ಕೋವಿಡ್​ ಸಂಬಂಧಿತ ಅರ್ಜಿಗಳನ್ನ ಹಾಕಿದ್ರೆ ವಕೀಲರಿಂದಲೇ ವೆಚ್ಚ ವಸೂಲಿ ಮಾಡ್ತೇವೆ: ಕರ್ನಾಟಕ ಹೈಕೋರ್ಟ್ ಎಚ್ಚರಿಕೆ

|

Updated on: May 14, 2021 | 3:43 PM

ರಾಜ್ಯದಲ್ಲಿ ಮಹಾಸೋಂಕು ಅವತರಿಸಿದೆ. ಈ ಕಾಲ ಘಟ್ಟದಲ್ಲಿ ಬಡತನ ರೇಖೆಗಿಂತ ಕೆಳಗೆ ಇರುವವರಿಗಾಗಿ (BPL) ಆಹಾರ ಸಾಮಾಗ್ರಿ ನೀಡುವಂತೆ ಆದೇಶಿಸಬೇಕು ಎಂದು ಕೋರಿ ಅಡ್ವೊಕೇಟ್ ರಮೇಶ್​ ನಾಯ್ಕ್​ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಪೀಠ ಇದನ್ನು ಉಲ್ಲೇಖಿಸಿತು.

ಕೋವಿಡ್​ ಸಂಬಂಧಿತ ಅರ್ಜಿಗಳನ್ನ ಹಾಕಿದ್ರೆ ವಕೀಲರಿಂದಲೇ ವೆಚ್ಚ ವಸೂಲಿ ಮಾಡ್ತೇವೆ: ಕರ್ನಾಟಕ ಹೈಕೋರ್ಟ್ ಎಚ್ಚರಿಕೆ
ಕರ್ನಾಟಕ ಹೈಕೋರ್ಟ್
Follow us on

ಬೆಂಗಳೂರು: ಕೋವಿಡ್ ​ಸಂಬಂಧಿತ ನಾನಾ ಅರ್ಜಿಗಳನ್ನ ಹಾಕಿದ್ರೆ ವಕೀಲರಿಂದಲೇ ವೆಚ್ಚ ವಸೂಲಿ ಮಾಡುತ್ತೇವೆ ಎಂದು ಕರ್ನಾಟಕ ಹೈಕೋರ್ಟ್ ವಕೀಲರಿಗೆ ಎಚ್ಚರಿಕೆ ನೀಡಿದೆ. ಕರ್ನಾಟಕ ವಕೀಲರ ಒಕ್ಕೂಟದ ಸದಸ್ಯರು ಕೋವಿಡ್ ಸಂಬಂಧಿತ ಆದೇಶಗಳನ್ನು ಸರಿಯಾಗಿ ಓದಿ ಅರ್ಥೈಸಿಕೊಳ್ಳುತ್ತಿಲ್ಲ ಎಂದು ವಿಷಾದಿಸಿರುವ ಹೈಕೋರ್ಟ್ ಕೋವಿಡ್ ​ಸಂಬಂಧಿತ ನಾನಾ ಅರ್ಜಿಗಳನ್ನ ಸಲ್ಲಿಸುವುದರ ವಿರುದ್ಧ ಗರಂ ಆಗಿದೆ. ಅಂತಹ ವಕೀಲರ ವಿರುದ್ಧ 25 ಸಾವಿರ ರೂಪಾಯಿ ಜುಲ್ಮಾನೆ ವಿಧಿಸುವ ಬಗ್ಗೆ ಎಚ್ಚರಿಕೆ ನೀಡಿದ ಪ್ರಸಂಗ ಇತ್ತೀಚೆಗೆ ನಡೆದಿದೆ.

ಕೋವಿಡ್ ​ಸಂಬಂಧ ಅನೇಕ ಅರ್ಜಿಗಳನ್ನ ಹಾಕಲಾಗಿದೆ. ಅಂತಹವರನ್ನು ಎಚ್ಚರಿಸಲು ಕೋವಿಡ್ 19 ಪರಿಹಾರಕ್ಕಾಗಿ ಇರುವ ಸಿಎಂ ಕೇರ್ ಫಂಡ್ ಗೆ ಸಲ್ಲಿಕೆಯಾಗುವಂತೆ ಠೇವಣಿ ಹಣ ನೀಡುವಂತೆ ಅರ್ಜಿದಾರರಿಗೆ ಆದೇಶಿಸುವುದಾಗಿ ಚೀಫ್ ಜಸ್ಟೀಸ್ ಶ್ರೀನಿವಾಸ ಓಕಾ ಮತ್ತು ಜಸ್ಟೀಸ್ ಅರವಿಂದ್​ ಕುಮಾರ್​ ಅವರ ನ್ಯಾಯಪೀಠವು ಎಚ್ಚರಿಸಿದೆ.

ರಾಜ್ಯದಲ್ಲಿ ಮಹಾಸೋಂಕು ಅವತರಿಸಿದೆ. ಈ ಕಾಲ ಘಟ್ಟದಲ್ಲಿ ಬಡತನ ರೇಖೆಗಿಂತ ಕೆಳಗೆ ಇರುವವರಿಗಾಗಿ (BPL) ಆಹಾರ ಸಾಮಾಗ್ರಿ ನೀಡುವಂತೆ ಆದೇಶಿಸಬೇಕು ಎಂದು ಕೋರಿ ಅಡ್ವೊಕೇಟ್ ರಮೇಶ್​ ನಾಯ್ಕ್​ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಪೀಠ ಇದನ್ನು ಉಲ್ಲೇಖಿಸಿತು. ರಾಜ್ಯದಲ್ಲಿ ಕೋವಿಡ್​ 19 ಪರಿಸ್ಥಿತಿ ಬಗ್ಗೆ ಹೈಕೋರ್ಟ್ ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದು, ಅದರಲ್ಲಿ ತಾನು ಪ್ರವೇಶಿಸುವುದಕ್ಕೆ ಅಡ್ವೊಕೇಟ್ ರಮೇಶ್​ ನಾಯ್ಕ್​ ಮನನಿ ಮಾಡಿದ್ದರು.

ಚೀಫ್ ಜಸ್ಟೀಸ್ ಶ್ರೀನಿವಾಸ ಓಕಾ ಅವರ ನ್ಯಾಯಪೀಠವು ಹೈಕೋರ್ಟ್ ಸ್ವಯಂ ದಾಖಲಿಸಿಕೊಂಡಿರುವ ಪ್ರಕರಣದ ಬಗ್ಗೆ ಗುರುವಾರ ಬೆಳಗ್ಗೆ ವಿಚಾರಣೆ ನಡೆಸುತ್ತಿದ್ದಾಗ ತತ್ಸಂಬಂಧಿತ ಅನೇಕ ಪ್ರಕರಣಗಳು ವಿಚಾರಣೆಗೆ ಲಿಸ್ಟ್​ ಆಗಿರುವುದನ್ನು ಗಮನಿಸಿ, ಅಸಮಾಧಾನ ವ್ಯಕ್ತಪಡಿಸಿತು. ತಕ್ಷಣ, ಅಡ್ವೊಕೇಟ್​ಗಳೆಲ್ಲಾ ಅರ್ಜಿ ಸಲ್ಲಿಸುವ ಮುನ್ನ, ನ್ಯಾಯಾಲಯ ನೀಡಿರುವ ಆದೇಶಗಳನ್ನು ಪರಾಮರ್ಷಿಸಬೇಕು. ಇತ್ತೀಚೆಗೆ ಎಲ್ಲರಿಗೂ ಆಟವಾಗಿಬಿಟ್ಟಿದೆ. ಎಲ್ಲರೂ ಕೋವಿಡ್​ ಸಂಬಂಧಿತ ವಿಷಯಗಳನ್ನು ತೆಗೆದುಕೊಂಡು ಅರ್ಜಿಗಳನ್ನು ಹಾಕುವುದು ಸಾಮಾನ್ಯವಾಗಿಬಿಟ್ಟಿದೆ ಎಂದು ಎಚ್ಚರಿಸಿದರು.

ಕೋವಿಡ್​ ಸಂಬಂಧಿತ ವಿಷಯದಲ್ಲಿ ಹೈಕೋರ್ಟ್ ಸ್ವಯಂ ದಾಖಲಿಸಿಕೊಂಡಿರುವ ಪ್ರಕರಣದ ಆಲಿಕೆ ವೇಳೆ, ಕೊರೊನಾ ಸೋಂಕು ಹರಡುವಿಕೆಯ ವಿರುದ್ಧದ ಹೋರಾಟದಲ್ಲಿ ನಾನಾ ಸಲಹೆಗಳನ್ನು ನೀಡುತ್ತಾ ಅನೇಕ ಅಡ್ವೊಕೇಟ್​ಗಳು ಕೋರ್ಟ್​ಗೆ ಅರ್ಜಿಗಳನ್ನು ಹಾಕುತ್ತಿದ್ದಾರೆ ಎಂದು ಅಮಿಕಸ್​ ಕ್ಯೂರಿ ವಿಕ್ರಂ ಹುಯಿಲಗೋಳ ಕೋರ್ಟ್​ ಗಮನಕ್ಕೆ ತಂದರು.

(Karnataka High Court warns to impose costs on lawyers who file multiple coronavirus petitions)

Published On - 3:40 pm, Fri, 14 May 21