ಬೆಂಗಳೂರು, (ಡಿಸೆಂಬರ್ 20): ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧದ ಹೇಳಿಕೆ ವಿಚಾರದಲ್ಲಿ ಬಂಧನಕ್ಕೆ ಒಳಗಾಗಿರುವ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿಯನ್ನ ತಕ್ಷಣವೇ ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ. ಸಿಟಿ ರವಿ ವಿರುದ್ಧ ಎಫ್ಐಆರ್ ರದ್ದುಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ತಕ್ಷಣ ಬಿಡುಗಡೆಗೆ ಮಧ್ಯಂತರ ಆದೇಶ ಹೊರಡಿಸಿದೆ. ಆದರೆ, ತನಿಖೆಗೆ ಸಹಕರಿಸಬೇಕೆಂದು ಷರತ್ತು ವಿಧಿಸಿ. ಜಾಮೀನಿಗಾಗಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಾಳೆ(ಡಿಸೆಂಬರ್ 21) ಮುಂಡೂಡಿತ್ತು. ಆದ್ರೆ, ಇದೀಗ ಹೈಕೋರ್ಟ್ನಲ್ಲಿ ಸಿಟಿ ರವಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಸಿಟಿ ರವಿ ಪರ ವಕೀಲ ಸಂದೇಶ್ ಚೌಟ ,ಆರೋಪಿ, ಫಿರ್ಯಾದಿ ಇಬ್ಬರೂ ಶಾಸಕರು. ವಿಧಾನ ಪರಿಷತ್ ನಲ್ಲಿ ಈ ರೀತಿಯಾಗಿರುವುದು ದುರದೃಷ್ಟಕರ ಎಂದು ಕೋರ್ಟ್ ಅಸಮಾಧಾನಗೊಂಡಿದೆ. ಆರೋಪಗಳಿಗೆ 7 ವರ್ಷಕ್ಕಿಂತ ಕಡಿಮೆ ಶಿಕ್ಷೆಯಿದೆ. 41 ಎ ಅಡಿ ನೋಟಿಸ್ ನೀಡಬೇಕಿತ್ತು. ಪೊಲೀಸರು ಬಂಧನಕ್ಕೆ ಕಾರಣಗಳನ್ನು ನೀಡಬೇಕಿತ್ತು. ಆದರೆ ಇದನ್ನು ನೀಡಿರುವ ಬಗ್ಗೆ ದಾಖಲೆಗಳನ್ನು ಒದಗಿಸಿಲ್ಲ. ಪೊಲೀಸರು ಹಲ್ಲೆ ನಡೆಸಿದ್ದರಿಂದ ಗಾಯಗಳಾಗಿವೆ ಎಂದು ಸಿಟಿ ರವಿ ವಕೀಲರು ವಾದಿಸಿದ್ದಾರೆ.
ಚಿಕಿತ್ಸೆಯ ವಿವರವನ್ನು ವೈದ್ಯಾಧಿಕಾರಿ ಸರಿಯಾಗಿ ನಮೂದಿಸಿಲ್ಲ. ಆದರೆ ಸ್ಕ್ಯಾನಿಂಗ್ ಮಾಡಿಸಿರುವುದಾಗಿ ವರದಿಯಿದೆ. ಏನನ್ನೂ ರೆಕಾರ್ಡ್ ಮಾಡಿಲ್ಲವೆಂದು ಸಭಾಪತಿ ಹೇಳಿಕೆ ನೀಡಿದ್ದಾರೆ ಆರೋಪಿ ಸಿಟಿ ರವಿಯನ್ನು ಬಂಧಿಸಲು ಹಲ್ಲೆ ನಡೆಸುವ ಅಗತ್ಯವಿರಲಿಲ್ಲ. ಕಾನೂನು ಕ್ರಮ ಪಾಲಿಸಿ ಕ್ರಮ ಕೈಗೊಳ್ಳಬಹುದಿತ್ತು. ವಿಧಾನಪರಿಷತ್ ಪ್ರತಿಪಕ್ಷದ ಶಾಸಕರಾಗಿದ್ದಾರೆ. ಹೀಗಾಗಿ ಪರಾರಿಯಾಗುವ ಸಾಧ್ಯತೆ ಇಲ್ಲ ಎಂದಿದ್ದಾರೆ.
ವಾದ, ಪ್ರತಿವಾದ ಆಲಿಸಿದ ಹೈಕೋರ್ಟ್, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಕೂಡಲೇ ಬಂಧನದಿಂದ ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿದೆ.
ಸದ್ಯ ಸಿ.ಟಿ ರವಿ ಅವರಿಗೆ ಮಧ್ಯಂತರ ರಿಲೀಫ್ ಸಿಕ್ಕಿದೆ. ಆದ್ರೆ, ಎಫ್ಐಆರ್ ರದ್ದು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಮುಂದೆ ನಡೆಯಲಿದೆ. ಇಬ್ಬರೂ ಜನಪ್ರತಿನಿಧಿಗಳಾದ ಸಿ.ಟಿ ರವಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡೆಗೆ ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.
ಇನ್ನು ಸಿಟಿ ರವಿ ಬಿಡುಗಡೆಗೆ ಹೈಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಇತ್ತ ಚಿಕ್ಕಮಗಳೂರಿನ ಅವರ ನಿವಾಸದ ಬಳಿ ಸಂಭ್ರಮ ಮನೆ ಮಾಡಿದೆ. ಬಿಜೆಪಿ ಕಾರ್ಯಕರ್ತರು, ಮುಖಂಡರು ಸಿ.ಟಿ.ರವಿ ಮನೆ ಮುಂದೆ ಸಂಭ್ರಮಿಸಿದರು.
ಬಿಡುಗಡೆ ಆದೇಶದ ಬೆನ್ನಲ್ಲೇ ಟಿವಿ9ಗೆ ಸಿಟಿ ರವಿ ಪ್ರತಿಕ್ರಿಯಿಸಿದ್ದು, ಹೈಕೋರ್ಟ್ ಆದೇಶದಿಂದ ಸತ್ಯಕ್ಕೆ ಜಯ ಸಿಕ್ಕಿದೆ. ರಾಜಕೀಯ, ಸೈದ್ಧಾಂತಿಕವಾಗಿ ಟೀಕೆ ಮಾಡುತ್ತೇನೆ. ವೈಯಕ್ತಿಕವಾಗಿ ನಾನು ಎಂದೂ ಟೀಕೆ ಮಾಡಲ್ಲ. ನನ್ನ ಬಗ್ಗೆ ಚಿಕ್ಕಮಗಳೂರಿನಲ್ಲಿ ಕೇಳಿ ತಿಳದುಕೊಳ್ಳಿ. ಡಿ.ಕೆ.ಶಿವಕುಮಾರ್ ಬಗ್ಗೆ ರಾಮನಗರದಲ್ಲಿ ಕೇಳಿ ತಿಳಿದುಕೊಳ್ಳಿ. ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಕೇಳಿ ತಿಳಿದುಕೊಳ್ಳಿ. ನಾನು ದೂರು ಕೊಟ್ಟರೂ ಎಫ್ಐಆರ್ ದಾಖಲಿಸಿಕೊಳ್ಳುತ್ತಿಲ್ಲ. ನನ್ನ ಮೇಲೆ ಸಾಕ್ಷಿ ಇಲ್ಲದಿದ್ರೂ ಎಫ್ಐಆರ್ ದಾಖಲಿಸುತ್ತಾರೆ. ನೇರವಾಗಿ ನಾನು ಬೆಂಗಳೂರಿಗೆ ಬರುತ್ತೇನೆ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:27 pm, Fri, 20 December 24