸ್ತು ತಿರುಗುವಿಕೆಯ ಸಮಯದಲ್ಲಿ ಪೊಲೀಸರು ಅವರನ್ನು ಪತ್ತೆಹಚ್ಚಿದ್ದಾರೆ.

ಕುಮಟಾ ಬಳಿಯ ಗುಹೆಯೊಳಗೆ ಇಬ್ಬರು ಮಕ್ಕಳ ಜೊತೆ ರಷ್ಯಾದ ಮಹಿಳೆಯ ನಿಗೂಢ ವಾಸ
Russia Woman In Uttara Kannada
ಸುಷ್ಮಾ ಚಕ್ರೆ
|

Updated on:Jul 12, 2025 | 10:30 PM

Share

ಕುಮಟಾ, ಜುಲೈ 12: ಉತ್ತರ ಕನ್ನಡ ಜಿಲ್ಲೆಯ ಕುಮಟಾ (Kumta) ತಾಲ್ಲೂಕಿನ ರಾಮತೀರ್ಥ ಬೆಟ್ಟದಲ್ಲಿರುವ ಗುಹೆಯಿಂದ 40 ವರ್ಷದ ರಷ್ಯಾದ ಮಹಿಳೆ ಮತ್ತು ಆಕೆಯ ಇಬ್ಬರು ಚಿಕ್ಕ ಮಕ್ಕಳನ್ನು ರಕ್ಷಿಸಲಾಗಿದೆ. ಅಲ್ಲಿ ಅವರು ಸುಮಾರು ಎರಡು ವಾರಗಳಿಂದ ಏಕಾಂತದಲ್ಲಿ ವಾಸಿಸುತ್ತಿದ್ದರು. ಮೋಹಿ ಎಂದು ಗುರುತಿಸಲ್ಪಟ್ಟ ಈ ಮಹಿಳೆ ತನ್ನ ಹೆಣ್ಣುಮಕ್ಕಳಾದ 6 ವರ್ಷದ ಪ್ರೇಯಾ ಮತ್ತು 4 ವರ್ಷದ ಅಮಾ ಜೊತೆ ದಟ್ಟವಾದ ಕಾಡುಗಳು ಮತ್ತು ಕಡಿದಾದ ಇಳಿಜಾರುಗಳಿಂದ ಆವೃತವಾದ ನೈಸರ್ಗಿಕ ಗುಹೆಯೊಳಗೆ ವಾಸವಾಗಿದ್ದರು. ರುದ್ರ ವಿಗ್ರಹದ ಬಳಿ ಕುಟುಂಬವು ತಾತ್ಕಾಲಿಕ ವಾಸಸ್ಥಳವನ್ನು ನಿರ್ಮಿಸಿಕೊಂಡಿತ್ತು. ಅಲ್ಲಿ ಮೋಹಿ ತನ್ನ ದಿನಗಳನ್ನು ಪ್ರಾರ್ಥನೆ ಮತ್ತು ಧ್ಯಾನದಲ್ಲಿ ಕಳೆದಿದ್ದಾಳೆಂದು ಹೇಳಲಾಗುತ್ತಿದೆ. ಆಕೆ ಆಧ್ಯಾತ್ಮಿಕ ಶಾಂತಿಯನ್ನು ಬಯಸಿ ಆ ಗುಹೆಗೆ ತೆರಳಿದ್ದಾಗಿ ಹೇಳಿಕೊಂಡಿದ್ದಾರೆ.

ಮಾಮೂಲಿನಂತೆ ಗಸ್ತು ತಿರುಗುತ್ತಿದ್ದಾಗ ಪೊಲೀಸರ ಕಣ್ಣಿಗೆ ಆ ದೂರದ ಬೆಟ್ಟದ ಗುಹೆಯ ಹೊರಗೆ ಬಟ್ಟೆ ಒಣಗಿ ಹಾಕಿದ್ದು ಕಾಣಿಸಿತ್ತು. ರೌಂಡ್ಸ್ ನಲ್ಲಿದ್ದ ಪೊಲೀಸರಿಗೆ ಗುಡ್ಡದ ಮೇಲಿನ ಲಿಂಗ ಪೂಜೆ ಮಾಡಿರುವುದು ಕಂಡಿದೆ. ಅನುಮಾನ ಬಂದು ಗುಹೆ ಒಳಗಡೆ ಹೋಗುತ್ತಿದ್ದಂತೆ ಬಟ್ಟೆ ಧರಿಸದ ಪುಟ್ಟ ಮಗು ಓಡಿ ಹೊರ ಬಂದಿದೆ. ಪೊಲೀಸರನ್ನು ನೋಡಿ ಒಳಗೆ ಓಡಿ ಹೋದ ಪುಟ್ಟ ಮಗುವಿನ ಹಿಂದೆ ಹೋದಾಗ ಚಿಕ್ಕ ದೀಪವನ್ನಿಟ್ಟುಕೊಂಡು ತನ್ನ ದೊಡ್ಡ ಮಗುವಿಗೆ ಚಿತ್ರ ಬಿಡಿಸುವುದನ್ನು ಹೇಳಿಕೊಡುತ್ತಿದ್ದ ಮಹಿಳೆಯನ್ನು ಕಂಡು ಪೊಲೀಸರಿಗೆ ಅಚ್ಚರಿ ಆಗಿತ್ತು. ಆ ಗುಹೆ ಸಂಪೂರ್ಣವಾಗಿ ಕತ್ತಲಾಗಿದ್ದು ಗುಹೆಯ ಸುತ್ತ ಬೃಹತ್ ಗಾತ್ರದ ಸರ್ಪ ಗಳಿವೆ. ಆ ಪ್ರದೇಶದಲ್ಲಿ ಟ್ರೆಕ್ಕಿಂಗ್ ಕೂಡ ನಿಷೇಧಿಸಿ ಸುತ್ತಲೂ ಫೆನ್ಸಿಂಗ್ ಹಾಕಲಾಗಿದೆ. ಫೆನ್ಸಿಂಗ್ ಇದ್ದರೂ ಪಕ್ಕದ ಗುಡ್ಡದಿಂದ ಗುಹೆ ಒಳಗಡೆ ಹೋಗಿ ನೆಲೆಸಿದ್ದ ರಷ್ಯಾದ‌ ಮಹಿಳೆ ಈ ಹಿಂದೆಯೂ ಬಹಳಷ್ಟು ಬಾರಿ ಈ ಗುಹೆಯಲ್ಲಿ ಬಂದು ನೆಲೆಸಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂಕುಸಿತ ಆತಂಕ: ತಜ್ಞರ ತಂಡ ಹೇಳಿದ್ದೇನು? ಯಾವ ಪ್ರದೇಶಗಳ ಜನ ಎಚ್ಚರ ವಹಿಸಬೇಕು? ಇಲ್ಲಿದೆ ವಿವರ

ಆ ಮಹಿಳೆ ವಾಸವಾಗಿದ್ದ ಗುಹೆ ಇರುವ ರಾಮತೀರ್ಥ ಬೆಟ್ಟವು ಜುಲೈ 2024ರಲ್ಲಿ ಭಾರೀ ಭೂಕುಸಿತವನ್ನು ಅನುಭವಿಸಿತ್ತು. ಅಲ್ಲಿ ವಿಷಪೂರಿತ ಹಾವುಗಳು ಸೇರಿದಂತೆ ಅಪಾಯಕಾರಿ ವನ್ಯಜೀವಿಗಳಿಗೆ ನೆಲೆಸಿವೆ. ಇದು ಅಪಾಯಕಾರಿ ಪ್ರದೇಶವಾಗಿದೆ. ಪೊಲೀಸರು ಮಹಿಳೆಗೆ ಸಲಹೆ ನೀಡಿ ಅಲ್ಲಿನ ಅಪಾಯಗಳ ಬಗ್ಗೆ ತಿಳಿಸಿದ ನಂತರ, ಆಕೆ ಹಾಗೂ ಇಬ್ಬರು ಮಕ್ಕಳನ್ನು ಯಶಸ್ವಿಯಾಗಿ ರಕ್ಷಿಸಿ ಬೆಟ್ಟದಿಂದ ಕೆಳಕ್ಕೆ ಕರೆದುಕೊಂಡು ಬರಲಾಗಿದೆ. ಆಕೆಯ ಕೋರಿಕೆಯ ಮೇರೆಗೆ ಆ ಮಹಿಳೆಯನ್ನು ಕುಮಟಾ ತಾಲ್ಲೂಕಿನ ಬಂಕಿಕೋಡ್ಲಾ ಗ್ರಾಮದಲ್ಲಿರುವ 80 ವರ್ಷದ ಮಹಿಳಾ ಸನ್ಯಾಸಿ ಸ್ವಾಮಿ ಯೋಗರತ್ನ ಸರಸ್ವತಿ ನಡೆಸುತ್ತಿರುವ ಆಶ್ರಮಕ್ಕೆ ಸ್ಥಳಾಂತರಿಸಲಾಗಿದೆ.

ರಷ್ಯಾದಿಂದ 2016ರಲ್ಲಿ ಗೋವಾಕ್ಕೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆಂದು ಬಂದಿದ್ದ ಮೋಹಿಯನ್ನು 2017ರ ಬಳಿಕ ಕಂಪನಿಯರು ಕೆಲಸದಿಂದ ತೆಗೆದುಹಾಕಿದ್ದರು. ಹೀಗಾಗಿ, ಆಕೆ ಗೋವಾದಿಂದ ನೇಪಾಳಕ್ಕೆ ತೆರಳಿ ಅಲ್ಲಿ ಕೆಲವು ದಿನ ವಾಸವಾಗಿದ್ದರು. ಮತ್ತೆ ಗೋವಾಕ್ಕೆ ಬಂದು ಅಲ್ಲಿಂದ ಆಗಾಗ ಗೋಕರ್ಣಕ್ಕೆ ಬಂದು ಈ ಗುಹೆಯಲ್ಲಿ ನೆಲೆಸುತ್ತಿದ್ದರು. ಸಂಪೂರ್ಣವಾಗಿ ಆಧ್ಯಾತ್ಮಿಕತೆಯತ್ತ ವಾಲಿರುವ ಮಹಿಳೆ ಏಕಾಂತ ಹಾಗೂ ಪೂಜೆಯನ್ನು ಹೆಚ್ಚು ಇಷ್ಟ ಪಡುತ್ತಿರುವುದಾಗಿ ಪೊಲೀಸರ ಮುಂದೆ ತಿಳಿಸಿದ್ದಾರೆ. ಭಾರತ ಭಾರತೀಯ ಸಂಸ್ಕೃತಿಯ ಬಗ್ಗೆ ನನಗೆ ಭಾರಿ ಗೌರವ ಇದೆ, ನಾನು ಋಷಿ ಮುನಿಗಳ ತರ ಗುಹೆಯಲ್ಲಿ ಇರಲು ಖುಷಿ ಇದೆ ಎಂದು ತಿಳಿಸಿದ್ದಾರೆ.

ಈಕೆಗೆ ರಷ್ಯಾ ಮೂಲದ ಆಕೆಯ ಕುಟುಂಬಸ್ಥರು ಹಣ ಕಳಿಸುತ್ತಿದ್ದರು. ನಾಳೆ ಬೆಂಗಳೂರಿನ ವಿದೇಶಿ ನೊಂದಣಿಧಿಕಾರಿಗಳ ಕಚೇರಿಗೆ ಶಿಫ್ಟ್ ಮಾಡಲಿದ್ದಾರೆ. ಅಲ್ಲಿಂದ ರಷ್ಯಾ ದೇಶದ ಹಾಗೂ ಕುಟುಂಬಸ್ಥರ ಜೊತೆ ಸಂಪರ್ಕಿಸಿ ಅವರ ದೇಶಕ್ಕೆ ಕಳುಹಿಸಲಿದ್ದಾರೆ. ಮಹಿಳೆ ಪತ್ತೆಯಾದ ರಾಮತೀರ್ಥದ ಬಳಿಯ ಗುಹೆಯ ಸುತ್ತಲೂ ದಟ್ಟ ಕಾಡಿದೆ. ಸಮುದ್ರದಂಚಿನ ಬೆಟ್ಟದಲ್ಲಿ ಈ ಹಿಂದೆ ಭಾರಿ ಅವಘಡ ಸಂಭವಿಸಿದ ಹಿನ್ನೆಲೆಯಲ್ಲಿ ಗುಡ್ಡದ ಸುತ್ತಲೂ ಸಂಪೂರ್ಣವಾಗಿ ಫೆನ್ಸಿಂಗ್ ಹಾಕಿ ನಿರ್ಬಂಧಿಸಲಾಗಿದೆ. ಗುಡ್ಡ ಕುಸಿತವಾಗಿದ್ದ ಈ ಜಾಗಕ್ಕೆ ಕೆಲವು ಪ್ರವಾಸಿಗರು ಟ್ರಕ್ಕಿಂಗ್ ಹೋಗುತ್ತಾರೆ. ಹಾಗಾಗಿ ಗೋಕರ್ಣ ಪೊಲೀಸರು ಆ ಪ್ರದೇಶದಲ್ಲಿ ಆಗಾಗ ರೌಂಡ್ಸ್ ಹಾಕುತ್ತಾರೆ. ಉತ್ತರ ಕನ್ನಡ ಎಸ್ ಪಿ ನಾರಾಯಣ ಅವರ ನೇತೃತ್ವದಲ್ಲಿ ಆ ಮಹಿಳೆಯನ್ನು ಸುರಕ್ಷಿತವಾಗಿ ಕರೆತಂದು ಬೆಂಗಳೂರಿಗೆ ಕಳಿಸಲು ವ್ಯವಸ್ಥೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಕುಮಟಾ ಬಳಿ ಗುಡ್ಡಕುಸಿತದ ದೃಶ್ಯ ಮೊಬೈಲ್ ಫೋನ್ ಕೆಮೆರಾದಲ್ಲಿ ಸೆರೆ, ಅನಾಹುತಗಳಿಗೆ ಕೊನೆ ಯಾವಾಗ?

ಪೊಲೀಸರು, ಕಲ್ಯಾಣ ಅಧಿಕಾರಿಗಳು ಮತ್ತು ಆಶ್ರಮದ ಮುಖ್ಯಸ್ಥರು ಆಕೆಯನ್ನು ವಿಚಾರಿಸಿದಾಗ, ವೀಸಾ ಮತ್ತು ಪಾಸ್‌ಪೋರ್ಟ್‌ನಂತಹ ದಾಖಲೆಗಳು ಕಾಡಿನ ಗುಹೆಯಲ್ಲಿ ಕಳೆದುಹೋಗಿರಬಹುದು ಎಂದು ಆಕೆ ಹೇಳಿದ್ದಾರೆ. ಗೋಕರ್ಣ ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ನಡೆಸಿದ ಜಂಟಿ ಶೋಧ ಕಾರ್ಯಾಚರಣೆಯ ಬಳಿಕ ಆಕೆಯ ಪಾಸ್‌ಪೋರ್ಟ್ ಮತ್ತು ವೀಸಾವನ್ನು ಹುಡುಕಿ ಪತ್ತೆಹಚ್ಚಲಾಯಿತು.  ಅದರ ಪ್ರಕಾರ ಮೋಹಿ ಭಾರತಕ್ಕೆ ವ್ಯಾಪಾರ ವೀಸಾದಲ್ಲಿ ಪ್ರವೇಶಿಸಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅದರ ಅವಧಿ 2017ರಲ್ಲಿಯೇ ಮುಗಿದಿದೆ. ಅವರು ಈ ದೇಶದಲ್ಲಿ ಎಷ್ಟು ದಿನ ಇದ್ದಾರೆ ಎಂಬುದು ಇನ್ನೂ ತಿಳಿದಿಲ್ಲ. ಅಷ್ಟು ದಟ್ಟ ಕಾಡಿನಲ್ಲಿ ಇಬ್ಬರು ಹೆಣ್ಣುಮಕ್ಕಳ ಜೊತೆ ಆ ಮಹಿಳೆ ಹೇಗೆ ಏಕಾಂಗಿಯಾಗಿ ವಾಸವಾಗಿದ್ದರು, ಊಟ-ತಿಂಡಿಗೆ ಏನು ವ್ಯವಸ್ಥೆ ಮಾಡಿಕೊಂಡಿದ್ದರು ಎಂಬುದು ಇನ್ನೂ ನಿಗೂಢವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 7:16 pm, Sat, 12 July 25