ಹೈಕೋರ್ಟ್​ ಚಾಟಿ: ನಾವು ನೇಣು ಹಾಕಿಕೊಳ್ಳಬೇಕಾ ಎಂದು ಕೇಳಿದ ಸದಾನಂದ ಗೌಡ, ನ್ಯಾಯಾಧೀಶರು ಸರ್ವಜ್ಞರಲ್ಲ ಎಂದ ಸಿ.ಟಿ.ರವಿ

|

Updated on: May 13, 2021 | 1:30 PM

ಆಕ್ಸಿಜನ್​ ಕೊರತೆಯ ವಿಚಾರದಲ್ಲಿ ನಮ್ಮಿಂದ ತಪ್ಪಾಗಿದೆ ಎಂದು ಒಪ್ಪಿಕೊಂಡಿರುವ ಸದಾನಂದ ಗೌಡ, ಆಕ್ಸಿಜನ್ ಕೊರತೆಯಿಂದ ಮೃತಪಟ್ಟ ಸಣ್ಣಪುಟ್ಟ ಘಟನೆ ಕೆಲವೆಡೆ ನಡೆದಿದೆ. ಹೌದು ನಮ್ಮಿಂದ ತಪ್ಪಾಗಿದೆ. ಈಗ ರಾಜಕಾರಣದಲ್ಲಿ ಅಂತಃಕರಣ ಇದೆ ಎಂದು ತೋರಿಸಬೇಕಿದೆ ಎನ್ನುವುದಾಗಿ ಹೇಳಿಕೆ ನೀಡಿದ್ದಾರೆ.

ಹೈಕೋರ್ಟ್​ ಚಾಟಿ: ನಾವು ನೇಣು ಹಾಕಿಕೊಳ್ಳಬೇಕಾ ಎಂದು ಕೇಳಿದ ಸದಾನಂದ ಗೌಡ, ನ್ಯಾಯಾಧೀಶರು ಸರ್ವಜ್ಞರಲ್ಲ ಎಂದ ಸಿ.ಟಿ.ರವಿ
ಸದಾನಂದ ಗೌಡ, ಸಿ.ಟಿ.ರವಿ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಕೊರೊನಾ ಲಸಿಕೆ ವಿಚಾರದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಛೀಮಾರಿ ಹಾಕಿದ ನಂತರ ವಿಧಾನಸೌಧದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಸರ್ಕಾರದ ಪರ ವಹಿಸಿ ಮಾತನಾಡಿರುವ ಇಬ್ಬರೂ ದೇಶದ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಕೊವಿಡ್ ನಿಯಂತ್ರಣಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇವೆ. ರಾಜ್ಯಕ್ಕೆ ಬೇಕಾದ ಹಣಕಾಸು, ಆಕ್ಸಿಜನ್, ಔಷಧಿಯ ನೆರವು ಸೇರಿದಂತೆ ನಮ್ಮಿಂದ ಏನೇನು ಸಾಧ್ಯವೋ ಎಲ್ಲವನ್ನೂ ಮಾಡುತ್ತಿದ್ದೇವೆ. ಈಗ ಕೊವಿಡ್ ಲಸಿಕೆಯ ಕೊರತೆ ದೊಡ್ಡ ಸಮಸ್ಯೆಯಾಗಿದೆ. ಆರಂಭದಲ್ಲಿ ಟೀಕೆಗಳ ಮಧ್ಯೆ ಬೇರೆ ದೇಶಗಳಿಗೆ ಲಸಿಕೆ ನೆರವು ನೀಡಿದ್ದೆವು. ಇದೀಗ ಹಲವು ದೇಶಗಳು ನಮಗೆ ನೆರವು ನೀಡುತ್ತಿವೆ ಎಂದು ಹೇಳಿದ್ದಾರೆ.

ಈ ವೇಳೆ ಹೈಕೋರ್ಟ್​ ತರಾಟೆಗೆ ತೆಗೆದುಕೊಂಡ ಬಗ್ಗೆ ಪ್ರತಿಕ್ರಿಯಿಸುರುವ ಸದಾನಂದ ಗೌಡ, ನಾಳೆಯೇ ಲಸಿಕೆ ಕೊಡಬೇಕೆಂದು ಕೋರ್ಟ್ ಹೇಳುತ್ತೆ. ಉತ್ಪಾದನೆ ಆಗದಿದ್ದರೆ ನಾವು ನೇಣು ಹಾಕಿಕೊಳ್ಳಬೇಕಾ? ನಾವು ಯಾವುದನ್ನೂ ರಾಜಕೀಯ ಲಾಭಕ್ಕಾಗಿ‌ ಮಾಡಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಕೆಲ ರಾಷ್ಟ್ರಗಳಿಂದ ಕಚ್ಚಾ ಸಾಮಗ್ರಿ ಬರಲು ತಡವಾಯ್ತು. ಹೀಗಾಗಿ ಸಮಸ್ಯೆ ಆಗುತ್ತೆ. ಈಗ ನಾಳೆಯೇ ಲಸಿಕೆ ನೀಡಿ ಎನ್ನುತ್ತಾರೆ. ಆದರೆ, ಉತ್ಪಾದನೆಯೇ ಆಗದಿದ್ದರೆ ನಾವು ನೇಣುಹಾಕಿಕೊಳ್ಳಬೇಕಾ ಎಂದು ಪ್ರಶ್ನಿಸಿದ್ದಾರೆ.

ನ್ಯಾಯಾಧೀಶರು ಸರ್ವಜ್ಞರಲ್ಲ: ಸಿ.ಟಿ.ರವಿ
ಇದೇ ವಿಚಾರವಾಗಿ ಮಧ್ಯಪ್ರವೇಶಿಸಿ ಮಾತನಾಡಿರುವ ಸಿ.ಟಿ.ರವಿ, ನ್ಯಾಯಾಧೀಶರು ಸರ್ವಜ್ಞರಲ್ಲ. ತಜ್ಞರ ಕಮಿಟಿ ನೀಡಿದ ವರದಿ ಆಧರಿಸಿ ಕೆಲಸ ಮಾಡುವುದಾಗಿ ಕೇಂದ್ರ ಹೇಳಿದೆ. ಸುಪ್ರಿಂಕೋರ್ಟ್ ಕೂಡ ಇದನ್ನ ಒಪ್ಪಿದೆ. ಬಾಧಿಸುತ್ತಿರುವ ವೈರಾಣುವಿನ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದ್ದು ನಮ್ಮ ಸಿದ್ದತೆ ಸಾಕಾಗಿಲ್ಲ ಎನ್ನುವುದನ್ನು ನಾವು ಒಪ್ಪುತ್ತೇವೆ. ಆದರೆ, ಸಾವು, ಸಾಂಕ್ರಾಮಿಕ ರೋಗ ಮುಂದಿಟ್ಟು ವಿಕೃತ ಆನಂದ ಪಡೆಯಲಾಗುತ್ತಿರುವುದು ದುರಂತ. ರೋಗದ ವಿಷಯದಲ್ಲಿ ರಾಜಕಾರಣ ಮಾಡಲಾಗುತ್ತಿದೆ. ಈಗ ಈ ಸಾವು ನೋವಿಗೆ ಚೈನಾ ವೈರಸ್ ಅನ್ನು ದೂರಬೇಕೇ ಹೊರತು ನರೇಂದ್ರ ಮೋದಿಯವರನ್ನಲ್ಲ. ವಿದೇಶಗಳ ಜನಸಂಖ್ಯೆ ಹಾಗೂ ಮರಣದ ಪ್ರಮಾಣ ಹೋಲಿಸಿ ನೋಡಲಿ. ಇಟಲಿಯನ್ನೇ ಬೇಕಿದ್ದರೆ ಗಮನಿಸಿ. ಅಲ್ಲಿ ನರೇಂದ್ರ ಮೋದಿ ಪ್ರಧಾನಿಯಲ್ಲ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಪ್ರತಿಭಟನೆಯಿಂದ ಕೊರೊನಾ ಸೋಂಕು ಹೋಗುವುದಾದರೆ ವಿಪಕ್ಷಗಳು ಬೀದಿಯಲ್ಲಿ ನಿಂತು ಪ್ರತಿಭಟನೆ ಮಾಡಲಿ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಪ್ರತಿಭಟಿಸುವ ಬದಲು ನಿಯೋಗದ ಜತೆ ತೆರಳಿ ಮುಖ್ಯಮಂತ್ರಿ, ಸಚಿವರ ಜತೆ ಚರ್ಚಿಸಲಿ ಎಂದು ಹೇಳಿರುವ ಸದಾನಂದ ಗೌಡ, ರೆಮ್‌ಡಿಸಿವಿರ್‌ಗೆ ಅಮೆರಿಕದ ಕಂಪನಿಯ ಪೇಟೆಂಟ್ ಇದೆ. ಭಾರತದ 7 ಕಂಪನಿಗಳಿಗೆ ತಯಾರಿಕೆ ಅನುಮತಿ ಇದೆ. ಕಳೆದ ಬಾರಿ ಕೊವಿಡ್ ಕಡಿಮೆಯಾದಾಗ ಆ ಕಂಪನಿಗಳು ರೆಮ್‌ಡಿಸಿವಿರ್‌ ಉತ್ಪಾದನೆಯನ್ನು ಕಡಿಮೆ ಮಾಡಿದ್ದವು. ರೆಮ್‌ಡಿಸಿವಿರ್‌ ಸೆಲ್ಫ್‌ ಲೈಫ್ ಕೇವಲ 3 ತಿಂಗಳು ಮಾತ್ರ. ಮೊದಲ ಅಲೆಯಲ್ಲಿ 23 ಲಕ್ಷ ವಯಲ್ಸ್ ಉತ್ಪಾದನೆಯಾಗಿತ್ತು. ಈಗ 1.05 ಕೋಟಿ ವಯಲ್ಸ್ ಉತ್ಪಾದನೆಯಾಗುತ್ತಿದೆ. ರೆಮ್‌ಡಿಸಿವಿರ್‌ ಇಂಜೆಕ್ಷನ್ ರಫ್ತಿಗೆ ನಿಷೇಧ ಹೇರಿದ್ದೇವೆ. ಇವತ್ತು ದೇಶದ ಯಾವುದೇ ರಾಜ್ಯದಲ್ಲಿ ಸಮಸ್ಯೆ ಇಲ್ಲ. ಕರ್ನಾಟಕಕ್ಕೆ 5 ಲಕ್ಷ ರೆಮ್‌ಡಿಸಿವಿರ್‌ ನೀಡುತ್ತಿದ್ದೇವೆ. ಡಿಜಿಸಿಆರ್ ಸೂಚನೆ ನೀಡಿ ಕಾಳಸಂತೆ ನಿಲ್ಲಿಸುತ್ತಿದ್ದೇವೆ ಎಂದು ಪರಿಸ್ಥಿತಿ ಸುಧಾರಿಸುತ್ತಿರುವುದಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ.

ಇನ್ನೊಂದು ವಾರದೊಳಗೆ ಸಮಸ್ಯೆ ಬಗೆಹರಿಯಲಿದೆ
ಮೊದಲು 45 ವರ್ಷಕ್ಕಿಂತ ಹೆಚ್ಚು ವಯೋಮಿತಿಯವರಿಗೆ ಲಸಿಕೆ ನೀಡಲು ಮುಂದಾದಾಗ ಜನರಲ್ಲಿ ಒಂದು ರೀತಿಯ ವಾತವಾರಣ ಸೃಷ್ಠಿಯಾಗಿತ್ತು. ಆಗ ಸಾಕಷ್ಟು ವ್ಯಾಕ್ಸಿನ್ ಒದಗಿಸಿದ್ದೆವು. ಆದರೆ, ಗೊಂದಲದಿಂದಾಗಿ ಶೇ.52 ರಷ್ಟು ಜನರು ಮಾತ್ರ ಲಸಿಕೆ ತೆಗೆದುಕೊಂಡರು. ಹೀಗಾಗಿ ಹದಿನೆಂಟು ವರ್ಷ ಮೇಲ್ಪಟ್ಟವರಿಗೆ ಕೊಡಲು ತೀರ್ಮಾನ ಮಾಡಲಾಯಿತು. ಆದರೆ, ಎರಡನೇ ಅಲೆ ಜೋರಾದ ನಂತರ ಜನ ಲಸಿಕೆಗಾಗೆ ಮುಗಿಬಿದ್ದರು. ಹೀಗಾಗಿ ಲಸಿಕೆ ಕೊರತೆ ಆಯಿತು. 18 ವರ್ಷ ಮೇಲ್ಪಟ್ಟವರಿಗೆ ತೊಂದರೆ ಆಗಿದೆ ಎನ್ನುವುದು ನಿಜ. ಹೀಗಾಗಿ ಲಸಿಕೆ ಉತ್ಪಾದನೆ ಹೆಚ್ಚಿಸಲಾಗುವುದು. ಪ್ರಧಾನ ಮಂತ್ರಿಗಳ ಕಚೇರಿ ಇದನ್ನು ನಿರ್ವಹಣೆ ಮಾಡುತ್ತಿದೆ. ಇನ್ನೊಂದು ವಾರದೊಳಗೆ ಸಮಸ್ಯೆ ಬಗೆಹರಿಯಲಿದೆ ಎಂದು ವಿವರಿಸಿದ್ದಾರೆ.

ಕರ್ನಾಟಕಕ್ಕೆ ಲಸಿಕೆ ಪೂರೈಕೆ ಬಗ್ಗೆ ಮಾತನಾಡಿ, ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕಕ್ಕೆ ಹೆಚ್ಚು ಔಷಧ ನೀಡಲಾಗಿದೆ. ಇದನ್ನ ಪೂರೈಕೆ ಮಾಡುತ್ತಿರುವುದು ಆರೋಗ್ಯ ಇಲಾಖೆ. ನಿಗದಿಪಡಿಸುತ್ತಿರುವುದು ಕೇಂದ್ರ ಸರ್ಕಾರ. ಸದ್ಯ ಬ್ಲಾಕ್​ ಫಂಗಸ್​ ಕಾರಣದಿಂದ ಎಂಪೋಟೆರಿಸಿಯಮ್ ಎಂಬ ಔಷಧಕ್ಕೆ ದೊಡ್ಡ ರೀತಿಯಲ್ಲಿ ಬೇಡಿಕೆ ಬಂದಿದೆ. ರಾಜ್ಯಕ್ಕೆ ಕೂಡ ಈ ಔಷಧಿ ಕೊಡಲಾಗುತ್ತಿದೆ. ಆದರೆ, ಐವೆರ್ಮೆಕ್ಟಿನ್​ ಔಷಧಕ್ಕೆ ಸ್ವಲ್ಪ ಸಮಸ್ಯೆ ಇದೆ. ಇದು ಮುಂಜಾಗ್ರತಾ ಕ್ರಮವಾಗಿ ಪಡೆಯುವ ಔಷಧವಾಗಿದ್ದು, ಗೋವಾದಲ್ಲಿ ಬೇಡಿಕೆ ಇದೆ. ಇದನ್ನೂ ಸಮರ್ಪಕವಾಗಿ ನಿರ್ವಹಿಸಲು ಕ್ರಮಕೈಗೊಂಡಿದ್ದೇವೆ. ಯಾವುದೇ ಕಾರಣಕ್ಕೂ ಔಷಧಗಳ ವಿಚಾರದಲ್ಲಿ ರಾಜಿಯಾಗಬಾರದೆಂದು ಪ್ರಧಾನ ಮಂತ್ರಿ ಸೂಚಿಸಿದ್ದಾರೆ. ವಿದೇಶಾಂಗ ಸಚಿವಾಲಯ, ಕಾಮರ್ಸ್ ಡಿಪಾರ್ಟ್​ಮೆಂಟ್ ಕೂಡ ಸಹಾಯ ಮಾಡಿದೆ. ದೆಹಲಿಯಲ್ಲಿ ಕೂತು ಎಲ್ಲಾ ಇಲಾಖೆಗಳ‌ ಜೊತೆ ಸೇರಿ ನಿರ್ವಹಣೆ ಮಾಡುತ್ತೇವೆ ಎಂದಿದ್ದಾರೆ.

ಹೌದು ನಮ್ಮಿಂದ ತಪ್ಪಾಗಿದೆ. ಈಗ ರಾಜಕಾರಣದಲ್ಲಿ ಅಂತಃಕರಣ ಇದೆ ಎಂದು ತೋರಿಸಬೇಕಿದೆ
ಆಕ್ಸಿಜನ್​ ಕೊರತೆಯ ವಿಚಾರದಲ್ಲಿ ನಮ್ಮಿಂದ ತಪ್ಪಾಗಿದೆ ಎಂದು ಒಪ್ಪಿಕೊಂಡಿರುವ ಸದಾನಂದ ಗೌಡ, ಆಕ್ಸಿಜನ್ ಕೊರತೆಯಿಂದ ಮೃತಪಟ್ಟ ಸಣ್ಣಪುಟ್ಟ ಘಟನೆ ಕೆಲವೆಡೆ ನಡೆದಿದೆ. ಹೌದು ನಮ್ಮಿಂದ ತಪ್ಪಾಗಿದೆ. ಈಗ ರಾಜಕಾರಣದಲ್ಲಿ ಅಂತಃಕರಣ ಇದೆ ಎಂದು ತೋರಿಸಬೇಕಿದೆ ಎನ್ನುವುದಾಗಿ ಹೇಳಿಕೆ ನೀಡಿದ್ದಾರೆ. ಅಲ್ಲದೇ, ಆರಂಭದಲ್ಲಿ ಆಕ್ಸಿಜನ್ ಬಳಕೆ ಆಧಾರದ ಮೇಲೆ ಮೆಡಿಸಿನ್ ಸರಬರಾಜು ಇತ್ತು. ಆ‌ ಬಳಿಕ ಸಕ್ರಿಯ ಪ್ರಕರಣಗಳ ಆಧಾರದಲ್ಲೇ ಸರಬರಾಜು ಮಾಡಲಾಗುತ್ತಿದೆ. ಮೊದಲನೇ ಅಲೆಯ ವೇಳೆ ಆಕ್ಸಿಜನ್ ಕೊರತೆ ಆಗಿರಲಿಲ್ಲ. ಈ ಬಾರಿಯೂ ಉತ್ಪಾದನೆ, ಪೂರೈಕೆ ಎಲ್ಲಾ ಮಾಡಿದ್ದೇವೆ. ಮೇ 11 ರಂದು 1015 ಮೆಟ್ರಿಕ್ ಟನ್ ಆಕ್ಸಿಜನ್​ ಕೇಂದ್ರದಿಂದ ಕರ್ನಾಟಕ ರಾಜ್ಯಕ್ಕೆ ನಿಗದಿ ಆಗಿದೆ. 500 ಮೆಟ್ರಿಕ್ ಟನ್ ಆಕ್ಸಿಜನ್ ಕಂಟೈನರ್ ಇಂದು ರಾಜ್ಯಕ್ಕೆ ಬರಲಿದೆ. ಎರಡು ಆಕ್ಸಿಜನ್ ಜನರೇಟರ್ ಯಾದಗಿರಿಗೆ ಬಂದಿದೆ, ಇನ್ನೊಂದು ಕೆಜಿಎಫ್​ಗೆ ಬಂದಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ, ಕೇಂದ್ರ ಸರ್ಕಾರ ಸುಪ್ರಿಂ‌ಕೋರ್ಟ್​ಗೆ ಎಲ್ಲದರಲ್ಲೂ ಮುಗುತೂರಿಸಿದರೆ ಕೆಲಸ ಮಾಡಲು ನಮಗೆ ಕೈ ಕಟ್ಟಿ ಹಾಕಿದಂತೆ ಆಗುತ್ತೆ ಎಂದು ತಿಳಿಸಿದೆ ಎನ್ನುವುದನ್ನೂ ಹೇಳಿದ್ದಾರೆ.

ಇದನ್ನೂ ಓದಿ:
Vaccine Shortage: ರಾಜ್ಯದಲ್ಲಿ 2ನೇ ಡೋಸ್ ವ್ಯಾಕ್ಸಿನ್ ಕೊರತೆ, ಲಸಿಕೆ ಒದಗಿಸದ ಸರ್ಕಾರಕ್ಕೆ ಹೈಕೋರ್ಟ್ ತರಾಟೆ