5, 8ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ಅನುಮತಿ; ಯಾರನ್ನೂ ಅನುತ್ತೀರ್ಣಗೊಳಿಸುವಂತಿಲ್ಲ

| Updated By: Digi Tech Desk

Updated on: Mar 15, 2023 | 6:34 PM

Board Exams: 5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸಲು ಅನುಮತಿ ನೀಡಿ ಕರ್ನಾಟಕ ಹೈಕೋರ್ಟ್ ಬುಧವಾರ ತೀರ್ಪು ನೀಡಿದೆ. ಆದರೆ, ಯಾರನ್ನೂ ಅನುತ್ತೀರ್ಣಗೊಳಿಸುವಂತಿಲ್ಲ ಎಂದು ಸೂಚಿಸಿದೆ.

5, 8ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ಅನುಮತಿ; ಯಾರನ್ನೂ ಅನುತ್ತೀರ್ಣಗೊಳಿಸುವಂತಿಲ್ಲ
ಕರ್ನಾಟಕ ಹೈಕೋರ್ಟ್
Follow us on

ನವದೆಹಲಿ: 5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆ (Board exams) ನಡೆಸಲು ಅನುಮತಿ ನೀಡಿ ಕರ್ನಾಟಕ ಹೈಕೋರ್ಟ್ (Karnataka High Court) ಬುಧವಾರ ತೀರ್ಪು ನೀಡಿದೆ. ಬೋರ್ಡ್ ಪರೀಕ್ಷೆ ನಡೆಸಲು ಶಿಕ್ಷಣ ಕಾಯ್ದೆಯಡಿ ನಿರ್ಬಂಧವಿಲ್ಲ ಎಂದಿರುವ ಹೈಕೋರ್ಟ್ ವಿಭಾಗೀಯ ಪೀಠ, ಈ ಹಿಂದೆ ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ತಡೆ ನೀಡಿದೆ. ಮಾರ್ಚ್ 27ರಿಂದ ಪರೀಕ್ಷೆ ನಡೆಸುವಂತೆ ಸರ್ಕಾರಕ್ಕೆ ವಿಭಾಗೀಯ ಪೀಠ ಸೂಚನೆ ನೀಡಿದೆ. ಪಠ್ಯಕ್ರಮದಲ್ಲಿ ಉಲ್ಲೇಖಿಸಿರುವುದನ್ನು ಬಿಟ್ಟು ಬೇರೆ ಪ್ರಶ್ನೆಗಳನ್ನು ಕೇಳುವಂತಿಲ್ಲ, ಯಾರನ್ನೂ ಅನುತ್ತೀರ್ಣಗೊಳಿಸುವಂತಿಲ್ಲ ಎಂದು ಪೀಠ ನಿರ್ದೇಶನ ನೀಡಿದೆ. ಜತೆಗೆ, ಪರೀಕ್ಷೆಯ ಫಲಿತಾಂಶವನ್ನು ಸಾರ್ವಜನಿಕವಾಗಿ ಪ್ರಕಟಿಸುವಂತಿಲ್ಲ. ಫಲಿತಾಂಶವನ್ನು ಶಾಲೆಗೆ ಮಾತ್ರವೇ ತಲುಪಿಸಬೇಕು ಎಂದೂ ಸೂಚಿಸಿದೆ.

5 ಮತ್ತು 8ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸುವ ಬಗ್ಗೆ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಹೈಕೋರ್ಟ್​ನ ಏಕಸದಸ್ಯ ಪೀಠ ರದ್ದುಪಡಿಸಿತ್ತು. ಇದರ ವಿರುದ್ಧ ಶಿಕ್ಷಣ ಇಲಾಖೆ ಮೇಲ್ಮನವಿ ಸಲ್ಲಿಸಿತ್ತು. ಸುತ್ತೋಲೆ ರದ್ದುಪಡಿಸಿದ ಆದೇಶಕ್ಕೆ ತಡೆ ನೀಡುವಂತೆ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಸರ್ಕಾರದ ಪರ ವಕೀಲರು ಮನವಿ ಮಾಡಿದ್ದರು. ಇದರ ವಿಚಾರಣೆ ನಡೆಸಿದ ಕೋರ್ಟ್, ಅಭಿಪ್ರಾಯ ಸಲ್ಲಿಸುವಂತೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಮಂಗಳವಾರ ಸೂಚಿಸಿತ್ತು.

ಏನಿದು ಪ್ರಕರಣ?

ಪ್ರಸಕ್ತ ಶೈಕ್ಷಣಿಕ ವರ್ಷದಿಂದ 5 ಮತ್ತು 8ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿತ್ತು. ಇದನ್ನು ವಿರೋಧಿಸಿ ಪೋಷಕರ ಸಂಘಟನೆ ಕೋರ್ಟ್ ಮೊರೆ ಹೋಗಿತ್ತು. ಪೋಷಕರ ಮನವಿಗೆ ಸಮ್ಮತಿಸಿದ್ದ ನ್ಯಾಯಾಲಯ ಸರ್ಕಾರದ ಆದೇಶಕ್ಕೆ ತಡೆ ನೀಡಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿದ್ದು, ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡುವಂತೆ ಕೋರಿತ್ತು. ವಿಚಾರಣೆಯನ್ನು ಪೀಠವು ಮಾರ್ಚ್​ 14ಕ್ಕೆ ಮುಂದೂಡಿತ್ತು.

ತಕರಾರು ಅರ್ಜಿ ಸಲ್ಲಿಸಿದ್ದ ರುಪ್ಸಾ

5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ) ಹೈಕೋರ್ಟ್ ಮೊರೆ ಹೋಗಿತ್ತು. ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೈಕೋರ್ಟ್​ ಮೊರೆ ಹೋಗಿದ್ದರು. 2022-23ನೇ ಸಾಲಿನ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ಮೌಲ್ಯಮಾಪನ ವಿಧಾನವನ್ನು ಬದಲಿಸುವ ಕುರಿತಂತೆ 2022ರ ಡಿಸೆಂಬರ್​ 12 ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶದ ಕ್ರಮ ಪ್ರಶ್ನಿಸಿ ರುಪ್ಸಾ ತಕರಾರು ಅರ್ಜಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠವು ಮಧ್ಯಂತ ತಡೆ ನೀಡಲು ನಿರಾಕರಿಸಿತ್ತು. ಬಳಿಕ ರುಪ್ಸಾ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:12 pm, Wed, 15 March 23