Karnataka Rains: ಕರ್ನಾಟಕದ ವಿವಿಧೆಡೆ ಮಳೆ ಅಬ್ಬರ: ಉಕ್ಕಿ ಹರಿಯುತ್ತಿವೆ ಹಲವು ನದಿಗಳು, ವಿವಿಧೆಡೆ ರಸ್ತೆ ಸಂಪರ್ಕ ಕಡಿತ, ಗುಡ್ಡಕುಸಿತ

| Updated By: ganapathi bhat

Updated on: Jul 23, 2021 | 7:02 PM

ಬೆಳಗಾವಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಮಲಪ್ರಭಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನವಿಲುತೀರ್ಥ ಜಲಾಶಯದಿಂದ ನದಿಗೆ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ರಾಮದುರ್ಗ ತಾಲೂಕಿನ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

Karnataka Rains: ಕರ್ನಾಟಕದ ವಿವಿಧೆಡೆ ಮಳೆ ಅಬ್ಬರ: ಉಕ್ಕಿ ಹರಿಯುತ್ತಿವೆ ಹಲವು ನದಿಗಳು, ವಿವಿಧೆಡೆ ರಸ್ತೆ ಸಂಪರ್ಕ ಕಡಿತ, ಗುಡ್ಡಕುಸಿತ
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: ರಾಜ್ಯದ ವಿವಿಧೆಡೆ ಶುಕ್ರವಾರವೂ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಹಲವು ನದಿಗಳು ಉಕ್ಕಿ ಹರಿಯುತ್ತಿವೆ. ಕೆರೆ-ಕಟ್ಟೆಗಳು ಭರ್ತಿಯಾಗಿದ್ದು, ಹಲವು ಸೇತುವೆಗಳು ಮುಳುಗಡೆಯಾಗಿವೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಭೂಕುಸಿತ ಸಂಭವಿಸಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ.

ಪ್ರವಾಹಪೀಡಿತ ಪ್ರದೇಶಗಳಿಗೆ ನಾಲ್ಕು ಎನ್​ಡಿಆರ್​ಎಫ್ ತಂಡ ಕಳಿಸಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಕೃಷ್ಣಾ ನದಿಯಿಂದ ಹೊರ ಹರಿವು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇಬ್ಬರು ನಾಪತ್ತೆಯಾಗಿದ್ದಾರೆ. ಭಾರಿ ಮಳೆಯಿಂದ 18 ತಾಲೂಕುಗಳಲ್ಲಿ ಹಾನಿ ಆಗಿದೆ. ಸಂತ್ರಸ್ತರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಿದ್ದೇವೆ. ಹಾನಿ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ. ಎಲ್ಲ ಜಿಲ್ಲಾಧಿಕಾರಿಗಳಿಗೂ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ. ಹತ್ತು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಆಗಿದೆ. ಇನ್ನೂ ಮೂರು ದಿನಗಳ ಕಾಲ ಹೆಚ್ಚಿನ ಮಳೆಯಾಗಬಹುದು ಎಂದು ಅಶೋಕ್ ನುಡಿದರು.

ಬೆಳಗಾವಿ-ಗೋವಾ ಗಡಿಯ ಕ್ಯಾಸಲ್ ರಾಕ್ ಬಳಿ ಗುಡ್ಡ ಕುಸಿದಿದ್ದು ರೈಲು ಹಳಿಗಳ ಮೇಲೆ ಮಣ್ಣು ಬಿದ್ದಿದೆ. ದೆಹಲಿ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ ಸೇರಿದಂತೆ ವಿವಿಧೆಡೆಯಿಂದ ಬರುತ್ತಿದ್ದ ರೈಲು ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಹಲವು ರೈಲುಗಳನ್ನು ಖಾನಾಪುರ ತಾಲ್ಲೂಕಿನ ಲೋಂಡಾ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ. ಗೋವಾ-ಬೆಳಗಾವಿ ನಡುವಣ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಮಣ್ಣು ತೆರವು ಕಾರ್ಯಾಚರಣೆಯನ್ನು ರೈಲ್ವೆ ಇಲಾಖೆ ಸಿಬ್ಬಂದಿ ಆರಂಭಿಸಿದ್ದಾರೆ.

ಬೆಳಗಾವಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಮಲಪ್ರಭಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನವಿಲುತೀರ್ಥ ಜಲಾಶಯದಿಂದ ನದಿಗೆ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ರಾಮದುರ್ಗ ತಾಲೂಕಿನ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ನದಿ ತೀರದ ಗ್ರಾಮಸ್ಥರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಬೆಳಗಾವಿ ಜಿಲ್ಲೆಯ ಲೋಂಡಾ ಬಳಿ ಪಾಂಡ್ರಿ ನದಿಯ ಪ್ರವಾಹದಲ್ಲಿ ಮುಳುಗಿದ್ದ ತೋಟದ ಮನೆಯಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಸ್ಥಳೀಯರ ನೆರವಿನಿಂದ ರಾಜ್ಯ ವಿಪತ್ತು ನಿರ್ವಹಣಾ ಕಾರ್ಯಪಡೆ ರಕ್ಷಿಸಿದೆ. ನದಿಯಲ್ಲಿ ಸಿಲುಕಿದ್ದ ಗಣಪತಿ, ರಕ್ಷಣೆಗಾಗಿ ಮೊಬೈಲ್ ಟಾರ್ಚ್ ತೋರಿಸುತ್ತಿದ್ದರು. ಪಾಂಡ್ರಿ ನದಿಯಲ್ಲಿ ನೀರಿನ ಹರಿವು ಒಂದೇ ಸಮ ಹೆಚ್ಚಾಗುತ್ತಿದ್ದ ಕಾರಣ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಫ್ಲೈ ಕ್ಯಾಚರ್ ಅಡ್ವೆಂಚರ್ ತಂಡದಿಂದ ರೈತ ಗಣಪತಿಯನ್ನು ರಕ್ಷಿಸಿತು.

ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ‌ ವರುಣನ ಆರ್ಭಟ ಮುಂದುವರಿದಿದೆ. ವೇದಗಂಗಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಯಮಗರಣಿ ಗ್ರಾಮಕ್ಕೆ ನುಗ್ಗಿದೆ. ಗ್ರಾಮದ ಇನ್ನೂರಕ್ಕೂ ಅಧಿಕ ಮನೆಗಳು ಸಂಪೂರ್ಣ ಮುಳುಗಡೆಯಾಗಿವೆ. ಜನರು ಬಟ್ಟೆಗಳನ್ನು ತೆಗೆದುಕೊಂಡು ಮನೆಯಿಂದ ಹೊರಗೆ ಬಂದಿದ್ದಾರೆ.

ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ. ಕೃಷ್ಣಾ ನದಿಯ ಒಳಹರಿವಿನ ಪ್ರಮಾಣ 1.91 ಲಕ್ಷ ಕ್ಯೂಸೆಕ್​ಗೆ ಏರಿಕೆಯಾಗಿದೆ. ಕೃಷ್ಣಾ, ದೂದಗಂಗಾ, ವೇದಗಂಗಾ ಹಾಗೂ ಹೀರಣ್ಯಕೇಶಿ ನದಿಗಳು ಉಕ್ಕಿ ಹರಿಯುತ್ತಿವೆ. ನದಿ ತೀರದ ಜನರ ಸ್ಥಳಾಂತರಕ್ಕೆ ಬೆಳಗಾವಿ ಜಿಲ್ಲಾಡಳಿತ ಹರಸಾಹಸ ಮಾಡುತ್ತಿದೆ.

ಇದನ್ನೂ ಓದಿ: Charmady Ghat: ಪ್ರಯಾಣಿಕರೇ ಗಮನಿಸಿ: ರಾತ್ರಿ ಸಂಚಾರಕ್ಕೆ ಚಾರ್ಮಾಡಿ ಘಾಟ್ ಬಂದ್: ಚಿಕ್ಕಮಗಳೂರು ಜಿಲ್ಲಾಧಿಕಾರಿ ಆದೇಶ

Karnataka Rain: ಮಲೆನಾಡಿನಲ್ಲಿ ಮಳೆ ಅಬ್ಬರ; ಕೊಚ್ಚಿ ಹೋದ ಹೆದ್ದಾರಿ, ಗದ್ದೆಗಳಿಗೆ ನುಗ್ಗಿತು ನದಿ ನೀರು

(Karnataka many places faces Heavy Rainfall Rivers Road Transport People face problems)