ಬೆಂಗಳೂರು ನ.15: ನಾಯಿ ಕಡಿತದಿಂದ (Dog Bite) ಗಾಯಗೊಂಡವರಿಗೆ 5 ಸಾವಿರ ರೂ. ಮತ್ತು ಮೃತಪಟ್ಟವರಿಗೆ 5 ಲಕ್ಷ ರೂ. ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ (Karnataka Government) ಹೈಕೋರ್ಟ್ (High Court) ಆದೇಶಿಸಿದೆ. ವಕೀಲ ರಮೇಶ್ ಎಲ್ ನಾಯಕ್ ಅವರು ವಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠವು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಭೆ ನಡೆಸಬೇಕು. 4 ವಾರದಲ್ಲಿ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಸೂಚಿಸಿದೆ.
ಬೀದಿ ನಾಯಿಗಳಿಗೆ ಆಹಾರ ನೀಡಲು ಮಾರ್ಗಸೂಚಿ ಪ್ರಕಟಿಸಲಾಗಿದೆ. ಜನಸಾಮಾನ್ಯರಿಗೆ ಇದರ ತಿಳಿವಳಿಕೆ ನೀಡಲು ಕ್ರಮ ಕೈಗೊಳ್ಳಬೇಕು. ವಾರ್ತಾ, ಪ್ರಚಾರ ಇಲಾಖೆ ವ್ಯಾಪಕ ಪ್ರಚಾರ ನೀಡಬೇಕು ಎಂದು ಹೇಳಿದೆ.
ಈ ವೇಳೆ ಸರ್ಕಾರದ ಪರ ವಕೀಲರು 2023 ಅ.6 ರಂದು ನಡೆದ ಸಭೆಯಲ್ಲಿ ಸಂತ್ರಸ್ತರಿಗೆ ನೀಡುವ ಪರಿಹಾರ ವಿಚಾರವಾಗಿ ಚರ್ಚಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಇದಕ್ಕೆ ನ್ಯಾಯ ಪೀಠ ಸಭೆಯ ನಂತರ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿತು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದಲ್ಲಿ ಬೀದಿನಾಯಿಗಳ ಅಟ್ಟಹಾಸ ಮಿತಿ ಮೀರಿದೆ. ಮಂಗಳವಾರ 14 ಮಂದಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದವು. ನಗರದ ಟಿಬಿ ಸರ್ಕಲ್, ತಾಲೂಕು ಕಚೇರಿ ರಸ್ತೆ, ಕೋರ್ಟ್ ರಸ್ತೆ, ಡಿ ಕ್ರಾಸ್ ಸೇರಿದಂತೆ ಹಲವು ಕಡೆ ಬೀದಿ ನಾಯಿಗಳು ದಾಳಿ ಮಾಡಿದ್ದವು. ರಸ್ತೆಯಲ್ಲಿ ಹೋಗುತ್ತಿದ್ದ ಮಕ್ಕಳು ಸೇರಿದಂತೆ ಪುರುಷರ ಮೇಲೆ ಬೀದಿ ನಾಯಿಗಳು ಎರಗಿದ್ದವು. ಬೀದಿ ನಾಯಿಗಳ ಅಟ್ಟಹಾಸಕ್ಕೆ ದೊಡ್ಡಬಳ್ಳಾಪುರ ಜನ ಬೆಚ್ಚಿಬಿದ್ದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:47 pm, Wed, 15 November 23