AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಚಿತ ಅಕ್ಕಿ ಕೊಟ್ಟೇ ಕೊಡುತ್ತೇವೆ; ಎಲ್ಲಿಂದ ಖರೀದಿ ಎಂಬ ಮಾಹಿತಿ ನೀಡಿದ ಸಚಿವ ಕೆಹೆಚ್ ಮುನಿಯಪ್ಪ

ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನದ ಮೇರೆಗೆ ನಾಳೆ ದೆಹಲಿಗೆ ತೆರಳುತ್ತೇನೆ. ಕೇಂದ್ರ ಆಹಾರ ಸರಬರಾಜು ಸಚಿವರನ್ನು ಭೇಟಿಯಾಗುತ್ತೇನೆ. ಈ ಮೂಲಕ ಅಕ್ಕಿ ಖರೀದಿಯ ಪ್ರಯತ್ನ ಮಾಡುತ್ತೇವೆ ಎಂದು

ಉಚಿತ ಅಕ್ಕಿ ಕೊಟ್ಟೇ ಕೊಡುತ್ತೇವೆ; ಎಲ್ಲಿಂದ ಖರೀದಿ ಎಂಬ ಮಾಹಿತಿ ನೀಡಿದ ಸಚಿವ ಕೆಹೆಚ್ ಮುನಿಯಪ್ಪ
ಕೆಹೆಚ್ ಮುನಿಯಪ್ಪ
Ganapathi Sharma
|

Updated on:Jun 20, 2023 | 3:34 PM

Share

ಬೆಂಗಳೂರು: ಜನರಿಗೆ ನೀಡಿರುವ ಗ್ಯಾರಂಟಿ ಪ್ರಕಾರ 10 ಕೆಜಿ ಅಕ್ಕಿ ಉಚಿತವಾಗಿ ಕೊಟ್ಟೇ ಕೊಡುತ್ತೇವೆ. ಅಕ್ಕಿ ಖರೀದಿಗೆ ಪ್ರಯತ್ನಗಳು ನಡೆಯುತ್ತಿವೆ ಎಂದು ಆಹಾರ ಸಚಿವ ಕೆಹೆಚ್ ಮುನಿಯಪ್ಪ (KH Muniyappa) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಒಡಿಶಾ, ಚತ್ತೀಸಗಢ, ಆಂಧ್ರ ಪ್ರದೇಶ, ತೆಲಂಗಾಣ ಎಲ್ಲಾ ಕಡೆಯಿಂದ ಅಕ್ಕಿ ಖರೀದಿಯ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಎಫ್​​ಸಿಐನವರು ಅಕ್ಕಿ ಕೊಡುತ್ತೇವೆ ಎಂದು ಜೂನ್ 12ಕ್ಕೆ ಹೇಳಿದ್ದರು. ಜೂನ್ 13 ಕ್ಕೆ ಕೊಡಲ್ಲ ಅಂತ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನದ ಮೇರೆಗೆ ನಾಳೆ ದೆಹಲಿಗೆ ತೆರಳುತ್ತೇನೆ. ಕೇಂದ್ರ ಆಹಾರ ಸರಬರಾಜು ಸಚಿವರನ್ನು ಭೇಟಿಯಾಗುತ್ತೇನೆ. ಈ ಮೂಲಕ ಅಕ್ಕಿ ಖರೀದಿಯ ಪ್ರಯತ್ನ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಎಫ್​​ಸಿಐ ಬಳಿ 7 ಲಕ್ಷ ಟನ್ ಅಕ್ಕಿ ದಾಸ್ತಾನು ಇದೆ. ಅದರಲ್ಲಿ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ನಮಗೆ ಬೇಕಾಗಿದೆ. ಕೇಂದ್ರ ಸರ್ಕಾರದಿಂದ ಅಕ್ಕಿ ಖರೀದಿಯ ಪ್ರಯತ್ನದ ಜೊತೆಗೆ ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಗೆ ಪ್ರಯತ್ನ ಮಾಡುತ್ತೇವೆ. ಈ ಪ್ರಕ್ರಿಯೆ ಸ್ವಲ್ಪ ವಿಳಂಬ ಆಗಬಹುದು. ಕೇಂದ್ರೀಯ ಭಂಡಾರ, ನಾಫೆಡ್, ಎನ್​​ಸಿಸಿಎಫ್ ನಿಂದ ಅಕ್ಕಿ ಖರೀದಿ ಮಾಡಬೇಕಾಗಿದೆ. ಇದು ಸ್ವಲ್ಪ ವಿಳಂಬವಾಗಲಿದೆ. ಕಾನೂನು ಮತ್ತು ಟೆಂಡರ್ ಪ್ರಕ್ರಿಯೆಗಳಿಂದ ಸ್ವಲ್ಪ ವಿಳಂಬವಾಗಲಿದೆ. ಹಿಂದೆ ಇದೇ ಸಂಸ್ಥೆಗಳು ರಾಜ್ಯಕ್ಕೆ ಅಕ್ಕಿ ಪೂರೈಕೆ ಮಾಡುತ್ತಿದ್ದವು. ಈ ಸಂಸ್ಥೆಗಳಿಗೆ ಆದಷ್ಟು ಬೇಗ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಹೇಳಲಾಗಿದೆ. ಸ್ವಲ್ಪ ವಿಳಂಬವಾಗಿಯಾದರೂ ಅಕ್ಕಿಯನ್ನು ‌ನಾವು ಕೊಡುತ್ತೇವೆ ಎಂದು ಅವರು ಹೇಳಿದ್ದಾರೆ.

ಪಂಜಾಬ್​​ನ ಆಮ್ ಆದ್ಮಿ ಸರ್ಕಾರದಿಂದ ಅಕ್ಕಿ ಕೊಡಿಸುವುದಾಗಿ ಹೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಲ್ಲಾ ರಾಜ್ಯಗಳಿಂದ ಅಕ್ಕಿ ಖರೀದಿಗೆ ಯತ್ನ ಮಾಡುತ್ತೇವೆ. ಬಹಳ ದೂರದಿಂದ ಖರೀದಿಸುವಾಗ ಸಾಗಣೆ ವೆಚ್ಚ ಹೆಚ್ಚಾಗಲಿದೆ. ಹಾಗಾಗಿ ಕೇಂದ್ರೀಯ ಸಂಸ್ಥೆಗಳಿಂದ ಖರೀದಿ ಮಾಡುತ್ತೇವೆ. ಇದರಿಂದ ಆರ್ಥಿಕ ಹೊರೆ ಕಡಿಮೆ ಆಗುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡಲು ಛತ್ತೀಸ್‌ಗಢ ಸರ್ಕಾರ ಒಪ್ಪಿದೆ: ಆಹಾರ ಇಲಾಖೆ ಸಚಿವ ಮುನಿಯಪ್ಪ

ಅನ್ನಭಾಗ್ಯ ಯೋಜನೆಯ ಅಕ್ಕಿ ಖರೀದಿ ವಿಚಾರವಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ವಾಕ್ಸಮರ ಮುಂದುವರಿದಿದೆ. ಕೇಂದ್ರವು ಅಕ್ಕಿ ನೀಡಲು ನಿರಾಕರಿಸಿ ದ್ವೇಷದ ರಾಜಕೀಯ ಮಾಡುತ್ತಿದೆ ಎಂದು ಕರ್ನಾಟಕ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಕಾಂಗ್ರೆಸ್​ನವರಿಗೆ ಗ್ಯಾರಂಟಿ ಜಾರಿ ಮಾಡಲು ಸಾಧ್ಯವಾಗದೆ ಬೇರೆಯವರ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಹೆಚ್ಚುವರಿ ಅಕ್ಕಿ ಕೊಡಲು ಕೇಂದ್ರ ಸರ್ಕಾರ ಮೊದಲೇ ಸಮ್ಮತಿಸಿರಲಿಲ್ಲ ಎಂದು ಹೇಳಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 3:31 pm, Tue, 20 June 23