ಕಾಂಗ್ರೆಸ್ ಶಾಸಕರ ವಿರುದ್ಧ ಸ್ಪೀಕರ್ ಗರಂ; ಬೇಕಿದ್ದರೆ ಸರ್ಕಾರದ ವಿರುದ್ಧ ಸದನದ ಹೊರಗೆ ಹೋರಾಟ ನಡೆಸಲು ಮನವಿ

| Updated By: ಸಾಧು ಶ್ರೀನಾಥ್​

Updated on: Mar 23, 2021 | 4:34 PM

‘ವಿರೋಧ ಪಕ್ಷದ ನಾಯಕರಾದ ನಿಮಗೆ ವಿರೋಧಿಸಲು ಹಕ್ಕಿದೆ.ಆ ಹಕ್ಕಿನ ಅನುಸಾರವಾಗಿ ನೀವು ಸದನದಲ್ಲಿ ವಿರೋಧಿಸಿದ್ದೀರಿ. ಆದರೆ ಈಗ ಕಲಾಪ ಮುಂದುವರೆಸಲು ನಿಮ್ಮ ವಿರೋಧ ಅಡ್ಡಿಯಾಗುತ್ತಿದೆ. ನಿಮಗೆ ಸರ್ಕಾರದ ಯಾವುದೇ ನಿರ್ಧಾರದ ಕುರಿತು ಯಾವುದೇ ವಿರೋಧವಿದ್ದರೂ ಸದನದ ಹೊರಗೆ ಪ್ರತಿಭಟನೆ ನಡೆಸಿ...

ಕಾಂಗ್ರೆಸ್ ಶಾಸಕರ ವಿರುದ್ಧ ಸ್ಪೀಕರ್ ಗರಂ; ಬೇಕಿದ್ದರೆ ಸರ್ಕಾರದ ವಿರುದ್ಧ ಸದನದ ಹೊರಗೆ ಹೋರಾಟ ನಡೆಸಲು ಮನವಿ
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
Follow us on

ಬೆಂಗಳೂರು:  ವಿಧಾನಸಭಾ ಕಲಾಪದಲ್ಲಿ ಕಾಂಗ್ರೆಸ್ ಶಾಸಕರ ಧರಣಿ, ಗದ್ದಲಗಳು ಹೆಚ್ಚುತ್ತಿದ್ದಂತೆಯೇ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಗರಂ ಆದರು. ಯಾವುದೇ ವಿಷಯಗಳ ಕುರಿತು ಚರ್ಚೆ ನಡೆಸಲು ಮುಂದಾದರೂ ಕಾಂಗ್ರೆಸ್ ಶಾಸಕರು ಸಹಕಾರ ನೀಡುತ್ತಿಲ್ಲ. ಕಾಂಗ್ರೆಸ್​ನ ಹಲವು ಶಾಸಕರ ಮುಂದೆ ನಾನು ತುಂಬಾ ಚಿಕ್ಕವನು. ಆದರೂ ಒಂದು ಮಾತು ಹೇಳುತ್ತೇನೆ. ದಯವಿಟ್ಟು ವಿಧಾನಸಭಾ ಕಲಾಪದಲ್ಲಿ ಚರ್ಚೆ ಸುಗಮವಾಗಿ ನಡೆಯಲು ಸಹಕಾರ ನೀಡಿ ಎಂದು ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ ಮಾಡಿದರು.

ಆದರೂ ಜಗ್ಗದ ಕಾಂಗ್ರೆಸ್ ಶಾಸಕರು, ಸರ್ಕಾರದ ವಿರುದ್ಧ ಗಲಾಟೆ ಮುಂದೂಡಿದರು. ಆಗ ಮತ್ತೆ ಮಾತಿಗಿಳಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ‘ವಿರೋಧ ಪಕ್ಷದ ನಾಯಕರಾದ ನಿಮಗೆ ವಿರೋಧಿಸಲು ಹಕ್ಕಿದೆ. ಆ ಹಕ್ಕಿನ ಅನುಸಾರವಾಗಿ ನೀವು ಸದನದಲ್ಲಿ ವಿರೋಧಿಸಿದ್ದೀರಿ. ಆದರೆ ಈಗ ಕಲಾಪ ಮುಂದುವರೆಸಲು ನಿಮ್ಮ ವಿರೋಧ ಅಡ್ಡಿಯಾಗುತ್ತಿದೆ. ನಿಮಗೆ ಸರ್ಕಾರದ ಯಾವುದೇ ನಿರ್ಧಾರದ ಕುರಿತು ಯಾವುದೇ ವಿರೋಧವಿದ್ದರೂ ಸದನದ ಹೊರಗೆ ಪ್ರತಿಭಟನೆ ನಡೆಸಿ’ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದರು.

ಈ ಮುನ್ನ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಎಚ್.ವೈ. ಮೇಟಿ ಸಿಡಿ ಪ್ರಕರಣದ ತನಿಖೆಗೆ ಆದೇಶ ಮಾಡಿದ ರೀತಿಯನ್ನು ಸಂಸದೀಯ ವ್ಯವಹಾರಗಳ ಮತ್ತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರಸ್ತಾಪಿಸಿದರು. ಅವರ ಮಾತು ಕೇಳದಷ್ಟು ಜೋರಾಗಿ ವಿಪಕ್ಷ ಕಾಂಗ್ರೆಸ್ ಸದಸ್ಯರು ಗಲಾಟೆ ನಡೆಸಿದರು.

ಸರ್ಕಾರ ಮೊಂಡುತನಕ್ಕೆ ಬಿದ್ದು ಅತ್ಯಾಚಾರ ಮಾಡಿದವರನ್ನು ರಕ್ಷಣೆ ಮಾಡಲು ಹೊರಟಿದೆ. ಸಂತ್ರಸ್ತೆಗೆ ರಕ್ಷಣೆ ಕೊಟ್ಟಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು. ಈ ಘಟನೆಗಳು ನಡೆಯುವಾಗ ಕಾಂಗ್ರೆಸ್ ಶಾಸಕರ ವಿರೋಧಕ್ಕೆ ತಿರುಗೇಟು ನೀಡಲು ಸದನದಲ್ಲಿ ಆಡಳಿತ ಪಕ್ಷ ಬಿಜೆಪಿಯ ಶಾಸಕರ ಕೊರತೆ ಇರುವುದು ಗಮನಸೆಳೆಯಿತು.

ಕಾಂಗ್ರೆಸ್ ಶಾಸಕರ ಗಲಾಟೆ ಮತ್ತು ಧರಣಿ ನಿಲ್ಲದ ಕಾರಣ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಲಾಪವನ್ನು ನಾಳೆ ಬೆಳಗ್ಗೆ 10:30ಕ್ಕೆ ಮುಂದೂಡಿದರು. ತದನಂತರ ಸದನದಲ್ಲಿ ನಾಳೆಯೂ ಧರಣಿ ಮುಂದುವರಿಸಲು ಕಾಂಗ್ರೆಸ್ ತೀರ್ಮಾನ ಕೈಗೊಂಡಿತು.

ಒಟ್ಟಿನಲ್ಲಿ ಇಂದಿನ ವಿಧಾನಸಭೆಯ ಮಧ್ಯಾಹ್ನದ ಅಧಿವೇಶನ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಬಲಿಯಾಯಿತು.

ಇದನ್ನೂ ಓದಿ:‘ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ರಮೇಶ್ ಜಾರಕಿಹೊಳಿ ಪ್ರಕರಣದ ತನಿಖೆಯಾಗಲಿ‘; ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯ

ಬಾಂಬೆಗೆ ಹೋದವರು ಮಾತ್ರ ಯಾಕೆ ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್​ಗೆ ಹೋದ್ರು? ಸದನದಲ್ಲಿ ಸಿದ್ದರಾಮಯ್ಯ ವ್ಯಂಗ್ಯ

Published On - 4:32 pm, Tue, 23 March 21