Karnataka Rain: ಮಲೆನಾಡಿನಲ್ಲಿ ಮಳೆ ಅಬ್ಬರ; ಕೊಚ್ಚಿ ಹೋದ ಹೆದ್ದಾರಿ, ಗದ್ದೆಗಳಿಗೆ ನುಗ್ಗಿತು ನದಿ ನೀರು

ಬೆಂಗಳೂರು: ರಾಜ್ಯದ ಮಲೆನಾಡು ಪ್ರದೇಶದಲ್ಲಿ ಮಳೆ ಅಬ್ಬರ (Heavy Rain) ಹೆಚ್ಚಾಗಿದೆ. ಹಾಸನ ಜಿಲ್ಲೆಯಲ್ಲಿ (Hassan Hemavati River) ಹೇಮಾವತಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಕಾಣಿಸಿಕೊಂಡಿದ್ದರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಭದ್ರಾ ನದಿ (Bhadra River) ಉಕ್ಕಿ ಹರಿಯುತ್ತಿದ್ದು ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಶಿವಮೊಗ್ಗ (Shivamogga Rain) ಜಿಲ್ಲೆಯಲ್ಲಿಯೂ ಮಳೆ ವ್ಯಾಪಕವಾಗಿ ಸುರಿಯುತ್ತಿದ್ದು, ತೀರ್ಥಹಳ್ಳಿ- ಶಿವಮೊಗ್ಗ ರಸ್ತೆಯ ಮೇಲೆ ನೀರು ನಿಂತಿದೆ. ಕೊಡಗು (Kodagu Rain) ಜಿಲ್ಲೆಯಲ್ಲಿ ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು ಹಲವು ಸೇತುವೆಗಳು […]

Karnataka Rain: ಮಲೆನಾಡಿನಲ್ಲಿ ಮಳೆ ಅಬ್ಬರ; ಕೊಚ್ಚಿ ಹೋದ ಹೆದ್ದಾರಿ, ಗದ್ದೆಗಳಿಗೆ ನುಗ್ಗಿತು ನದಿ ನೀರು
ಸಾಂದರ್ಭಿಕ ಚಿತ್ರ
Follow us
| Updated By: ಸುಷ್ಮಾ ಚಕ್ರೆ

Updated on:Jul 23, 2021 | 7:03 PM

ಬೆಂಗಳೂರು: ರಾಜ್ಯದ ಮಲೆನಾಡು ಪ್ರದೇಶದಲ್ಲಿ ಮಳೆ ಅಬ್ಬರ (Heavy Rain) ಹೆಚ್ಚಾಗಿದೆ. ಹಾಸನ ಜಿಲ್ಲೆಯಲ್ಲಿ (Hassan Hemavati River) ಹೇಮಾವತಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಕಾಣಿಸಿಕೊಂಡಿದ್ದರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಭದ್ರಾ ನದಿ (Bhadra River) ಉಕ್ಕಿ ಹರಿಯುತ್ತಿದ್ದು ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಶಿವಮೊಗ್ಗ (Shivamogga Rain) ಜಿಲ್ಲೆಯಲ್ಲಿಯೂ ಮಳೆ ವ್ಯಾಪಕವಾಗಿ ಸುರಿಯುತ್ತಿದ್ದು, ತೀರ್ಥಹಳ್ಳಿ- ಶಿವಮೊಗ್ಗ ರಸ್ತೆಯ ಮೇಲೆ ನೀರು ನಿಂತಿದೆ. ಕೊಡಗು (Kodagu Rain) ಜಿಲ್ಲೆಯಲ್ಲಿ ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು ಹಲವು ಸೇತುವೆಗಳು ಮುಳುಗಿವೆ.

ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಸಕಲೇಶಪುರ ತಾಲ್ಲೂಕಿನ ಮಠಸಾಗರ-ಹಣ್ಣಳ್ಳಿ ನಡುವಿನ ಸೇತುವೆ ಜಲಾವೃತವಾಗಿದೆ. ಹೇಮಾವತಿ ನದಿ ಉಕ್ಕಿ ಹರಿಯುತ್ತಿದೆ. ನದಿ ಆಸುಪಾಸಿನ ನೂರಾರು ಎಕರೆ ಪ್ರದೇಶದಲ್ಲಿದ್ದ ಭತ್ತದ ಗದ್ದೆಗಳು ಜಲಾವೃತಗೊಂಡಿವೆ. ಹೇಮಾವತಿ ಜಲಾಶಯದ ಒಳಹರಿವು 31 ಸಾವಿರ ಕ್ಯುಸೆಕ್​ಗೆ ಏರಿಕೆಯಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ತೀರ್ಥಹಳ್ಳಿ-ಆಗುಂಬೆ ಹೆದ್ದಾರಿ ಮೇಲೆ ನೀರು ಹರಿಯುತ್ತಿದೆ. ತೀರ್ಥಹಳ್ಳಿ ತಾಲೂಕಿನ ಶಿವರಾಜಪುರದ ಹೆದ್ದಾರಿ ಜಲಾವೃತವಾಗಿದೆ. ಶಿವಮೊಗ್ಗದಿಂದ ಮಂಗಳೂರು ಸಂಪರ್ಕ ಕಲ್ಪಿಸುವ ಹೆದ್ದಾರಿಯೂ ಬಂದ್ ಆಗಿದೆ.

ಚಿಕ್ಕಮಗಳೂರು ಜಿಲ್ಲೆ ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಭದ್ರಾ ನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿದ್ದು, ಕಳಸ-ಹೊರನಾಡು ಸಂಪರ್ಕಿಸುವ ರಸ್ತೆ ಮಾರ್ಗ ಬಂದ್ ಆಗಿದೆ. ಎನ್.ಆರ್.ಪುರ ತಾಲೂಕಿನ 8ನೇ ಮೈಲಿಕಲ್ಲು ಬಳಿ ರಸ್ತೆ ಕೊಚ್ಚಿ ಹೋಗಿದ್ದು, ಬಾಳೆಹೊನ್ನೂರು-ಎನ್​.ಆರ್. ಪುರ–ಶಿವಮೊಗ್ಗ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಕೊಡಗಿನಾದ್ಯಂತ ಮಳೆ ಮುಂದುವರಿದಿದ್ದು, ಮುಕ್ಕೋಡ್ಲು ಗ್ರಾಮದಲ್ಲಿ ಲಘು ಗುಡ್ಡ ಕುಸಿತ ಸಂಭವಿಸಿದೆ. ಮುಕ್ಕೋಡ್ಲು ತಂತಿಪಾಲ ರಸ್ತೆ ಸಂಪರ್ಕ‌ ಕಡಿತಗೊಂಡಿದೆ. ಸ್ಥಳಕ್ಕೆ ಶಾಸಕ ಅಪ್ಪಚ್ಚು ರಂಜನ್ ಭೇಟಿ ನೀಡಿದ್ದಾರೆ. ಪೊನ್ನಂಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಲಕ್ಷ್ಮಣತೀರ್ಥ ನದಿ ಉಕ್ಕಿ ಹರಿಯುತ್ತಿದೆ. ನಿಟ್ಟೂರು-ಶ್ರೀಮಂಗಲ‌ ಸಂಪರ್ಕ‌ ಸೇತುವೆ ಮುಳುಗಡೆ ಆಗಿದೆ. ವಿರಾಜಪೇಟೆ ತಾಲ್ಲೂಕಿನ ಹಲವೆಡೆ ಸೇತುವೆಗಳು ಮುಳುಗಿವೆ. ಅರಪಟ್ಟು-ಕಡಂಗ ಸಂಪರ್ಕ‌ ಸೇತುವೆಯೂ ಮುಳುಗಿದ್ದು, ಕಡಂಗ-ನಾಪೋಕ್ಲು ಸಂಪರ್ಕ ಕಡಿತಗೊಂಡಿದೆ. ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಹರಿಹರ-ಕಾನೂರು ರಸ್ತೆ ಮೇಲೆಯೂ ನೀರು ಹರಿಯುತ್ತಿದ್ದು, ಭಾರಿ ಮಳೆಯಿಂದಾಗಿ ಹರಿಹರ-ಕಾನೂರು ಸಂಪರ್ಕ ಕಡಿತಗೊಂಡಿದೆ. ಭಾರಿ ಮಳೆಗೆ ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿದೆ.

ಶಿವಮೊಗ್ಗ ತಾಲೂಕಿನ ಕಂಬಿ ಗಂಗಮ್ಮನ ಕೆರೆಯ ಏರಿ ಒಡೆದಿದ್ದು, ನೀರು ಜಮೀನುಗಳಿಗೆ ನುಗ್ಗಿದೆ. 100 ಎಕರೆ ವಿಸ್ತೀರ್ಣದಲ್ಲಿದ್ದ ಮೆಕ್ಕೆಜೋಳ ಹಾಗೂ ತೋಟಗಳು ಜಲಾವೃತಗೊಂಡಿದ್ದು, ರೈತರಿಗೆ ಲಕ್ಷಾಂತರ ರೂಪಾಯಿ ಬೆಳೆ ಹಾನಿ ಸಂಭವಿಸಿದೆ.

ಇದನ್ನೂ ಓದಿ: ಮಲೆನಾಡಿನಲ್ಲಿ ಭಾರೀ ಮಳೆ: ಸೋರುತ್ತಿದೆ ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆ, ಮುಳುಗುತ್ತಿವೆ ಜಮೀನು, ರಸ್ತೆ; ಎಲ್ಲೆಲ್ಲೂ ಅವ್ಯವಸ್ಥೆ

Uttara Kannada Rain: ಅಂಕೋಲದಲ್ಲಿ ಪ್ರವಾಹ ಭೀತಿ; ಹಿಚ್ಕಡ ಗ್ರಾಮದಲ್ಲಿ ಕಣ್ಣೆದುರೇ ಕುಸಿದು ಬಿತ್ತು ಎರಡಂತಸ್ತಿನ ಮನೆ

(Karnataka Weather Today Heavy Rain in Malnad Region on Friday Roads Closed in Shivamogga, Hassan, Chikmagalur and Kodagu)

Published On - 6:53 pm, Fri, 23 July 21