
ಬೆಂಗಳೂರು, (ಡಿಸೆಂಬರ್ 26): ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ (Biklu Shiva Murder Case) ಸಂಬಂಧಿಸಿದಂತೆ ಬಂಧನದ ಭೀತಿ ಎದುರಿಸುತ್ತಿದ್ದ ಬಿಜೆಪಿ (BJP) ಶಾಸಕ ಬೈರತಿ ಬಸವರಾಜ್ಗೆ (Byrathi Basavaraj) ಮಧ್ಯಂತರ ಜಾಮೀನು ಸಿಕ್ಕಿದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಾಮೀನು ಅರ್ಜಿ ವಜಾಗೊಳಿಸಿದ್ದರಿಂದ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಇಂದು (ಡಿಸೆಂಬರ್ 26) ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ಬಸವರಾಜ ಅವರಿದ್ದ ಹೈಕೋರ್ಟ್ ಪೀಠ, ಬೈರತಿ ಬಸವರಾಜ್ಗೆ ಮಧ್ಯಂತ ಜಾಮೀನು ನೀಡಿ ಆದೇಶ ಹೊರಡಿಸಿದ್ದು, ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಜನವರಿ 6ಕ್ಕೆ ಮುಂದೂಡಿದೆ. ಹೀಗಾಗಿ ಬೈರತಿ ಬಸವರಾಜ್ಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ನೋಟಿಸ್ ನೀಡಿದಾಗ ಬೈರತಿ ಬಸವರಾಜು ತನಿಖೆಗೆ ಹಾಜರಾಗಿದ್ದಾರೆ. ಆದರೆ ಬೈರತಿ ಬಸವರಾಜು ವಿರುದ್ಧ ಇನ್ನೂ ಆರೋಪಪಟ್ಟಿ ಸಲ್ಲಿಸಿಲ್ಲ. ಆರೋಪಪಟ್ಟಿ ಸಲ್ಲಿಸದಿರುವುದಕ್ಕೆ ತನಿಖಾಧಿಕಾರಿ ಸಮಂಜಸ ಕಾರಣ ನೀಡಿಲ್ಲ. ಜುಲೈ 18 ರಿಂದ ಡಿಸೆಂಬರ್ 19 ರವರೆಗೆ ಬಂಧನದಿಂದ ರಕ್ಷಣೆಯಿತ್ತು. ಇದೇ ರಕ್ಷಣೆ ಮುಂದುವರಿಸಲು ಬೈರತಿ ಬಸವರಾಜ್ ಪರ ವಕೀಲರ ಸಂದೇಶ್ ಚೌಟ್ ಮನವಿ ಮಾಡಿದರು. ಇದನ್ನು ಆಲಿಸಿದ ನ್ಯಾಯಮೂರ್ಯಿ ಜಿ.ಬಸವರಾಜ ಅವರಿದ್ದ ಹೈಕೋರ್ಟ್ ಪೀಠ, ಮಧ್ಯಂತರ ಜಾಮೀನು ನೀಡಿ ಆದೇಶಿಸಿದ್ದು, ಬಂಧನವಾದರೆ ತಕ್ಷಣ ಬಿಡುಗಡೆಗೆ ತಿಳಿಸಿದೆ. ಅಲ್ಲದೇ ತನಿಖೆ ಸಹಕರಿಸಲು ಸೂಚಿಸಿದೆ. ಇನ್ನು ಈ ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಿ ಪರ ವಕೀಲರಿಗೆ ಸೂಚನೆ ನೀಡಿ ಮುಂದಿನ ವಿಚಾರಣೆಯನ್ನು ಜನವರಿ 6ಕ್ಕೆ ಮುಂದೂಡಿದೆ.
ಇನ್ನು ಈ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಜಾಗೊಂಡಿತ್ತು. ಇದರ ಬೆನ್ನಲ್ಲೇ ಸಿಐಡಿ ಅಧಿಕಾರಿಗಳು ಲುಕ್‌ಔಟ್ ನೋಟಿಸ್ (Lookout Notice) ಜಾರಿಮಾಡಿತ್ತು. ಹೀಗಾಗಿ ಯಾವುದೇ ಕ್ಷಣದಲ್ಲಿ ಬೈರತಿ ಬಸವರಾಜ್ ಬಂಧನವಾಗುವ ಸಾಧ್ಯತೆಗಳಿದ್ದವು. ಕೂಡಲೇ ನಿರೀಕ್ಷಣಾ ಜಾಮೀನಿಗಾಗಿ ಬೈರತಿ ಬಸವರಾಜ್ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದ್ರೆ, ಇದೀಗ ಹೈಕೋರ್ಟ್, ಮಧ್ಯಂತರ ಜಾಮೀನು ನೀಡಿದೆ.
2025 ಜುಲೈ 15ರಂದು ರಾತ್ರಿ ಬೆಂಗಳೂರಿನ ಭಾರತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಲಸೂರು ಲೇಕ್ ಬಳಿ ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನ ಬರ್ಬರ ಕೊಲೆ ನಡೆದಿತ್ತು. ಕೊಲೆಯಾದ ಬಿಕ್ಲು ಶಿವ ತಾಯಿ, ಮಾಜಿ ಸಚಿವ ಬೈರತಿ ಬಸವರಾಜ್ ಸೇರಿ ಹಲವರ ವಿರುದ್ಧ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಬೈರತಿ ಬಸವರಾಜ್ ಎ5 ಆರೋಪಿಯಾಗಿದ್ದರು. ಅಲ್ಲದೇ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್, ವಿಚಾರಣಾ ಹಂತದ ನ್ಯಾಯಾಲಯಕ್ಕೆ ವಾಪಸ್ ಕಳುಹಿಸಿತ್ತು. ಬಳಿಕ ಬೈರತಿ ಬಸವರಾಜ್ ಬಂಧನ ಭೀತಿಯಿಂದಾಗಿ ತಲೆಮರೆಸಿಕೊಂಡಿದ್ದು, ಅವರು ಪರ ವಕೀಲರು ಜಾಮೀನಿಗಾಗಿ ಮತ್ತೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ಸಲ್ಲಿಸಿದ್ದರು. ಆದ್ರೆ, ಅದು ವಜಾಗೊಂಡಿತ್ತು. ಇದರಿಂದ ಬೈರತಿ ಇದೀಗ ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:42 pm, Fri, 26 December 25