ಬೆಂಗಳೂರು: ಶಿರೂರು ಮಠಕ್ಕೆ ಪೀಠಾಧಿಪತಿಯಾಗಿ ಅಪ್ರಾಪ್ತರ ನೇಮಕವಾಗಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇಂದು ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಸಿಜೆ ಎ.ಎಸ್.ಒಕಾ, ನ್ಯಾ.ಎನ್.ಎಸ್.ಸಂಜಯ್ ಗೌಡ ಅವರ ಪೀಠ ಅಪ್ರಾಪ್ತರ ಸಮ್ಮತಿಗೆ ಕಾನೂನಿನಲ್ಲಿ ಅವಕಾಶ ಎಲ್ಲಿದೆ? ಮಗನ ಸನ್ಯಾಸಕ್ಕೆ ಪೋಷಕರು ಒಪ್ಪಿಗೆ ನೀಡಲು ಸಾಧ್ಯವೇ? ಎಂದು ಪ್ರಶ್ನೆ ಹಾಕಿತು. ಈ ಅಂಶಕ್ಕೆ ಸಂಬಂಧಿಸಿದ ಕಾನೂನಿನ ಅಂಶಗಳ ಬಗ್ಗೆ ಪರಿಶೀಲಿಸಬೇಕಿದ್ದು, ಸೆಪ್ಟೆಂಬರ್ 13 ರೊಳಗೆ ಆಕ್ಷೇಪಣೆ ಸಲ್ಲಿಸಲು ಪ್ರತಿವಾದಿಗಳಿಗೆ ಪೀಠ ಸೂಚನೆ ನೀಡಿತು.
ಉಡುಪಿ ಶಿರೂರು ಮಠಕ್ಕೆ 31ನೇ ಪೀಠಾಧಿಪತಿಯಾಗಿ ಬಾಲಕನನ್ನು ನೇಮಿಸಿದ ಕ್ರಮದ ಬಗ್ಗೆ ಸಲ್ಲಿಕೆಯಾಗಿರುವ ಅರ್ಜಿಯನ್ನು ಹೈಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಿದೆ. ಉಡುಪಿ ಶಿರೂರು ಮಠ ಭಕ್ತ ಸಮಿತಿಯ ವ್ಯವಸ್ಥಾಪಕ ಟ್ರಸ್ಟಿಯು ಪಿ.ಲಾತವ್ಯ ಆಚಾರ್ಯ ಮೂಲಕ ಈ ಮನವಿಯನ್ನು ಸಲ್ಲಿಸಿದ್ದಾರೆ.
ಈ ಹಿಂದೆ ನಡೆದಿದ್ದ ವಿಚಾರಣೆಯ ಮುಖ್ಯಾಂಶಗಳು
ಅಪ್ರಾಪ್ತ ಬಾಲಕನಿಗೆ ಒತ್ತಾಯದಿಂದ ಸನ್ಯಾಸ ನೀಡಿದಾಗ ಸರ್ಕಾರವು ಮೂಕಪ್ರೇಕ್ಷಕನಾಗಿರಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಬಾಲಕನಿಗೆ ಸನ್ಯಾಸ ನೀಡಿದ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠವು, ಉಡುಪಿಯ ಶಿರೂರು ಮಠಕ್ಕೆ 16 ವರ್ಷದ ಬಾಲಕನನ್ನು ಮಠಾಧಿಪತಿಯನ್ನಾಗಿ ನೇಮಕ ಮಾಡಿರುವ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತು.
‘ಒತ್ತಾಯದಿಂದ ಬಾಲಕನಿಗೆ ಸನ್ಯಾಸ ನೀಡಲಾಗಿದೆ. ಅಪ್ರಾಪ್ತನ ಹಕ್ಕುಗಳು ಇದರಿಂದ ಉಲ್ಲಂಘನೆಯಾಗಿವೆ. ಈ ಕುರಿತು ಅರ್ಜಿದಾರರು ಸಲ್ಲಿಸಿರುವ ಮಾಹಿತಿಯಲ್ಲಿ ಕೆಲ ಗೊಂದಲಗಳಿವೆ. ಪ್ರಾರ್ಥನೆಯನ್ನು ಬದಲಿಸಲು ಅವಕಾಶ ನೀಡಲಾಗಿದೆ. ಜೂನ್ 2ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಸಲಾಗುವುದು’ ಎಂದು ನ್ಯಾಯಪೀಠವು ಹೇಳಿತು.
ಸೋದೆ ಮಠದ ಮಠಾಧೀಶರು 16 ವರ್ಷದ ಬಾಲಕನನ್ನು ಶಿರೂರು ಮಠದ ಮುಂದಿನ ಪೀಠಾಧಿಪತಿ ಎಂದು ಘೋಷಿಸಿದ್ದಾರೆ. ಆ ಬಾಲಕನಿಗೆ ಸನ್ಯಾಸವನ್ನೂ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿವೆ ಎಂದು ಅರ್ಜಿದಾರರು ನ್ಯಾಯಪೀಠದ ಗಮನ ಸೆಳೆದರು. ಈ ನೇಮಕವನ್ನು ಶಿರೂರು ಮಠದ ಭಕ್ತರು ಒಪ್ಪಿಲ್ಲ. ಶಿರೂರು ಮಠಕ್ಕೆ ಇದೀಗ ಪೀಠಾಧಿಪತಿಯೆಂದು ಘೋಷಣೆಯಾಗಿರುವ ಬಾಲಕ ಈ ಮಠದ ಅನುಯಾಯಿಯೂ ಅಲ್ಲ ಎಂದು ಅರ್ಜಿದಾರರು ವಾದಿಸಿದರು.
ಕಳೆದ ಮಾರ್ಚ್ ತಿಂಗಳಲ್ಲಿಯೇ (ಸೋದೆ ಮಠದ) ಪೀಠಾಧಿಪತಿಗೆ ಲೀಗಲ್ ನೊಟೀಸ್ ನೀಡಿ, ಶಿರೂರು ಮಠದ ಯಾವುದೇ ವಿಗ್ರಹಗಳು ಮತ್ತು ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಯಾವುದೇ ವ್ಯವಹಾರ ಮಾಡಬಾರದು ಎಂದು ಸೂಚಿಸಲಾಗಿತ್ತು. ಹೀಗಿದ್ದರೂ ಶಿರೂರು ಮಠಕ್ಕೆ ಪೀಠಾಧಿಪತಿಯನ್ನು ಘೋಷಿಸಲಾಗಿದೆ. ಇದು ಅಪ್ರಾಪ್ತನ ಹಕ್ಕುಗಳ ಉಲ್ಲಂಘನೆ ಎಂದು ವಾದಿಸಿದರು.
ಇದನ್ನೂ ಓದಿ:
ಉಡುಪಿ ಶಿರೂರು ಮಠಕ್ಕೆ ನೂತನ ಪೀಠಾಧಿಪತಿ ಘೋಷಣೆ; ಧರ್ಮಸ್ಥಳ ನಿಡ್ಲೆ ಮೂಲದ ಅನಿರುದ್ಧ್ ಸರಳತ್ತಾಯ ಮುಂದಿನ ಶ್ರೀ
(Karnataka High Court questions Where is the law allowed for the consent of minors in the shiroor mutt issue)