ಕನ್ನಡಕ್ಕೆ ಅನ್ಯಾಯ ಆಗುತ್ತಿರುವ ಬಗ್ಗೆ ಸದನದಲ್ಲಿ ಮಾತನಾಡುವವರೇ ಇಲ್ಲವಾಗಿದ್ದಾರೆ: ವಾಟಾಳ್ ನಾಗರಾಜ್
ಸದನದಲ್ಲಿ ಚರ್ಚೆ ನಡೆಯುವ ವಿಧಾನ ಹದಗೆಟ್ಟಿದೆ. ವಿಧಾನಸಭೆ ಕಲಾಪದಲ್ಲಿ ಪ್ರಾಮಾಣಿಕವಾದ ಚರ್ಚೆ ನಡೆಯುತ್ತಿಲ್ಲ. ಸಿಡಿಯಲ್ಲಿದ್ದ ಯುವತಿ ಸಿಕ್ಕಿಲ್ಲ. ನಮ್ಮನ್ನ ಹಿಡಿಯಲು ಗಡಿಭಾಗಕ್ಕೆ ಬರುತ್ತಾರೆ ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಬೆಳಗಾವಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ 25 ದಿನ ಮಾತನಾಡದವರು ಈಗ ಸಿಡಿ ಚರ್ಚೆ ಶುರು ಮಾಡಿದ್ದಾರೆ. ಸದನದಲ್ಲಿ ಶಿವಸೇನೆ, ಎಂಇಎಸ್ ಪುಂಡಾಟಿಕೆ ಬಗ್ಗೆ ಮಾತನಾಡಿಲ್ಲ. ಇಂದು ಸದನದಲ್ಲಿ ಕನ್ನಡದ ಬಗ್ಗೆ, ಈ ರೀತಿಯ ಅನ್ಯಾಯದ ಬಗ್ಗೆ ಮಾತನಾಡುವವರಿಲ್ಲ ಎಂದು ಬೆಳಗಾವಿಯಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದಾರೆ.
ಸದನದಲ್ಲಿ ಚರ್ಚೆ ನಡೆಯುವ ವಿಧಾನ ಹದಗೆಟ್ಟಿದೆ. ವಿಧಾನಸಭೆ ಕಲಾಪದಲ್ಲಿ ಪ್ರಾಮಾಣಿಕವಾದ ಚರ್ಚೆ ನಡೆಯುತ್ತಿಲ್ಲ. ಸಿಡಿಯಲ್ಲಿದ್ದ ಯುವತಿ ಸಿಕ್ಕಿಲ್ಲ. ನಮ್ಮನ್ನ ಹಿಡಿಯಲು ಗಡಿಭಾಗಕ್ಕೆ ಬರುತ್ತಾರೆ. ಆ ಹೆಣ್ಣು ಮಗಳನ್ನು ಹಿಡಿಯಲು ಆಗದಿದ್ದರೆ ಇವರಿನ್ನೇನು ಮಾಡ್ತಾರೆ? ಬಸವರಾಜ ಬೊಮ್ಮಾಯಿ ಕೆಳಮಟ್ಟದ ಗೃಹಮಂತ್ರಿ, ಅವನಿಗೇಕೆ ಗೃಹಮಂತ್ರಿ ಸ್ಥಾನ ಕೊಟ್ಟರೋ? ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಎಂತೆಂತಹ ಗೃಹ ಮಂತ್ರಿಗಳು ಇದ್ದರು. ನಿಜಲಿಂಗಪ್ಪ ಸರ್ಕಾರದಲ್ಲಿ ಎಂ.ವಿ.ರಾಮರಾವ್ ರಂತಹ ಗೃಹಮಂತ್ರಿ ಇದ್ದರು. ಸದನದಲ್ಲಿಯೇ ಎಂ.ವಿ.ರಾಮರಾವ್ ರಾಜೀನಾಮೆ ಕೊಟ್ಟಿದ್ರು. ಹೋಮ್ ಮಿನಿಸ್ಟರ್, ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಬೆಳಗಾವಿ ಪೊಲೀಸರು ಎಂಇಎಸ್ ಶಿವಸೇನೆಗೆ ಹೆದರುತ್ತಾರೆ. ನಾವು ಇದರ ವಿರುದ್ಧ ಹೋರಾಟ ಮಾಡುತ್ತೇವೆ. ಕನ್ನಡ ಬಾವುಟ ಹಿಡಿದು ನಾವು ಗಡಿಯೊಳಗೆ ಹೋಗುತ್ತೇವೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.
ಇನ್ನು ಕನ್ನಡದ ಪರ ಸರ್ಕಾರ ನಿಲುವುಗಳ ಬಗ್ಗೆ ಮಾತನಾಡಿದ ಅವರು ಕನ್ನಡ ಪರ ಮಾತನಾಡುವ ಒಬ್ಬ ಶಕ್ತಿವಂತ ಪಾರ್ಲಿಮೆಂಟ್ಗೆ ನಿಲ್ಲಬೇಕು. ಕನ್ನಡಿಗರು ತೀರ್ಮಾನಕ್ಕೆ ಬಂದು ಅಂತಹ ಒಬ್ಬನನ್ನು ಚುನಾವಣೆಗೆ ನಿಲ್ಲಿಸಬೇಕು. ಇಲ್ಲಿ ಎಲ್ಲಾ ಕನ್ನಡಪರ ಸಂಘಟನೆ ನಿರ್ಧರಿಸಿದರೆ ಒಬ್ಬ ಅಭ್ಯರ್ಥಿ ನಿಲ್ಲಿಸಲು ಸಾಧ್ಯ. ಅವರ ಪ್ರಚಾರಕ್ಕೆ ಸಿದ್ಧ. ವಿಧಾನಸಭೆ ಚುನಾವಣೆಗೆ ಕಡಿಮೆ ಅಂದರೆ 25 ಕೋಟಿ, ಪಾರ್ಲಿಮೆಂಟ್ ಗೆ 50 ಕೋಟಿ ಖರ್ಚಾಗುತ್ತದೆ. ಉಪಚುನಾವಣೆಗೆ 100 ಕೋಟಿ ರೂಪಾಯಿ ಹೋಗಬಹುದು. ಒಟ್ಟಿನಲ್ಲಿ ಉಪಚುನಾವಣೆ ಒಂದು ರೀತಿ ಪಿಡಬ್ಲ್ಯೂಡಿ ಹರಾಜು ಇದ್ದಂತೆ ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಬೆಳಗಾವಿಯನ್ನು ಸರ್ಕಾರ ಮತ್ತು ಮುಖ್ಯಮಂತ್ರಿ ಗಂಭೀರವಾಗಿ ಪರಿಗಣಿಸಿಲ್ಲ. ಯಡಿಯೂರಪ್ಪ ಅವರಿಗೆ ಗಡಿ ಸಮಸ್ಯೆ, ಗಡಿನಾಡಿನ ಪರಿಸ್ಥಿತಿ ಬೇಕಿಲ್ಲ. ಕರ್ನಾಟಕದ ಇತಿಹಾಸದಲ್ಲಿ ಇಂತಹ ಮುಖ್ಯಮಂತ್ರಿ ಬಂದಿರಲಿಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಅವರಪ್ಪ ಬಾಳಾ ಠಾಕ್ರೆ ತಮ್ಮ ಜೀವನವನ್ನೇ ಗಡಿಭಾಗಕ್ಕೆ ಮೀಸಲಿಟ್ಟಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅತ್ಯಂತ ಕೆಳಮಟ್ಟದ ಮುಖ್ಯಮಂತ್ರಿ ಎಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿ ವಿರುದ್ಧ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದ್ದಾರೆ.
ಗಡಿನಾಡು ಸಮಿತಿ ಮಾಡಿದ್ದಾರೆ ಅದು ಏನಾಗಿದೆ ಅದರ ಪರಿಸ್ಥಿತಿ ಏನು ಎಂಬುವುದು ಯಾರಿಗೂ ಗೊತ್ತಿಲ್ಲ. ಸುಪ್ರೀಂಕೋರ್ಟ್ನಲ್ಲಿ ಬೆಳಗಾವಿ ಬಗ್ಗೆ ಮಹಾರಾಷ್ಟ್ರ ಸರ್ಕಾರ ತೀವ್ರವಾಗಿ ದಾಂಧಲೆ ಮಾಡಲು ಹೊರಟಿದೆ. ಸುವರ್ಣಸೌಧ ಯಾವುದಕ್ಕಾಗಿ ಕಟ್ಟಿದ್ದರು, ಇದರ ಉಪಯೋಗ ಏನು? ಎಂಬುವುದು ತಿಳಿಯಬೇಕು. ಕನಿಷ್ಠ ವರ್ಷಕ್ಕೆ ಒಂದು ಸಾರಿಯೂ ಪರಿಣಾಮಕಾರಿ ಚರ್ಚೆ ಇಲ್ಲಿ ಆಗಲಿಲ್ಲ. ಸುವರ್ಣಸೌಧ ಒಂದು ರೀತಿ ದೆವ್ವದ ಮನೆಯಾಗಿದೆ. ಒಬ್ಬ ರಾಜಕಾರಣಿ, ಮಂತ್ರಿ ಅಲ್ಲಿಗೆ ಹೋಗಲ್ಲ. ಸರಿಯಾದ ಕಾರ್ಯಾಲಯ ಇಲ್ಲ, ಇದು ಕನ್ನಡಿಗರಿಗೆ ಮಾಡಿದ ದ್ರೋಹ. ಎಂಇಎಸ್‌ಗೆ ಬೆಳಗಾವಿ ಜಿಲ್ಲಾಡಳಿತ ಮಣೆ ಹಾಕಿ ಗೌರವ ಕೊಡುತ್ತಿದೆ ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಇದನ್ನೂ ಓದಿ:
ಏರ್ಶೋನಲ್ಲಿ ಕಣ್ಮರೆಯಾದ ಕನ್ನಡ.. ನಿಮಗೆ ಮಾನ ಮರ್ಯಾದೆ ಯಾವುದೂ ಇಲ್ಲ ಎಂದು ಆಕ್ರೋಶ ಹೊರ ಹಾಕಿದ ವಾಟಾಳ್