ಹಿಜಾಬ್ ವಿವಾದ ಆರಂಭವಾಗಿ, ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ಇದೀಗ ಇಡೀ ರಾಜ್ಯದ ಜನ ಕೋರ್ಟ್ ತೀರ್ಮಾನಕ್ಕಾಗಿ ಕಾದು ಕುಳಿತಿದ್ದಾರೆ. ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ (Hijab) ಧರಿಸಿಯೇ ತರಗತಿಗೆ ಬರುತ್ತೇವೆ ಅಂತ ಪಟ್ಟು ಹಿಡಿದಿದ್ದಾರೆ. ಶಾಲೆ ಸಿಬ್ಬಂದಿ ಹಿಜಾಬ್ ತೆಗೆದು ಬಂದರೆ ಮಾತ್ರ ತರಗತಿಗೆ ಅವಕಾಶ ಸಿಗುತ್ತದೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಒಪ್ಪದ ವಿದ್ಯಾರ್ಥಿನಿಯರು ಹಿಜಾಬ್ಗಾಗಿ ತರಗತಿ ಬಹಿಷ್ಕರಿಸಿ ಮನೆಗೆ ವಾಪಾಸಾಗಿದ್ದಾರೆ. ಈ ನಡುವೆ ರಾಜ್ಯದ ಪಿಯು ಕಾಲೇಜುಗಳಲ್ಲಿ ಇಂದಿನಿಂದ ಪ್ರಾಯೋಗಿಕ ಪರೀಕ್ಷೆ ಆರಂಭವಾಗಿದೆ. ಹಿಜಾಬ್ ವಿವಾದದಿಂದ ಪರೀಕ್ಷೆಗೆ ಗೈರಾದರೆ ಮತ್ತೊಮ್ಮೆ ಪ್ರಾಯೋಗಿಕ ಪರೀಕ್ಷೆ ಬರೆಯಲು ಅವಕಾಶವಿಲ್ಲ. ಹೀಗಾಗಿ ಹಿಜಾಬ್ ವಿವಾದದಿಂದ ಗೈರಾದರೆ ವಿದ್ಯಾರ್ಥಿನಿಯರಿಗೆ ಸಂಕಷ್ಟ ಎದುರಾಗಲಿದೆ. ಈ ಎಲ್ಲಾ ಸಮಸ್ಯೆಗಳ ನಡುವೆ ಕೋರ್ಟ್ನಲ್ಲಿ ಹಿಜಾಬ್ ಪ್ರಕರಣದ ವಿಚಾರಣೆ ಇಂದು ಮುಕ್ತಾಯಗೊಂಡಿದೆ. ಪ್ರಕರಣವನ್ನು ಮತ್ತೆ ನಾಳೆಗೆ (ಫೆಬ್ರವರಿ 22) ಮುಂದೂಡಿ ಹೈಕೋರ್ಟ್ ಆದೇಶ ನೀಡಿದೆ.
ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಯನ್ನು ನಾಳೆ (ಫೆಬ್ರವರಿ 22) ಮಧ್ಯಾಹ್ನ 2.30ಕ್ಕೆ ಮುಂದೂಡಿ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ಇಂದು (ಫೆಬ್ರವರಿ 21) ನಡೆದ ವಿಚಾರಣೆಯಲ್ಲಿ ಎಜಿ ಪ್ರಭುಲಿಂಗ್ ನಾವದಗಿ ವಾದ ಮಂಡಿಸಿದ್ದಾರೆ. ಹಿಜಾಬ್ ಧರಿಸುವುದು ಧಾರ್ಮಿಕ ಅತ್ಯಗತ್ಯ ಅಂಶವೇ ಎಂಬ ಬಗ್ಗೆ ವಾದ ಮಾಡಿದ್ದಾರೆ. ಖುರಾನ್ನಲ್ಲಿ ಅಗತ್ಯ ಎಂದು ಉಲ್ಲೇಖಿಸಿದ್ದರೂ ಕೋರ್ಟ್ ತಿರಸ್ಕರಿಸಿರುವ ಅಂಶಗಳಿರುವ ಕೆಲವು ತೀರ್ಪು ಉಲ್ಲೇಖಿಸಿ ವಾದಿಸಿದ್ದಾರೆ.
ಎಲ್ಲ ಮಹಿಳೆಯರಿಗೂ ಹಿಜಾಬ್ ಧರಿಸುವುದು ಕಡ್ಡಾಯವೇ? ಇದನ್ನು ಅರ್ಜಿದಾರರೇ ಸಾಬೀತು ಮಾಡಬೇಕು ಎಂದು ಎಜಿ ಹೇಳಿದ್ದಾರೆ. ಹಿಜಾಬ್ ಕಡ್ಡಾಯವೆಂಬುದಕ್ಕೆ ಆಧಾರಗಳಿಲ್ಲ. ಅರ್ಜಿದಾರರು ಒಂದೇ ಒಂದು ದಾಖಲೆಯನ್ನೂ ನೀಡಿಲ್ಲ. ಅವರು ಶೂನ್ಯ ಸಾಕ್ಷ್ಯ ನೀಡಿ ಹಿಜಾಬ್ ಪರ ಆದೇಶ ಕೇಳುತ್ತಿದ್ದಾರೆ. ಖುರಾನ್ ಉಲ್ಲೇಖಿಸಿದ ಆಚರಣೆಗಳ ಪರವಾಗಿ ಹಿಂದೆಯೂ ಅರ್ಜಿ ಇತ್ತು. ಈ ಹಿಂದೆ ನಾಲ್ಕು ಘಟನೆಗಳಲ್ಲಿ ಸುಪ್ರೀಂಕೋರ್ಟ್ ನಿರಾಕರಿಸಿದೆ. ಪ್ರಾಣಿ ಬಲಿ ಇಸ್ಲಾಂನ ಅತ್ಯಗತ್ಯ ಭಾಗವೆಂದು ಘೋಷಿಸಲು ನಿರಾಕರಿಸಿದೆ. ಬಹುಪತ್ನಿತ್ವ ಇಸ್ಲಾಂನ ಅತ್ಯಗತ್ಯ ಭಾಗ ಎಂಬುದನ್ನು ಒಪ್ಪಿಲ್ಲ. ಬಾಬ್ರಿ ಮಸೀದಿ ಪ್ರಕರಣದಲ್ಲೂ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ತ್ರಿವಳಿ ತಲಾಖ್ ಪ್ರಕರಣದಲ್ಲೂ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ವಕ್ಫ್ ಆಸ್ತಿಯಲ್ಲಿನ ಹೋಟೆಲ್ ನಲ್ಲಿ ವೈನ್, ಹಂದಿಮಾಂಸ ಪೂರೈಕೆ ಬಗ್ಗೆ ಇದು ಹರಾಮ್ ಎಂದು ಲೀಸ್ ಅಂತ್ಯಗೊಳಿಸಲಾಗಿತ್ತು ಎಂದು ಕೋರ್ಟ್ ಹೋಟೆಲ್ ಪರವಾಗಿ ತೀರ್ಪು ನೀಡಿದೆ ಎಂದು ಎಜಿ ವಾದಿಸಿದ್ದಾರೆ.
ಆಚರಣೆ ಆ ಧರ್ಮದಲ್ಲಿ ಕೇವಲ ಆಯ್ಕೆಯೋ, ಕಡ್ಡಾಯ ಆಚರಣೆಯೋ ಎಂಬುದನ್ನೂ ಪರಿಶೀಲಿಸಬೇಕು. ಕೇವಲ ಆಯ್ಕೆಯ ಆಚರಣೆಗೆ ಸಂವಿಧಾನದ ರಕ್ಷಣೆ ಇಲ್ಲ. ಹಿಜಾಬ್ ಪ್ರಕರಣದಲ್ಲೂ ಕೆಲ ಪರೀಕ್ಷೆಗಳಿವೆ. ಮೊದಲನೆಯದಾಗಿ ಧರ್ಮದ ಮೂಲಭೂತ ಆಚರಣೆಯೇ ನೋಡಬೇಕು. ಎರಡನೆಯದಾಗಿ ಆ ಆಚರಣೆ ಪಾಲಿಸದಿದ್ದರೆ ಧರ್ಮದ ಸ್ವರೂಪ ಬದಲಾಗುವುದೇ. ಮೂರನೆಯದಾಗಿ ಧರ್ಮದ ಎಲ್ಲ ಚಟುವಟಿಕೆಗಳೂ ಆಚರಣೆಗಳಾಗುವುದಿಲ್ಲ. ನಾಲ್ಕನೆಯದಾಗಿ ಆ ಆಚರಣೆಯೇ ಧರ್ಮದ ತಳಹದಿಯಾಗಿರಬೇಕು. ಐದನೆಯದಾಗಿ ಧರ್ಮದ ಸಮಕಾಲೀನವಾಗಿರುವ ಆಚರಣೆಯಾಗಿರಬೇಕು. ಆರನೆಯದಾಗಿ ಆ ಆಚರಣೆಗೆ ಧರ್ಮಕ್ಕೆ ಕಡ್ಡಾಯವಾಗಿರಬೇಕು. ವ್ಯಕ್ತಿಯ ಆಯ್ಕೆಗೆ ಬಿಟ್ಟಿದ್ದರೆ ಅದು ಅತ್ಯಗತ್ಯ ಆಚರಣೆಯಲ್ಲ ಎಂದು ಅಡ್ವೊಕೆಟ್ ಜನರಲ್ ಪ್ರಭುಲಿಂಗ್ ನಾವದಗಿ ವಾದ ಮಂಡಿಸಿದ್ದಾರೆ.
ಎಲ್ಲಾ ಧಾರ್ಮಿಕ ಚಟುವಟಿಕೆಗಳಿಗೂ ಸಂವಿಧಾನದ ರಕ್ಷಣೆಯಿಲ್ಲ ಎಂದು ಶಬರಿಮಲೆ ಪ್ರಕರಣದ ತೀರ್ಪನ್ನು ಸುಪ್ರೀಂಕೋರ್ಟ್ ಅಡ್ವೊಕೆಟ್ ಜನರಲ್ ಉಲ್ಲೇಖಿಸಿದ್ದಾರೆ. ಅನಗತ್ಯ ಮೌಢ್ಯಗಳನ್ನು ಅತ್ಯಗತ್ಯ ಭಾಗವೆಂದು ಪರಿಗಣಿಸಲಾಗದು. ಮೊದಲಿಗೆ ಅತ್ಯಗತ್ಯ ಧಾರ್ಮಿಕ ಆಚರಣೆಯೆಂದು ಸಾಬೀತಾಗಬೇಕು. ಈ ಆಚರಣೆ ಸಾರ್ವಜನಿಕ ಸುವ್ಯವಸ್ಥೆಗೆ ವಿರುದ್ಧವಾಗಿರಬಾರದು. ಸಾರ್ವಜನಿಕ ಆರೋಗ್ಯ, ನೈತಿಕತೆಗೆ ವಿರುದ್ಧವಾಗಿರಬಾರದು. ಮೂಲಭೂತ ಹಕ್ಕುಗಳಿಗೂ ವಿರುದ್ಧವಾಗಿರಬಾರದು. ಆಗಷ್ಟೇ ಅದಕ್ಕೆ ಸಂವಿಧಾನದ ರಕ್ಷಣೆ ಸಿಗಲಿದೆ. ಧಾರ್ಮಿಕವಾಗಿ ಅತ್ಯಗತ್ಯ ಎಂದು ಹೇಳಿದರೆ ಸಾಲದು. ಧರ್ಮಕ್ಕೇ ಅತ್ಯಗತ್ಯ ಆಚರಣೆ ಎಂದು ನಿರೂಪಿಸಬೇಕು ಎಂದು ಎಜಿ ವಾದಿಸಿದ್ದಾರೆ.
ಎಲ್ಲಾ ಧಾರ್ಮಿಕ ಚಟುವಟಿಕೆಗಳಿಗೂ ಸಂವಿಧಾನದ ರಕ್ಷಣೆಯಿಲ್ಲ ಎಂದು ಅಡ್ವೊಕೆಟ್ ಜನರಲ್ ಸುಪ್ರೀಂಕೋರ್ಟ್ ತೀರ್ಪು ಉಲ್ಲೇಖಿಸುತ್ತಿದ್ದಾರೆ.
ವೆಂಕಟರಮಣ ದೇವರು ಪ್ರಕರಣದಲ್ಲಿಯೂ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಗೌಡ ಸಾರಸ್ವತ ಬ್ರಾಹ್ಮಣರ ಪೂಜೆಯ ಅಧಿಕಾರದ ಬಗ್ಗೆಯೂ ತೀರ್ಪಿದೆ. ಹೀಗಾಗಿ ಆಹಾರ, ಉಡುಪು ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ. ಈ ಬಗ್ಗೆಯೂ ಒಂದು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ಮೂಲಭೂತ ಆಚರಣೆಗಳಷ್ಟೇ ಅತ್ಯಗತ್ಯ ಆಚರಣೆಗಳು. ಆ ಆಚರಣೆಗಳಿಲ್ಲದಿದ್ದರೆ ಧರ್ಮದ ಅಸ್ತಿತ್ವಕ್ಕೆ ಧಕ್ಕೆಯಾಗುವಂತಿರಬೇಕು. ಅಂತಹ ಆಚರಣೆಗಳಷ್ಟೇ ಅತ್ಯಗತ್ಯ ಆಚರಣೆಗಳು. ಹೀಗೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಆಚರಣೆ ಇಲ್ಲವಾದರೆ ಧರ್ಮವೇ ಕಣ್ಮರೆಯಾಗುವಂತಿರಬೇಕು. ಆ ಆಚರಣೆಯೇ ಆ ಧರ್ಮಕ್ಕೆ ಬುನಾದಿಯಂತಿರಬೇಕು ಎಂದು ಎಜಿ ತಿಳಿಸಿದ್ದಾರೆ.
ಜಾವೇದ್ ವಿರುದ್ಧ ಹರಿಯಾಣ ಪ್ರಕರಣದಲ್ಲಿಯೂ ಹೈಕೋರ್ಟ್ ತೀರ್ಪು ನೀಡಿದೆ. 2ನೇ ಮದುವೆಯಾದವರಿಗೆ ಚುನಾವಣೆಗೆ ಸ್ಪರ್ಧೆ ನಿರ್ಬಂಧವಿತ್ತು. ಆಗ ಜಾವೇದ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ. ಇಸ್ಲಾಂನಲ್ಲಿ ಒಂದಕ್ಕಿಂತ ಹೆಚ್ಚಿನ ಮದುವೆಗೆ ಅವಕಾಶವಿದೆ. ಹೀಗಾಗಿ ಸಂವಿಧಾನದ ರಕ್ಷಣೆ ಇದೆ ಎಂದು ವಾದಿಸಿದ್ದ. ಆದರೆ ಈತನ ವಾದವನ್ನು ಕೋರ್ಟ್ ಒಪ್ಪಲಿಲ್ಲ ಎಂದು ಎಜಿ ತಿಳಿಸಿದ್ದಾರೆ.
ನಮ್ಮ ಸಂವಿಧಾನ ಕಾರ್ಲ್ ಮಾರ್ಕ್ಸ್ ಸಿದ್ದಾಂತ ಅನುಸರಿಸಿಲ್ಲ. ಧರ್ಮ ಅಫೀಮು ಎಂಬ ಅಭಿಪ್ರಾಯ ಅನುಸರಿಸಿಲ್ಲ. ಸರ್ವ ಧರ್ಮ ಸಮಭಾವ ತತ್ವವನ್ನು ಆಧರಿಸಿದೆ ಎಂದು ನ್ಯಾ. ಕೃಷ್ಣ ದೀಕ್ಷಿತ್ ಅಭಿಪ್ರಾಯಪಟ್ಟಿದ್ದಾರೆ.
ಧರ್ಮವನ್ನು ಶಿಕ್ಷಣದಿಂದ ಹೊರಗಿಡಬೇಕು. 2017 ರ ಸುಪ್ರೀಂಕೋರ್ಟ್ ತೀರ್ಪಿನಲ್ಲೂ ಹೇಳಿದೆ. ಧರ್ಮವನ್ನು ಶಿಕ್ಷಣ ಸಂಸ್ಥೆಗಳಿಂದ ಹೊರಗಿಡಬೇಕು ಎಂದು ಡಾ.ಬಿ.ಆರ್. ಅಂಬೇಡ್ಕರ್ ಕೂಡ ಹೇಳಿದ್ದಾರೆ ಎಂದು ಸಿಜೆ ಉತ್ತರಿಸಿದ್ದಾರೆ.
ಆತ್ಮಸಾಕ್ಷಿಯ ಸ್ವಾತಂತ್ರ್ಯದ ಬಗ್ಗೆ ಸಾಂವಿಧಾನಿಕ ಸಭೆಯಲ್ಲಿ ಚರ್ಚೆಯಾಗಿತ್ತು. ಡಾ.ಬಿ.ಆರ್.ಅಂಬೇಡ್ಕರ್ ರವರು ಸಂವಿಧಾನದ 25 ನೇ ವಿಧಿಯಲ್ಲಿ ಸೇರಿಸಲು ಸಲಹೆ ನೀಡಿದ್ದರು. ದೇವರನ್ನು ನಂಬದವರಿಗೂ ಸಂವಿಧಾನದ ರಕ್ಷಣೆಯಿದೆಯಲ್ಲವೇ ಎಂದು ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರರಿಸಿದ ಸಿಜೆ, ಆತ್ಮಸಾಕ್ಷಿ, ಆತ್ಮಸಾಕ್ಷಿಯ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಬೇರೆ. ಆದರೆ ಅವೆರಡೂ ಜೊತೆಯಾಗಿಯೂ ಸಾಗಬಹುದು ಎಂದು ಉತ್ತರಿಸಿದ್ದಾರೆ.
ಧಾರ್ಮಿಕ ಆಚರಣೆ, ಆತ್ಮಸಾಕ್ಷಿಯ ಆಚರಣೆಯಾಗುವುದೇ ಎಂದು ಸರ್ಕಾರಕ್ಕೆ ನ್ಯಾ.ಖಾಜಿ ಜೈಬುನ್ನೀಸಾ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರ ನೋಡಿದ ಎಜಿ, ಆತ್ಮಸಾಕ್ಷಿಯ ಅಭಿವ್ಯಕ್ತಿ ಅದು ಧಾರ್ಮಿಕವೇ ಅಲ್ಲವೇ ನಿರ್ಧರಿಸುತ್ತದೆ ಎಂದು ತಿಳಿಸಿದ್ದಾರೆ.
ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯೇ ನಿರ್ಧರಿಸಬೇಕು. ಸಂಪೂರ್ಣ ವಿವಾದವೇ ಹಿಜಾಬ್ನ ಕುರಿತಾಗಿ ಉದ್ಭವಿಸಿದೆ. ಉಡುಪಿ ಕಾಲೇಜಿನ ಸಮಿತಿ ಹಿಜಾಬ್ ನಿರ್ಬಂಧಿಸಿದೆ. ಹೀಗಾಗಿ ಹೈಕೋರ್ಟ್ ಈ ಬಗ್ಗೆ ತೀರ್ಮಾನ ನೀಡುವ ಅಗತ್ಯವಿದೆ ಎಂದು ಎಜಿ ಪ್ರಭುಲಿಂಗ್ ನಾವದಗಿ ತಿಳಿಸಿದ್ದಾರೆ.
ಹಾಗಿದ್ದರೆ ನಾವು ಸಾಂವಿಧಾನಿಕ ಪ್ರಶ್ನೆ ಇತ್ಯರ್ಥಪಡಿಸಬೇಕೇ? ಅಂತ ಸಿಜೆ ಪ್ರಶ್ನಿಸಿದ್ದಾರೆ. ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವೇ ತೀರ್ಮಾನಿಸಬೇಕೇ? ಕಾಲೇಜು ಅಭಿವೃದ್ಧಿ ಸಮಿತಿ ಸಾಂವಿಧಾನಿಕ ಸಂಸ್ಥೆಯಲ್ಲ. ಹೈಕೋರ್ಟ್ ಈ ಸಮಿತಿಗಳಿಗೆ ನಿರ್ದೇಶನ ನೀಡುವ ಅಗತ್ಯವಿದೆಯೇ ? ಎಂದು ಕೇಳಿದ್ದಾರೆ.
ಸರ್ಕಾರ ಶಿಕ್ಷಣ ಸಂಸ್ಥೆಗಳಿಗೆ ಸ್ವಾತಂತ್ರ್ಯ ನೀಡಿದೆ. ಸಮವಸ್ತ್ರದ ಬಗ್ಗೆ ಶಿಕ್ಷಣ ಸಂಸ್ಥೆ ನಿರ್ಧರಿಸಲಿದೆ. ಸರ್ಕಾರ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿಲ್ಲ ಅಂತ ಹೈಕೋರ್ಟ್ಗೆ ಎಜಿ ಪ್ರಭುಲಿಂಗ್ ನಾವದಗಿ ಹೇಳಿಕೆ ನೀಡಿದ್ದಾರೆ.
ಹಿಜಾಬ್ ಬಗ್ಗೆ ಸರ್ಕಾರದ ನಿಲುವೇನು? ಎಂದು ಪ್ರಶ್ನಿಸಿದ ಸಿಜೆ, ಕಾಲೇಜು ಅಭಿವೃದ್ದಿ ಸಮಿತಿ ಹಿಜಾಬ್‌ಗೆ ಅನುಮತಿ ನೀಡಿದರೆ ಆಕ್ಷೇಪವಿಲ್ಲವೇ ಎಂದು ಕೇಳಿದ್ದಾರೆ.
ಸರ್ಕಾರದ ಆದೇಶದ ಬಗ್ಗೆ ಒಂದು ಸ್ಪಷ್ಟನೆ ಬೇಕಿದೆ. ಹಿಜಾಬ್ ಬಗ್ಗೆ ಸರ್ಕಾರ ಯಾವುದೇ ನಿರ್ದೇಶನ ನೀಡಿಲ್ಲ, ಸಮವಸ್ತ್ರ ಕುರಿತಂತೆ ಮಾತ್ರ ಸೂಚನೆ ನೀಡಲಾಗಿದೆ. ಇದು ಸರ್ಕಾರದ ನಿಲುವು ಅಲ್ಲವೇ ಎಂದು ಸಿಜೆ ಪ್ರಶ್ನೆ ಮಾಡಿದ್ದಾರೆ.
ಸಮವಸ್ತ್ರದ ಜತೆ ಹಿಜಾಬ್‌ಗೆ ಅನುಮತಿ ಕೋರಿ ಸಲ್ಲಿಸಿದ ಅರ್ಜಿ ಬಗ್ಗೆ ಹೈಕೋರ್ಟ್ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ಆರಂಭವಾಗಿದೆ. ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ರ ಪೂರ್ಣ ಪೀಠ ವಿಚಾರಣೆ ನಡೆಸುತ್ತಿದೆ.
ಬೆಳಗಾವಿಯ ಲಿಂಗರಾಜ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನಿಂದ ಮತ್ತೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದಾರೆ. ಡಿಸಿ ಕಚೇರಿ ಎದುರು ಧರಣಿ ಕುಳಿತ ಧರಣಿ ನಡೆಸುತ್ತಿದ್ದಾರೆ.
ಮೈಸೂರು ಅರಮನೆಯಲ್ಲೇ ಪ್ರವಾಸಿಗರು ನಮಾಜ್ ಮಾಡಿದ್ದಾರೆ. ಗುಜರಾತ್‌ನಿಂದ ಅರಮನೆಗೆ ಬಂದಿದ್ದ ಪ್ರವಾಸಿಗರು ಅರಮನೆಯಲ್ಲೇ ಕೈ ಕಾಲು ತೊಳೆದುಕೊಂಡು ನಮಾಜ್ ಮಾಡಿದ್ದಾರೆ. ಪ್ರವಾಸಿಗರು ನಮಾಜ್ ಮಾಡಿದ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬೆಳಗಾವಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡದ ಹಿನ್ನೆಲೆ ಪರೀಕ್ಷೆ ಬರೆಯದೇ ವಿದ್ಯಾರ್ಥಿನಿಯರು ಕಾಲೇಜಿನಿಂದ ಹೊರಬಂದಿದ್ದಾರೆ. ಡಿಸಿ ಸೂಚನೆ ಮೇರೆಗೆ ವಿದ್ಯಾರ್ಥಿಗಳು ಕಾಲೇಜಿಗೆ ಬಂದಿದ್ದರು. ಹಿಜಾಬ್ ತೆಗೆದು ಬಂದ್ರೇ ಮಾತ್ರ ಅವಕಾಶ ನೀಡವುದಾಗಿ ಹೇಳಿದ ಹಿನ್ನೆಲೆ ಕಾಲೇಜಿನಿಂದ ವಿದ್ಯಾರ್ಥಿನಿಯರು ಹೊರಬಂದಿದ್ದಾರೆ. ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿಲ್ಲ. ಹೀಗಾಗಿ ಡಿಸಿ ಕಚೇರಿಗೆ ತೆರಳಿ ಅಲ್ಲಿ ಮನವಿಪತ್ರ ಸಲ್ಲಿಸಿ ಮತ್ತೆ ಪ್ರತಿಭಟನೆ ಮಾಡ್ತೀವಿ ಅಂತ ಕಾಲೇಜು ಗೇಟ್ ಬಳಿ ಎಐಎಂಐಎಂ ಕಾರ್ಪೊರೇಟರ್ ಶಾಹೀದ್ ಖಾನ್ ಪಠಾಣ್ ಹೇಳಿಕೆ ನೀಡಿದ್ದಾರೆ.
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರಥಮ ದರ್ಜೆ ಕಾಲೇಜಿನ ನೂರಾರು ವಿದ್ಯಾರ್ಥಿನಿಯರು ಧರಣಿ ನಡೆಸುತ್ತಿದ್ದಾರೆ. ಮೌನ ಧರಣಿ ನಡೆಸುತ್ತಿರುವ ವಿದ್ಯಾರ್ಥಿನಿಯರು, ಹಿಬಾಜ್ ಹಾಕಲು ಅವಕಾಶ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಕಾಲೇಜಿನಲ್ಲಿ ಹಿಜಾಬ್ ತೆಗೆದು ತರಗತಿಗೆ ಹಾಜರಾಗುವಂತೆ ಹೇಳುತ್ತಿದ್ದಾರೆ. ಇಲ್ಲವಾದಲ್ಲಿ ಮನೆಗೆ ಕಳಿಸುತ್ತಿದ್ದಾರೆ. ನಮಗೆ ಪಾಠ, ಪ್ರವಚನ ಇಲ್ಲದಂತಾಗಿದೆ ಅಂತ ಜಿಲ್ಲಾಧಿಕಾರಿ ಆರ್ ಗಿರೀಶ್‌ಗೆ ವಿದ್ಯಾರ್ಥಿನಿಯರು ಮನವಿ ಸಲ್ಲಿಸಿದ್ದಾರೆ.
ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಹಿಜಾಬ್ ಜಟಾಪಟಿ ನಡೆಯುತ್ತಿದೆ. ಪದವಿ ಪೂರ್ವ ವಿದ್ಯಾರ್ಥಿನಿಯರು ಹಿಜಾಬ್‌ಗೆ ಪಟ್ಟು ಬಿದ್ದಿದ್ದಾರೆ. ಹತ್ತು ವಿದ್ಯಾರ್ಥಿನೀಯರಿಂದ ಹಿಜಾಬ್‌ಗೆ ಪಟ್ಟು ಬಿದ್ದಿದ್ದಾರೆ. ಹಿಜಾಬ್ ತಗೆದು ತರಗತಿಗೆ ಬರುವಂತೆ ಮನವೊಲಿಕೆ ಮಾಡುತ್ತಿದ್ದಾರೆ.
ಹಿಜಾಬ್ ಜಟಾಪಟಿ ಹಿನ್ನಲೆ ಕರ್ನಾಟಕ ಪಬ್ಲಿಕ್ ಶಾಲೆಗೆ ಪೊಲೀಸ್ ಭದ್ರತೆ ನೀಡಲಾಗಿದೆ.
ಹಾಸನದಲ್ಲಿ ಹಿಜಾಬ್ ಹೋರಾಟದ ಕಿಚ್ಚು ನಿಂತಿಲ್ಲ. ನಗರದ ಬಾಲಕಿಯರ ಪದವಿಪೂರ್ವ ಕಾಲೇಜಿ ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕಾರ ಮಾಡಿ ಹೋರಾಟ ನಡೆಯುತ್ತಿದೆ. ಹಿಜಾಬ್ ಧರಿಸಿ ಪಾಠ ಕೇಳಲು ಅವಕಾಶ ನೀಡಿ ಎಂದು ಆಗ್ರಹಿಸುತ್ತಿದ್ದಾರೆ. ನಮ್ಮ ಧರ್ಮ ಮತ್ತು ಶಿಕ್ಷಣ ನಮ್ಮ ಎರಡು ಕಣ್ಣು. ನಮಗೆ ನಮ್ಮ ಎರಡೂ ಕಣ್ಣು ಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಒಂದು ವಾರದಿಂದ ನಾವು ಪಾಠ ಕೇಳಲು ಆಗಿಲ್ಲ. ಹಾಜರಾತಿ ಕೊಡಲ್ಲ ಅಂತಾರೆ, ಪರೀಕ್ಚೆ ಕೊಡಲ್ಲ ಅಂತಾರೆ. ನಮ್ಮ ಕಾಲೇಜಿನಲ್ಲಿ ಸಿಡಿಸಿಯೂ ಇಲ್ಲಾ ಯಾವುದೇ ಅಧಿಕೃತ ತೀರ್ಮಾನ ಇಲ್ಲ.
ದನ್ನ ಕೇಳಿದ್ರೆ ಕೇಳೋಕೆ ನೀವ್ಯಾರು ಅಂತಾರೆ. ನಮಗೆ ಪಾಠ ಕೇಳಲು ಅವಕಾಶ ನೀಡಿ ಎಂದು ವಿದ್ಯಾರ್ಥಿನಿಯರು ಒತ್ತಾಯಿಸಿದ್ದಾರೆ.
ಹಾವೇರಿ ನಗರದ ಲಯನ್ಸ್ ಪಿಯು ಕಾಲೇಜಿನಲ್ಲಿ ಹಿಜಾಬ್ ಧರಿಸಿಕೊಂಡು ಒಳಗೆ ಹೋಗಲು ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ. ಹೈಕೋರ್ಟ್ ಮಧ್ಯಂತರ ಆದೇಶದ ಪಾಲನೆ ಮಾಡುವಂತೆ ಹೇಳಿದ್ರೂ ಹಿಜಾಬ್ ತೆಗೆದು ಕಾಲೇಜಿನ ಒಳಗೆ ಹೋಗಲು ನಿರಾಕರಣೆ ಮಾಡುತ್ತಿದ್ದಾರೆ. ಹೈಕೋರ್ಟ್ ಮಧ್ಯಂತರ ಆದೇಶದ ಪ್ರಕಾರ ಹಿಜಾಬ್‌ಗೆ ಕಾಲೇಜಿನಲ್ಲಿ ಅವಕಾಶವಿಲ್ಲ ಅಂತ ಪ್ರಿನ್ಸಿಪಾಲರು ಮತ್ತು ಪೊಲೀಸರು ಹೇಳುತ್ತಿದ್ದಾರೆ.
ಕೊಡಗಿನಲ್ಲಿ ಹಿಜಾಬ್ ವಿವಾದ ಮುಂದುವರಿದಿದೆ. 9 ವಿದ್ಯಾರ್ಥಿನಿಯರಿಂದ ಇಂದು ಕೂಡ ಮೌನ ಪ್ರತಿಭಟನೆ ನಡೆಯುತ್ತಿದೆ. ಮಡಿಕೇರಿಯ ಜೂನಿಯರ್ ಕಾಲೇಜಿನಲ್ಲಿ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಲೇಜ್ ಗೇಟ್ ಎದುರು 9 ವಿದ್ಯಾರ್ಥಿನಿಯರು ಕುಳಿತ್ತಿದ್ದಾರೆ. ‘ವಿ ವಾಂಟ್ ಜಸ್ಟಿಸ್’, ‘ಹಿಜಾಬ್ ನಮ್ಮ ಹಕ್ಕು, ನಮ್ಮ ಆಯ್ಕೆ’ ಎಂದು ಪೋಸ್ಟರ್ ಹಿಡಿದು ಧರಣಿ ನಡೆಸುತ್ತಿದ್ದಾರೆ.
ಕೋಲಾರದಲ್ಲಿ ಹಿಜಾಬ್ ಧರಿಸಿದರರೆ ಕಾಲೇಜಿಗೆ ಪ್ರವೇಶ ನೀಡುವುದಿಲ್ಲ ಎಂದು ಲಿಖಿತ ರೂಪದಲ್ಲಿ ನೀಡಲು ವಿದ್ಯಾರ್ಥಿನಿಯರು ಕಾಲೇಜು ಪ್ರಾಂಶುಪಾಲರ ಬಳಿ ಮನವಿ ಮಾಡುತ್ತಿದ್ದಾರೆ. ಸಿಡಿಸಿ ಇಲ್ಲದ ಕಾಲೇಜುಳಲ್ಲಿ ಹಿಜಾಬ್ ಧರಿಸಿ ಪ್ರವೇಶಕ್ಕೆ ಕೋರ್ಟ್ ಅನುಮತಿ ನೀಡಿದ್ದು, ಅದರಂತೆ ಕಾಲೇಜಿಗೆ ಪ್ರವೇಶ ನೀಡಲು ವಿದ್ಯಾರ್ಥಿನಿಯರು ಆಗ್ರಹಿಸುತ್ತಿದ್ದಾರೆ. ವಿದ್ಯಾರ್ಥಿನಿಯರು ಕಾಲೇಜು ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ಬಳ್ಳಾರಿಯ ಕಾಲೇಜುಗಳಲ್ಲಿ ಹಿಜಾಬ್ ವಿವಾದ ತಣ್ಣಗಾಗಿದೆ. ಹಿಜಾಬ್ ತೆಗೆದು ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದಾರೆ. ಪಿಯು ಪ್ರಾಯೋಗಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರು ಭಾಗಿಯಾಗಿದ್ದಾರೆ.
ಹಿಜಾಬ್ ಸಂಘರ್ಷ ಹಿನ್ನಲೆ ಕೊಪ್ಪಳದಲ್ಲಿ 144 ಸೆಕ್ಷನ್ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ನಿಷೇಧಾಜ್ಞೆ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕಾಲೇಜುಗಳ ಮುಂದೆ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ. ವಿದ್ಯಾರ್ಥಿಗಳನ್ನು ಹೊರತುಪಡಿಸಿ ಬೇರೆಯವರಿಗೆ ಪ್ರವೇಶ ಇಲ್ಲ ಎಂದು ಕಾಲೇಜನ ಸಿಬ್ಬಂದಿ ಪೇಪರ್ ಅಂಟಿಸಿದೆ.
ಹಿಜಾಬ್‌ಗೆ ಅನುಮತಿ ನೀಡದ ಹಿನ್ನೆಲೆ ಪರೀಕ್ಷೆ ಬಹಿಷ್ಕರಿಸಿ ಡಿಸಿ ಕಚೇರಿಯಲ್ಲಿ ವಿದ್ಯಾರ್ಥಿನಿಯರು ಕುಳಿತಿದ್ದಾರೆ. ವಿಜಯಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿದ್ಯಾರ್ಥಿಗಳು ಕುಳಿತಿದ್ದಾರೆ.
ಮಂಡ್ಯಕಾಲೇಜಿಗೆ ವಿದ್ಯಾರ್ಥಿನಿಯರು ಹಿಜಾಬ್, ಬುರ್ಖಾ ಹಾಕಿಕೊಂಡು ಬಂದಿದ್ದಾರೆ.ಕಾಲೇಜು ಆವರಣದವರೆಗೆ ಹಿಜಾಬ್ ಬುರ್ಖಾ ಹಾಕಿಕೊಂಡು ಬರಲು ಅವಕಾಶ ಇದೆ. ಆದರೆ ತರಗತಿ ಹಾಜರಾಜಬೇಕಾದರೆ ಹಿಜಾಬ್ ಬುರ್ಖಾ ತೆಗೆಯಬೇಕು. ಬುರ್ಖಾ ತೆಗೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ.
ಹಿಜಾಬ್ ವಿವಾದದ ನಡುವೆ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಆರಂಭವಾಗಿದೆ. ಕಲಬುರಗಿ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನಲ್ಲಿ ಪರೀಕ್ಷೆ ನಡೆಯುತ್ತಿದೆ. ಕಾಲೇಜಿಗೆ ವಿದ್ಯಾರ್ಥಿಗಳು ಹಿಜಾಬ್ ಮತ್ತು ಬುರ್ಖಾ ಹಾಕಿಕೊಂಡು ಬರುತ್ತಿದ್ದಾರೆ. ಕಾಲೇಜಿನ ಕ್ಲಾಸ್ ರೂಮ್ ಗೆ ಪ್ರವೇಶಕ್ಕೂ ಮೊದಲು ಹಿಜಾಬ್ ತೆಗೆದು ಕ್ಲಾಸ್ ರೂಮ್ ಗೆ ಬರುತ್ತಿದ್ದಾರೆ.
ಹಿಜಾಬ್ ಧರಿಸಿ ಕಾಲೇಜಿನೊಳಗೆ ಹೋಗಲು ಅನುಮತಿ ಇಲ್ಲ. ಹೀಗಾಗಿ ಹಾಸನದ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ಬಳಿ 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ನಿಂತಿದ್ದಾರೆ.
ಹಾಸನದಲ್ಲಿ ತರಗತಿಗೆ ಹೋಗಲು ಅವಕಾಶ ನೀಡಿ ಎಂದು ವಿದ್ಯಾರ್ಥಿನಿಯರು ಪ್ರಾಂಶುಪಾಲರ ಜೊತೆ ವಾಗ್ವಾದ ನಡೆಸುತ್ತಿದ್ದಾರೆ. ನಮಗೂ ಶಿಕ್ಷಣ ಬೇಕು, ನೀವು ಸರ್ಕಾರ ಸೇರಿ ನಮ್ಮ ಜೊತೆ ಆಟ ಆಡ್ತಿದ್ದೀರಾ ಎಂದು ವಿದ್ಯಾರ್ಥಿನಿಯರು ಹೇಳುತ್ತಿದ್ದಾರೆ. ನಮಗೆ ಒಳಗೆ ಬಿಡಿ ಇಲ್ಲಾ ಎಲ್ಲರಿಗೂ ಆನ್‌ಲೈನ್ ಕ್ಲಾಸ್ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ. ಅದಕ್ಕೆ ಒಳಗೆ ಬರೋದಾದರೆ ಹಿಜಾಬ್ ತೆಗೆದು ಬನ್ನಿ. ಇಲ್ಲಿ ಬಂದು ಗಲಾಟೆ ಮಾಡಬೇಡಿ ಎಂದು ಪ್ರಾಂಶುಪಾಲರು ವಾರ್ನ್ ಮಾಡಿದ್ದಾರೆ. ಹೀಗೆಲ್ಲಾ ಗುಂಪಾಗಿ ನಿಲ್ಲಬೇಡಿ ಹೋಗಿ ಎಂದು ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದಾರೆ. ಹಾಸನದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಬಳಿ ಘಟನೆ ನಡೆದಿದೆ.
ರಾಯಚೂರು ಜಿಲ್ಲೆಯಲ್ಲಿ ಹಿಜಾಬ್ ಧರಿಸಿ ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸುತ್ತಿದ್ದಾರೆ. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಆಗಮಿಸುತ್ತಿದ್ದಾರೆ. ಕಾಲೇಜಿನ ಪ್ರತ್ಯೇಕ ಕೊಠಡಿಯಲ್ಲಿ ಹಿಜಾಬ್ ತೆಗೆಯಲು ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಸ್ಟ್ರಿಕ್ಟ್ ರೂಲ್ಸ್ ಫಾಲೋ ಅಪ್ ಗೆ ಕಾಲೇಜು ಪ್ರಿನ್ಸಿಪಲ್ ಸೂಚನೆ ನೀಡಿದ್ದಾರೆ.
ಇಂದಿನಿಂದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ. ಹಾಸನದಲ್ಲಿ ಇಂದು ಕೂಡ ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಬಂದಿದ್ದಾರೆ. ಶಾಲೆಯೊಳಗೆ ಕರೆದೊಯ್ದು ಮಕ್ಕಳ ಮನವೊಲಿಸಲು ಉಪನ್ಯಾಸಕರು ಯತ್ನಿಸಿದ್ದಾರೆ. ಹಾಸನದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಪ್ರದಾನ ಕಾಲೇಜಿನಲ್ಲಿ ಘಟನೆ ನಡೆದಿದೆ.
ಹಿಜಾಬ್‌ಗೆ ಅನುಮತಿ ನೀಡದ ಹಿನ್ನೆಲೆ ವಿದ್ಯಾರ್ಥಿನಿಯರು ಪರೀಕ್ಷೆಯನ್ನು ಬಹಿಷ್ಕಾರ ಮಾಡಿದ್ದಾರೆ. ಕೋರ್ಟ್ ಮೊರೆ ಹೋದ 6 ವಿದ್ಯಾರ್ಥಿನಿಯರು ಗೈರಾಗಿದ್ದಾರೆ. ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿಗ ಆಗಮಿಸಿಲ್ಲ.
ಹಿಜಾಬ್ ವಿವಾದ ಹಿನ್ನೆಲೆ ರಾಮನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್ ಮಾಡುತ್ತೇವೆಂದು ಕಾಲೇಜು ಪ್ರಿನ್ಸಿಪಾಲ್ ರಾಜಶೇಖರ್ ಮಾಹಿತಿ ನೀಡಿದ್ದಾರೆ.
ಹಿಜಾಬ್ ಸಂಘರ್ಷದ ನಡುವೆ SSLC ಪೂರ್ವ ಸಿದ್ಧತಾ ಪರೀಕ್ಷೆ ನಡೆಯುತ್ತಿದೆ. ಈ ಹಿನ್ನಲೆ ಪರೀಕ್ಷಾ ಕೇಂದ್ರಗಳ ಮುಂದೆ ಪೊಲೀಸ್ ಬಂದೊಬಸ್ತ್ ಮಾಡಲಾಗಿದೆ.
ಚಿತ್ರದುರ್ಗದಲ್ಲಿ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಶಾಲೆ, ಕಾಲೇಜಿಗೆ ಬಂದಿದ್ದಾರೆ. ಕೋರ್ಟ್ ಮಧ್ಯಂತರ ಆದೇಶ ಪಾಲಿಸಲು ಸಿಬ್ಬಂದಿ ಸೂಚನೆ ನೀಡಿದ್ದಾರೆ. ಪ್ರತ್ಯೇಕ ಕೊಠಡಿಯಲ್ಲಿ ಹಿಜಾಬ್ ತೆಗೆದು ಕೆಲ ವಿದ್ಯಾರ್ಥಿಗಳು ತರಗತಿಗೆ ತೆರಳುತ್ತಿದ್ದಾರೆ. ಬಾಲಕಿಯರ ಪಿಯು ಕಾಲೇಜು ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆ ಕೇಸ್ಗೆ ಸಂಬಂಧಿಸಿ ಹಿಜಾಬ್‌ಗೂ ಈ ಕೊಲೆಗೂ ಲಿಂಕ್ ಇದೆ ಎಂದು ಅನಿಸುತ್ತಿಲ್ಲ. ಆ ಬಗ್ಗೆಯೂ ನಮ್ಮ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಅಂತ ಶಿವಮೊಗ್ಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
ಹಿಜಾಬ್‌ಗೆ ಅನುಮತಿ ನೀಡದ ಹಿನ್ನೆಲೆ ಪ್ರಾಕ್ಟಿಕಲ್ ಪರೀಕ್ಷೆಯನ್ನು ವಿದ್ಯಾರ್ಥಿನಿಯರು ಬಹಿಷ್ಕರಿಸಿದ್ದಾರೆ. ವಿಜಯಪುರದ ಸರ್ಕಾರಿ ಪಿಯು ಕಾಲೇಜಿನಲ್ಲಿ ಈ ಘಟನೆ ನಡೆದಿದೆ. 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪರೀಕ್ಷೆ ಬಹಿಷ್ಕಾರ ಮಾಡಿದ್ದಾರೆ. ಅಲ್ಲದೆ ಜಿಲ್ಲಾಧಿಕಾರಿ ಕಚೇರಿಗೆ ಹೋಗುವುದಾಗಿ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.
ವಿಜಯಪುರ ಜಿಲ್ಲೆಯ 225 ಪಿಯು ಹಾಗೂ 80 ಡಿಗ್ರಿ ಕಾಲೇಜುಗಳ ತರಗತಿಗಳು ಆರಂಭವಾಗುತ್ತದೆ. ಹಿಜಾಬ್ ಧರಿಸಿ ಮುಸ್ಲೀಂ ವಿದ್ಯಾರ್ಥಿನಿಯರು ಕಾಲೇಜಿಗೆ ಬಂದಿದ್ದಾರೆ. ಹಿಜಾಬ್ ತೆಗೆದು ವಿದ್ಯಾರ್ಥಿನಿಯರು ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಪೊಲೀಸ್ ಭದ್ರತೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ತರಗತಿಗಳು ಮುಕ್ತಾಯವಾಗೋವರೆಗೂ ಪೊಲೀಸ್ ಭದ್ರತೆ ನೀಡಲಾಗಿದೆ. ಸದ್ಯ ಜಿಲ್ಲೆಯಲ್ಲಿ ತರಗತಿಗಳು ಸಹಜ ಸ್ಥಿತಿಯಲ್ಲಿ ಮುಂದುವರೆದಿದೆ.
ಕೊಪ್ಪಳದಲ್ಲಿ 144 ಸೆಕ್ಷೆನ್ ನಿಷೇಧಾಜ್ಞೆ ಮುಂದುವರಿಯುತ್ತದೆ. ಇಂದಿನಿಂದ 26 ನೇ ತಾರೀಖಿನ ರಾತ್ರಿವರೆಗೂ ನಿಷೇಧಾಜ್ಞೆ ಮುಂದುವರಿಯುತ್ತದೆ. ಕೊಪ್ಪಳ ಹಾಗೂ ಗಂಗಾವತಿ ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ನಿಷೇಧಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಆದೇಶ ನೀಡಿದ್ದಾರೆ. ಶಾಲಾ, ಕಾಲೇಜು, ಶಿಕ್ಷಣ ಸಂಸ್ಥೆಗಳ ಸುತ್ತಲೂ 300 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಐದಕ್ಕಿಂತ ಹೆಚ್ಚು ಜನ ಸೇರದಂತೆ ಎಚ್ಚರಿಕೆ ನೀಡಲಾಗಿದೆ.
ರಾಜ್ಯದಲ್ಲಿ ಇಂದಿನಿಂದ SSLC ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿದೆ. ರಾಜ್ಯದ 14 ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷೆ ನಡೆಸಲು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಸಿದ್ಧತೆ ನಡೆಸಿದೆ. ಫೆ. 26 ರ ವರೆಗೆ ಪ್ರಿಪರೇಟರಿ ಪರೀಕ್ಷೆ ನಡೆಯುತ್ತದೆ. ಬೆಳ್ಳಗ್ಗೆ 10.30 ರಿಂದ 1.45 ರವರೆಗೆ ಪರೀಕ್ಷೆ ನಡೆಯುತ್ತದೆ. ಇಂದು ಪ್ರಥಮ ಭಾಷೆಗೆ ಪರೀಕ್ಷೆ ನಡೆಯಲಿದೆ.
ವಿಜಯಪುರದಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ ಹಿನ್ನೆಲೆ ಜಿಲ್ಲೆಯ ಶಾಲಾ ಕಾಲೇಜುಗಳ ಸುತ್ತಮುತ್ತಲು ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಫೆಬ್ರವರಿ 16 ರಿಂದ 19ವರೆಗೆ ಈ ಮೊದಲು ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿತ್ತು. ನಂತರ ವಿಸ್ತರಣೆಗೊಂಡಿದ್ದು, ನಿಷೇದಾಜ್ಞೆ ಫೆಬ್ರವರಿ 21 ರಿಂದ 26 ವರೆಗೆ ಮುಂದುವರಿಯಲಿದೆ.
ಹಿಜಾಬ್ ವಿವಾದದಿಂದ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಇದೀಗ ಶಾಕ್ ಎದುರಾಗಿದೆ. ಪಿಯು ಪ್ರಾಯೋಗಿಕ ಪರೀಕ್ಷೆ ಗೈರಾದರೆ ಪ್ರಾಯೋಗಿಕ ಅಂಕ ಇರಲ್ಲ. ಥಿಯರಿ 70 ಅಂಕಗಳಿಗೆ ಮಾತ್ರ ಪರೀಕ್ಷೆ ಎದುರಿಸಬೇಕು. ಉತ್ತೀರ್ಣವಾಗಲು ಥಿಯರಿ ಪರೀಕ್ಷೆಯಲ್ಲಿ 70 ಅಂಕಕ್ಕೆ 35 ಅಂಕ ಪಡೆಯಬೇಕು. CET ಪರೀಕ್ಷೆ ಎದುರಿಸಬೇಕು ಅಂದ್ರೆ ಕನಿಷ್ಠ 45 ಅಂಕ ಪಡೆದಿರಬೇಕು. ಥಿಯೇರಿ 70 ಅಂಕಗಳಲ್ಲಿಯೇ 45 ಅಂಕ ಪಡೆದ್ರೆ ಮಾತ್ರ CET ಗೆ ಅವಕಾಶ ಇರುತ್ತದೆ. ಶೈಕ್ಷಿಕಣ ಭವಿಷ್ಯದ ದೃಷ್ಟಿಯಿಂದ ಪ್ರಾಯೋಗಕ ಅಂಕ ಮುಖ್ಯವಾಗುತ್ತದೆ. ಪ್ರಾಯೋಗಿಕ ಅಂಕ ಪಡೆದ್ರೆ ಮಾತ್ರ ಉತ್ತಮ ಫಲಿತಾಂಶ ಪಡೆಯಬಹದು. ಪ್ರಾಯೋಗಿಕ ಗಳಿಸಿದರೆ ಸುಲಭವಾಗಿ ಪಾಸ್ ಆಗಬಹುದು.
ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಾಯೋಗಿಕ ಪರೀಕ್ಷೆಗೆ ವೇಳಾಪಟ್ಟಿ ನೀಡಿದೆ. ಪ್ರಯೋಗಿಕ ಪರೀಕ್ಷೆ 30 ಅಂಕ, ಥಿಯರಿ 70 ಸೇರಿ ಒಟ್ಟು 100 ಅಂಕಕ್ಕೆ ಪರೀಕ್ಷೆ ನಡೆಯಲಿದೆ. ಮಾರ್ಚ್ 25 ಪ್ರಾಯೋಗಿಕ ಪರೀಕ್ಷೆಗೆ ಡೆಡ್ ಲೈನ್ ಇದೆ. ಮುಖ್ಯ ಪರೀಕ್ಷೆ ಏಪ್ರಿಲ್ 16ರಿಂದ ಮೇ 6ರವರೆಗೆ ನಡೆಯಲಿದೆ. Physics, chemistry, biology, psychology, computer science, electronics ವಿಷಯಗಳಿಗೆ ಪ್ರಯೋಗಿಕ ಪರೀಕ್ಷೆ ಇರಲಿದೆ. ಭಾಷಾ ವಿಷಯಗಳಿಗೆ ಪ್ರಾಯೋಗಿಕ ಪರೀಕ್ಷೆ ಇರಲ್ಲ. ಪರೀಕ್ಷೆ ಪಿಯು ಬೋಡ್೯ ಮಾರ್ಗಸೂಚಿಯಂತೆ ಪರೀಕ್ಷೆ ನಡೆಯಲಿದೆ. ಡಿಡಿಪಿಯುಗಳ ನೇತೃತ್ವದಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷೆಯ ಜಿಲ್ಲಾ ಉಸ್ತುವಾರಿ ಸಮಿತಿ ಮುಖ್ಯಸ್ಥರು, ಜಿಲ್ಲಾ ಪ್ರಚಾರಕರು, ವಿಜ್ಞಾನ ವಿಭಾಗದ ಉಪನ್ಯಾಸಕರು ಆಗಿರಬೇಕು.ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪರೀಕ್ಷೆ ನಡೆಯಲಿದೆ. ಪರೀಕ್ಷೆ ನಡೆಯು ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಿಬೇಕು. ಪ್ರಯೋಗಿಕ ಪರೀಕ್ಷೆ ಮುಗಿದ ತಕ್ಷಣವೇ ಪಿಯು ಬೋರ್ಡ್ಗೆ ಪರೀಕ್ಷೆ ಅಂಕಗಳು ಅಪ್ಲೋಡ್ ಮಾಡಬೇಕು.
ರಾಜ್ಯದ PU ಕಾಲೇಜುಗಳಲ್ಲಿ ಇಂದಿನಿಂದ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ವೇಳಾಪಟ್ಟಿಯಂತೆಯೇ ಪರೀಕ್ಷೆ ನಡೆಯುತ್ತದೆ. ಹಿಜಾಬ್ ವಿವಾದದಿಂದ ಪರೀಕ್ಷೆಗೆ ಗೈರಾದರೆ ಮತ್ತೊಮ್ಮೆ ಪ್ರಾಯೋಗಿಕ ಪರೀಕ್ಷೆ ಬರೆಯಲು ಅವಕಾಶವಿರಲ್ಲ.
Published On - 8:37 am, Mon, 21 February 22