ದಕ್ಷಿಣ ಭಾರತದವರು ಜೀವನಕ್ಕಾಗಿ ಹಿಂದಿ ಹೃದಯಭಾಗಕ್ಕೆ ಹೋಗುವುದಿಲ್ಲ ಎಂದ ಪ್ರಿಯಾಂಕ್ ಖರ್ಗೆ; ಟ್ವಿಟರ್​​ನಲ್ಲಿ ತೀವ್ರ ಆಕ್ಷೇಪ

ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತರಹೇವಾರಿ ಪ್ರತಿಕ್ರಿಯೆಗಳು ಟ್ವಿಟರ್​​ನಲ್ಲಿ ವ್ಯಕ್ತವಾಗಿವೆ. ಅನೇಕರು, ಖರ್ಗೆ ಹೇಳಿಕೆ ವಾಸ್ತವಕ್ಕೆ ದೂರವಾದದ್ದು ಎಂದು ಕೆಲವು ಉದಾಹರಣೆಗಳ ಸಮೇತ ಪ್ರತಿಕ್ರಿಯಿಸಿದ್ದಾರೆ.

ದಕ್ಷಿಣ ಭಾರತದವರು ಜೀವನಕ್ಕಾಗಿ ಹಿಂದಿ ಹೃದಯಭಾಗಕ್ಕೆ ಹೋಗುವುದಿಲ್ಲ ಎಂದ ಪ್ರಿಯಾಂಕ್ ಖರ್ಗೆ; ಟ್ವಿಟರ್​​ನಲ್ಲಿ ತೀವ್ರ ಆಕ್ಷೇಪ
ಪ್ರಿಯಾಂಕ್ ಖರ್ಗೆ

Updated on: Aug 03, 2023 | 9:06 PM

ಬೆಂಗಳೂರು: ಕನ್ನಡಿಗರು ಉದ್ಯೋಗ ಅರಸಿಕೊಂಡು ಉತ್ತರ ಪ್ರದೇಶ (Uttar Pradesh) ಅಥವಾ ಹಿಂದಿ ಹೃದಯಭಾಗಕ್ಕೆ ಹೋಗುವುದಿಲ್ಲ. ಆದರೆ ಅಲ್ಲಿನವರು ದಕ್ಷಿಣ ಭಾರತಕ್ಕೆ ಉದ್ಯೋಗಕ್ಕಾಗಿ ಬರುತ್ತಾರೆ ಎಂದು ಕರ್ನಾಟಕದ ಐಟಿ, ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಚಿವರ ಹೇಳಿಕೆಗೆ ಅನೇಕರು ಆಕ್ಷೇಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತರಹೇವಾರಿ ಪ್ರತಿಕ್ರಿಯೆಗಳು ಟ್ವಿಟರ್​​ನಲ್ಲಿ ವ್ಯಕ್ತವಾಗಿವೆ. ಅನೇಕರು, ಖರ್ಗೆ ಹೇಳಿಕೆ ವಾಸ್ತವಕ್ಕೆ ದೂರವಾದದ್ದು ಎಂದು ಕೆಲವು ಉದಾಹರಣೆಗಳ ಸಮೇತ ಪ್ರತಿಕ್ರಿಯಿಸಿದ್ದಾರೆ.

ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

ಉದ್ಯೋಗಕ್ಕಾಗಿ ಉತ್ತರ ಪ್ರದೇಶಕ್ಕೆ ಹೋಗುತ್ತಿದ್ದೇನೆ ಎಂದು ಯಾರಾದರೂ ಕನ್ನಡಿಗರು ಹೇಳಿದ್ದನ್ನು ಕೇಳಿದ್ದೀರಾ? ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶದ ಅನೇಕ ಜನರು ಕರ್ನಾಟಕದಲ್ಲಿ ಇರುವುದನ್ನು ನಾನು ನಿಮಗೆ ತೋರಿಸಿಕೊಡಬಲ್ಲೆ. ಇಲ್ಲಿನ ವ್ಯವಸ್ಥೆಯಿಂದಾಗಿ ಅವರು ಇಲ್ಲಿಗೆ ಬರುತ್ತಾರೆ. ದಕ್ಷಿಣ ಭಾರತಕ್ಕೆ ಹೋಗಿ ಅಲ್ಲಿ ಜೀವನ ಕಂಡುಕೊಳ್ಳಬಹುದು ಎಂದು ಹಿಂದಿ ಹೃದಯಭಾಗದ ಜನ ಭಾವಿಸುತ್ತಾರೆ. ದಕ್ಷಿಣ ಭಾರತದ ಯಾರೊಬ್ಬರೂ ತಾವು ಹಿಂದಿ ಹೃದಯ ಭಾಗಕ್ಕೆ ತೆರಳಿ ಅಲ್ಲಿ ಜೀವಿಸಬಹುದು ಎಂದು ಭಾವಿಸುವುದಿಲ್ಲ. ಇದಕ್ಕೆ ಅಲ್ಲಿನ ಸಾಮಾಜಿಕ ಮೂಲಸೌಕರ್ಯ ಕಾರಣ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದರು.

ಇದನ್ನೂ ಓದಿ: ಶಾಸಕತ್ವ ಅಸಿಂಧು ಕೋರಿ ಅರ್ಜಿ: ಮಾಜಿ ಸಚಿವ ಹೆಚ್​ಡಿ ರೇವಣ್ಣಗೆ ಹೈಕೋರ್ಟ್ ನೋಟಿಸ್, ಸಚಿವ ಪ್ರಿಯಾಂಕ್ ಖರ್ಗೆಗೆ ಸಮನ್ಸ್​ ಜಾರಿ

ಇದಕ್ಕೆ The Uttar Pradesh Index ಎಂಬ ಟ್ವಿಟರ್​​ ಹ್ಯಾಂಡಲ್ ಖಾರವಾಗಿ ಪ್ರತಿಕ್ರಿಯಿಸಿದೆ. ಉತ್ತರ ಪ್ರದೇಶದ ಜನರು ಇಂತಹ ದುರಹಂಕಾರದ ಹೇಳಿಕೆಗಳನ್ನು ರಾಜ್ಯದ ಅಭಿವೃದ್ಧಿಗೆ ಸರಿಯಾದ ಕೆಲಸಗಳನ್ನು ಮಾಡಲು ಸವಾಲಾಗಿ ತೆಗೆದುಕೊಳ್ಳುತ್ತಾರೆ. ಇನ್ನು 5 ವರ್ಷಗಳಲ್ಲಿ, ಪ್ರಿಯಾಂಕ್ ಖರ್ಗೆಯಂತಹವರು ಎಲ್ಲಿಗೂ ಹೋಗಬೇಕಿಲ್ಲ. ಆದರೆ ಉತ್ತರ ಪ್ರದೇಶದ ಜನರು ನಾವು ಹೆಮ್ಮೆಯಿಂದ ಹೇಳಿಕೊಳ್ಳಲಿರುವ ಕೆಲವು ವಿಷಯಗಳನ್ನು ಇಲ್ಲಿ ನೀಡಿದ್ದೇವೆ ಎಂದು ಕೆಲವೊಂದು ವಿಷಯಗಳನ್ನು ಪಟ್ಟಿ ಮಾಡಿದೆ.


1 ಟ್ರಿಲಿಯನ್ USD ಆರ್ಥಿಕತೆ, ರಫ್ತಿನಲ್ಲಿ ಅಗ್ರ 3ನೇ ಸ್ಥಾನ, 12 ನಗರಗಳಲ್ಲಿ ಮೆಟ್ರೋ ಸೇವೆಗಳು, 3,500 ಕಿಮೀ ಎಕ್ಸ್‌ಪ್ರೆಸ್‌ವೇ ಜಾಲ, 7 ಅಂತರರಾಷ್ಟ್ರೀಯ ಸೇರಿದಂತೆ 22 ವಿಮಾನ ನಿಲ್ದಾಣಗಳು, 25 ವಿಶ್ವ ದರ್ಜೆಯ ರೈಲ್ವೆ ಮತ್ತು ಬಸ್ ನಿಲ್ದಾಣಗಳು, ಭಾರತದ ಪ್ರಮುಖ 3 ಪ್ರವಾಸಿ ತಾಣಗಳು, 2 ಕೋಟಿ ಹೊಸ ಉದ್ಯೋಗಗಳು ಮತ್ತು ಸ್ವಯಂ ಉದ್ಯೋಗ ಅವಕಾಶಗಳು ಉತ್ತರ ಪ್ರದೇಶದಲ್ಲಿವೆ ಎಂದು The Uttar Pradesh Index ಉಲ್ಲೇಖಿಸಿದೆ. ಈ ಟ್ವೀಟ್ 10 ಲಕ್ಷ ವೀಕ್ಷಣೆ, 2,550 ರಿಟ್ವೀಟ್​ ಹಾಗೂ 9,484 ಲೈಕ್​​ ಪಡೆದಿದೆ.

‘ನಾನು ಕಾನ್ಪುರದಲ್ಲಿ ಬೆಳೆದು ಐಐಟಿ ಕಾನ್ಪುರದಲ್ಲಿ ಓದಿದೆ. ಅಲ್ಲಿ ಇದ್ದ ಅಧ್ಯಾಪಕರಲ್ಲಿ ಅನೇಕರು ಕನ್ನಡಿಗರಾಗಿದ್ದರು. ಇನ್ಫೋಸಿಸ್‌ನ ಇಬ್ಬರು ಸಂಸ್ಥಾಪಕರು ಐಐಟಿ ಕಾನ್ಪುರದ ಪದವೀಧರರು. ಎಚ್‌ಎಎಲ್‌ನಲ್ಲಿ ಹಳೆಯ ಅವ್ರೊ ವಿಮಾನವನ್ನು ನಿರ್ಮಿಸುವ ಕಾರ್ಖಾನೆ ಇತ್ತು, ಅಲ್ಲಿ ಬೆಂಗಳೂರಿಗರು ಕೆಲಸ ಮಾಡುತ್ತಿದ್ದರು. ಭಾರತ ಒಗ್ಗಟ್ಟಾಗಿ ಉಳಿಯಬೇಕು, ಉತ್ತರ ಪ್ರದೇಶವನ್ನು ಕೆಣಕಲು ಖರ್ಗೆ ಮುಂದಾಗಬಾರದು ಎಂದು ಗುಂಜನ್ ಬಾಗ್ಲಾ ಎಂಬವರು ಪ್ರತಿಕ್ರಿಯಿಸಿದ್ದಾರೆ.


ಇದೇ ರೀತಿ ಇನ್ನೂ ಅನೇಕ ಮಂದಿ ಖರ್ಗೆ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ