ಬಾಣಂತಿಯರಿಗೆ ಕಾಡುತ್ತಿದೆ ಈ ಹೊಸ ಸಮಸ್ಯೆ: ಸ್ವಲ್ಪ ಯಾಮಾರಿದರೂ ಜೀವಕ್ಕೆ ಆಪತ್ತು

| Updated By: Ganapathi Sharma

Updated on: Dec 25, 2024 | 7:43 AM

ಬಳ್ಳಾರಿಯಲ್ಲಿ ಬಾಣಂತಿಯರ ಸಾವಿನ ಪ್ರಕರಣ ಇಡೀ ರಾಜ್ಯದ ಜನತೆಯನ್ನೇ ಬೆಚ್ಚಿ ಬೀಳಿಸಿತ್ತು.‌ ಈ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಇದೀಗ ವೈದ್ಯರಿಗೆ ಮತ್ತೊಂದು ರೀತಿಯ ಸವಾಲು, ಆತಂಕ ಶುರುವಾಗಿದೆ. ಬಾಣಂತಿಯರಲ್ಲಿ ಮತ್ತೊಂದು ಸಮಸ್ಯೆ ಕಾಣಿಸಿಕೊಳ್ಳಲು ಶುರುವಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಹಾಗಾದರೆ, ಅದೇನು ಸಮಸ್ಯೆ? ಅದರಿಂದ ಆತಂಕ ಹೆಚ್ಚಾಗಲು ಕಾರಣವೇನು? ವಿವರಗಳಿಗೆ ಮುಂದೆ ಓದಿ.

ಬಾಣಂತಿಯರಿಗೆ ಕಾಡುತ್ತಿದೆ ಈ ಹೊಸ ಸಮಸ್ಯೆ: ಸ್ವಲ್ಪ ಯಾಮಾರಿದರೂ ಜೀವಕ್ಕೆ ಆಪತ್ತು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಡಿಸೆಂಬರ್ 25: ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣದಲ್ಲಿ ಫ್ಲೂಯಿಡ್ ಬಳಕೆಯಿಂದ ಈ ರೀತಿಯಾಗಿದೆ ಎಂಬ ವರದಿ ನೀಡಲಾಗಿತ್ತು. ಇದು ಔಷಧ ಸಮಸ್ಯೆ, ಬೇರೆ ಏನೂ ತೊಂದರೆಯಾಗಿಲ್ಲ ಎಂದು ವೈದ್ಯರು ನಿಟ್ಟುಸಿರು ಬಿಟ್ಟಿದ್ದರು. ಆದರೆ ಇದೀಗ ಬಾಣಂತಿಯರಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸದೊಂದು ಸಮಸ್ಯೆ ಆರೋಗ್ಯ ಇಲಾಖೆಗೆ ಆತಂಕ ತಂದಿಟ್ಟಿದೆ.

ಇತ್ತೀಚೆಗೆ ಡಿಲಿವರಿಯಾಗುವ ಬಾಣಂತಿಯರ ಪೈಕಿ ಹೆಚ್ಚಿನವರಲ್ಲಿ ಅತಿಯಾದ ರಕ್ತಸ್ರಾವ ಕಾಣಿಸಿಕೊಳ್ಳಲು ಶುರುವಾಗಿದೆ. ಇದೇ ಕಾರಣದಿಂದ ಸೋಮವಾರ ಕೂಡಾ ಒಬ್ಬ ಬಾಣಂತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲೇ ನಡೆದಿದೆ. ಬಾಣಂತಿಗೆ ಹೆಚ್ಚು ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಆದರೆ ಯಾಕೆ ರಕ್ತಸ್ರಾವ ಆಯಿತು ಎಂಬುದು ಮಾತ್ರ ತಿಳಿದಿಲ್ಲ. ಆಸ್ಪತ್ರೆಗೆ ಬರುವ 10 ಬಾಣಂತಿಯರಲ್ಲಿ 4-5 ಜನರಲ್ಲಿ ಈ ಸಮಸ್ಯೆ ಮುಖ್ಯವಾಗಿ ಕಾಣಿಸಿಕೊಳ್ಳುತ್ತಿದೆ. ಆದರೆ, ಅತಿಯಾದ ರಕ್ತಸ್ರಾವ ಯಾಕೆ ಆಗುತ್ತಿದೆ ಎಂಬುದಕ್ಕೆ ಕಾರಣ ಯಾರಿಗೂ ತಿಳಿಯುತ್ತಿಲ್ಲ. ವೈದ್ಯರಿಗೆ ಇದು ದೊಡ್ಡ ಪ್ರಶ್ನೆಯಾಗಿ ಪರಿಣಮಿಸಿದೆ.

ಅಂತಿಮ ಹಂತದಲ್ಲೇ ಅರಿವಿಗೆ ಬರುತ್ತೆ!

ರಕ್ತಸ್ರಾವವಾಗುತ್ತಿರುವುದು ಅನೇಕ ಬಾಣಂತಿಯರಿಗೆ ಮೊದಲಿಗೆ ಅರಿವಿಗೆ ಬರುತ್ತಿಲ್ಲ ಎನ್ನಲಾಗಿದೆ. ಮೊದಲೇ ತಿಳಿದರೆ ಇದಕ್ಕೆ ಸೂಕ್ತ ಚಿಕಿತ್ಸೆ ನೀಡಬಹುದು. ಆದರೆ ಅನೇಕರಿಗೆ ತೀವ್ರ ರಕ್ತಸ್ರಾವವಾಗಿ ಅಂತಿಮ ಹಂತಕ್ಕೆ ಬಂದಾಗಲೇ ಗೊತ್ತಾಗುತ್ತಿದೆ. ಇದರಿಂದ ತುರ್ತು ಚಿಕಿತ್ಸೆ ನೀಡಿದರೂ ದೇಹದಲ್ಲಿ ರಕ್ತ , ಹಿಮೋಗ್ಲೋಬಿನ್‌ನ ಪ್ರಮಾಣ ಕಡಿಮೆಯಾಗುವ ಕಾರಣದಿಂದ ಅನೇಕರು ಪ್ರಾಣತೆತುವಂತಾಗಿದೆ. ಹೀಗಾಗಿ ರಕ್ತಸ್ರಾವ ಸಮಸ್ಯೆಯ ಬಗ್ಗೆ ಎಚ್ಚರಿಕೆ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ವೈದ್ಯರು ಹೇಳುವುದೇನು?

ರಸಕ್ತಸ್ರಾವ ವಿಚಾರವಾಗಿ ಬಾಣಂತಿಯರು, ಅವರ ಕಡೆಯವರು ಕೂಡ ಬಹಳಷ್ಟು ಎಚ್ಚರಿಕೆ ವಹಿಸಬೇಕು. ಅಲ್ಲದೆ, ಈ ರೀತಿಯ ಸಮಸ್ಯೆ ಎದುರಾದರೆ ಕೂಡಲೇ ಚಿಕಿತ್ಸೆ ಪಡೆಯಬೇಕು ಎಂದು ವಾಣಿ ವಿಲಾಸ್ ಆಸ್ಪತ್ರೆ ವೈದ್ಯೆ ಡಾ. ಶರಧಿನಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿಯೂ ಬಾಣಂತಿ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ

ಒಟ್ಟಿನಲ್ಲಿ ಈ ರೀತಿಯ ಸಮಸ್ಯೆ ಬಾಣಂತಿಯರಿಗೆ ಯಾಕೆ ಕಾಣಿಸಿಕೊಳ್ಳುತ್ತಿದೆ ಎಂಬುದು ಈವರೆಗೆ ಗೊತ್ತಾಗಿಲ್ಲ. ಇದಕ್ಕೆ ಏನು ಕಾರಣ ಎಂಬುದನ್ನು ಪತ್ತೆಹಚ್ಚಲು ವೈದ್ಯರು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕೂಡ ತಕ್ಷಣದ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ