ಬೆಂಗಳೂರು: ದೈಹಿಕನಾಗಿ ಸಮರ್ಥನಿರುವ ಪತಿ(Husband) ಪತ್ನಿಯಿಂದ ಜೀವನಾಂಶ( sustenance) ಕೇಳುವಂತಿಲ್ಲವೆಂದು ಕರ್ನಾಟಕ ಹೈಕೋರ್ಟ್ (Karnataka High Court) ಮಹತ್ವದ ಆದೇಶ ನೀಡಿದೆ. ಹೀಗೆ ಪತ್ನಿಯಿಂದ ಜೀವನಾಂಶ ಕೇಳುವುದು ಸೋಮಾರಿತನಕ್ಕೆ ಕಾರಣವಾಗಬಹುದೆಂದು ಹೈಕೋರ್ಟ್ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ. 2017 ರಲ್ಲಿ ಪತ್ನಿಯೊಬ್ಬಳು(Wife) ತನ್ನ ಗಂಡನ ಅನುಮತಿ ಪಡೆಯದೇ ಆಕೆಯ ಸಹೋದರಿ ಮಗುವಿನ ಹುಟ್ಟುಹಬ್ಬಕ್ಕೆ ಹೋಗಿದ್ದಕ್ಕೆ ಉಂಟಾದ ಕಲಹ ವಿಚ್ಚೇದನ ತನಕ ಹೋಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿಯಿಂದಲೇ ಜೀವನಾಂಶ ಕೇಳಿದ್ದ ಪತಿಗೆ ಹೈಕೋರ್ಟ್ ತಪರಾಕಿ ನೀಡಿದೆ.
ಇದನ್ನೂ ಓದಿ: ಅತ್ಯಾಚಾರ ಸಂತ್ರಸ್ತೆಯನ್ನೇ ಮದ್ವೆಯಾದ ಆರೋಪಿ, ಕೇಸ್ ರದ್ದುಗೊಳಸಿದ ಹೈಕೋರ್ಟ್
2017 ರಲ್ಲಿ ವಿವಾಹವಾದ ದಂಪತಿ ನಡುವೆ ಹೊಂದಾಣಿಕೆಯ ಕೊರತೆಯಿಂದಾಗಿ ಪತ್ನಿ ಪತಿಯ ಮನೆ ತೊರೆದು ತವರು ಮನೆ ಸೇರಿದ್ದಳು. ಪತಿಯ ಅನುಮತಿ ಪಡೆಯದೇ ಆತನ ಸೋದರಿ ಮಗುವಿನ ಹುಟ್ಟುಹಬ್ಬಕ್ಕೆ ಹೋಗಿದ್ದೇ ದಾಂಪತ್ಯದಲ್ಲಿ ಕಲಹಕ್ಕೆ ಕಾರಣವಾಗಿತ್ತು. ತವರು ಮನೆಗೋ ಹೋದ ಪತ್ನಿಯಿಂದ ವಿಚ್ಚೇದನ ಕೋರಿ ಪತಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ವಿಚ್ಚೇದನದ ಅರ್ಜಿ ವಿಚಾರಣೆ ವೇಳೆ ಪತ್ನಿ ತನಗೆ ಪತಿಯಿಂದ 25 ಸಾವಿರ ಜೀವನಾಂಶ ಹಾಗೂ ಕೇಸ್ ವೆಚ್ಚ ಕೊಡಿಸುವಂತೆ ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಳು. ಇದಕ್ಕೆ ತಕರಾರು ತೆಗೆದ ಪತಿ ಕೋವಿಡ್ ನಿಂದಾಗಿ ಕಳೆದ 2 ವರ್ಷಗಳಿಂದ ತಾನು ನಿರುದ್ಯೋಗಿಯಾಗಿದ್ದೇನೆ/ ತನಗೇ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಪತ್ನಿಯ ತವರುಮನೆ ಕಡೆಯವರು ಆರ್ಥಿಕವಾಗಿ ಸಬಲರಾಗಿದ್ದಾರೆ. ಹೀಗಾಗಿ ಪತ್ನಿಯಿಂದಲೇ ತನಗೆ 2 ಲಕ್ಷ ಜೀವನಾಂಶ ಕೊಡಿಸುವಂತೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ.
ಕೌಟುಂಬಿಕ ನ್ಯಾಯಲಯ ಪತಿಯ ಅರ್ಜಿಯನ್ನು ತಿರಸ್ಕರಿಸಿ, ಪತ್ನಿಗೆ ಮಾಸಿಕ 10 ಸಾವಿರ ಜೀವನಾಂಶ ನೀಡುವಂತೆ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಪತಿಯ ಅರ್ಜಿಯನ್ನು ತಿರಸ್ಕರಿಸಿದೆ. ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 24 ರಡಿ ಆದಾಯವಿಲ್ಲದ ಪತಿಯಾಗಲೀ ಅಥವಾ ಪತ್ನಿಯಾಗಲೀ ತನ್ನ ಸಂಗಾತಿಯಿಂದ ಜೀವನಾಂಶ ಕೋರಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ ಪತ್ನಿ ಜೀವನಾಂಶ ನಿರಾಕರಿಸುವ ಉದ್ದೇಶದಿಂದ ಪತಿ ಈ ಉಪಾಯ ಮಾಡಿದ್ದಾನೆ. ದೈಹಿಕವಾಗಿ ಸಮರ್ಥನಾಗಿರುವ ಪತಿ ಉದ್ಯೋಗವಿಲ್ಲವೆಂದು ಪತ್ನಿಯಿಂದ ಜೀವನಾಂಶ ಕೇಳಿದರೆ ಅದು ಸೋಮಾರಿತನಕ್ಕೆ ಉತ್ತೇಜನ ನೀಡಿದಂತೆ ಎಂದು ಹೈಕೋರ್ಟ್ ತಿಳಿಸಿದೆ.
ನಿರುದ್ಯೋಗದ ನೆಪವೊಡ್ಡಿ ಪತ್ನಿ ನೀಡುವ ಜೀವನಾಂಶದಿಂದ ಆರಾಮವಾಗಿ ಕಾಲ ಕಳೆಯಲು ಪತಿ ಬಯಸಿದಂತಿದೆ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅಭಿಪ್ರಾಯಪಟ್ಟಿದ್ದಾರೆ. ದೈಹಿಕವಾಗಿ, ಮಾನಸಿಕವಾಗಿ ಅಸಮರ್ಥನೆಂದು ಸಾಬೀತುಪಡಿಸದ ಹೊರತು ಪತ್ನಿಯಿಂದ ಪತಿ ಜೀವನಾಂಶ ಪಡೆಯಲಾಗದೆಂದೂ ಹೈಕೋರ್ಟ್ ಸ್ಪಷ್ಟಪಡಿಸಿದೆ. ನೈತಿಕ ದಾರಿಯಲ್ಲಿ ಹಣ ಸಂಪಾದಿಸಿ, ಪತ್ನಿ ಮಕ್ಕಳನ್ನು ಸಾಕುವುದು ಪತಿಯ ಕರ್ತವ್ಯ. ಬಳಸದೇ ತುಕ್ಕು ಹಿಡಿಯುವುದಕ್ಕಿಂತ, ಸವೆಸುವುದು ಉತ್ತಮ ಎಂಬ ಮಾತನ್ನು ಪತಿಗೆ ನೆನಪಿಸಿದ ಹೈಕೋರ್ಟ್ ಜೀವನಾಂಶ ಕೋರಿದ್ದ ಆತನ ಅರ್ಜಿಯನ್ನು ವಜಾಗೊಳಿಸಿದೆ.
ವರದಿ: ರಮೇಶ್ ಮಹದೇವ್ TV9 ಬೆಂಗಳೂರು
Published On - 3:11 pm, Tue, 24 January 23