ಬೆಳೆಗಾರರಿಗೆ ಹುಳಿಯಾದ ದ್ರಾಕ್ಷಿ; ವಿಪರೀತ ಮಂಜಿಗೆ ಕೊಳೆತು ಹೋಗುತ್ತಿವೆ ಹಣ್ಣುಗಳು, ಸಂಕಷ್ಟಕ್ಕೆ ಸಿಲುಕಿದ ರೈತರು
ಅಥಣಿ ತಾಲೂಕಿನಲ್ಲಿ ನೀರಿನ ಪ್ರಮಾಣ ಕೂಡ ಕಡಿಮೆ ಇರುವುದರಿಂದ ಹೆಚ್ಚಾಗಿ ಇಲ್ಲಿಯ ರೈತರು ದ್ರಾಕ್ಷಿ ಬೆಳೆಯುತ್ತಾರೆ. ಇಷ್ಟೆಲ್ಲ ಕಷ್ಟಪಟ್ಟು ಔಷಧೋಪಚಾರ ಮಾಡಿ ಚಿಕ್ಕ ಮಕ್ಕಳಂತೆ ಬೆಳೆಯನ್ನ ಜೋಪಾನ ಮಾಡಿ ಬೆಳೆದಿದ್ದಾರೆ. ಆದ್ರೆ ಈಗ ಸುರಿಯುತ್ತಿರೋ ಮಂಜು ಬೆಳೆಯನ್ನೇ ಹಾಳು ಮಾಡ್ತಿದೆ.
ಚಿಕ್ಕೋಡಿ: ಅಕಾಲಿಕ ಮಳೆ ಅನ್ನೋ ಸವಾಲನ್ನೂ ದಾಟಿ ಆ ರೈತರು ಉತ್ತಮ ಬೆಳೆ ಬೆಳೆದಿದ್ರು. ಅವರ ತೋಟದಲ್ಲಿನ ದ್ರಾಕ್ಷಿ ಬೆಳೆ ಕೂಡಾ ಉತ್ತಮವಾಗಿ ಬಂದಿತ್ತು. ಆದ್ರೆ ಅದೇ ರೈತರಿಗೆ ಈಗ ಮತ್ತೊಂದು ಸವಾಲು ಎದುರಾಗಿದೆ. ರೈತರ ಪಾಲಿಗೆ ಸಿಹಿಯಾಗಬೇಕಿದ್ದ ದ್ರಾಕ್ಷಿ ಹುಳಿಯಾಗ್ತಿದೆ. ಅಕಾಲಿಕ ಮಳೆಯಿಂದ ಈಗಾಗಲೇ ಪೆಟ್ಟು ತಿಂದಿರೋ ದ್ರಾಕ್ಷಿ ಬೆಳೆಗಾರರು ಈಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಳೆ ಹೆಚ್ಚಾದ್ರೂ ತೊಂದರೆ. ಮಳೆ ಬಾರದಿದ್ರೂ ತೊಂದರೆ. ಹೀಗೆ ಸಂಕಷ್ಟದ ಮೇಲೆ ಸಂಕಷ್ಟ ಅನುಭವಿಸುತ್ತಿರೋ ಬೆಳಗಾವಿ ಜಿಲ್ಲೆಯ ರೈತರು ಈಗ ಮಂಜಿನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ಭಾಗದಲ್ಲಿ ದ್ರಾಕ್ಷಿ ಬೆಳೆಯನ್ನೇ ಹೆಚ್ಚಾಗಿ ಬೆಳೆಯಲಾಗ್ತಿದೆ. ಆದ್ರೆ ಕಳೆದ ವರ್ಷದ ನವೆಂಬರ್‌ನಲ್ಲಿ ಸುರಿದ ಅಕಾಲಿಕ ಮಳೆ ದ್ರಾಕ್ಷಿ ಇಳುವರಿಗೆ ಪೆಟ್ಟು ನೀಡಿದೆ. ಇದ್ರ ಮಧ್ಯೆಯೂ ಅಳಿದುಳಿದ ಬೆಳೆಯನ್ನೇ ಮಾರ್ಕೆಟ್‌ಗೆ ಸಾಗಿಸಿ ಮಾರಾಟ ಮಾಡ್ಬೇಕು ಅಂದ್ರೆ ಅದು ಕೂಡಾ ಸಾಧ್ಯವಾಗ್ತಿಲ್ಲ. ಪ್ರತಿದಿನ ಬೆಳಗ್ಗೆ ಬೀಳುತ್ತಿರುವ ನೀರು ಮಂಜಿನಿಂದಾಗಿ ದ್ರಾಕ್ಷಿ ಹಣ್ಣಿನ ಕೆಳ ಭಾಗ ಕಪ್ಪು ಬಣ್ಣಕ್ಕೆ ತಿರುಗಿ ಕೊಳೆಯುತ್ತಿವೆ. ಹಣ್ಣು ರುಚಿಯಾಗಲು ಇನ್ನೂ 15 ರಿಂದ 20 ದಿನ ಬೇಕು. ಆದ್ರೆ ಅಲ್ಲಿಯವರೆಗೂ ಕಾದು ಕೂತ್ರೆ ಇಡೀ ಗೊಂಚಲು ಕೊಳೆತು ಹೋಗಲಿದೆ. ಹೀಗಾಗಿ ಸಿಹಿಯಾಗೋ ಮೊದಲೇ ಕಟಾವು ಮಾಡ್ತಿದ್ದಾರೆ.
ಇನ್ನೂ ಅಥಣಿ ತಾಲೂಕಿನಲ್ಲಿ ನೀರಿನ ಪ್ರಮಾಣ ಕೂಡ ಕಡಿಮೆ ಇರುವುದರಿಂದ ಹೆಚ್ಚಾಗಿ ಇಲ್ಲಿಯ ರೈತರು ದ್ರಾಕ್ಷಿ ಬೆಳೆಯುತ್ತಾರೆ. ಇಷ್ಟೆಲ್ಲ ಕಷ್ಟಪಟ್ಟು ಔಷಧೋಪಚಾರ ಮಾಡಿ ಚಿಕ್ಕ ಮಕ್ಕಳಂತೆ ಬೆಳೆಯನ್ನ ಜೋಪಾನ ಮಾಡಿ ಬೆಳೆದಿದ್ದಾರೆ. ಆದ್ರೆ ಈಗ ಸುರಿಯುತ್ತಿರೋ ಮಂಜು ಬೆಳೆಯನ್ನೇ ಹಾಳು ಮಾಡ್ತಿದೆ. ಮತ್ತೊಂದೆಡೆ ದ್ರಾಕ್ಷಿ ಹಣ್ಣಿಗಿಂತ ಒಣದ್ರಾಕ್ಷಿಗೆ ಹೆಚ್ಚು ಬೆಲೆ ಇದೆ. ಆದ್ರೆ ಒಣಗಿಸಿ ಸಂಗ್ರಹಿಸಿ ಇಡಲು ಇಲ್ಲಿ ಕೊಲ್ಡ್‌ಸ್ಟೋರೇಜ್ ವ್ಯವಸ್ಥೆ ಇಲ್ಲ. ಹೀಗಾಗಿ ಮಹಾರಾಷ್ಟ್ರದ ಸಾಂಗಲಿ, ಮಿರಜ್ ಗೆ ತಗೆದುಕೊಂಡು ಹೋಗಿ ಮಾರಾಟ ಮಾಡ್ತಿದ್ದಾರೆ. ಅವರು ಕೊಟ್ಟೊಷ್ಟು ದರಕ್ಕೆ ಮಾರಾಟ ಮಾಡಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಒಟ್ನಲ್ಲಿ ಸಾಲಸೋಲ ಮಾಡಿ ಉತ್ತಮ ಬೆಳೆ ಬೆಳೆದಿದ್ದ ದ್ರಾಕ್ಷಿ ಬೆಳೆಗಾರರು ಉತ್ತಮ ಲಾಭದ ಕನಸಿನಲ್ಲಿದ್ರು. ಆದ್ರೆ ಪ್ರಕೃತಿಯ ಆಟಕ್ಕೆ ಕಂಗಾಲಾಗಿದ್ದಾರೆ.
ವರದಿ: ವಿನಾಯಕ್, ಟಿವಿ9 ಚಿಕ್ಕೋಡಿ
ಇದನ್ನೂ ಓದಿ: Rohit Sharma: ಪಂದ್ಯ ಮುಗಿದ ಬಳಿಕ ಖುಷಿಯಲ್ಲಿ ರೋಹಿತ್ ಶರ್ಮಾ ಆಡಿದ ಮಾತು ನೀವೇ ಕೇಳಿ
Nerve Pain Home Remedies: ನರಗಳಲ್ಲಿ ಉಂಟಾಗುವ ನೋವನ್ನು ನಿವಾರಿಸಲು ಇಲ್ಲಿದೆ ಸರಳ ಮಾರ್ಗ