ಉಪ ಲೋಕಾಯುಕ್ತರಾಗಿ ಹೈಕೋರ್ಟ್​ ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ನೇಮಕ

|

Updated on: Jun 24, 2024 | 8:13 PM

ಹೈಕೋರ್ಟ್​​ನ ನಿವೃತ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರನ್ನು ಕರ್ನಾಟಕದ ಉಪ ಲೋಕಾಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ಬಿ. ವೀರಪ್ಪ ಅವರು ಬಿಜೆಪಿ ಸರ್ಕಾರದ ಅವಧಿಯಲ್ಲಾದ ಪಿಎಸ್​ಐ ನೇಮಕಾತಿ ಹಗರಣದ ತನಿಖಾ ವರದಿ ಸಿದ್ದಗೊಳಿಸಿದ್ದರು.

ಉಪ ಲೋಕಾಯುಕ್ತರಾಗಿ ಹೈಕೋರ್ಟ್​ ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ನೇಮಕ
Follow us on

ಬೆಂಗಳೂರು, (ಜೂನ್ 24): ಕರ್ನಾಟಕ ಉಪ ಲೋಕಾಯುಕ್ತರಾಗಿ ಹೈಕೋರ್ಟ್​​ನ ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ (B Veerappa) ಅವರನ್ನು ನೇಮಕ ಮಾಡಲಾಗಿದೆ. ಈ ಹಿಂದೆ ಕರ್ನಾಟಕ ಹೈಕೋರ್ಟ್​ನ್ಯಾಯಮೂರ್ತಿಯಾಗಿದ್ದ ವೀರಪ್ಪ ಅವರು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ಅಧಿಕಾರವನ್ನು ರದ್ದುಗೊಳಿಸಿ ಲೋಕಾಯುಕ್ತ ಸಂಸ್ಥೆಯ ಅಧಿಕಾರವನ್ನು ಪುನರ್​ ಸ್ಥಾಪನೆ ಮಾಡಿದ್ದರು. ಅಲ್ಲದೇ ಬಿ. ವೀರಪ್ಪ ಅವರು ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಾದ ಪಿಎಸ್ಐ ನೇಮಕಾತಿ ಹಗರಣದ ತನಿಖಾ ವರದಿ ಸಿದ್ದಗೊಳಿಸಿ ಸಿಎಂ ಸಿದ್ದರಾಮಯ್ಯನವರಿಗೆ ಸಲ್ಲಸಿದ್ದರು. ಇದೀಗ ವೀರಪ್ಪ ಅವರನ್ನೇ ರಾಜ್ಯ ಸರ್ಕಾರ, ಕರ್ನಾಟಕ ಉಪ ಲೋಕಾಯುಕ್ತರನ್ನಾಗಿ ನೇಮಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು(ಜೂನ್ 24) ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಹಿರಿಯ ನ್ಯಾಯಾಧೀಶರ ಜೊತೆ ಸಭೆ ನಡೆಸಿದ್ದು, ಉಪ ಲೋಕಾಯುಕ್ತ ಆಯ್ಕೆ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದರು. ಸಭೆಯಲ್ಲಿ ಕರ್ನಾಟಕ ಮುಖ್ಯ ನ್ಯಾಯಮೂರ್ತಿ ದಿನೇಶ್ ಕುಮಾರ್ ಶೆಟ್ಟಿ, ಅಂಜಾರಿಯಾ, ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ, ವಿಪಕ್ಷ ನಾಯಕ ಆರ್.ಅಶೋಕ್, ಮುಖ್ಯ ಕಾರ್ಯದರ್ಶಿ ರಜನೀಶ್ ಗೊಯಲ್, ಸಭಾಪತಿ ಬಸವರಾಜ ಹೊರಟ್ಟಿ ಉಪಸ್ಥಿತರಿದ್ದರು.

ಕೋಲಾರದ ಶ್ರೀನಿವಾಸಪುರ ತಾಲೂಕಿನ ನಾಗದೇನಹಳ್ಳಿ ಗ್ರಾಮದ ವೀರಪ್ಪ ಅವರು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾಗಿ ಅತಿ ಹೆಚ್ಚು ವ್ಯಾಜ್ಯಗಳನ್ನು ಇತ್ಯರ್ಥಪಡಿಸುವ ಮೂಲಕ ದಾಖಲೆ ಬರೆದಿದ್ದಾರೆ. ಅಲ್ಲದೇ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಆದಾಯ ತಂದ ಸಂಚಾರಿ ನಿಯಮ ಉಲ್ಲಂಘನೆ ದಂಡದ ಮೇಲೆ ಶೇ 50ರಷ್ಟು ರಿಯಾಯಿತಿ ಘೋಷಿಸಿದ ರಾಜ್ಯ ಸರ್ಕಾರ ಕ್ರಮದಲ್ಲಿ ವೀರಪ್ಪ ಅವರ ಪಾತ್ರ ಪ್ರಮುಖವಾಗಿತ್ತು.

27 ವರ್ಷ ವಕೀಲರಾಗಿ ಆನಂತರ ಸುಮಾರು 8.5 ತಿಂಗಳು ನ್ಯಾಯಮೂರ್ತಿಯಾಗಿದ್ದರು. ಎಂಟು ಮುಖ್ಯಮಂತ್ರಿಗಳು, ಎಂಟು ಅಡ್ವೊಕೇಟ್ ಜನರಗಳ ಅಡಿ ಕೆಲಸ ಮಾಡಿದ್ದು, ಐವರು ಮುಖ್ಯ ನ್ಯಾಯಮೂರ್ತಿಗಳ ಮುಂದೆ ವಾದಿಸಿರುವುದಾಗಿ ಈ ಹಿಂದೆ ಬಿ.ವೀರಪ್ಪ ಅವರೇ ಹೇಳಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.

2021ರ ಅಕ್ಟೋಬರ್ 13ರಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್ಎಲ್ಎಸ್ಎ) ಕಾರ್ಯಕಾರಿ ಅಧ್ಯಕ್ಷರಾಗಿ ನೇಮಕವಾಗಿದ್ದ ಬಿ.ವೀರಪ್ಪ ಅವರು ಆರು ಲೋಕ ಅದಾಲತ್ ನಡೆಸಿದ್ದಾರೆ. 1.08 ಕೋಟಿ ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದಾರೆ.

ವೀರಪ್ಪ ಅವರು ರಾಜ್ಯದಲ್ಲಿ ಈ ಹಿಂದೆ ಕಾಂಗ್ರೆಸ್ ಸರ್ಕಾರ ಸ್ಥಾಪಿಸಿದ್ದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ರದ್ದುಪಡಿಸಿ, ಭ್ರಷ್ಟಾಚಾರ ತಡೆ ಕಾಯ್ದೆಯ ಅಧಿಕಾರವನ್ನು ಮತ್ತೆ ಲೋಕಾಯುಕ್ತಕ್ಕೆ ನೀಡಿದ್ದ ಹೈಕೋರ್ಟ್​ ಪೀಠದ ನೇತೃತ್ವವಹಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.