Hijab Row Hearing Highlights: ಹಿಜಾಬ್ ಪ್ರಕರಣ ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾವಣೆ; ವಿಸ್ತೃತ ಪೀಠ ರಚಿಸುವ ಬಗ್ಗೆ ಹೈಕೋರ್ಟ್ ಸಿಜೆ ತೀರ್ಮಾನ

| Updated By: ganapathi bhat

Updated on: Feb 09, 2022 | 6:51 PM

Karnataka High Court Hearing The Hijab Case Updates: ತಕ್ಷಣವೇ ಸಂಪೂರ್ಣ ಕಡತ ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಿ ಎಂದು ಹೈಕೋರ್ಟ್ ರಿಜಿಸ್ಟ್ರಾರ್​​ಗೆ ನಿರ್ದೇಶಿಸಲಾಗಿದೆ. ಅರ್ಜಿದಾರರು ಮುಂದಿನ ವಿಚಾರಣೆ ವೇಳೆ ಮಧ್ಯಂತರ ಆದೇಶದ ಬಗ್ಗೆ ಮನವಿ ಸಲ್ಲಿಸಬಹುದು ಎಂದು ಹೇಳಿದ್ದಾರೆ.

Hijab Row Hearing Highlights: ಹಿಜಾಬ್ ಪ್ರಕರಣ ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾವಣೆ; ವಿಸ್ತೃತ ಪೀಠ ರಚಿಸುವ ಬಗ್ಗೆ ಹೈಕೋರ್ಟ್ ಸಿಜೆ ತೀರ್ಮಾನ
ಪ್ರಾತಿನಿಧಿಕ ಚಿತ್ರ

ರಾಜ್ಯದೆಲ್ಲೆಡೆ ಹಿಜಾಬ್-ಕೇಸರಿ ಶಾಲು ಸಂಘರ್ಷ ಹೆಚ್ಚಾಗುತ್ತಿದೆ. ನಿನ್ನೆ (ಫೆ.08) ಕಾಲೇಜುಗಳಲ್ಲಿ ವಿದ್ಯಾರ್ಥಿಗಳು (Students)  ಹೋರಾಟ ಮಾಡಿದ್ದರು. ಧರಣಿಯಲ್ಲಿ ಕಲ್ಲು ತೂರಾಟ ನಡೆಸಿದ್ದರು. ಈ ವೇಳೆ ಹಲವರಿಗೆ ಗಾಯಗಳಾಗಿವೆ. ಪರ-ವಿರೋಧ ಹೆಸರಲ್ಲಿ ಬೀದಿಗಿಳಿದ ವಿದ್ಯಾರ್ಥಿಗಳು ದಾಂಧಲೆ ನಡೆಸಿದ್ದರು. ಶಿವಮೊಗ್ಗ, ದಾವಣಗೆರೆ, ಬನಹಟ್ಟಿ ಸಂಪೂರ್ಣ ರಣಾಂಗಣವಾಗಿತ್ತು. ನಿನ್ನೆ ಕರ್ನಾಟಕ ಹೈಕೋರ್ಟ್ (High Court) ಹಿಜಾಬ್ (Hijab) ವಿವಾದದ ಬಗ್ಗೆ ವಿಚಾರಣೆ ನಡೆಸಿದೆ. ಅದರಂತೆ, ಇಂದು ಅಂತಿಮವಾಗಿ, ಹಿಜಾಬ್​​ ಪ್ರಕರಣ ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾವಣೆ ಮಾಡಲಾಗಿದೆ. ವಿಸ್ತೃತ ಪೀಠ ರಚಿಸುವ ಬಗ್ಗೆ ಹೈಕೋರ್ಟ್ ಸಿಜೆ ತೀರ್ಮಾನಿಸಲಿ. ಈ ಪ್ರಕರಣ ವಿಸ್ತೃತ ಪೀಠದಲ್ಲಿ ವಿಚಾರಣೆಗೆ ಯೋಗ್ಯವಾಗಿದೆ. ಈ ಬಗ್ಗೆ ಹೈಕೋರ್ಟ್ ಸಿಜೆ ವಿವೇಚನಾಧಿಕಾರ ಹೊಂದಿದ್ದಾರೆ. ತಕ್ಷಣವೇ ಸಂಪೂರ್ಣ ಕಡತ ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಿ ಎಂದು ಹೈಕೋರ್ಟ್ ರಿಜಿಸ್ಟ್ರಾರ್​​ಗೆ ನ್ಯಾಯಮೂರ್ತಿಗಳ ನಿರ್ದೇಶನ ನೀಡಿದ್ದಾರೆ. ಅರ್ಜಿದಾರರು ಮುಂದಿನ ವಿಚಾರಣೆ ವೇಳೆ ಮನವಿ ಸಲ್ಲಿಸಬಹುದು. ಮಧ್ಯಂತರ ಆದೇಶದ ಬಗ್ಗೆ ಮನವಿ ಸಲ್ಲಿಸಬಹುದು ಎಂದು ಹೇಳಿದ್ದಾರೆ.

LIVE NEWS & UPDATES

The liveblog has ended.
  • 09 Feb 2022 06:47 PM (IST)

    ತರಗತಿಗಳೊಳಗೆ ಹಿಜಾಬ್, ಕೇಸರಿ ಶಾಲುಗಳಿಗೆ ಅವಕಾಶ ಇಲ್ಲ: ಸಚಿವ ಅಶ್ವಥ್ ನಾರಾಯಣ

    ಪ್ರಕರಣ ವಿಸ್ತೃತ ಪೀಟಕ್ಕೆ ವರ್ಗಾವಣೆ ಆಗಿದೆ. ವಿಸ್ತೃತ ಪೀಠದ ತೀರ್ಪು, ಸಲಹೆ ಏನಿರುತ್ತೆ ನೋಡಬೇಕು. ಸಮವಸ್ತ್ರ ವಿಚಾರದಲ್ಲಿ ಸರ್ಕಾರ ಈಗಾಗಲೇ ಸ್ಪಷ್ಟ ನಿಲುವು ತಗೊಂಡಿದೆ. ತರಗತಿಗಳೊಳಗೆ ಹಿಜಾಬ್, ಕೇಸರಿ ಶಾಲುಗಳಿಗೆ ಅವಕಾಶ ಇಲ್ಲ. ಸರ್ಕಾರದ ನಿಲುವಿನಲ್ಲಿ ಯಾವುದೇ ಗೊಂದಲ‌ ಇಲ್ಲ. ಪ್ರೌಢಶಾಲೆ, ಕಾಲೇಜುಗಳಿಗೆ ಶಾಂತಿ‌ ನೆಲೆಸಲಿ ಅಂತ ರಜೆ ಕೊಡಲಾಗಿದೆ. ರಜೆ ಶಾಶ್ವತ ಪರಿಹಾರ ಅಲ್ಲ, ತಾತ್ಕಾಲಿಕ ಕ್ರಮ. ಮೂರು ದಿನಕ್ಕೆ ಮಾತ್ರ ರಜೆ ಮೀಸಲು. ರಜೆ ಮುಂದುವರೆಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಆಗಿಲ್ಲ ಎಂದು ಸಚಿವ ಅಶ್ವಥ್ ನಾರಾಯಣ ಹೇಳಿಕೆ ನೀಡಿದ್ದಾರೆ.

  • 09 Feb 2022 06:46 PM (IST)

    ವಿವಾದವನ್ನು ಕಾನೂನಾತ್ಮಕ, ಮಾತುಕತೆಯಿಂದ ಬಗೆಹರಿಸುವ ಕಡೆ ಚಿಂತಿಸಬೇಕು

    ಕರ್ನಾಟಕ ರಾಜ್ಯದಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ ವಿಷಾದನೀಯ. ವಿವಾದವನ್ನು ಕಾನೂನಾತ್ಮಕ, ಮಾತುಕತೆಯಿಂದ ಬಗೆಹರಿಸುವ ಕಡೆ ಚಿಂತಿಸಬೇಕು. ಧಾರ್ಮಿಕವಾಗಿ ತೆಗೆದುಕೊಂಡರೆ ಮಾನಸಿಕ ಪ್ರಚೋದನೆಗೆ ಅವಕಾಶ ಆಗುತ್ತದೆ ಎಂದು ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ ಹೇಳಿದ್ದಾರೆ.


  • 09 Feb 2022 06:46 PM (IST)

    ಇಷ್ಟು ದೊಡ್ಡ ಕಮ್ಯುನಲ್ ಗಲಾಟೆ ಆಗುತ್ತದೆ ಎಂದು ಅಂದುಕೊಂಡಿರಲಿಲ್ಲ: ಹೈಕೋರ್ಟ್ ಮೆಟ್ಟಿಲೇರುವ ವಿದ್ಯಾರ್ಥಿನಿ ಸಫಾ

    ಹೈಕೋರ್ಟ್ ನಿಂದ ಬೇಗ ತೀರ್ಪು ಬರಲಿ. ನಮ್ಮ ಶಿಕ್ಷಣದ ಮೇಲೆ ದೊಡ್ಡ ಪರಿಣಾಮ ಆಗುತ್ತಿದೆ. ಈಗಾಗಲೇ ಪರೀಕ್ಷೆಗಳನ್ನು ಕಾಲೇಜು ಘೋಷಣೆ ಮಾಡಿದೆ. ಹೆಡ್ ಸ್ಕಾರ್ಫ್ ವಿಚಾರದಲ್ಲಿ ಬೇಗ ತೀರ್ಪು ಬರಲಿ. ಇದೊಂದು ದೊಡ್ಡ ವಿಷಯವೇ ಅಲ್ಲ. ಈ ಪ್ರಕರಣ ಇಷ್ಟು ದೊಡ್ಡದಾಗಿ ಯಾಕೆ ಆಯಿತು ಎಂದು ಗೊತ್ತಾಗುತ್ತಿಲ್ಲ. ನಮಗೆ ಇದೇ ತಿಂಗಳಲ್ಲಿ ಪ್ರ್ಯಾಕ್ಟಿಕಲ್ ಲ್ಯಾಬ್ ಪರೀಕ್ಷೆ ಇದೆ. ಮನೆಯಲ್ಲಿ ನಮಗೆ ಓದಲು ಸಾಧ್ಯವಿಲ್ಲ. ನಮಗೆ ಏಕಾಗ್ರತೆ ಮಾಡಲು ಆಗುತ್ತಿಲ್ಲ. ಇಷ್ಟು ದೊಡ್ಡ ಕಮ್ಯುನಲ್ ಗಲಾಟೆ ಆಗುತ್ತದೆ ಎಂದು ಅಂದುಕೊಂಡಿರಲಿಲ್ಲ. ನಾವು ಒಂದೇ ಬಟ್ಟಲಿನಲ್ಲಿ ಊಟ ಮಾಡುತ್ತಿದ್ದವರು. ನಾವು ಕಾಲೇಜಿನಲ್ಲಿ ಜೊತೆಗಿದ್ದವರು. ಈ ಎಲ್ಲ ಬೆಳವಣಿಗೆಗಳನ್ನು ನೋಡಿ ನಮಗೆ ಬಹಳ ನೋವಾಗಿದೆ. ನಮ್ಮವರೇ ನಮಗೆ ವಿರುದ್ಧ ಇದ್ದಾರೆ ಎಂದು ಅಂದುಕೊಂಡಿರಲಿಲ್ಲ. ಶಾಸಕರು ಹೇಳಿಕೆಗಳನ್ನು ಕೊಡದಿದ್ದರೆ ಕೇಸರಿ ಶಾಲುಗಳು ಹೊರಗೆ ಬರುತ್ತಿರಲಿಲ್ಲ ಎಂದು ಹೈಕೋರ್ಟ್ ಮೆಟ್ಟಿಲೇರುವ ವಿದ್ಯಾರ್ಥಿನಿ ಸಫಾ ಹೇಳಿದ್ದಾರೆ.

  • 09 Feb 2022 06:44 PM (IST)

    ನಾವು ಸಂವಿಧಾನಾತ್ಮಕ ಹಕ್ಕು ಕೇಳುತ್ತಿದ್ದೇವೆ: ರಿಟ್​ಗೆ ಸಹಿ ಮಾಡಿರುವ ವಿದ್ಯಾರ್ಥಿ ಆಲಿಯಾ ಅಸಾದಿ

    ಹಿಜಾಬ್ ಧರಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದ ವಿಚಾರವಾಗಿ ನ್ಯಾಯಮೂರ್ತಿಗಳು ಸಂವಿಧಾನ ಎತ್ತಿಹಿಡಿಯುವ ನಂಬಿಕೆಯಿದೆ. ನ್ಯಾಯಮೂರ್ತಿಗಳ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ. ನಾವು ಸಂವಿಧಾನಾತ್ಮಕ ಹಕ್ಕು ಕೇಳುತ್ತಿದ್ದೇವೆ. ಸಂವಿಧಾನಾತ್ಮಕ ಹಕ್ಕು ಪಡೆಯಲು ಎಷ್ಟು ಹೋರಾಡಬೇಕಿದೆ. ಬಹಳ ನಿರೀಕ್ಷೆಯಿಂದ ಹೈಕೋರ್ಟ್​ ಆದೇಶ ಕಾಯುತ್ತಿದ್ದೇವೆ ಎಂದು ರಿಟ್​ಗೆ ಸಹಿ ಮಾಡಿರುವ ವಿದ್ಯಾರ್ಥಿ ಆಲಿಯಾ ಅಸಾದಿ ಹೇಳಿಕೆ ನೀಡಿದ್ದಾರೆ.

  • 09 Feb 2022 06:42 PM (IST)

    ತೀರ್ಪು ಬರುವವರೆಗೂ ಸ್ಕಾರ್ಫ್ ಹಾಕುವ ಅವಕಾಶವನ್ನ ಕೋರ್ಟ್ ಕೊಡಬೇಕು: ಸಿಎಫ್ಐ ರಾಜ್ಯಾಧ್ಯಕ್ಷ

    ಹಿಜಾಬ್ ಕುರಿತು ಹೈಕೋರ್ಟ್ ಅಭಿಪ್ರಾಯ ವಿಚಾರವಾಗಿ ಸಿಎಫ್ಐ ರಾಜ್ಯಾಧ್ಯಕ್ಷ ಅತಾವುಲ್ಲಾ ಪುಂಜಾಲಕಟ್ಟೆ ಹೇಳಿಕೆ ನೀಡಿದ್ದಾರೆ. ಸಂವಿಧಾನಾತ್ಮಕವಾಗಿ ತೀರ್ಪು ನಮ್ಮ ಪರ ಬರಬಹುದು. ಹೈಕೋರ್ಟ್ ಮೇಲೆ ನಮಗೆ ವಿಶ್ವಾಸ ಇದೆ. ಆದಷ್ಟು ಬೇಗ ತೀರ್ಪು ಬರಲಿ ಎಂದು ನಿರೀಕ್ಷಿಸುತ್ತೇವೆ. ಮಕ್ಕಳ ಶಿಕ್ಷಣಕ್ಕೆ ಯಾವುದೇ ಗೊಂದಲ ಆಗಬಾರದು. ತೀರ್ಪು ಬರುವವರೆಗೂ ಕೋರ್ಟ್​​ ಅವಕಾಶ ಕೊಡಬೇಕು. ಸ್ಕಾರ್ಫ್ ಹಾಕುವ ಅವಕಾಶವನ್ನ ಕೋರ್ಟ್ ಕೊಡಬೇಕು ಎಂದು ಸಿಎಫ್ಐ ರಾಜ್ಯಾಧ್ಯಕ್ಷ ಅತಾವುಲ್ಲಾ ಪುಂಜಾಲಕಟ್ಟೆ ಮನವಿ ಮಾಡಿದ್ದಾರೆ.

  • 09 Feb 2022 06:38 PM (IST)

    ಧಾರ್ಮಿಕ ವಿಷಯಗಳನ್ನು ಶಾಲಾ-ಕಾಲೇಜಿಗೆ ತರಬಾರದು: ಆದಿತ್ಯ ಠಾಕ್ರೆ

    ಶಾಲೆಗಳಲ್ಲಿ ವಸ್ತ್ರಸಂಹಿತೆ ನಿಯಮ ಇದ್ದರೆ ಪಾಲಿಸಲೇಬೇಕು ಎಂದು ಮಹಾರಾಷ್ಟ್ರದ ಪರಿಸರ ಖಾತೆ ಸಚಿವ ಆದಿತ್ಯ ಠಾಕ್ರೆ ಹೇಳಿಕೆ‌ ನೀಡಿದ್ದಾರೆ. ಕಾಂಗ್ರೆಸ್ ಮಿತ್ರ ಪಕ್ಷ ‌ಶಿವಸೇನೆ ನಾಯಕ ಆದಿತ್ಯ ಠಾಕ್ರೆ, ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಮಾತ್ರ ಆದ್ಯತೆ ಆಗಿರಬೇಕು. ಧಾರ್ಮಿಕ ವಿಷಯಗಳನ್ನು ಶಾಲಾ-ಕಾಲೇಜಿಗೆ ತರಬಾರದು ಎಂದು ತಿಳಿಸಿದ್ದಾರೆ.

  • 09 Feb 2022 06:06 PM (IST)

    ಬಿಜೆಪಿ ಕಳ್ಳರ ಮಾತು ನಂಬಿ ನೀವು ಹಾಳಾಗಬೇಡಿ: ಶಿವರಾಜ್ ತಂಗಡಗಿ

    ಬಿಜೆಪಿ ಕಳ್ಳರ ಮಾತು ನಂಬಿ ನೀವು ಹಾಳಾಗಬೇಡಿ. ಬಿಜೆಪಿ ಕಳ್ಳರ ಮಾತು ಕೇಳಿ ಜೀವನ ಹಾಳು ಮಾಡಿಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಿಗೆ ಮಾಜಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ಶಾಲೆ ಅನ್ನೋದು ಸರಸ್ವತಿ ವಿದ್ಯಾಪೀಠ. ಕೇಸರಿ ಶಾಲು ಧರಿಸಿ ಹೋಗೋದು ಕೀಳು ಮಟ್ಟದ ಶಿಕ್ಷಣ. ಹಿಜಾಬ್ ಅನ್ನೋದು ಬಹಳ ಹಿಂದಿನಿಂದಲೂ ಇದೆ. ವಿರೋಧ ಪಕ್ಷದ ನಾಯಕರ ಕೈವಾಡ ಇದೆ ಎಂದು ಹೇಳ್ತಾರೆ. ಇವರು ಆಡಳಿತ ಮಾಡ್ತಾರೋ ದನ ಕಾಯ್ತಾರೋ? ತಪ್ಪು ಮಾಡಿದವರನ್ನು ಒದ್ದು ಒಳಗಡೆ ಹಾಕಿ ಎಂದು ತಂಗಡಗಿ ಹೇಳಿದ್ದಾರೆ.

  • 09 Feb 2022 06:04 PM (IST)

    ಶಾಲಾ-ಕಾಲೇಜಿಗೆ ಧಾರ್ಮಿಕ ವಸ್ತ್ರ ಕೊಂಡೊಯ್ಯಬಾರದು: ಹೇಮಾಮಾಲಿನಿ

    ಹಿಜಾಬ್ ವಿವಾದಕ್ಕೆ ಡ್ರೀಮ್​ಗರ್ಲ್​ ಹೇಮಾಮಾಲಿನಿ ಪ್ರತಿಕ್ರಿಯೆ ನೀಡಿದ್ದಾರೆ. ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದಕ್ಕಾಗಿ ಶಾಲೆಗೆ ಹೋಗ್ತಾರೆ. ಶಾಲಾ-ಕಾಲೇಜಿಗೆ ಧಾರ್ಮಿಕ ವಸ್ತ್ರ ಕೊಂಡೊಯ್ಯಬಾರದು. ದೆಹಲಿಯಲ್ಲಿ ಬಿಜೆಪಿ ಸಂಸದೆ ಹೇಮಾ ಮಾಲಿನಿ ಪ್ರತಿಕ್ರಿಯೆ ನೀಡಿದ್ದಾರೆ. ಆಯಾ ಶಾಲೆಗಳು ಹೊಂದಿರುವ ಸಮವಸ್ತ್ರ ಗೌರವಿಸಬೇಕು. ಶಾಲೆಯ ಹೊರಗೆ ನಿಮಗೆ ಇಷ್ಟ ಬಂದ ವಸ್ತ್ರ ಧರಿಸಬಹುದು ಎಂದು ಹೇಳಿದ್ದಾರೆ.

  • 09 Feb 2022 06:02 PM (IST)

    ಹಿಜಾಬ್, ಕೇಸರಿ ಶಾಲು ವಿವಾದ ಬಗೆಹರಿಸಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ಗೆ ಪತ್ರ

    ಕರ್ನಾಟಕದಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ ಬಗೆಹರಿಸಿ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ಗೆ ಕರೀಂ ಪತ್ರ ಬರೆದಿದ್ದಾರೆ. ರಾಜ್ಯಸಭೆಯ ಸಿಪಿಐ ಸದಸ್ಯ ಎಲ್ಮರಮ್ ಕರೀಂ ಪತ್ರ ಬರೆದಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ವಿವಾದ ಬಗೆಹರಿಸಿ. ಕರ್ನಾಟಕ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಪತ್ರ ಬರೆದಿದ್ದಾರೆ. ವಿದ್ಯಾರ್ಥಿಗಳ ಹಕ್ಕು ರಕ್ಷಣೆಗೆ ಕ್ರಮಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ. ಧರ್ಮೇಂದ್ರ ಪ್ರಧಾನ್​ಗೆ ಪತ್ರ ಬರೆದು ಎಲ್ಮರಮ್ ಒತ್ತಾಯ ಮಾಡಿದ್ದಾರೆ.

  • 09 Feb 2022 06:01 PM (IST)

    ಮುಗ್ಧ ಮನಸ್ಸಿನ ಮಕ್ಕಳಲ್ಲಿ ರಾಜ್ಯ ಬಿಜೆಪಿ ನಾಯಕರು ಕೋಮುದಳ್ಳುರಿ ತುಂಬುತ್ತಿದ್ದಾರೆ

    ಕರ್ನಾಟಕದಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ ಹಿನ್ನೆಲೆ ಚಾಮರಾಜನಗರದಲ್ಲಿ ಆರ್.ಧ್ರುವನಾರಾಯಣ ಹೇಳಿಕೆ ನೀಡಿದ್ದಾರೆ. ಮುಗ್ಧ ಮನಸ್ಸಿನ ಮಕ್ಕಳಲ್ಲಿ ರಾಜ್ಯ ಬಿಜೆಪಿ ನಾಯಕರು ಕೋಮುದಳ್ಳುರಿ ತುಂಬುತ್ತಿದ್ದಾರೆ. ಕರ್ನಾಟಕ ಶಾಂತಿಯುತ ರಾಜ್ಯ. ಇದಕ್ಕೆ ಕಪ್ಪು ಚುಕ್ಕೆ ಇಡುವಂತೆ ಹಿಜಾಬ್​ ಘಟನೆ ನಡೆದಿದೆ. ಮುಸ್ಲಿಮರು ನೂರಾರು ವರ್ಷಗಳಿಂದ ಹಿಜಾಬ್ ಧರಿಸುತ್ತಿದ್ದಾರೆ. ಈ ಮೊದಲು ಹಿಜಾಬ್ ಧರಿಸಿಯೇ ಕಾಲೇಜಿಗೆ ಬರುತ್ತಿದ್ದರು. ಮೊದಲು ಉಡುಪಿ ಕಾಲೇಜಿನಲ್ಲಿ ಹಿಜಾಬ್​ ನಿರಾಕರಿಸಲಾಯಿತು. ನಂತರ ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ನಿರಾಕರಣೆ ಮಾಡ್ತಿದ್ದಾರೆ. ಇದು ಬಿಜೆಪಿಯವರ ಕೋಮು ಪ್ರಚೋದನೆಯಿಂದ ನಡೀತಿದೆ. ಹಿಜಾಬ್​ ಧರಿಸುವುದನ್ನು ವಿವಾದ ಮಾಡಿದ್ದನ್ನು ಖಂಡಿಸುತ್ತೇನೆ. ಒಂದು ಧರ್ಮವನ್ನು ನಂಬಿ ಕಾಂಗ್ರೆಸ್​ ರಾಜಕೀಯ ಮಾಡುತ್ತಿಲ್ಲ. ಬಿಜೆಪಿ ಒಂದು ಧರ್ಮಕ್ಕೆ ಸೀಮಿತವಾಗಿ ರಾಜಕೀಯ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಹೇಳಿದ್ದಾರೆ.

  • 09 Feb 2022 05:59 PM (IST)

    ಮತಾಂಧ ಶಕ್ತಿಯನ್ನು ಅಪ್ರತ್ಯಕ್ಷವಾಗಿ ಬೆಂಬಲಿಸ್ತಿದ್ದಾರೆ; ಹೀಗಾಗಿ ಕಾಂಗ್ರೆಸ್ ಪಕ್ಷ ದೇಶದಲ್ಲಿ ಕಳೆದು ಹೋಗಿದೆ

    ಕೇಸರಿ ಧ್ವಜ ಹಾರಿಸಿದ್ದಕ್ಕೆ ರಾಷ್ಟ್ರಧ್ವಜ ಕೆಳಗಿಳಿಸಿದ ಪ್ರಕರಣ ಎಂದದ್ದರಿಂದ ಏನು ಸಾಧಿಸಲಾಗಿದೆ ಎಂದು ಅರ್ಥ ಆಗ್ತಿಲ್ಲ. ನಿನ್ನೆ ರಾಷ್ಟ್ರಧ್ವಜ ಅಲ್ಲಿ ಇತ್ತು ಎಂದು ಡಿಕೆಶಿ ಹೇಳಿದ್ದರು. ಹೀಗಾಗಿ ಎನ್‌ಎಸ್‌ಯುಐನವ್ರು ರಾಷ್ಟ್ರಧ್ವಜ ಹಾರಿಸಿದ್ದಾರೆ. ಹಿಂದೆ ನಿಂತು ಪ್ರಚೋದಿಸಿ ಅಶಾಂತಿ ಹರಡುವ ಕೆಲಸ ಆಗುತ್ತಿದೆ. ಡಿ.ಕೆ.ಶಿವಕುಮಾರ್‌ ಏನು ಬೇಕಾದ್ರೂ ಆರೋಪಿಸುತ್ತಾರೆ. ನಿನ್ನೆ ಕೊಟ್ಟ ಹೇಳಿಕೆಯನ್ನು ಟ್ವಿಸ್ಟ್‌ ಮಾಡಿ ಹೇಳಿದ್ದಾರೆ. ಮತಾಂಧ ಶಕ್ತಿಯನ್ನು ಅಪ್ರತ್ಯಕ್ಷವಾಗಿ ಬೆಂಬಲಿಸ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷ ದೇಶದಲ್ಲಿ ಕಳೆದು ಹೋಗಿದೆ. ಮತೀಯ ಶಕ್ತಿಗಳ ಜೊತೆ ಆಟವಾಡುವ ಕೆಲಸ ಬೇಡ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

  • 09 Feb 2022 05:57 PM (IST)

    ಶಾಲಾ-ಕಾಲೇಜುಗಳಿಗೆ ರಜೆ ಮುಂದುವರಿಸುವ ವಿಚಾರ: ಸಭೆ ನಡೆಸಿ ತೀರ್ಮಾನ

    ಶಾಲಾ-ಕಾಲೇಜುಗಳಿಗೆ ರಜೆ ಮುಂದುವರಿಸುವ ವಿಚಾರವನ್ನು ಸಿಎಂ ಬೊಮ್ಮಾಯಿ‌ ನೇತೃತ್ವದಲ್ಲಿ ಸಭೆ ನಡೆಸಿ ತೀರ್ಮಾನ ಮಾಡಲಾಗುವುದು. ಸಿಎಂ, ನಾನು, ಶಿಕ್ಷಣ ಸಚಿವರು ಸೇರಿ ತೀರ್ಮಾನಿಸ್ತೇವೆ. ರಜೆ ಮುಂದುವರಿಸಬೇಕೆ, ಬೇಡವೇ ಎಂದು ತೀರ್ಮಾನ ಮಾಡುತ್ತೇವೆ. ಹೈಕೋರ್ಟ್‌ ಯಾವ ಆದೇಶ ನೀಡುತ್ತೆಂದೂ ನೋಡ್ತೇವೆ. ಬೆಂಗಳೂರಿನಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ಆದ್ರೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕಾಲೇಜು ಬಳಿ ಸೂಕ್ತ ಬಂದೋಬಸ್ತ್‌ ಮಾಡಲಾಗಿದೆ. ಹೆಚ್ಚಿನ ಭದ್ರತೆ ಹಿನ್ನೆಲೆ ರಾಜ್ಯದಲ್ಲಿ ಶಾಂತಿಯುತವಾಗಿದೆ ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.

  • 09 Feb 2022 04:01 PM (IST)

    ಇತ್ಯರ್ಥವಾಗದ ಹಿಜಾಬ್ ಅರ್ಜಿ: ಮುಖ್ಯ ನ್ಯಾಯಮೂರ್ತಿಗಳಿಗೆ ಪ್ರಕರಣ ವರ್ಗಾವಣೆ

    ವಕೀಲ ಕಾಳೇಶ್ವರಂ ರಾಜ್​ರಿಂದ ವಾದ ಮಂಡನೆ ಮಾಡಲಾಗಿದೆ. ಹೈಕೋರ್ಟ್​​ಗಳ ಏಕಸದಸ್ಯ ಪೀಠಗಳು ತೀರ್ಪು ನೀಡಿವೆ. ಈ ಪ್ರಕರಣದಲ್ಲಿ ತೀರ್ಪಿನ ತುರ್ತು ಅಗತ್ಯತೆ ಇದೆ ಎಂದು ಹೇಳಿದ್ದಾರೆ. ಇದೀಗ ಅಂತಿಮವಾಗಿ ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾಯಿಸಿ ಏಕಸದಸ್ಯ ಪೀಠ ಆದೇಶ ನೀಡಿದೆ. ಹೈಕೋರ್ಟ್ ಏಕಸದಸ್ಯ ಪೀಠದಿಂದ ಪ್ರಕರಣ ವರ್ಗಾವಣೆ ಮಾಡಲಾಗಿದೆ. ಹಿಜಾಬ್‌ಗೆ ಅನುಮತಿ ಕೋರಿದ್ದ ಅರ್ಜಿ ವಿಚಾರಣೆ ವರ್ಗಾವಣೆ ಮಾಡಲಾಗಿದೆ.

  • 09 Feb 2022 04:00 PM (IST)

    ತೀರ್ಪು ಬರುವುದು ಮುಖ್ಯ; ವಿಸ್ತೃತ ಪೀಠಕ್ಕೆ ವಹಿಸುವುದು ನ್ಯಾಯಮೂರ್ತಿಗಳಿಗೆ ಬಿಟ್ಟದ್ದು: ಪ್ರಭುಲಿಂಗ ನಾವದಗಿ

    ಈ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವಹಿಸುವ ಅಗತ್ಯವಿದೆ ಎಂದು ನ್ಯಾಯಮೂರ್ತಿ ಕೃಷ್ಣಾ ಎಸ್​ ದೀಕ್ಷಿತ್​ ಅಭಿಪ್ರಾಯ ಪಟ್ಟಿದ್ದರು. ನೀವು ಒಪ್ಪಿದರೇ ವಿಸ್ತೃತ ಪೀಠಕ್ಕೆ ವಹಿಸುವೆ. ನಿನ್ನೆ ವಾದ ಮಾಡಿದ ಅಂಶಗಳು, ದಾಖಲೆ ಪರಿಶೀಲಿಸಿದ್ದೇನೆ ಎಂದು ಹೇಳಿದ್ದರು. ಹಿರಿಯ ವಕೀಲ ಸಂಜಯ ಹೆಗಡೆ ವಾದ ಮಂಡನೆ ಮಾಡಿ, ವಿಸ್ತೃತ ಪೀಠಕ್ಕೆ ವಹಿಸುವುದು ಕೋರ್ಟ್​ಗೆ ಬಿಟ್ಟ ವಿಚಾರ. ಆದರೆ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ವರ್ಷದಲ್ಲಿ 2 ತಿಂಗಳು ಮಾತ್ರ ಬಾಕಿ ಇದೆ ಎಂದು ಹೇಳಿದ್ದಾರೆ. ವಾದಿ ಪ್ರತಿವಾದಿಗಳ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್​ಗೆ ಅರ್ಜಿದಾರರ ಪರ ಸಂಜಯ್ ಹೆಗ್ಡೆ ವಾದ ಮಂಡಿಸಿದ್ದಾರೆ. ವಿಸ್ತೃತ ಪೀಠಕ್ಕೆ ವಹಿಸುವುದು ನ್ಯಾಯಮೂರ್ತಿಗಳ ವಿವೇಚನಾಧಿಕಾರ ಎಂದು ಹೇಳಿದ್ದಾರೆ. ಎಜಿ ಪ್ರಭುಲಿಂಗ ನಾವದಗಿ ವಾದ ಮಂಡಿಸಿ ನಮಗೆ ಭಾವನಾತ್ಮಕ ವಿಷಯ ಇರಬಹುದು. ಆದರೆ ನಮಗೆ ತೀರ್ಪು ಬರುವುದು ಮುಖ್ಯ. ವಿಸ್ತೃತ ಪೀಠಕ್ಕೆ ವಹಿಸುವುದು ನ್ಯಾಯಮೂರ್ತಿಗಳಿಗೆ ಬಿಟ್ಟದ್ದು. ಧಾರ್ಮಿಕ ಅಗತ್ಯ, ಆಚರಣೆಯೇ ಎಂಬುವುದನ್ನ ನಿರ್ಧರಿಸಬೇಕಿದೆ. ಸರ್ಕಾರದ ಪರ ವಕೀಲ ಪ್ರಭುಲಿಂಗ ನಾವದಗಿ ವಾದ ಮಾಡಿದ್ದಾರೆ. ಎಲ್ಲರೂ ಕೂಡ ಕೋರ್ಟ್​​ ತೀರ್ಪಿಗೆ ಎದುರು ನೋಡುತ್ತಿದ್ದಾರೆ. ಈಗಾಗಲೇ ಅರ್ಜಿದಾರರು ವಾದ ಮಂಡಿಸಿದ್ದಾರೆ. ಈಗ ಸರ್ಕಾರದ ಪರ ವಕೀಲರು ವಾದ ಮಂಡಿಸಬೇಕು ಎಂದು ಅರ್ಜಿದಾರ ವಿದ್ಯಾರ್ಥಿನಿ ಪರ ವಕೀಲ ಸಜ್ಜನ್​ ಪೂವಯ್ಯ ವಾದ ಮಂಡಿಸಿದ್ದಾರೆ. ಈ ಪ್ರಕರಣ ವಿಸ್ತೃತ ಪೀಠಕ್ಕೆ ವಹಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

  • 09 Feb 2022 03:59 PM (IST)

    ಹಿಜಾಬ್​​ ಪ್ರಕರಣ ಹೈಕೋರ್ಟ್ ಏಕಸದಸ್ಯ ಪೀಠದಿಂದ ವರ್ಗಾವಣೆ

    ಹಿಜಾಬ್​​ ಪ್ರಕರಣ ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾವಣೆ ಮಾಡಲಾಗಿದೆ. ಹೈಕೋರ್ಟ್ ಏಕಸದಸ್ಯ ಪೀಠದಿಂದ ವರ್ಗಾವಣೆ ಹಿನ್ನೆಲೆ, ಶಾಂತಿಯಿಂದ ಕೋರ್ಟ್​ನಿಂದ ತೆರಳಲು ವಕೀಲರಿಗೆ ಮನವಿ ಮಾಡಲಾಗಿದೆ. ನಿಮ್ಮ ವಾದಮಂಡನೆಯಿಂದ ನಮ್ಮ ಜ್ಞಾನ ವಿಸ್ತಾರವಾಗಿದೆ ಎಂದು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅಭಿಪ್ರಾಯ ತಿಳಿಸಿದ್ದಾರೆ. ಹಿಜಾಬ್​​ ಪ್ರಕರಣ ಹೈಕೋರ್ಟ್ ಏಕಸದಸ್ಯ ಪೀಠದಿಂದ ವರ್ಗಾವಣೆ ಹಿನ್ನೆಲೆ, ನಾವೆಲ್ಲರೂ ನ್ಯಾಯಮೂರ್ತಿಗಳಿಗೆ ತುಂಬಾ ಆಭಾರಿಯಾಗಿದ್ದೇವೆ. ಬಹಳ ತಾಳ್ಮೆಯಿಂದ ಅರ್ಥಪೂರ್ಣ ವಿಚಾರಣೆ ನಡೆಸಿದ್ದೀರಿ. ಸೌಹಾರ್ದತೆಯಿಂದ ವಾದಮಂಡಿಸಿದ ವಕೀಲರಿಗೆ ಅಭಿನಂದನೆ. ವಕೀಲರಾದ ದೇವದತ್ ಕಾಮತ್, ಸಂಜಯ್​​ ಹೆಗ್ಡೆ ಅಭಿನಂದನೆ ಸಲ್ಲಿಸಿದ್ದಾರೆ.

  • 09 Feb 2022 03:32 PM (IST)

    ಪ್ರಕರಣ ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗ

    ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗ ಮಾಡಲಾಗಿದೆ. ಮುಖ್ಯ ನ್ಯಾಯಮೂರ್ತಿಗಳು ವಿಸ್ತೃತ ಪೀಠ ರಚಿಸುವ ಬಗ್ಗೆ ತೀರ್ಮಾನಿಸಲಿ. ಈ ಪ್ರಕರಣ ವಿಸ್ತೃತ ಪೀಠದಲ್ಲಿ ವಿಚಾರಣೆಗೆ ಯೋಗ್ಯವಾಗಿದೆ. ಮುಖ್ಯ ನ್ಯಾಯಮೂರ್ತಿಗಳು ಈ ಬಗ್ಗೆ ವಿವೇಚನಾಧಿಕಾರ ಹೊಂದಿದ್ದಾರೆ. ತಕ್ಷಣವೇ ಸಂಪೂರ್ಣ ಕಡತವನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಿ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಗೆ ನಿರ್ದೇಶನ ನೀಡಲಾಗಿದೆ.

  • 09 Feb 2022 03:32 PM (IST)

    ವಿಸ್ತೃತ ಪೀಠಕ್ಕೆ ವರ್ಗಾಯಿಸು ಸಂಬಂಧ ಆದೇಶ

    ವಿಸ್ತೃತ ಪೀಠಕ್ಕೆ ವರ್ಗಾಯಿಸು ಸಂಬಂಧ ಆದೇಶವನ್ನು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಬರೆಸುತ್ತಿದ್ದಾರೆ. ಸಂವಿಧಾನದ ಪ್ರಶ್ನೆಗಳು ಈ ಕೇಸಿನಲ್ಲಿ ಅಡಗಿವೆ. ವೈಯಕ್ತಿಕ ಕಾನೂನಿನ ಕೆಲ ಅಂಶಗಳು ಪ್ರಸ್ತಾಪವಾಗಿವೆ. ಅರ್ಧ ಡಜನ್ ತೀರ್ಪುನ್ನು ಪ್ರಸ್ತಾಪಿಸಲಾಗಿದೆ. ಈ ಪ್ರಕರಣದ ಬಗ್ಗೆ ಎರಡೂ ಕಡೆಯವರು ವಾದ ಮಂಡಿಸಿದ್ದಾರೆ. ಉದ್ಭವವಾಗಿರುವ ಪ್ರಶ್ನೆಗಳು ಬಹಳ ಮುಖ್ಯವಾದ ಪ್ರಶ್ನೆಗಳು. ಕೋರ್ಟ್ ಅಂತಿಮವಾಗಿ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗಿದೆ.

  • 09 Feb 2022 03:28 PM (IST)

    ಹೈಕೋರ್ಟ್​ನಲ್ಲೂ ಹಿಜಾಬ್ ಪರ- ವಿರೋಧ ವಾದ ಮಂಡನೆ

    ಮಧ್ಯಂತರ ಆದೇಶ ನೀಡಲು ಎಜಿ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಂತದಲ್ಲಿ ಮಧ್ಯಂತರ ಆದೇಶ ನೀಡುವುದು ಸರಿಯಲ್ಲ. ಅರ್ಜಿದಾರರ ವಾದವನ್ನು ಒಪ್ಪಿಕೊಂಡತಾಗುತ್ತೆ. ಸರ್ಕಾರದ ಪರ ವಕೀಲ ಎಜಿ ನಾವದಗಿ ವಾದ ಮಾಡಿದ್ದಾರೆ. ಸರ್ಕಾರದ ಪರ ಎಜಿ ಪ್ರಭುಲಿಂಗ್ ನಾವದಗಿ ವಾದ ಮಂಡಿಸಿದ್ದಾರೆ. ಸರ್ಕಾರ ಕಾಲೇಜು ಅಭಿವೃದ್ದಿ ಸಮಿತಿಗೆ ಅಧಿಕಾರ ನೀಡಿದೆ. ಸಮವಸ್ತ್ರ ವಿಚಾರದಲ್ಲಿ ಸಮಿತಿ ನಿರ್ಧಾರ ಕೈಗೊಳ್ಳಬಹುದು. ಹೀಗಾಗಿ ಮಧ್ಯಂತರ ಆದೇಶದ ಅಗತ್ಯವಿಲ್ಲವೆಂದು ವಾದ ಮಂಡಿಸಿದ್ದಾರೆ. ವಿದ್ಯಾರ್ಥಿನಿಯರು ಕಾಲೇಜಿನ ಹೊರಗಡೆ ನಿಂತಿದ್ದಾರೆ. ಹಿಜಾಬ್ ಧರಿಸಿ ಕಾಲೇಜಿಗೆ ತೆರಳಲು ಅನುಮತಿ ಕೊಡಿ ಎಂದು ಕೇಳಲಾಗಿದೆ. ಸರ್ಕಾರದ ನಿಯಮ ವಿದ್ಯಾರ್ಥಿನಿಯರನ್ನು ಹೊರಗಿಡುವಂತೆ ಹೇಳಿಲ್ಲ. ಯೂನಿಫಾರ್ಮ್ ಇಲ್ಲದಿದ್ದರೆ ದಂಡವನ್ನೂ ನಿಗದಿಪಡಿಸಿಲ್ಲ. ವಿದ್ಯಾರ್ಥಿನಿಯರ ಸಮವಸ್ತ್ರದ ಒಂದು ಭಾಗದ ಬಗ್ಗೆ ಮಾತ್ರ ಆಕ್ಷೇಪವಿದೆ. ಕಾಲೇಜು ನಮ್ಮನ್ನು ಶಿಕ್ಷಣದಿಂದ ವಂಚಿತ ಮಾಡಬಾರದು ಎಂದು ಅರ್ಜಿದಾರರ ಪರ ಸಂಜಯ್ ಹೆಗ್ಡೆ ವಾದಿಸಿದ್ದಾರೆ.

  • 09 Feb 2022 03:18 PM (IST)

    ಹಿಜಾಬ್ ಕಡ್ಡಾಯ ಎಂಬುದಕ್ಕೆ ಸಮರ್ಥ ಆಧಾರಗಳಿಲ್ಲ: ಎಜಿ ಪ್ರಭುಲಿಂಗ್ ನಾವದಗಿ

    ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ನಡೆಯುತ್ತಿದೆ. ಅರ್ಜಿದಾರರ ಪರ ವಕೀಲ ಮೊಹ್ಮದ್​ ತಾಹೀರ್​ ಮುಂದಿನ 2 ತಿಂಗಳ ಕಾಲ ಎರಡೂ ಕಡೆಯವರಿಗೆ ಸಮ್ಮತವಾಗು ಪರಿಹಾರ ಕಂಡುಕೊಳ್ಳುವ ಬಗ್ಗೆ ಸಲಹೆ ನೀಡಿದ್ದಾರೆ. ಎರಡೂ ಕಡೆಯವರಿಗೆ ನಿನ್ನೆ ಸಲಹೆ ನೀಡಿದ್ದೇವೆ ಎಂದು ಎಜಿ ಪ್ರಭುಲಿಂಗ್​ ನಾವದಗಿ ಹೇಳಿಕೆ ನೀಡಿದ್ದಾರೆ. ತಪ್ಪಾಗಿ ಅರ್ಥೈಸಿಕೊಂಡು ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರದ ಆದೇಶ ಪ್ರಶ್ನೆ ಮಾಡಿದ್ದಾರೆ. ಪ್ರತಿಯೊಂದು ಶೈಕ್ಷಣಿಕ ಸಂಸ್ಥೆಗೂ ಸ್ವಾತಂತ್ರ್ಯ ಕೊಟ್ಟಿದ್ದೇವೆ. ರಾಜ್ಯ ಸರ್ಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳುವುದಿಲ್ಲ. ಕೇರಳ, ಬಾಂಬೆ, ಮದ್ರಾಸ್ ಹೈಕೋರ್ಟ್ ತೀರ್ಪುಗಳ ಉಲ್ಲೇಖ ಮಾಡಲಾಗಿದೆ. ಖುರಾನ್​ನ ಒಂದೆರಡು ವಾಕ್ಯ ಬಿಟ್ಟರೆ ಬೇರೆ ಸಮರ್ಥನೆಯಿಲ್ಲ. ಹಿಜಾಬ್ ಕಡ್ಡಾಯ ಎಂಬುದಕ್ಕೆ ಸಮರ್ಥ ಆಧಾರಗಳಿಲ್ಲ. ಸರ್ಕಾರ ಆದೇಶದ ಮೂಲಕ ಅಧಿಕಾರ ನೀಡಿದೆ ಎಂದು ಹೇಳಿದ್ದಾರೆ. ಹಿಜಾಬ್ ಕಡ್ಡಾಯ ಎಂಬುದಕ್ಕೆ ಸಮರ್ಥ ಆಧಾರಗಳಿಲ್ಲ. ಸರ್ಕಾರ ಆದೇಶದ ಮೂಲಕ ಅಧಿಕಾರ ನೀಡಿದೆ. ಕಾಲೇಜು ಅಭಿವೃದ್ದಿ ಸಮಿತಿಗೆ ಅಧಿಕಾರ ನೀಡಿದೆ. ಸಮವಸ್ತ್ರದ ಬಗ್ಗೆ ನಿರ್ಧರಿಸುವುದಕ್ಕೆ ಶಾಲೆ, ಕಾಲೇಜು ಸಮಿತಿಗೆ ಅಧಿಕಾರವಿದೆ ಎಂದು ಹೇಳಿದ್ದಾರೆ.

  • 09 Feb 2022 03:14 PM (IST)

    ಹಿಜಾಬ್ ವಿವಾದ: ವಿಸ್ತೃತ ಪೀಠಕ್ಕೆ ವಹಿಸುವುದಾಗಿ ಜಡ್ಜ್ ಹೇಳಿಕೆ

    ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಅರ್ಜಿ ವಿಚಾರಣೆ ನಡೆಸಲಾಗುತ್ತಿದೆ. ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಯುತ್ತಿದೆ. ವಕೀಲ ಸಂಜಯ್​​ ಹೆಗಡೆರಿಂದ ವಾದ ಮಂಡನೆ ಮಾಡಲಾಗುತ್ತಿದೆ. ಈ ಪ್ರಕರಣದ ಸಮಸ್ಯೆ ಬಗೆಹರಿಯಬೇಕು. ಇದು ನನ್ನ ಸ್ವಂತ ಊರು ಮತ್ತು ನನ್ನ ಕಾಲೇಜಿನ ಪ್ರಕರಣ. ಸಮವಸ್ತ್ರ ನಿಗದಿಪಡಿಸುವ ಅಧಿಕಾರವಿದೆಯೇ ಎಂದು ವಕೀಲ ಸಂಜಯ್​ ಹೆಗಡೆ ಪ್ರಶ್ನೆ ಮಾಡಿದ್ದಾರೆ. ಸರಿಯಾಗಿ ಸಮವಸ್ತ್ರವನ್ನು ನಿಗದಿಪಡಿಸಲಾಗಿದೆಯೇ? ಒಂದು ವೇಳೆ ಅಧಿಕಾರವಿದ್ದರೆ ವಿವರಿಸಲು ನಾನು ಸಿದ್ಧ. ಈಗ ಮುಖ್ಯವಾಗಿರುವುದು ಶಾಂತಿ ಮರುಸ್ಥಾಪಿಸುವುದು. ನೀವು ಹೇಗೆ ವಿಷಯವನ್ನು ನೋಡುತ್ತೀರೆನ್ನುವುದು ಮುಖ್ಯ. ಧಾರ್ಮಿಕ ಅಗತ್ಯತೆ ಪ್ರಶ್ನೆ ಬಗ್ಗೆ ಗಮನಹರಿಸುವ ಬದಲು ಆಡಳಿತಾತ್ಮಕ ಅಧಿಕಾರ ಏನಿದೆ ಎಂದು ಚರ್ಚಿಸಬೇಕಾಗಿದೆ. ಒಂದು ವೇಳೆ ಪರಿಹಾರ ಕಂಡುಕೊಂಡ್ರೆ ಸ್ವರ್ಗ ಕೆಳಗೆ ಬೀಳಲ್ಲ. ವಿದ್ಯಾರ್ಥಿಗಳು ಮತ್ತೆ ಕಾಲೇಜಿಗೆ ವಾಪಸ್​ ಹೋಗಲಿ. ಪರಿಸ್ಥಿತಿ ಶಾಂತವಾಗಲಿ ಎಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ. ಮತ್ತೆ ವಿಸ್ತೃತ ಪೀಠಕ್ಕೆ ವಹಿಸುವುದಾಗಿ ಜಡ್ಜ್​​ ಹೇಳಿದ್ದಾರೆ. ಅಂತಿಮವಾಗಿ ಇದು ಕೋರ್ಟ್​ಗೆ ಬಿಟ್ಟ ವಿಚಾರ ಎಂದು ಎಜಿ ತಿಳಿಸಿದ್ದಾರೆ. ನಮಗೆ ನ್ಯಾಯಾಧೀಶರ ಮೇಲೆ ಸಂಪೂರ್ಣ ನಂಬಿಕೆ ಇದೆ. ವಿಸ್ತೃತ ಪೀಠಕ್ಕೆ ವಹಿಸುವ ಬಗ್ಗೆ ನಮ್ಮ ವಿರೋಧ ಇಲ್ಲ. ನ್ಯಾಯಾಂಗದ ಸೂಕ್ಷ್ಮತೆಯನ್ನು ನಾವು ಪರಿಗಣಿಸುತ್ತೇವೆ ಎಂದು ಎಜಿ ಪ್ರಭುಲಿಂಗ ನಾವದಗಿ ಹೇಳಿದ್ದಾರೆ. ಅಂತಿಮವಾಗಿ ಇದು ನ್ಯಾಯಾಂಗದ ವಿವೇಚನೆಗೆ ಬಿಟ್ಟದ್ದು. ವೈಯಕ್ತಿಕ ಕಾನೂನು, ಸಂವಿಧಾನಿಕ ಕಾನೂನುಗಳ ಬಗ್ಗೆ ಹೆಚ್ಚಿಗೆ ಹೇಳಲ್ಲ ಎಂದು ತಿಳಿಸಿದ್ದಾರೆ.

  • 09 Feb 2022 01:18 PM (IST)

    ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಸಂಘರ್ಷ; ಕೋಡಿಹಳ್ಳಿ ಚಂದ್ರಶೇಖರ್ ಪ್ರತಿಕ್ರಿಯೆ

    ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಸಂಘರ್ಷಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಕೋಡಿಹಳ್ಳಿ ಚಂದ್ರಶೇಖರ್, ಇದು ಸರ್ಕಾರದ ಮೂರ್ಖತನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ವಿವಾದದಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳನ್ನು ಬೀದಿಗೆ ತರುವ ಕೆಲಸ ಮಾಡುತ್ತಿದ್ದಾರೆ ಅಂತ ಆಡಳಿತ, ವಿರೋಧ ಪಕ್ಷದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

  • 09 Feb 2022 01:16 PM (IST)

    50 ಲಕ್ಷ ಶಾಲು ಸೂರತ್​ನಲ್ಲಿ ಆರ್ಡರ್ ಮಾಡಿದ್ದಾರೆ; ಡಿಕೆ ಶಿವಕುಮಾರ್ ಹೇಳಿಕೆ

    ಕೇಸರಿ ಶಾಲ ಸರಬರಾಜು‌ ಮಾಡಿದವರು ಯಾರು? ಎಂದು ಪ್ರಶ್ನಿಸಿದ ಡಿಕೆ ಶಿವಕುಮಾರ್, ಮಂತ್ರಿ‌ ಮಗನೇ ಶಾಲು ಹಂಚಿಸಿದ್ದಾರೆ. ಪೇಟಾಗಳನ್ನು ತಂದವರು ಯಾರು? 50 ಲಕ್ಷ ಶಾಲು ಸೂರತ್​ನಲ್ಲಿ ಆರ್ಡರ್ ಮಾಡಿದ್ದಾರೆ. ನಮಗೂ ಮಾಹಿತಿ ನೀಡುವವರು ಇದ್ದಾರೆ. ನಿಮ್ಮ ಕ್ಯಾಮೆರಾದವರು ತೆಗೆಯೋಕೆ ಹೋದಾಗ ಅವರು ಬಚ್ಚಿಟ್ಟುಕೊಂಡಿಲ್ವಾ? ಇದೆಲ್ಲ ಯಾರ ಪಿತೂರಿ ಅನ್ನೋದು ಇದರಿಂದನೆ ಗೊತ್ತಾಗುತ್ತೆ. ಇದರಿಂದ ಯಾರಿದ್ದಾರೆ ಅನ್ನೋದು ನನಗೆ ಗೊತ್ತಿದೆ. ಮಕ್ಕಳಲ್ಲಿ ವಿಷ ಬೀಜ ಬಿತ್ತಬೇಡಿ. ಡಾಕ್ಟರ್, ಎಂಜನೀಯರ್ ಆಗಬೇಕಾದವರು ಅವರೆಲ್ಲ ಅಂತ ಡಿಕೆಶಿ ಹೇಳಿದರು.

  • 09 Feb 2022 01:13 PM (IST)

    ಉಡುಪಿಯಲ್ಲಿ ಹಿಜಾಬ್ ವಿವಾದ ನಿಯಂತ್ರಿಸಲು ಶತ ಪ್ರಯತ್ನ ಮಾಡಿದ್ದೇನೆ- ಶಾಸಕ ರಘುಪತಿ ಭಟ್

    ಉಡುಪಿಯಲ್ಲಿ ಹಿಜಾಬ್ ವಿವಾದ ನಿಯಂತ್ರಿಸಲು ಶತ ಪ್ರಯತ್ನ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷದ ಕೆಲ ಮುಸ್ಲಿಂ ಮುಖಂಡರು ಕೂಡ ನಮ್ಮ ಜೊತೆ ಕೈಜೋಡಿಸಿದ್ದಾರೆ. ಮುಸ್ಲಿಂ ಸಮಾಜದ ಮುಖಂಡರು ಕೂಡ ಮಕ್ಕಳ ಮನವೊಲಿಸಲು ಪ್ರಯತ್ನಿಸಿದರು. ಎರಡೆರಡು ಗಂಟೆ ಕುಳಿತು ಮಕ್ಕಳ ಮನವೊಲಿಸಲು ಪ್ರಯತ್ನಿಸಿದರು. ಈ ವಿದ್ಯಾರ್ಥಿಗಳು ಹೊರಗಿನ ಮತಿಯ ಸಂಘಟನೆಗಳ ನಿಯಂತ್ರಣದಲ್ಲಿದ್ದರು. ಯಾರ ಮಾತನ್ನು ಅವರು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಈ ವಿದ್ಯಾರ್ಥಿಗಳ ಹಠದಿಂದ ಇಡೀ ರಾಜ್ಯಕ್ಕೆ ವಿವಾದ ವಿಸ್ತರಣೆಯಾಗಿದೆ. ಹಿಜಾಬ್ ಧರಿಸದೆ ಇದ್ದವರು ಹಿಜಾಬ್ ನಮ್ಮ ಹಕ್ಕು ಎಂದು ಕೇಳಿದ್ದರಿಂದ ಸಮಸ್ಯೆಯಾಗಿದೆ. ಉಡುಪಿಯಿಂದ ಈ ವಿವಾದ ಆರಂಭವಾಗಿದೆ ನಿಜ. ವಿವಾದಕ್ಕೆ ಉಡುಪಿಯಿಂದಲೇ ಕಾನೂನು ಕೂಡ ಬರಲಿದೆ. ಉಡುಪಿಯಲ್ಲಿ ವಿವಾದದ ಕಾರಣ ಸರಕಾರ ಸ್ಪಷ್ಟ ಆದೇಶ ಮಾಡಿದೆ.  ನ್ಯಾಯಾಲಯದ ತೀರ್ಪಿನ ಬಗ್ಗೆ ನಮಗೆ ಗೌರವವಿದೆ. ಸಂವಿಧಾನದ ಚೌಕಟ್ಟಿನೊಳಗೆ ನ್ಯಾಯಾಲಯ ತೀರ್ಪು ನೀಡಲಿದೆ. ಉಡುಪಿಯ ಕೇಸ್ ಬಗ್ಗೆ ನಮ್ಮಲ್ಲಿ ಸಂಪೂರ್ಣ ದಾಖಲೆ ಇದೆ. ನ್ಯಾಯಾಲಯಕ್ಕೆ ಹೋದ ವಿದ್ಯಾರ್ಥಿನಿಯರು ಈ ಹಿಂದೆ ಹಿಜಾಬ್ ಧರಿಸುತ್ತಿರಲಿಲ್ಲ. ಈ ಬಗ್ಗೆ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಿದ್ದೇವೆ. ದೂರು ಕೊಟ್ಟ ವಿದ್ಯಾರ್ಥಿನಿಯೇ ಹಿಜಬ್ ಧರಿಸುತ್ತಿರಲಿಲ್ಲ. ವಿದ್ಯಾರ್ಥಿ ಸಂಘದ ಪ್ರತಿಜ್ಞಾವಿಧಿ ಸ್ವೀಕರಿಸಿದ ಫೋಟೋ ಇದೆ. ತೀರ್ಪು ಸರ್ಕಾರದ ಪರವಾಗಿ ಬರುವ ವಿಶ್ವಾಸವಿದೆ ಅಂತ ಉಡುಪಿ ಶಾಸಕ ರಘುಪತಿ ಭಟ್ ಹೇಳಿದರು.

  • 09 Feb 2022 12:55 PM (IST)

    ಪ್ರಿಯಾಂಕಾ ಗಾಂಧಿ ಕ್ಷಮೆ ಕೇಳಬೇಕು- ರೇಣುಕಾಚಾರ್ಯ

    ಮಹಿಳೆಯರು ಬಿಕಿನಿ ಹಾಕುವುದು ಅವರ ಮೂಲಭೂತ ಹಕ್ಕು ಎಂಬ ಪ್ರಿಯಾಂಕಾ ಗಾಂಧಿಯ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಪ್ರಿಯಾಂಕಾ ಗಾಂಧಿ ಕ್ಷಮೆ ಕೇಳಬೇಕು. ಅವರ ತಾಯಿ ಹೇಳಿ ಕೇಳಿ ಇಟಲಿಯವರು. ಅವರು ಯಾರನ್ನ ಮದುವೆಯಾಗಿದ್ದಾರೆ ಅದು ಅವರ ವೈಯಕ್ತಿಕ ವಿಚಾರ. ಮಹಿಳೆಯರು ಹಾಕೋ ಬಟ್ಟೆಯಿಂದ ಕೆಲವರು ಉದ್ರೇಕವಾಗುತ್ತಾರೆ. ಹಿಜಾಬ್ ಹಿಂದೆ SDPI ಮತ್ತು PFI ಕೈವಾಡವಿದೆ. ಕಾಂಗ್ರೆಸ್ ಕೇವಲ ಓಟ್ ಬ್ಯಾಂಕ್ ರಾಜಕೀಯಕ್ಕಾಗಿ ಅಲ್ಪಸಂಖ್ಯಾತರನ್ನ ಬಳಕೆ ಮಾಡಿಕೊಳ್ಳಲಾಗಿದೆ. ಇದರ ಹಿಂದೆ ಕಾಂಗ್ರೆಸ್ ಕೈವಾಡವಿದೆ. ಪ್ರತಿಯೊಬ್ಬರು ಭಾರತ ಮಾತೆಯ ಮಕ್ಕಳು, ಒಂದೇ ತಾಯಿಯ ಮಕ್ಕಳು. ಎಲ್ಲಾ ಅಲ್ಪ ಸಂಖ್ಯಾತರು ಕೆಟ್ಟವರಲ್ಲ. ಇಂತಹವರನ್ನ ಪಾಕಿಸ್ತಾನವು ಇವರನ್ನ ನಂಬಲಿಸಲ್ಲ. ರಾಜಕಾರಣದಲ್ಲಿ ನಾವು ಕೇಸರಿಕರಣ ಮಾಡುತ್ತೇವೆ. ಶಿಕ್ಷಣದಲ್ಲಿ ಕೇಸರಿಕರಣ ಮಾಡಲ್ಲ ಅಂತ ಹೇಳಿದರು.

  • 09 Feb 2022 12:51 PM (IST)

    ಮಹಿಳೆಯರು ಬಟ್ಟೆ ನೋಡಿ ಪುರುಷರು ಉದ್ವೇಗಕ್ಕೆ ಒಳಗಾಗುತ್ತಾರೆ; ರೇಣುಕಾಚಾರ್ಯ

    ಮಹಿಳೆಯರು ಬಟ್ಟೆ ನೋಡಿ ಪುರುಷರು ಉದ್ವೇಗಕ್ಕೆ ಒಳಗಾಗುತ್ತಾರೆ. ಮಹಿಳೆಯರು ಬಟ್ಟೆಯಿಂದ ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತೆ ಅಂತ  ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

  • 09 Feb 2022 12:51 PM (IST)

    ಗಲಾಟೆ ಮಾಡಬೇಡಿ ಎಂದು ಮನವಿ ಮಾಡಿದ ಉಪನ್ಯಾಸಕಿಗೆ ಕ್ಯಾರೇ ಎನ್ನದ ವಿದ್ಯಾರ್ಥಿನಿ; ವಿಡಿಯೋ ವೈರಲ್

    ಉಡುಪಿ ಎಂಜಿಎಂ ಕಾಲೇಜಿನಲ್ಲಿ ಗಲಾಟೆ ಮಾಡಬೇಡಿ ಎಂದು ಮನವಿ ಮಾಡಿದ ಉಪನ್ಯಾಸಕಿಗೆ ವಿದ್ಯಾರ್ಥಿನಿ ಕ್ಯಾರೇ ಮಾಡಿಲ್ಲ. ಉಪನ್ಯಾಸಕಿಗೆ ಡೋಂಟ್ ಟಚ್ ..ಬುಲ್ ಶಿಟ್ ಎಂದು ಬೆದರಿಕೆ ಹಾಕಿದ್ದಾಳೆ. ಬುದ್ಧಿವಾದ ಹೇಳಲು ಹೋಗಿ ಉಪನ್ಯಾಸಕಿ ವಿದ್ಯಾರ್ಥಿನಿಯಿಂದ ಅಪಮಾನಿತರಾಗಿದ್ದರು. ಈ ಘಟನೆ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • 09 Feb 2022 12:46 PM (IST)

    ಉಡುಪಿ ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ ಕಿಡಿ ಹೊತ್ತಿಕೊಂಡಿದ್ದು ಹೇಗೆ?

    ಉಡುಪಿಯಲ್ಲಿ ಮೊದಲ ಬಾರಿಗೆ ಹಿಜಾಬ್ ವಿವಾದ ತಲೆ ಎತ್ತಿದ್ದು. ವಿದ್ಯಾರ್ಥಿನಿಯರುಕಾಲೇಜಿಗೆ ಹಿಜಾಬ್ ಧರಿಸಿ ಬರುತ್ತಿದ್ದರು. ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆ ಸ್ಪಷ್ಟನೆ ಕೇಳಲಾಗಿತ್ತು. ಕಾಲೇಜು ಪ್ರಾಂಶುಪಾಲರು ಡಿಡಿಗೆ ಸಂದೇಶ ಕಳಿಸಿದ್ದರು. ಹಿಜಾಬ್ ಬಗ್ಗೆ ಸ್ಪಷ್ಟನೆ ಕೇಳಿ ಪ್ರಾಂಶುಪಾಲರು ಮೆಸೇಜ್ ಮಾಡಿದ್ದರು. ಡಿಡಿಗೆ ವಾಟ್ಸಾಪ್ ಸಂದೇಶ ಕಳಿಸಿದ್ದರು. ಸ್ಪಷ್ಟನೆ ಸಿಗುವವರೆಗೆ ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡಿಲ್ಲ. ಕಾಲೇಜಿನೊಳಗೆ ಬರುವುದಕ್ಕೆ ಅನುಮತಿ ನೀಡಿರಲಿಲ್ಲ. ಬಳಿಕ ಪ್ರಿನ್ಸಿಪಾಲ್ ಕೇಳಿದ್ದ ಪ್ರಶ್ನೆಗೆ ಡಿಡಿ ಸ್ಪಷ್ಟನೆ ನೀಡಿದ್ದರು. ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯವಾಗಿರುವುದಿಲ್ಲ. ದಾಖಲಾತಿ ಮಾರ್ಗಸೂಚಿ ಅಧ್ಯಾಯ VI ಪ್ರಕಾರ ಕಡ್ಡಾಯವಿಲ್ಲ. ಕೂಡಲೇ ವಿದ್ಯಾರ್ಥಿನಿಯರನ್ನು ಕಾಲೇಜಿಗೆ ಸೇರಿಸಿಕೊಳ್ಳಿ. ಇಲ್ಲದೆ ಹೋದರೆ ಮುಂದೆ ಆಗುವುದಕ್ಕೆ ನೀವೇ ಹೊಣೆ ಅಂತ ಕಾಲೇಜು ಪ್ರಾಂಶುಪಾಲರಿಗೆ ಉಪನಿರ್ದೇಶಕ ತಿಳಿಸಿದ್ದರು. ಇದದ ನಂತರ ಸ್ಥಳೀಯ ಶಾಸಕರು ಮಧ್ಯಪ್ರವೇಶಿಸಿದ್ದರು. ಹಿಜಾಬ್ ಧರಿಸಿದರೆ ತರಗತಿಗೆ ಪ್ರವೇಶವಿಲ್ಲವೆಂದು ತೀರ್ಮಾನ ಮಾಡಿದ್ದರು. ಜನಪ್ರತಿನಿಧಿಗಳ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದರು. ಸಭೆಯ ತೀರ್ಮಾನದ ಬಗ್ಗೆ ಪ್ರಿನ್ಸಿಪಾಲ್ ಡಿಡಿಗೆ ತಿಳಿಸಿದ್ದರು. ಇದಾದ ಬಳಿಕ ರಾಜ್ಯಾದ್ಯಂತ ಹಿಜಾಬ್ ವಿವಾದ ತಲೆ ಎತ್ತಿದೆ.

  • 09 Feb 2022 12:35 PM (IST)

    ಸಂಪುಟ ಸಭೆ ನಿರ್ಧಾರಗಳ ವಿವರಣೆ ನೀಡಲಿರುವ ಮಾಧುಸ್ವಾಮಿ

    ಕೋರ್ಟ್ ತೀರ್ಪು ಬರುವವರೆಗೂ ಹಿಜಾಬ್ ಬಗ್ಗೆ ಯಾವುದೇ ಚರ್ಚೆ ನಡೆಸದಿರಲು ಸಭೆಯಲ್ಲಿ ತೀರ್ಮಾನ ಮಾಡಲಾಗಿತ್ತು. ಈ ಬಗ್ಗೆ ಸಂಪುಟ ಸಭೆ ನಿರ್ಧಾರಗಳ  ಮಾಧುಸ್ವಾಮಿ ವಿವರಣೆ ನೀಡಲಿದ್ದಾರೆ.

  • 09 Feb 2022 12:30 PM (IST)

    ಸಂಪುಟ ಸಭೆಯಲ್ಲಿ ಹಿಜಾಬ್ ವಿವಾದ ಚರ್ಚಿಸಿಲ್ಲ

    ಸಚಿವ ಸಂಪುಟ ಸಭೆ ಸದ್ಯ ಮುಕ್ತಾಯವಾಗಿದೆ. ಸಮವಸ್ತ್ರ ವಿವಾದ ನ್ಯಾಯಾಲಯದಲ್ಲಿರುವ ಹಿನ್ನೆಲೆ ಸಂಪುಟ ಸಭೆಯಲ್ಲಿ ಚರ್ಚೆ ಬೇಡ ಅಂತ ಜೆಸಿ ಮಾಧುಸ್ವಾಮಿ ಹೇಳಿದರು. ಹೀಗಾಗಿ ಸಂಪುಟ ಸಭೆಯಲ್ಲಿ ಈ ಬಗ್ಗೆ ಗಂಭೀರ ಚರ್ಚೆ ನಡೆಯಲಿಲ್ಲ.

  • 09 Feb 2022 12:29 PM (IST)

    ಶಿಕ್ಷಣ ಕ್ಷೇತ್ರದಲ್ಲಿ ಓಟಿನ ರಾಜಕಾರಣ ಮಾಡಬೇಡಿ; ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್

    ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಕೆಲಸ ರಾಜಕೀಯ ಪಕ್ಷಗಳಿಂದ ನಡೆಯುತ್ತಿದೆ. ಆಡಳಿತ ಮತ್ತು ವಿರೋಧ ಪಕ್ಷಗಳು ಈ ಕೆಲಸ ಮಾಡುತ್ತಿವೆ. ಹಿಂದೂ ಕೋಮುವಾದ, ಮುಸ್ಲಿಂ ಮತೀಯವಾದ ಎರಡು ವಿಜೃಂಭಿಸುತ್ತಿವೆ. ಧರ್ಮ ಮನೆ ಒಳಗೆ ಇರಬೇಕು ಸಾರ್ವಜನಿಕವಾಗಿ ಪ್ರದರ್ಶಿಸಬಾರದು. ಬಿಜೆಪಿ ಕೆಲವು ವ್ಹಿಂಗ್‌ಗಳು ಕೇಸರಿ ಶಾಲಿನ ವಿಚಾರದಲ್ಲಿ ಗಲಾಟೆ ಮಾಡುತ್ತಿವೆ. ಕೆಲ ಮುಸ್ಲಿಂ ಮತಾಂಧರು ಹಿಜಾಬ್ ಹೆಸರಿನಲ್ಲಿ ಗಲಾಟೆ ಸೃಷ್ಟಿಸಿವೆ. ಹಿಜಾಬ್, ಕೇಸರಿ ಶಾಲಿಗಿಂತಾ ಶಿಕ್ಷಣ ದೊಡ್ಡದು. ಹಿಜಾಬ್, ಕೇಸರಿ ಶಾಲು ಮನೆ ಒಳಗೆ ಹಾಕಿ. ಅದನ್ನು ಶಾಲೆಗೆ ತರಬೇಡಿ. ಸಮವಸ್ತ್ರದಲ್ಲಿ ಧರ್ಮದ ಸಂಕೇತ ಬಿಂಬಿಸುವುದು ಬೇಡ. ಓಟಿನ ಸಲುವಾಗಿ ಮಕ್ಕಳ ಉಪಯೋಗಿಸ ಬೇಡಿ. ಶಿಕ್ಷಣ ಕ್ಷೇತ್ರದಲ್ಲಿ ಓಟಿನ ರಾಜಕಾರಣ ಮಾಡಬೇಡಿ. ಆಡಳಿತ ವಿರೋಧ ಪಕ್ಷಗಳಿಂದ ಮಕ್ಕಳಲ್ಲಿ ವಿಷ ಬಿತ್ತುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಮೂರು ಜನ ಕಲ್ಲು ಹೊಡೆದರೆ ಮೂರು ದಿನ ಶಾಲೆ ಮುಚ್ಚಿದ್ದು ತಪ್ಪು. ಕಲ್ಲು ತೂರಿದವರ ಪತ್ತೆ ಹಚ್ಚಿ ಒದ್ದು ಒಳಗೆ ಹಾಕುವುವು ಬಿಟ್ಟು ಶಾಲೆಗೆ ರಜೆ ಕೊಟ್ಟಿದ್ದು ತಪ್ಪು. ಮಂಡ್ಯದ ಶಾಲೆಯಲ್ಲಿ ಗಲಾಟೆ ಆಗಿದೆ. ಮಂಡ್ಯ ಜಿಲ್ಲಾ ಮಂತ್ರಿ, ಎಸ್​ಪಿ ಎಲ್ಲಿದ್ದಾರೆ? ಗಲಾಟೆ ಆಗ್ತಿದ್ದರು ಏನ್ ಮಾಡ್ತಾ ಇದ್ದಿರಿ? ಅಂತ ಮೈಸೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಪ್ರಶ್ನಿಸಿದ್ದಾರೆ.

  • 09 Feb 2022 12:27 PM (IST)

    ಸಚಿವ ಸಂಪುಟ ಸಭೆ ಅಂತ್ಯ

    ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಅಂತ್ಯವಾಗಿದೆ.

  • 09 Feb 2022 12:26 PM (IST)

    ಎಲ್ಲರೂ ಶಾಂತಿ ಕಾಪಾಡಲು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಮನವಿ

    ರಾಜ್ಯದಲ್ಲಿ ಈ ರೀತಿ ಘಟನೆಗಳು ನಡೆಯಬಾರದು. ಯಾವುದೋ ಕೆಲವು ಸಂಘಟನೆಗಳಿಂದ ಪ್ರೇರೇಪಿತರಾಗಿ ಈ ರೀತಿ ಆಗುತ್ತಿದೆ. ಸರ್ವ ಜನಾಂಗದ ಶಾಂತಿಯ ತೋಟ ಅಂತ ಶಾಂತಿ ಕಾಪಾಡಬೇಕು. ಎಲ್ಲಾ ಯುವಕ ಯುವತಿಯರಿಗೆ ಮನವಿ ಮಾಡುತ್ತೀನಿ. ವಾದ ವಿವಾದ ಪ್ರತಿವಾದ ಮುಂದುವರೆದಿದೆ. ಎಲ್ಲರೂ ಶಾಂತಿ ಕಾಪಾಡಬೇಕು. ಜನತೆ, ಯುವಕರಿಗೆ ಮತ್ತು ಪೋಷಕರಿಗೆ ವೈಷಮ್ಯಕ್ಕೆ ಅವಕಾಶ ಕೊಡಬಾರದು.  ನ್ಯಾಯಾಲಯ ಏನೇ ತೀರ್ಪು ನೀಡಿದರೂ ಅದಕ್ಕೆ ಎಲ್ಲರು ಬದ್ದರಾಗಿರಬೇಕು. ರಕ್ತ ಪಾತಕ್ಕೆ ಅವಕಾಶ ಕೊಡಬಾರದು ಎಂದು ಮನವಿ ಮಾಡುತ್ತೇನೆ ಅಂತ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

  • 09 Feb 2022 12:23 PM (IST)

    ನಾನು 40 ವರ್ಷರಿಂದ ಮನೆ ಬಿಟ್ಟವನು, ಹಿಂದುಗಳಿಗಾಗಿ ಕೆಲಸ ಮಾಡುತ್ತ ಬಂದವನು- ಪ್ರಮೋದ್ ಮುತಾಲಿಕ್

    ಪ್ರಮೋದ್ ಮುತಾಲಿಕ ಬಗ್ಗೆ ಮೈಸೂರು ಎಸ್‌ಡಿಪಿಐ ಕಾರ್ಯದರ್ಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಪ್ರಮೋದ್ ಮುತಾಲಿಕ್,  ನಾನು 40 ವರ್ಷರಿಂದ ಮನೆ ಬಿಟ್ಟವನು. ಹಿಂದುಗಳಿಗಾಗಿ ಮತ್ತು ದೇಶದ ಹಿತಕ್ಕಾಗಿ ಕೆಲಸ ಮಾಡುತ್ತ ಬಂದವನು. ಆರ್​ಎಸ್ಎಸ್ ಪ್ರಚಾರಕ ಆಗಿದ್ದವನು ನಾನು. ಪ್ರಚಾರಕರು ಮದುವೆಯಾಗದಂತೆ ನಿಯಮ ಇದೆ. ಈ ಹಿನ್ನೆಲೆ ನಾನು ಅದನ್ನೆಲ್ಲ ಪಾಲಿಸುತ್ತ ಬಂದವನು. ಇವತ್ತು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಎಸ್‌ಡಿಪಿಐ ಮುಖಂಡನ ಹೇಳಿಕೆ ಖಂಡಿಸುತ್ತೇನೆ. ಬಾಯಿ ಮುಚ್ಚಿಕೊಂಡು ಇರಬೇಕು. ವೈಯಕ್ತಿಕ ವಿಷಯಕ್ಕೆ ಬಂದರೆ ಒದ್ದು ಒಳಗೆ ಹಾಕಬೇಕಾಗುತ್ತೆ ಅಂತಾ ಎಚ್ಚರಿಕೆ ನೀಡಿದ್ದಾರೆ.

     

  • 09 Feb 2022 12:21 PM (IST)

    ಕೇಸರಿ ಶಾಲು, ರುದ್ರಾಕ್ಷಿ ಧರಿಸಿ ಕಾಲೇಜಿಗೆ ಬರುವುದಕ್ಕೆ ಅನುಮತಿ ಕೊಡಿ ಎಂದು ವಿದ್ಯಾರ್ಥಿಗಳು ಮನವಿ

    ಬೀದರ್​ನಲ್ಲಿ ಶಾಲಾ ಕಾಲೇಜಿಗೆ ರಜೆ ಕೊಟ್ಟರು ಕೇಸರಿ ಶಾಲು, ಹಿಜಾಬ್ ವಿವಾದ ತಣ್ಣಗಾಗಲಿಲ್ಲ. ಕೇಸರಿ ಶಾಲು ರುದ್ರಾಕ್ಷಿ ಧರಿಸಿ ಕಾಲೇಜಿಗೆ ಬರುವುದಕ್ಕೆ ಅನುಮತಿ ಕೊಡಿ ಅಂತ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. ಕಾಲೇಜು ರಜೆ ಮುಗಿದ ಬಳಿಕ ನಾವು ಕೇಸರಿ ಶಾಲು ರುದ್ರಾಕ್ಷಿ ಧರಿಸಿ ಕಾಲೇಜಿಗೆ ಬರುವೆವು ಅವಕಾಶ ನೀಡಿ ಅಂತ ಶಾಲಾ ಆಢಳಿತ ಮಂಡಳಿ, ಪೊಲೀಸರಿಗೆ ವಿದ್ಯಾರ್ಥಿಗಳು ಮನವಿ ಮಾಡಿಕೊಂಡರು.

  • 09 Feb 2022 12:17 PM (IST)

    ಇಸ್ಲಾಂ ಪ್ರವೃತ್ತಿಯೇ ಅತಿಕ್ರಮಣ, ಇಡೀ ಜಗತ್ತೇ ಇದನ್ನು ಹೇಳುತ್ತಿದೆ; ಪ್ರಮೋದ್ ಮುತಾಲಿಕ್

    ಮಂಡ್ಯ ಯುವತಿಗೆ 5 ಲಕ್ಷ ಬಹುಮಾನ ನೀಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಆ ವಿದ್ಯಾರ್ಥಿನಿಗೆ ಪ್ರೋತ್ಸಾಹ ಕೊಡುವ ಯತ್ನ ನಡೆದಿದೆ. ಯಾರೋ ಐದು ಲಕ್ಷ ಬಹುಮಾನ ನೀಡುತ್ತಿದ್ದಾರಂತೆ. ಈ ಬೆಳವಣಿಗೆ ಸರಿಯಲ್ಲ.ಹೀಗೆ ಬಹುಮಾನ ಕೊಟ್ಟರೇ ಜೈ ಶ್ರೀರಾಮ ಎನ್ನುವವರಿಗೆ ಬಹುಮಾನ ಕೊಡೋಕೆ ಹೋಗುತ್ತಾರೆ. ಇದು ಸಂಘರ್ಷಕ್ಕೆ ಅಣಿಯಾಗುತ್ತದೆ. ಇಸ್ಲಾಂ ಪ್ರವೃತ್ತಿಯೇ ಅತಿಕ್ರಮಣ. ಇಡೀ ಜಗತ್ತೇ ಇದನ್ನು ಹೇಳುತ್ತಿದೆ. ಇಡೀ ಜಗತ್ತಿನಲ್ಲಿ ಇಸ್ಲಾಂ ಬಗ್ಗೆ ಯಾವ ಸ್ಥಿತಿ ನಿರ್ಮಾಣವಾಗಿ ಅಂತಾ ಅವರೆ ತಿಳಿಯಬೇಕಿದೆ ಅಂತ ಪ್ರಮೋದ್ ಮುತಾಲಿಕ್ ಹೇಳಿದರು.

  • 09 Feb 2022 12:08 PM (IST)

    ಪ್ರಿಯಾಂಕಾ ಅವರಿಗೆ ನಾಚಿಗೆ ಆಗಬೇಕು; ಪ್ರಮೋದ್ ಮುತಾಲಿಕ್ ಗರಂ

    ಪ್ರಿಯಾಂಕಾ ಗಾಂಧಿ ಟ್ವೀಟ್ ವಿಚಾರಕ್ಕೆ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದಾರೆ. ಇದೊಂದು ಹೀನವಾದ ಹೇಳಿಕೆ. ಪ್ರಿಯಾಂಕಾ ಅವರಿಗೆ ನಾಚಿಗೆ ಆಗಬೇಕು. ಶಾಲೆಗಳಲ್ಲಿ ಬಿಕಿನಿ ಹಾಕಿಕೊಳ್ಳಲು ಅವಕಾಶ ಮಾಡಿಕೊಡ್ತೀರಾ? ಸಮವಸ್ತ್ರದಲ್ಲಿ ಸಮಾನತೆ ಇದೆ. ನಿಮ್ಮ ಅಜ್ಜಿಯವರೇ ಸಮವಸ್ತ್ರ ಜಾರಿಗೆ ತಂದವರು. ಇಂಥ ಹೇಳಿಕೆ ಕೊಡುವ ಮುಂಚೆ ಯೋಚಿಸಬೇಕು ಅಂತ ಹೇಳಿದ್ದಾರೆ.

  • 09 Feb 2022 12:06 PM (IST)

    ‘ಹಿಜಾಬ್ ವಿವಾದಕ್ಕೆ ವಿಕ್ಷಗಳು ಕಿಚ್ಚು ಹಚ್ಚುತ್ತಿವೆ’- ಕೇಂದ್ರ ಸಚಿವ ವಿಕೆ ಸಿಂಗ್ ಪ್ರತಿಕ್ರಿಯೆ

    ಹಿಜಾಬ್ ವಿವಾದಕ್ಕೆ ವಿಕ್ಷಗಳು ಕಿಚ್ಚು ಹಚ್ಚುತ್ತಿವೆ ಅಂತ ವಿವಾದದ ಬಗ್ಗೆ ಕೇಂದ್ರ ಸಚಿವ ವಿಕೆ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಹಿಜಾಬ್ ವಿವಾದದ ಹಿಂದೆ ವಿಪಕ್ಷಗಳ ಕೈವಾಡವಿದೆ. ರಾಜಕೀಯ ಲಾಭಕ್ಕಾಗಿ ವಿಪಕ್ಷಗಳು ವಿವಾದ ಸೃಷ್ಟಿಸುತ್ತಿವೆ ಅಂತ ತಿಳಿಸಿದರು.

  • 09 Feb 2022 12:05 PM (IST)

    ಬೇಕೆ ಬೇಕು ಹಿಜಾಬ್ ಬೇಕು; ಕಲಬುರಗಿ ಪ್ರತಿಭಟನೆ

    ಕಲಬುರಗಿ ನಗರದ‌ ಜಿಲ್ಲಾಧಿಕಾರಿ ಕಚೇರಿ ಎದುರು ವಿವಿಧ ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ ನಡೆಯುತ್ತಿದೆ. ಬೇಕೆ ಬೇಕು ಹಿಜಾಬ್ ಬೇಕು ಅಂತ ಘೋಷಣೆ ಕೂಗಿ, ರಾಜ್ಯ ಸರ್ಕಾರ, ಎಬಿವಿಪಿ‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • 09 Feb 2022 12:03 PM (IST)

    ಹಿಜಾಬ್ ಬೆಂಬಲಿಸಿ ಜೇವರ್ಗಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ

    ಹಿಜಾಬ್ ಬೆಂಬಲಿಸಿ ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಜೇವರ್ಗಿ ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ಮಾಡುತ್ತಿದ್ದಾರೆ. ಭಾಗಿಯಾದ ನೂರಾರು ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.

  • 09 Feb 2022 12:00 PM (IST)

    ಅಲ್ಲಾವು ಅಕ್ಬರ್ ಎಂದು ಘೋಷಣೆ ಕೂಗಿದ ವಿದ್ಯಾರ್ಥಿನಿಗೆ ಕರೆ ಮಾಡಿ ಶಬ್ಬಾಸ್ ಎಂದ ಮುಸ್ಲಿಂ ಮುಖಂಡ

    ನಿನ್ನೆ ಮಂಡ್ಯದಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯ ಎದುರು ಜೈ ಶ್ರೀರಾಮ್ ಎಂದು ವಿದ್ಯಾರ್ಥಿಗಳು ಘೋಷಣೆ ಕೂಗಿದ್ದರು. ಇದಕ್ಕೆ  ಪ್ರತಿಯಾಗಿ ಅಲ್ಲಾವು ಅಕ್ಬರ್ ಎಂದು ವಿದ್ಯಾರ್ಥಿನಿ ಘೋಷಣೆ ಕೂಗಿದ್ದಳು. ಹೀಗಾಗಿ ವಿದ್ಯಾರ್ಥಿನಿಗೆ ಕರೆ ಮಾಡಿ ಮುಸ್ಲಿಂ ಮುಖಂಡ
    ಮಾಜಿ ಕಾರ್ಯಪೋರೇಟರ್ ಇಮ್ರಾಮ್ ಪಾಷಾ ಶಬ್ಬಾಸ್ ಎಂದಿದ್ದಾರೆ.

  • 09 Feb 2022 11:55 AM (IST)

    ಹಿಜಾಬ್, ಕೇಸರಿ ವಿಚಾರದಿಂದ ಹಿಂದೆ ಸರಿಯಿರಿ; ಎನ್ಎಸ್​ಯುಐ ವಿದ್ಯಾರ್ಥಿ ಸಂಘಟನೆ

    ರಾಜ್ಯದಲ್ಲಿ ದಿನೇ ದಿನೇ ಬಿಗಡಾಯಿಸುತ್ತಿರುವ ಹಿಜಾಬ್​​ ಹಾಗೂ ಕೇಸರಿ ಶಾಲು ವಿವಾದದಿಂದ ಹಿಂದೆ ಸರಿಯಿರಿ ಅಂತ ಎನ್ಎಸ್​ಯುಐ ವಿದ್ಯಾರ್ಥಿ ಸಂಘಟನೆ ಕಿವಿಮಾತು ಹೇಳಿದೆ. ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ಕೊಡಿ ಎಂದು ಮನವಿ ಮಾಡಿಕೊಂಡ ಎನ್ಎಸ್​ಯುಐ ವಿದ್ಯಾರ್ಥಿ ಸಂಘಟನೆ ಶಾಂತಿ ಸೌಹಾರ್ದತೆಯನ್ನು ಕಾಪಾಡಿ ಎಂದು ತಿಳಿಸಿದೆ.

  • 09 Feb 2022 11:50 AM (IST)

    ಭಾರತದ ಯುವಕರು ಇಬ್ಭಾಗವಾಗುತ್ತಿರುವುದನ್ನು ನೋಡಿ ತುಂಬಾ ಬೇಸರವಾಗಿದೆ; ನಟಿ ರಮ್ಯಾ

    ಭಾರತದ ಯುವಕರು ಇಬ್ಭಾಗವಾಗುತ್ತಿರುವುದನ್ನು ನೋಡಿ ನನಗೆ ತುಂಬಾ ಬೇಸರವಾಗಿದೆ ಅಂತ ನಟಿ ರಮ್ಯಾ ಟ್ವಿಟರ್​ನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ.

  • 09 Feb 2022 11:49 AM (IST)

    ಪ್ರತಾಪ್ ಸಿಂಹ ಕಿಡಿ ಹತ್ತಿಸುವುದನ್ನೇ ಕಲಿತಿದ್ದಾರೆ; ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ

    ಇದು ನಮ್ಮ ತಾತನದ್ದೇ ದೇಶ, ತನ್ವೀರ್ ಸೇಠ್ ತಾತಾ ಕೂಡ ಹಿಂದು ಆಗಿದ್ದರು ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆ ವಿಚಾರಕ್ಕೆ ಕೆಪಿಸಿಸಿ ವಕ್ತಾರ ಎಂಲಕ್ಷ್ಮಣ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಾಪ್ ಸಿಂಹ ಕಿಡಿ ಹತ್ತಿಸುವುದನ್ನೇ ಕಲಿತಿದ್ದಾರೆ. ನಿನ್ನೆ ಮಂಡ್ಯದಲ್ಲಿ ಹೆಣ್ಣು ಮಗುವೊಂದನ್ನು ನೂರಾರು ಜನ ಅಟ್ಯಾಕ್ ಮಾಡುವುದು ಎಷ್ಟರ ಮಟ್ಟಿಗೆ ಸರಿ ? ನಿನ್ನೆಯ ಘಟನೆ ಬಗ್ಗೆ ಪ್ರತಾಪ್ ಸಿಂಹ ಟ್ವೀಟ್ ಮಾಡಿ ಡಿಲೀಟ್ ಮಾಡುತ್ತಾರೆ.
    ಯಾಕೆ ಡಿಲೀಟ್ ಮಾಡುತ್ತಾರೆ? ಶಾಸಕ ತನ್ವಿರ್ ಸೇಠ್ ಬಗ್ಗೆ ಮಾತನಾಡುತ್ತಾರೆ. ನಿಮ್ಮ ತಾತ ಮುಸ್ಲಿಂ ಆಗಿದ್ದು, ಬಳಿಕ ಹಿಂದೂವಾಗಿ ಕನ್ವರ್ಟ್ ಆಗಿದ್ದಾರೆ ಎಂದು ನಾವುನೂ ಹೇಳಬಹುದಾ ಅಂತ ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ಪ್ರಶ್ನೆ ಮಾಡಿದ್ದಾರೆ.

  • 09 Feb 2022 11:35 AM (IST)

    ಶಿವಮೊಗ್ಗದಲ್ಲಿ ರಾಷ್ಟ್ರಧ್ವಜ ಇಳಿಸಿ ಕೇಸರಿ ಬಾವುಟ ಹಾರಿಸಿಲ್ಲ; ಎಸ್‌ಪಿ ಬಿಎಂ ಲಕ್ಷ್ಮೀಪ್ರಸಾದ್ ಸ್ಪಷ್ಟನೆ

    ಶಿವಮೊಗ್ಗದಲ್ಲಿ ರಾಷ್ಟ್ರಧ್ವಜ ಇಳಿಸಿ ಕೇಸರಿ ಬಾವುಟ ಹಾರಿಸಿಲ್ಲ ಅಂತ ಟಿವಿ9ಗೆ ಶಿವಮೊಗ್ಗ ಎಸ್‌ಪಿ ಬಿಎಂ ಲಕ್ಷ್ಮೀಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ. ಇಂದು ಮುಂಜನೆ ಪದವಿ ಕಾಲೇಜಿನಲ್ಲಿ ಎನ್ಎಸ್​​ಯುಐನಿಂದ ರಾಷ್ಟ್ರ ಧ್ವಜಾರೋಹಣ ಮಾಡಿದ್ದಾರೆ. ಈ ಬಗ್ಗೆ ಕೋಟೆ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ನಿಷೇಧಾಜ್ಞೆಗೂ ಮೊದಲು 5 ಅಹಿತಕರ ಘಟನೆಗಳು ನಡೆದಿವೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿಷೇಧಾಜ್ಞೆ ಜಾರಿ ಬಳಿಕ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಅಂತ ಟಿವಿ9ಗೆ ಶಿವಮೊಗ್ಗ ಎಸ್‌ಪಿ ಬಿಎಂ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.

  • 09 Feb 2022 11:32 AM (IST)

    ಕರ್ನಾಟಕದ ಹಿಜಾಬ್ ವಿವಾದ! ಬಹುಭಾಷಾ ನಟ ಕಮಲ್ ಟ್ವೀಟ್

    ಕರ್ನಾಟಕದ ಹಿಜಾಬ್ ವಿವಾದದ ಬಗ್ಗೆ ಬಹುಭಾಷಾ ನಟ ಕಮಲ್ ಹಾಸನ್ ಟ್ವೀಟ್ ಮಾಡಿದ್ದಾರೆ. ಕರ್ನಾಟಕದಲ್ಲಿ ಹಿಜಾಬ್ ವಿವಾದ ಅಶಾಂತಿ ಹುಟ್ಟುಹಾಕುತ್ತಿದೆ. ವಿದ್ಯಾರ್ಥಿಗಳ ಮಧ್ಯೆ ಧಾರ್ಮಿಕ ವಿಷದ ಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಕರ್ನಾಟಕದ ವಿವಾದ ತಮಿಳುನಾಡಿಗೆ ಬರುವುದು ಬೇಡ. ಪ್ರಗತಿಪರ ಶಕ್ತಿಗಳು ಹೆಚ್ಚು ಎಚ್ಚರಿಕೆಯಿಂದ ಇರಬೇಕು ಅಂತ ಟ್ವೀಟ್ ಮಾಡಿದ್ದಾರೆ.

  • 09 Feb 2022 11:29 AM (IST)

    ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ; ಪಾಕ್ ಟ್ವೀಟ್

    ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಮೂಲಭೂತ ಮಾನವ ಹಕ್ಕುಗಳ ಘೋರ ಉಲ್ಲಂಘನೆಯಾಗಿದೆ. ಯಾರಿಗಾದರೂ ಈ ಮೂಲಭೂತ ಹಕ್ಕನ್ನು ನಿರಾಕರಿಸುವುದು. ಹಿಜಾಬ್ ಧರಿಸಿದ್ದಕ್ಕಾಗಿ ಅವರನ್ನು ಭಯಭೀತಗೊಳಿಸುವುದು. ಇದು ಸಂಪೂರ್ಣವಾಗಿ ದಬ್ಬಾಳಿಕೆಯಾಗಿದೆ. ಭಾರತದಲ್ಲಿ ಮುಸ್ಲಿಂರನ್ನು ತುಳಿಯುವ ಒಂದು ಭಾಗವಾಗಿದೆ. ಜಗತ್ತು ಅರಿತುಕೊಳ್ಳಬೇಕು ಎಂದು ಕುರೇಶಿ ಟ್ವೀಟ್ ಮಾಡಿದ್ದಾರೆ.

  • 09 Feb 2022 11:26 AM (IST)

    ಕರ್ನಾಟಕದ ಹಿಜಾಬ್ ವಿವಾದದ ಬಗ್ಗೆ ಪಾಕಿಸ್ತಾನ ಟ್ವೀಟ್

    ಕರ್ನಾಟಕದ ಹಿಜಾಬ್ ವಿವಾದದ ಬಗ್ಗೆ ಪಾಕಿಸ್ತಾನ ಟ್ವೀಟ್ ಮಾಡಿದೆ. ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಅಡ್ಡಿಪಡಿಸಲಾಗುತ್ತಿದೆ. ಮುಸ್ಲಿಂ ವಿದ್ಯಾರ್ಥಿನಿಯರ ಹಕ್ಕು ಕಸಿದುಕೊಳ್ಳಲಾಗುತ್ತಿದೆ ಅಂತ ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಶಿ ಟ್ವೀಟ್ ಮಾಡಿದ್ದಾರೆ.

  • 09 Feb 2022 11:22 AM (IST)

    ಹಿಜಾಬ್ ಬಗ್ಗೆ ಮೊದಲು ಮಾತನಾಡಬಾರದು ಅಂದುಕೊಂಡಿದ್ದೆ; ನಾಸಿರ್ ಹುಸೇನ್

    ಹಿಜಾಬ್ ಬಗ್ಗೆ ಮೊದಲು ಮಾತನಾಡಬಾರದು ಅಂದುಕೊಂಡಿದ್ದೆ. ಆದರೆ ಈಗ ಮಾತನಾಡಲೇಬೇಕು, ಸಂಸತ್ತಿನಲ್ಲೂ ಚರ್ಚಿಸಬೇಕು ಅಂತ ದೆಹಲಿಯಲ್ಲಿ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಹೇಳಿಕೆ ನೀಡಿದರು. ಸಿಎಂಗೆ ಪ್ರತ್ಯೇಕವಾಗಿ ಮನವಿ ಮಾಡಿದ್ದೇವೆ. ಒಬ್ಬರು ಹಿಜಾಬ್ ಹಾಕಿಕೊಂಡರೆ ಮತ್ತೊಬ್ಬರಿಗೆ ತೊಂದರೆ ಇಲ್ಲ. ಎಲ್ಲರನ್ನೂ ಒಪ್ಪಿಕೊಳ್ಳುವುದೇ ಭಾರತೀಯ ಸಂಸ್ಕೃತಿ. ಇತ್ತೀಚೆಗೆ ಕರಾವಳಿಯಲ್ಲಿ ಹೊಸ ವರ್ಷದ ಆಚರಣೆಗೂ ತೊಂದರೆ ಮಾಡ್ತಾರೆ. ಹುಡುಗಿರು ಜೀನ್ಸ್ ಹಾಕಿಕೊಂಡರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಇಂತಹ ವಾತಾವರಣ ಇರಲಿಲ್ಲ. ಬಿಜೆಪಿಯ ಸಂಸದ, ಶಾಸಕರೇ ಕುಮ್ಮಕ್ಕು ನೀಡುತ್ತಿದ್ದಾರೆ.  ಕರ್ನಾಟಕದಲ್ಲಿ ಬಿಜೆಪಿ ಚುನಾವಣೆ ಸೋಲುತ್ತಿದೆ. ಬಸವರಾಜ ಬೊಮ್ಮಾಯಿ‌ ಅವರನ್ನು ಸಿಎಂ ಮಾಡಿದ್ದಕ್ಕೆ ಬಿಜೆಪಿಯ ಒಂದು ಬಣಕ್ಕೆ ಇಷ್ಟ ಇಲ್ಲ. ಹಾಗಾಗಿ ಅವರಿಗೆ ಕೆಟ್ಟ ಹೆಸರು ತರುವ ಉದ್ದೇಶ ಇದೆ. ಹಿಂದೂ ಧ್ರುವೀಕರಣ ಮಾಡಲು ಹಿಜಾಬ್ ವಿವಾದ ಸೃಷ್ಟಿಸಲಾಗಿದೆ. ಸಿಎಂ ಕೂಡಲೇ ಈ ವಿವಾದವನ್ನು ಬಗೆಹರಿಸಬೇಕು
    ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಕರ್ನಾಟಕದಲ್ಲಿ ‌ಎಲ್ಲರೂ ಅಣ್ಣತಮ್ಮಂದಿರಂತೆ ಇರಬೇಕು ಅಂತ ನಾಸಿರ್ ಹುಸೇನ್ ಅಭಿಪ್ರಾಯಪಟ್ಟರು.

     

  • 09 Feb 2022 11:16 AM (IST)

    ಹಿಜಾಬ್ ಹೊಸದಲ್ಲ, ಕೇಸರಿ ಶಾಲು ಹಾಕಿಕೊಂಡು ಬರುವುದು ಹೊಸದು; ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿಕೆ

    ಅನಾವಶ್ಯಕವಾಗಿ ಹಿಜಾಬ್ ವಿವಾದ ಪ್ರಾರಂಭ ಮಾಡಲಾಗಿದೆ. ಹಿಜಾಬ್ ಹೊಸದಲ್ಲ, ಕೇಸರಿ ಶಾಲು ಹಾಕಿಕೊಂಡು ಬರುವುದು ಹೊಸದು ಅಂತ ಕಲಬುರಗಿ ನಗರದಲ್ಲಿ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿಕೆ ನೀಡಿದ್ದಾರೆ. ಆಡಳಿತ ವೈಫಲ್ಯ ಮುಚ್ಚಿಡಲು ಬಿಜೆಪಿಯಿಂದ ಕೋಮು ಸಂಘರ್ಷ ಶುರುವಾಗಿದೆ. ಬಿಜಿಪಿ ಶಿಸ್ತಿನ ಪಕ್ಷ ಅಂತಾರೆ, ಆದ್ರೆ ಶಿಸ್ತು ಬಿಜೆಪಿ ಎಲ್ಲಿದೆ? ಸ್ವತ ಕಟೀಲ್ ಅವರೇ ಈ ಬಗ್ಗೆ ನೇತೃತ್ವ ವಹಿಸಿಕೊಂಡಿದ್ದಾರೆ. ಸಿಎಂ ಸುಮ್ಮನಿದ್ದಾರೆ. ಗೃಹ‌ ಸಚಿವರ ಜಿಲ್ಲೆಯಲ್ಲಿ ರಾಷ್ಟ್ರ ಧ್ವಜ ಹಾರಿಸುವ ಕಂಬದ ಮೇಲೆ ಭಗವಾ ಧ್ವಜ ಹಾರಿಸಿದ್ದಾರೆ. ಸಿಎಂಆರ್ಎಸ್ಎಸ್ ಕಪಿಮುಷ್ಟಿಯಲ್ಲಿದ್ದಾರೆ. ಬಿಜೆಪಿಯಲ್ಲಿ ಮೂಲ ಬಿಜೆಪಿ, ವಲಸೆ ಬಿಜೆಪಿಗಳಾಗಿವೆ. ಹಿಜಾಬ್ ಅಂದ್ರೆ ಪ್ರತ್ಯೇಕತೆ. ಈ ವಿಷಯದಲ್ಲಿ ಖುರಾನ್ ಉಲ್ಲೇಖ ಮಾಡೋ ಅವಶ್ಯಕತೆ ಇಲ್ಲ. ಬುರ್ಖಾ ಮತ್ತು ಹಿಜಾಬ್ ನಡುವೆ ವ್ಯತ್ಯಾಸವಿದೆ. ವಿದ್ಯಾರ್ಥಿನಿಯರು ಡ್ರೆಸ್ ಮೇಲೆ ಹಿಜಾಬ್ ಧರಿಸುತ್ತಾರೆ. ಇಂದು ಹಿಂದು ಧರ್ಮದ ವಾದವಲ್ಲ, ಹಿಂದುತ್ವವಾದ. ಹಿಂದುತ್ವದ ಹೆಸರಲ್ಲಿ ಬಿಜೆಪಿಯವರು ವಿವಾದವನ್ನು ಸೃಷ್ಟಿಸಿದ್ದಾರೆ. ಚುನಾವಣೆಗಳಲ್ಲಿ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಈ ರೀತಿ ವಿವಾದ ಮಾಡುತ್ತಿದ್ದಾರೆ ಅಂತ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿಕೆ ನೀಡಿದ್ದಾರೆ.

  • 09 Feb 2022 11:05 AM (IST)

    ಕ್ಯಾಬಿನೆಟ್ ಸಭೆಗೆ ಆಗಮಿಸಿದ ಸಿಎಂ

    ಸಿಎಂ ಬಸವರಾಜ ಬೊಮ್ಮಾಯಿ ಕ್ಯಾಬಿನೆಟ್ ಸಭೆಗೆ ಆಗಮಿಸಿದರು. ಇದೀಗ ಕ್ಯಾಬಿನೆಟ್ ಸಭೆ ಆರಂಭವಾಗಿದೆ.

  • 09 Feb 2022 11:03 AM (IST)

    ವಿಧಾನಸೌಧಕ್ಕೆ ತೆರಳಿದ ಸಿಎಂ ಬೊಮ್ಮಾಯಿ

    ರೇಸ್ ಕೋರ್ಸ್ ನಿವಾಸದಿಂದ ತೆರಳಿದ ಸಿಎಂ ಬೊಮ್ಮಾಯಿ, ವಿಧಾನಸೌಧಕ್ಕೆ ತೆರಳಿದ್ದಾರೆ.

  • 09 Feb 2022 10:59 AM (IST)

    ಹಿಜಾಬ್ ವಿವಾದ ಹೆಸರಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಾಳಾಗುತ್ತಿದೆ; ಎನ್ಎಸ್​ಯುಐ ಸಂಘಟನೆ ಜಿಲ್ಲಾಧ್ಯಕ್ಷ

    ಶಿವಮೊಗ್ಗ ಪದವಿ ಕಾಲೇಜಿನಲ್ಲಿ ನಿನ್ನೆ ಕೇಸರಿ ಬಾವುಟ ಹಾರಿಸಿದ ಹಿನ್ನೆಲೆ ಇಂದು ಕಾಂಗ್ರೆಸ್​ನ ಎನ್​ಎಸ್​ಯುಐ ವಿದ್ಯಾರ್ಥಿ ಸಂಘಟನೆಯಿಂದ ರಾಷ್ಟ್ರ ಧ್ವಜಾರೋಹಣ ಮಾಡಿದ್ದಾರೆ ಅಂತ ಟಿವಿ9 ಗೆ ಎನ್​ಎಸ್​ಯುಐ ಸಂಘಟನೆ ಜಿಲ್ಲಾಧ್ಯಕ್ಷ ವಿಜಯ್ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಹಿಂಸಾಚಾರ ರೂಪ ಪಡೆದುಕೊಂಡಿದೆ. ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ. ವಿನಾಕಾರಣ ಹಿಜಾಬ್ ವಿವಾದ ಹೆಸರಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಾಳಾಗುತ್ತಿದೆ. ರಾಷ್ಟ್ರೀಯತೆಯ ಸಂಕೇತವಾಗಿರುವ ರಾಷ್ಟ್ರ ಧ್ವಜವನ್ನು ನಾವು ಪದವಿ ಕಾಲೇಜಿನಲ್ಲಿ ಹಾರಿಸಿದ್ದೇವೆ. ಜಾತ್ಯಾತೀತವಾಗಿ ನಾವೆಲ್ಲರೂ ಒಂದೇ ಎನ್ನುವ ಸಂದೇಶ ವಿದ್ಯಾರ್ಥಿಗಳಿಗೆ ರವಾನೆ ಆಗಬೇಕು. ಈ ಹಿನ್ನೆಲೆಯಲ್ಲಿ ಇಂದು ರಾಷ್ಟ್ರ ಧ್ವಜಾರೋಹಣ ಮಾಡಿದ್ದೇವೆ ಅಂತ ತಿಳಿಸಿದ್ದಾರೆ.

  • 09 Feb 2022 10:53 AM (IST)

    ಹಿಜಾಬ್ ವಿವಾದದ ಹಿಂದೆ ಕಾಂಗ್ರೆಸ್ ಷಡ್ಯಂತ್ರವಿದೆ; ಸಚಿವ ಅಶೋಕ್ ಹೇಳಿಕೆ

    ಹಿಜಾಬ್ ವಿವಾದದ ಹಿಂದೆ ಕಾಂಗ್ರೆಸ್ ಷಡ್ಯಂತ್ರವಿದೆ ಅಂತ ವಿಧಾನಸೌಧದಲ್ಲಿ ಕಂದಾಯ ಸಚಿವ ಅಶೋಕ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ನ ಒಂದು ವರ್ಗ ಇದಕ್ಕೆ ಪ್ರೇರೇಪಣೆ ನೀಡ್ತಿದೆ. ಕಾಂಗ್ರೆಸ್‌ನ ಮತ್ತೊಂದು ವರ್ಗ ಎರಡೂ ಕಡೆ ಇದೆ ಅಂತ ಸಚಿವರು ಹೇಳಿದರು.

  • 09 Feb 2022 10:43 AM (IST)

    ಬಿಕಿನಿಯಾದರೂ ಧರಿಸಲಿ, ಮುಸುಕು ಆದರೂ ಧರಿಸಲಿ; ಪ್ರಿಯಾಂಕಾ ಗಾಂಧಿ ಟ್ವೀಟ್

    ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ ಎಂದು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಯಾವ ಬಟ್ಟೆ ಧರಿಸಬೇಕೆಂಬುದು ಹೆಣ್ಣು ಮಕ್ಕಳಿಗೆ ಬಿಟ್ಟಿದ್ದು. ಬಿಕಿನಿಯಾದರೂ ಧರಿಸಲಿ, ಮುಸುಕು ಆದರೂ ಧರಿಸಲಿ. ಜೀನ್ಸ್ ಆದರೂ ಹಾಕಲಿ ಇಲ್ಲವೇ ಹಿಜಾಬ್ ಆದ್ರೂ ಹಾಕಲಿ. ಅವರಿಗೆ ಬೇಕಾದ ಬಟ್ಟೆ ಧರಿಸುವುದು ಅವರ ಹಕ್ಕಾಗಿರುತ್ತದೆ. ಭಾರತದ ಸಂವಿಧಾನವೇ ಇಂತಹ ಹಕ್ಕು ನೀಡಿದೆ ಅಂತ ಪ್ರಿಯಾಂಕಾ ಹೇಳಿದರು.

  • 09 Feb 2022 10:41 AM (IST)

    ರಾಜ್ಯದಲ್ಲಿ ಎಲ್ಲೂ ವಿದ್ಯಾರ್ಥಿಗಳನ್ನು ಬಂಧಿಸಿಲ್ಲ; ಆರಗ ಜ್ಞಾನೇಂದ್ರ ಸ್ಪಷ್ಟನೆ

    ರಾಜ್ಯದ ಕಾಲೇಜುಗಳಲ್ಲಿ ಸಮವಸ್ತ್ರ ಸಂಘರ್ಷ ಹಿನ್ನೆಲೆ ಕೆಲ ಸಂಘಟನೆಗಳ ಸದಸ್ಯರನ್ನು ಬಂಧಿಸಲಾಗಿದೆ. ಆದರೆ ರಾಜ್ಯದಲ್ಲಿ ಎಲ್ಲೂ ವಿದ್ಯಾರ್ಥಿಗಳನ್ನು ಬಂಧಿಸಿಲ್ಲ ಅಂತ ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದ್ದಾರೆ. ಹಿಜಾಬ್, ಕೇಸರಿ ಶಾಲು ವಿವಾದ ಪಿತೂರಿ ನಮ್ಮದಲ್ಲ. ಇದು ಕಾಂಗ್ರೆಸ್‌ನವರ ಪಿತೂರಿ ಅಂತ ಸಚಿವರು ಹೇಳಿದರು.

     

  • 09 Feb 2022 10:38 AM (IST)

    ನಾನು ಮಾತ್ರ ಯಾವುದೇ ಕಾರಣಕ್ಕೂ ಬುರ್ಖಾ ತೆಗೆಯಲ್ಲ; ಮಂಡ್ಯದಲ್ಲಿ ವಿದ್ಯಾರ್ಥಿನಿ ಹೇಳಿಕೆ

    ಕಾಲೇಜಿಗೆ ಹೋಗುತ್ತಿದ್ದಾಗ ಯುವಕರು ತಡೆದಿದ್ದರು. ಗೇಟ್ ಬಳಿ ತಡೆದು ಬುರ್ಖಾ ತೆಗೆಯಲು ಹೇಳಿದರು. ಕಾಲೇಜಿನೊಳಗೆ ಹೋಗಲು ಬುರ್ಖಾ ತೆಗೆಯಲು ಒತ್ತಡ ಹಾಕಿದರು. ಬುರ್ಖಾ ತೆಗೆದು ಹೋಗುವಂತೆ ಜೋರಾಗಿ ಕೂಗಿದರು. ನನ್ನ ಹತ್ತಿರ ಬಂದು ಜೈಶ್ರೀರಾಮ್ ಎಂದು ಕೂಗಿದರು. ಈ ವೇಳೆ ನಾನು ಅಲ್ಲಾ ಹೂ ಅಕ್ಬರ್ ಎಂದು ಕೂಗಿದ್ದೇನೆ. ನಾನು ಮಾತ್ರ ಯಾವುದೇ ಕಾರಣಕ್ಕೂ ಬುರ್ಖಾ ತೆಗೆಯಲ್ಲ. ಇದು ನಮ್ಮ ಧರ್ಮ ಅಂತ ಮಂಡ್ಯದಲ್ಲಿ ವಿದ್ಯಾರ್ಥಿನಿ ಹೇಳಿಕೆ ನೀಡಿದ್ದಾಳೆ.

  • 09 Feb 2022 10:37 AM (IST)

    ಕಾಂಗ್ರೆಸ್ ಪಕ್ಷ ಕೋರ್ಟ್​ನ ತೀರ್ಪಿಗೆ ಬದ್ಧವಾಗಿದೆ; ಎಲ್‌ ಹನುಮಂತಯ್ಯ, ನಾಸೀರ್ ಹುಸೇನ್ ಹೇಳಿಕೆ

    ರಾಜ್ಯಸಭಾ ಸಂಸದರಾದ ಎಲ್‌ ಹನುಮಂತಯ್ಯ, ನಾಸೀರ್ ಹುಸೇನ್ ಸುದ್ದಿಗೋಷ್ಟಿ ನಡೆಸಿದ್ದಾರೆ. ಅನೇಕ ವರ್ಷಗಳಿಂದ ಹಿಜಾಬ್ ಧರಿಸುವುದು ರೂಢಿಯಲ್ಲಿದೆ. ಕಳೆದ ಒಂದು ವಾರದಿಂದ ಯಾಕೆ ವಿವಾದ ಆಗಿದೆ. ಭಾರತದ ಅಲ್ಪಸಂಖ್ಯಾತರು ತಮ್ಮ ಧರ್ಮ ಪಾಲನೆ ಮಾಡಲು ಅವಕಾಶವಿದೆ. ಬೇರೆಯವರಿಗೆ ತೊಂದರೆಯಾಗದಂತೆ ಆಚರಿಸಲು ಯಾವುದೇ ಅಡ್ಡಿ ಇಲ್ಲ. ಧರ್ಮಾ ಆಧಾರವಾಗಿ ರಾಜಕೀಯ ಮಾಡಲು ಬಯಸುತ್ತಿರುವರಿಂದ ಪಿತೂರಿ ನಡೆಯುತ್ತಿದೆ. ಅವರು ವಿವಾದಕ್ಕೆ ಪ್ರಚೋದನೆ ಮಾಡುತ್ತಿದ್ದಾರೆ. ಮಕ್ಕಳ ವಿಷವನ್ನು ಹಾಕಿ ರಾಜಕೀಯ ಮಾಡಬಾರದು. ಸಿಖ್, ಜೈನ, ಭೌದ್ದ ಧರ್ಮದವರಿಗೆ ಹೀಗೆ ಆದರೆ ಗತಿಯೇನು? ಮಾಂಗಲ್ಯ ಹಾಕಿ ಬಂದಾಗಲೂ ಪ್ರಶ್ನೆ ಮಾಡುವ ಸಾಧ್ಯತೆ ಇರುತ್ತದೆ. ಕಾಂಗ್ರೆಸ್ ಪಕ್ಷ ಕೋರ್ಟ್​ನ ತೀರ್ಪಿಗೆ ಬದ್ಧರಾಗಿದ್ದೇವೆ. ರಾಜಕಾರಣಿಗಳು ಹೇಳಿಕೆ ಕೊಡುವಾಗ ಎಚ್ಚರಿಕೆ ಇಂದ ಇರಬೇಕು. ಕೆಲವು ಸಂಸದರು ದೇಶವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ದಲಿತ ವಿದ್ಯಾರ್ಥಿಗಳು ನೀಲಿ ಶಾಲು ಹಾಕಿಕೊಂಡು ಬಂದಿದ್ದಾರೆ. ಮುಂದೆ ಈಡಿಗರು ,ಕುರುಬರು ಸೇರಿದರಂತೆ ವಿತರ ಹಿಂದುಳಿದ ವರ್ಗದವರು ಕುಲದೇವರ ಲಾಂಚನ ಹಾಕಿಕೊಂಡು ಬರಬಹುದು. ಹಿಜಾಬ್ ಕೇಸರಿ ವಿವಾದ ಮುಸ್ಲಿಂ, ದಲಿತರಿಗೆ ಶಿಕ್ಷಣ ವಂಚಿಸುವ ಕುತಂತ್ರ ಅಂತ ಹೇಳಿದರು.

  • 09 Feb 2022 10:34 AM (IST)

    ಶಾಂತ ರೀತಿಯಲ್ಲಿದೆ ಮಣಿಪಾಲದ ಎಂಜಿಎಂ ಕಾಲೇಜು

    ಮಣಿಪಾಲದ ಎಂಜಿಎಂ ಕಾಲೇಜು ಮುಂದೆ ಖಾಲಿ ಖಾಲಿಯಾಗಿದೆ. ನಿನ್ನೆ ಹಿಜಾಬ್ ವರ್ಸಸ್ ಕೇಸರಿಗಾಗಿ ಸಂಘರ್ಷ ಏರ್ಪಟಿದ್ದ ಕಾಲೇಜು, ಇದೀಗ ಶಾಂತಾವಗಿದೆ. ರಜೆ ನೀಡಿದ ಕಾರಣ ಜಿಲ್ಲೆಯ ಕಾಲೇಜು ಆವರಣ  ಶಾಂತವಾಗಿದೆ.

  • 09 Feb 2022 10:32 AM (IST)

    ಹರಿಹರ ಸರ್ಕಾರಿ ಕಾಲೇಜಿನಲ್ಲಿ ಕಲ್ಲು ತೂರಾಟ ಪ್ರಕರಣ; 2 ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಪೊಲೀಸರು

    ಹರಿಹರ ಸರ್ಕಾರಿ ಕಾಲೇಜಿನಲ್ಲಿ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿ 2 ಸ್ವಯಂಪ್ರೇರಿತ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಮಾಡಿದ ಹಿನ್ನೆಲೆ ಪ್ರಕರಣ ದಾಖಲಾಗಿದೆ. ಪ್ರಾಂಶುಪಾಲರ ದೂರು ಆಧರಿಸಿ 1 ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಲ್ಲು ತೂರಾಟದಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಗಾಯಗೊಂಡ ವಿದ್ಯಾರ್ಥಿಯಿಂದ 1 ಕೇಸ್ ದಾಖಲಾಗಿದೆ. ಹರಿಹರ ಪೊಲೀಸರು ಒಟ್ಟು 4 ಪ್ರಕರಣ ದಾಖಲಿಸಿದ್ದಾರೆ.

  • 09 Feb 2022 10:30 AM (IST)

    ಸಮವಸ್ತ್ರ ಸಂಘರ್ಷ; ವಿದ್ಯಾರ್ಥಿನಿ ಅಸ್ವಸ್ಥಗೊಂಡಿದ್ದ ವಿಡಿಯೋ ವೈರಲ್

    ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ಪಟ್ಟಣದ ಕಾಲೇಜಿನಲ್ಲಿ ವಿದ್ಯಾರ್ಥಿನಿ ಅಸ್ವಸ್ಥಗೊಂಡಿದ್ದ ವಿಡಿಯೋ ವೈರಲ್ ಆಗಿದೆ. ಗಲಾಟೆಯಲ್ಲಿ ವಿದ್ಯಾರ್ಥಿನಿ ಅಸ್ವಸ್ಥಗೊಂಡಿರಲಿಲ್ಲ. ಹಸಿವಿನಿಂದಾಗಿ ಸುಸ್ತಾಗಿ ಅಸ್ವಸ್ಥಗೊಂಡಿದ್ದರು.  ಆದರೆ ಕಲ್ಲು ತೂರಾಟದಲ್ಲಿ ಗಾಯಗೊಂಡಿದ್ದಾಗಿ ವಿಡಿಯೋ ವೈರಲ್ ಆಗಿದೆ.

  • 09 Feb 2022 10:28 AM (IST)

    ಡಿಕೆಶಿ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಮಾಡಿದ್ದಾರೆ; ಆರಗ ಜ್ಞಾನೇಂದ್ರ ಹೇಳಿಕೆ

    ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದಾರೆ. ಡಿಕೆಶಿ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಮಾಡಿದ್ದಾರೆ. ರಾಷ್ಟ್ರ ಧ್ವಜವನ್ನು ಯಾರೂ ಇಳಿಸಿಲ್ಲ. ಕೋರ್ಟ್, ವಿಧಾನಸೌಧದ ಮೇಲಷ್ಟೇ ರಾಷ್ಟ್ರಧ್ವಜ ಹಾರಿಸ್ತಾರೆ. ದೇಶದಲ್ಲಿ ಕಾಂಗ್ರೆಸ್ ಇಲ್ಲ, ರಾಜ್ಯದಲ್ಲಿ ವಿಪಕ್ಷ ಸ್ಥಾನದಲ್ಲಿ ಇದೆ. ಡಿಕೆ ಶಿವಕುಮಾರ್ ಇದೇ ರೀತಿ ಮಾತನಾಡುತ್ತಿದ್ದರೆ. ಅವರ ಪಕ್ಷವನ್ನು ಜನರು ಅರಬ್ಬಿ ಸಮುದ್ರಕ್ಕೆ ಎಸೆಯುತ್ತಾರೆ. ವಿದ್ಯಾರ್ಥಿಗಳಲ್ಲಿ ಕೋಮುಭಾವನೆ ಸೃಷ್ಟಿಸುವ ಕೆಲಸ ಮಾಡ್ತಿದ್ದಾರೆ. ಮತೀಯ ಶಕ್ತಿಗಳನ್ನು ಪ್ರೇರೇಪಣೆ ಮಾಡುವ ಕೆಲಸ ಮಾಡ್ತಿದ್ದಾರೆ ಅಂತ ಆರಗ ಜ್ಞಾನೇಂದ್ರ ಹೇಳಿಕೆ ಹೇಳಿದರು.

  • 09 Feb 2022 10:27 AM (IST)

    ಕೋರ್ಟ್ ತೀರ್ಪು ನೋಡಿಕೊಂಡು ಮುಂದಿನ ತೀರ್ಮಾನ; ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿಕೆ

    ಕೋರ್ಟ್ ತೀರ್ಪು ನೋಡಿಕೊಂಡು ಮುಂದಿನ ತೀರ್ಮಾನ ಮಾಡಲಾಗುವುದು ಅಂತ ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿಕೆ ನೀಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಸಂಘರ್ಷದ ಹಿಂದೆ ಕಾಣದ ಕೈಗಳಿರುವ ಅನುಮಾನವಿದೆ. ವಿದ್ಯಾರ್ಥಿನಿಯರು ವಿದ್ಯೆಗಿಂತ ಧರ್ಮ ಮುಖ್ಯ ಎನ್ನುತ್ತಿದ್ದಾರೆ. ಗೊಂದಲ ಸೃಷ್ಟಿಸಲು ಮಾಡಿರುವ ಕೆಲಸದಂತೆ ಕಾಣುತ್ತಿದೆ. ದೇಶ ವಿಭಜನೆ ಮಾಡುವ ದುಷ್ಟ ಶಕ್ತಿಗಳ ಕೆಲಸ ಅನಿಸುತ್ತಿದೆ ಅಂತ ಅಭಿಪ್ರಾಯಪಟ್ಟರು.

     

  • 09 Feb 2022 10:25 AM (IST)

    ಸಿಎಂ ಬೊಮ್ಮಾಯಿ ಜತೆ ಎಜಿ ಪ್ರಭುಲಿಂಗ ನಾವದಗಿ ಚರ್ಚೆ

    ರಾಜ್ಯದ ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿ ಸಿಎಂ ಬೊಮ್ಮಾಯಿ ಜತೆ ಎಜಿ ಪ್ರಭುಲಿಂಗ ನಾವದಗಿ 40 ನಿಮಿಷ ಚರ್ಚೆ ನಡೆಸಿದ್ದಾರೆ. ಸರ್ಕಾರದ ವತಿಯಿಂದ ಕಾನೂನು ಹೋರಾಟದ ಬಗ್ಗೆ ಚರ್ಚೆ ಮಾಡಿದ್ದಾರೆ.

     

  • 09 Feb 2022 10:22 AM (IST)

    ಶಿವಮೊಗ್ಗ ಸರಕಾರಿ ಪದವಿ ಕಾಲೇಜಿನಲ್ಲಿ ರಾಷ್ಟ್ರ ಧ್ವಜಾರೋಹಣ

    ಶಿವಮೊಗ್ಗ ಸರಕಾರಿ ಪದವಿ ಕಾಲೇಜಿನಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಲಾಗಿದೆ. 7 ಮತ್ತು 8 ಯುವಕರು ಧ್ವಜಾರೋಹಣ ಮಾಡಿದ್ದಾರೆ. ಬೇಡ ಅಂದ್ರೂ ಧ್ವಜಾರೋಹಣ ಮಾಡಿದರು. ಇದು ಪಾಕಿಸ್ತಾನ ದ್ವಜವಲ್ಲ. ದೇಶದ ರಾಷ್ಟ್ರ ಧ್ವಜ ಅಂತಾ ಯುವಕರು ಉತ್ತರಿಸಿದರು. ಬಳಿಕ ಕಾಲೇಜ್ ಪ್ರಿನ್ಸಿಪಾಲ್ ಧನಂಜಯ್ ಅವರಿಗೆ ಮಾಹಿತಿ ನೀಡಿದೆ. ಕೂಡಲೇ ಕಾಲೇಜ್ ಸಿಬ್ಬಂದಿ ರಾಷ್ಟ್ರ ಧ್ವಜ ಕೆಳಗೆ ಇಳಿಸಿದ್ದಾರೆ. ಧ್ವಜಾರೋಹಣ ಸಂದರ್ಭದಲ್ಲಿ ಪೊಲೀಸ್ ರು ಇರಲಿಲ್ಲ ಅಂತ ಟಿವಿ 9ಗೆ ಕಾಲೇಜ್ ಸಿಬ್ಬಂದಿ ಕಿರಣ ಹೇಳಿಕೆ ನೀಡಿದ್ದಾರೆ.

  • 09 Feb 2022 10:20 AM (IST)

    ಹಿಜಾಬ್ ವಿವಾದಕ್ಕೆ ಗಾಯಕಿ ಸುಹಾನ ಸೈಯದ್ ಪ್ರತಿಕ್ರಿಯೆ

    ನಾನು ಮುಸ್ಲಿಂ ಕುಟುಂಬಕ್ಕೆ ಸೇರಿದವಳು. ಆದರೆ ನಾನು ಹಿಜಾಬ್ ಹಾಕುವುದಿಲ್ಲ. ಹಾಗಂತ ನಾನು ಹಿಜಾಬ್ ವಿರೋಧಿ ಖಂಡಿತ ಅಲ್ಲ. ನಾನು ಹಿಜಾಬ್ ಹಾಕುವುದಿಲ್ಲ ಎಂದು ವಿರೋಧಿಸಿದವರು ಇದಾರೆ. ಬಟ್ಟೆ ಹಾಕೋದು ಅವರವರ ಸ್ವಾತಂತ್ರ್ಯ. ಆದರೆ ಶಿಕ್ಷಣ ಎಲ್ಲದನ್ನೂ ಮೀರಿ ನಿಂತಿದೆ. ಹೆಣ್ಣು ಮಕ್ಕಳ ಶಿಕ್ಷಣ ಅತ್ಯಂತ ಮಹತ್ವದ್ದಾಗಿದೆ. ಧರ್ಮ, ಜಾತಿ, ಲಿಂಗ, ಬಟ್ಟೆ ಎಲ್ಲದನ್ನೂ ಮೀರಿರೋದು ಶಿಕ್ಷಣ. ಹಿಂದೆ ಹೆಣ್ಣು ಮಕ್ಕಳು ಮನೆಯಿಂದ ಹೊರ ಬಂದು ಓದಲು ಕಷ್ಟಪಡುತ್ತಿದ್ದರು. ಆದರೀಗ ಕಾಲ ಬದಲಾಗಿದೆ. ಪ್ರತಿ ಹೆಣ್ಣು ಮಗುವಿಗೆ ಶಿಕ್ಷಣ ಸಿಕ್ತಿದೆ. ಇದಕ್ಕಿಂತ ಖುಷಿ ವಿಚಾರ ಇನ್ನೊಂದಿಲ್ಲ. ಶಿಕ್ಷಣ ಪಡೆಯುವ ಪ್ರತಿ ಹೆಣ್ಣಿನ ಪರ ನನ್ನ ಬೆಂಬಲವಿದೆ. ಕೇವಲ ಬಟ್ಟೆ ವಿಚಾರಕ್ಕೆ ಶಿಕ್ಷಣ ವಂಚಿತರಾಗೋದು ತಪ್ಪು ಅಂತ ಗಾಯಕಿ ಸುಹಾನ ಸೈಯದ್ ಹೇಳಿದರು.

  • 09 Feb 2022 10:18 AM (IST)

    ಸಿಎಂ ಜೊತೆ ಚರ್ಚೆ ನಡೆಸಿ ತೆರಳಿದ ಸಚಿವ ಬಿಸಿ ನಾಗೇಶ್

    ಬೆಂಗಳೂರಿನ ಆರ್​​.ಟಿ.ನಗರದ ಸಿಎಂ ನಿವಾಸದಲ್ಲಿ ಚರ್ಚೆ ನಡೆಸಿ ಸಚಿವ ಬಿಸಿ ನಾಗೇಶ್ ತೆರಳಿದರು. ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ನಿರ್ಗಮಮಿಸಿದ್ದಾರೆ.

  • 09 Feb 2022 10:17 AM (IST)

    ಸಮವಸ್ತ್ರ ಎಂದರೆ ಅಲ್ಲಿ ಎಲ್ಲರೂ ಸಮಾನರು ಎಂದರ್ಥ; ವಚನಾನಂದಶ್ರೀ ಪ್ರತಿಕ್ರಿಯೆ

    ರಾಜ್ಯ ಸರ್ಕಾರ 3 ದಿನ ಶಾಲಾ-ಕಾಲೇಜಿಗೆ ರಜೆ ಘೋಷಿಸಿದೆ. ಈ ಎರಡ್ಮೂರು ದಿನದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ಮೊದಲಿನಿಂದಲೂ ಶಾಲೆಗಳಲ್ಲಿ ಒಂದೇ ಸಮವಸ್ತ್ರ ಇತ್ತು. ಸಮವಸ್ತ್ರ ಎಂದರೆ ಅಲ್ಲಿ ಎಲ್ಲರೂ ಸಮಾನರು ಎಂದರ್ಥ. ಆ ಜಾತಿ, ಈ ಧರ್ಮ, ಬಡವ, ಶ್ರೀಮಂತ ಅಲ್ಲಿ ಇರೋಲ್ಲ. ಅಲ್ಲಿ ಇರೋದು ಶಿಕ್ಷಣ ಧರ್ಮ. ಶಾಲೆಗೆ ಹೋಗುವುದು ಶಿಕ್ಷಣ, ಸಂಸ್ಕಾರ ಕಲಿಯುವುದಕ್ಕೆ. ಕರ್ನಾಟಕ ಭಾವೈಕ್ಯತೆಯ ರಾಜ್ಯವಾಗಿದೆ. ಕರ್ನಾಟಕದಲ್ಲಿ ಇಂತಹ ಸಂಘರ್ಷವನ್ನು ಖಂಡಿಸುತ್ತೇನೆ. ಹಿಜಾಬ್ ಹಾಕಿಕೊಳ್ಳೋದು ಧಾರ್ಮಿಕ ಹಕ್ಕು ವಿಚಾರ. ಅವರವರ ಭಾವನೆ ಹೇಳುವುದಕ್ಕೆ ಮುಕ್ತ ಅವಕಾಶವಿದೆ. ಅದನ್ನು ಶಾಲೆಯ ಹೊರಗಡೆ ಹೇಳಲಿ. ಮುಸ್ಲಿಮರು, ಹಿಂದೂಗಳು ಭಾವೈಕ್ಯತೆಯಿಂದ ಇದ್ದರು. ಈಗ ಈ ವಿವಾದ ಎಲ್ಲಿಂದ ಬಂತು ಎಂಬುದು ಗೊತ್ತಿಲ್ಲ. ನಿಮಗಿಂತ ನಾವೇನು ಕಮ್ಮಿ ಎಂಬ ಸ್ಪರ್ಧೆ ಒಳ್ಳೆಯದಲ್ಲ. ಸ್ಪರ್ಧೆ ಎಂಬುದು ಪರೀಕ್ಷೆಗಳಲ್ಲಿ ಇರಲಿ. ರಾಜ್ಯವನ್ನು ನಂಬರ್ ಒನ್ ಮಾಡುವುದಕ್ಕೆ ಸ್ಪರ್ಧೆ ಮಾಡಿ. ಬಟ್ಟೆ ಎಷ್ಟು ಮುಖ್ಯವೋ, ನಮ್ಮ ನಡೆಯೂ ಅಷ್ಟೇ ಮುಖ್ಯ. ಧರ್ಮವನ್ನು ಮಠ, ಚರ್ಚ್, ಮಸೀದಿಯಲ್ಲಿಟ್ಟುಕೊಳ್ಳಬೇಕು. ಶಾಲೆಗೆ ಹೋಗುವಾಗ ಶಿಕ್ಷಣವೇ ಧರ್ಮ, ತಂದೆ-ತಾಯಿ. ಪರಿಸ್ಥಿತಿಯನ್ನು ಸರ್ಕಾರ ಸೂಕ್ತ ರೀತಿಯಲ್ಲಿ ನಿಭಾಯಿಸ್ತಿದೆ ಅಂತ ಹರಿಹರ ಪಂಚಮಸಾಲಿ ಪೀಠದ ವಚನಾನಂದಶ್ರೀ ಪ್ರತಿಕ್ರಿಯೆ ನೀಡಿದ್ದಾರೆ.

  • 09 Feb 2022 10:15 AM (IST)

    ಯಾವತ್ತೂ ನೆಲದ ಕಾನೂನು ಗೌರವಿಸುತ್ತೇವೆ; ಸಚಿವ ಸುನಿಲ್ ಕುಮಾರ್

    ಹಿಜಾಬ್ ಗೆ ಸಂಬಂಧಪಟ್ಟಂತೆ ನ್ಯಾಯಾಲಯದ ಆದೇಶ ನಿರೀಕ್ಷೆ ಮಾಡುತ್ತಿದ್ದೇವೆ. ಯಾವತ್ತೂ ನಾವು ನೆಲದ ಕಾನೂನು ಗೌರವಿಸುತ್ತೇವೆ. ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು. ಕಾಯ್ದೆಯನ್ನು ಅನುಷ್ಠಾನಕ್ಕೆ ತರುವ ಕೆಲಸ ಆಗಬೇಕು. ಕಾಂಗ್ರೆಸ್ ದ್ವೇಷವನ್ನು ಹಚ್ಚುವ ಉಂಟು ಮಾಎಉವ ದ್ವೇಷದ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ದೇಶ ವಿಭಜನೆಗೆ ಕಾಂಗ್ರೆಸ್ ಬೆಂಬಲಿಸುತ್ತದೆ. ಯಾರು ಪ್ರತ್ಯೇಕವಾಗಿ ಇರಬೇಕು ಅಂತ ಬಯಸುತ್ತಿದ್ದಾರೋ ಅವರನ್ನು ಕಾಂಗ್ರೆಸ್ ಬೆಂಬಲಿಸುತ್ತಿದೆ. ಸಮವಸ್ತ್ರ ಸಂಹಿತೆ ಎಲ್ಲರೂ ಪಾಲಿಸಿಕೊಂಡೇ ಬರಬೇಕು ಅಂತ ಸಚಿವ ಸುನಿಲ್ ಕುಮಾರ್ ಹೇಳಿದರು.

  • 09 Feb 2022 10:12 AM (IST)

    ‘ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ’- ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಟ್ವೀಟ್

    ‘ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ’ ಅಂತ ಕರ್ನಾಟಕದಲ್ಲಿ ಹಿಜಾಬ್ ವಿವಾದಕ್ಕೆ ಸಂಬಂಧಿಸಿ  ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.

  • 09 Feb 2022 10:11 AM (IST)

    ಬನಹಟ್ಟಿ ಬಂದ್​ಗೆ ಕರೆ ನೀಡಿರುವ ಹಿಂದೂಪರ ಸಂಘಟನೆಗಳು

    ಹಿಜಾಬ್-ಕೇಸರಿ ವಿಚಾರದ ಗಲಾಟೆ ಹಿನ್ನೆಲೆ ಹಿಂದೂಪರ ಸಂಘಟನೆಗಳು ಬನಹಟ್ಟಿ ಬಂದ್​ಗೆ ಕರೆ ನೀಡಿವೆ. ಬಂದ್​ನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ನೂರಾರು ಜನರು ತೆರಳುತ್ತಿದ್ದಾರೆ. ಘೋಷಣೆ ಕೂಗಿ, ಕೇಸರಿ ಶಾಲು ಹಾಕಿಕೊಂಡು ಪ್ರತಿಭಟನೆಗೆ ಹಿಂದೂಪರ ಸಂಘಟನೆ ಕಾರ್ಯಕರ್ತರು ತೆರಳುತ್ತಿದ್ದಾರೆ. ನಿನ್ನೆ ಶಿಕ್ಷಕರ ಮೇಲೆ ಹಲ್ಲೆ ನಡೆದಿತ್ತು. ದುಷ್ಕರ್ಮಿಗಳ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿ ಬನಹಟ್ಟಿ ಬಂದ್​ಗೆ ಕರೆ ನೀಡಲಾಗಿದೆ.

Published On - 10:07 am, Wed, 9 February 22

Follow us on