AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲೆನಾಡಿನಲ್ಲಿ ಭಾರೀ ಮಳೆ: ಸೋರುತ್ತಿದೆ ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆ, ಮುಳುಗುತ್ತಿವೆ ಜಮೀನು, ರಸ್ತೆ; ಎಲ್ಲೆಲ್ಲೂ ಅವ್ಯವಸ್ಥೆ

ತೀರ್ಥಹಳ್ಳಿ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಮೇಲ್ಛಾವಣಿಯ ಹೆಂಚು ಒಡೆದು ಹೋಗಿರುವುದರಿಂದ ಮಳೆಯ ನೀರು ಆಸ್ಪತ್ರೆಯ ಒಳಗೆ ಸುರಿಯುತ್ತಿದ್ದು ರೋಗಿಗಳು, ರೋಗಿಯ ಕಡೆಯವರು, ಸಿಬ್ಬಂದಿ ಪರದಾಡುವಂತಾಗಿದೆ.

ಮಲೆನಾಡಿನಲ್ಲಿ ಭಾರೀ ಮಳೆ: ಸೋರುತ್ತಿದೆ ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆ, ಮುಳುಗುತ್ತಿವೆ ಜಮೀನು, ರಸ್ತೆ; ಎಲ್ಲೆಲ್ಲೂ ಅವ್ಯವಸ್ಥೆ
ತೀರ್ಥಹಳ್ಳಿ ತಾಲ್ಲೂಕು ಆಸ್ಪತ್ರೆಯ ಒಳಾಂಗಣವೆಲ್ಲಾ ಒದ್ದೆಮುದ್ದೆ
TV9 Web
| Updated By: Skanda|

Updated on: Jul 23, 2021 | 2:03 PM

Share

ಶಿವಮೊಗ್ಗ: ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಹಲವೆಡೆ ಮಳೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಮೇಲ್ಛಾವಣಿಯ ಹೆಂಚು ಒಡೆದು ಹೋಗಿರುವುದರಿಂದ ಮಳೆಯ ನೀರು ಆಸ್ಪತ್ರೆಯ ಒಳಗೆ ಸುರಿಯುತ್ತಿದ್ದು ರೋಗಿಗಳು, ರೋಗಿಯ ಕಡೆಯವರು, ಸಿಬ್ಬಂದಿ ಪರದಾಡುವಂತಾಗಿದೆ. ಹೆರಿಗೆ ವಾರ್ಡಿನ ಮುಂಭಾಗದಲ್ಲೇ ನೀರು ಬೀಳುತ್ತಿದ್ದು, ಆಸ್ಪತ್ರೆಯ ಒಳಾಂಗಣ ಸಂಪೂರ್ಣ ಒದ್ದೆಮುದ್ದೆಯಾಗಿ ಹೋಗಿದೆ.

ಹೊಸನಗರ ತಾಲ್ಲೂಕಿನಾದ್ಯಾಂತ ಧಾರಾಕಾರ ಮಳೆಯಾಗುತ್ತಿದ್ದು ಹಳ್ಳಕೊಳ್ಳಗಳು ಉಕ್ಕಿ ಹರಿಯಲಾರಂಭಿಸಿವೆ. ಬಿದನೂರು-ನಗರದಲ್ಲಿ 236 ಮೀಲಿ ಮೀಟರ್ ಮಳೆ, ಸಾವೇಹಕ್ಕಲಿನಲ್ಲಿ 225ಮಿಲಿ ಮೀಟರ್ ಮಳೆ. ಹೊಸನಗರದಲ್ಲಿ 210.6 ಮಿಲಿ ಮೀಟರ್, ಮಾಸ್ತಿಕಟ್ಟೆಯಲ್ಲಿ 200 ಮಿಲಿ ಮೀಟರ್, ಯಡೂರು, ಚಕ್ರ ನಗರದಲ್ಲಿ 196 ಮಿಲಿ ಮೀಟರ್, ಮಾನಿ ಡ್ಯಾಂ ಸುತ್ತಮುತ್ತ 192 ಮಿಲಿ ಮೀಟರ್, ಜೋಗದಲ್ಲಿ 186.5 ಮಿಲಿ ಮೀಟರ್, ಹುಂಚದಲ್ಲಿ 167.2 ಮಿಲಿ ಮೀಟರ್, ಹುಲಿಕಲ್​ನಲ್ಲಿ 155 ಮಿಲಿ ಮೀಟರ್, ಲಿಂಗನಮಕ್ಕಿ ಡ್ಯಾಂ ಬಳಿ 140.2 ಮಿಲಿ ಮೀಟರ್ ಮಳೆ ದಾಖಲಾಗಿದೆ.

THIRTHAHALLI TALUK HOSPITAL

ಮೇಲ್ಛಾವಣಿ ಸೋರುತ್ತಿರುವುದರಿಂದ ಜನರ ಪರದಾಟ

ಶಿವಮೊಗ್ಗ ತಾಲ್ಲೂಕಿನ ಕುಂಸಿ ಮತ್ತು ಬಾಳೆಕೊಪ್ಪ ಗ್ರಾಮದಲ್ಲಿ ಭಾರೀ ಮಳೆಯಿಂದಾಗಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದ್ದು, ಮನೆಗಳಿಗೆ ನುಗ್ಗಿದ ಮಳೆ ನೀರಿನಿಂದಾಗಿ ಜನ ಪರದಾಡುತ್ತಿದ್ದಾರೆ. ಗ್ರಾಮದ ಅನೇಕ ತೋಟಗಳು ಜಲಾವೃತಗೊಂಡಿದ್ದು, ಬೆಳೆ ನಾಶವಾಗಿದೆ. ರೇಚಿಕೊಪ್ಪದಲ್ಲಿ ಗ್ರಾಮದಲ್ಲಿ ಮಳೆಯ ಅಬ್ಬರಕ್ಕೆ ಗ್ರಾಮದ ಮುಖ್ಯ ರಸ್ತೆಯೇ ಕೊಚ್ಚಿ ಹೋಗಿದ್ದು, ಸಂಪರ್ಕ ಕಡಿತಗೊಂಡಿದೆ. ಗ್ರಾಮದಲ್ಲಿ ಅಪಾರ ಪ್ರಮಾಣದ ಭತ್ತ, ಮೆಕ್ಕೆಜೋಳ, ಅಡಿಕೆ ಸಸಿ ನೀರು ಪಾಲಾಗಿದ್ದು ಬೆಳೆ ಹಾನಿಯಿಂದ ರೈತರು ಕಂಗಾಲಾಗಿದ್ದಾರೆ.

ROAD DAMAGE

ನೀರಿನ ರಭಸಕ್ಕೆ ಕೊಚ್ಚಿ ಹೋದ ರಸ್ತೆ

ROAD COLLAPSED

ರಸ್ತೆ ಕೊಚ್ಚಿ ಹೋಗಿ ಸಂಪರ್ಕ ಕಡಿತ

ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಘಾಟಿ, ಹೊಸನಗರ ತಾಲ್ಲೂಕಿನ ಬಾಳೆಬರೆ ಘಾಟಿಯಲ್ಲೆಲ್ಲಾ ಧಾರಾಕಾರ ಮಳೆಯಿಂದಾಗಿ ದಟ್ಟ ಮಂಜು ಕವಿದಿದ್ದು ರಸ್ತೆ ಸರಿಯಾಗಿ ಕಾಣದೇ ವಾಹನ ಸವಾರರು ಪರದಾಡುವಂತಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿರುವ ವಿಶ್ವವಿಖ್ಯಾತ ಜೋಗ ಜಲಪಾತದಲ್ಲೂ ಭಾರೀ ಪ್ರಮಾಣದಲ್ಲಿ ನೀರು ಧುಮ್ಮಿಕ್ಕುತ್ತಿದ್ದು, ಜಲಪಾತದ ದೃಶ್ಯ ವೈಭವವನ್ನು ಕಂಡು ಪ್ರವಾಸಿಗರು ಮನಸೋತಿದ್ದಾರೆ. ಜೋಗ ಜಲಪಾತದ ರಾಜ, ರಾಣಿ, ರೋರರ್, ರಾಕೆಟ್ ನಾಲ್ಕೂ ಕಡೆಗಳಲ್ಲಿ ನೀರು ರಭಸದಿಂದ ಚಿಮ್ಮುತ್ತಿದ್ದು, ಹಾಲ್ನೊರೆಯಂತೆ ಉಕ್ಕುತ್ತಿರುವ ಜಲಪಾತ ನೋಡುಗರನ್ನು ಕೈಬೀಸಿ ಕರೆಯುತ್ತಿದೆ. ಭಾರೀ ಮಳೆಯ ನಡುವೆಯೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಜೋಗದತ್ತ ಧಾವಿಸುತ್ತಿದ್ದು, ಮಳೆಗಾಲದ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಕೆಲವೆಡೆ 35 ಸೆಂ.ಮೀ ದಾಟಿದ ಮಳೆ ಪ್ರಮಾಣ.. ಗೋಡೆ ಕುಸಿದು ವೃದ್ಧ ಸಾವು, ದೋಣಿ ಮಗುಚಿ ವೃದ್ಧೆ ಕೊನೆಯುಸಿರು 

Jog Falls Video: ಆಹಾ! ಭೋರ್ಗರೆವ ಜೋಗ ಜಲಪಾತದ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಿ

(Heavy Rain in Karnataka Malnad Region Roof leakage in Thirthahalli Taluk Hospital people facing lot of problems)