ಕೆಎನ್ ರಾಜಣ್ಣ ತಲೆದಂಡಕ್ಕೆ ಕಾರಣ ಒಂದೆರಡಲ್ಲ: ಈ ವಿಚಾರಗಳೇ ಮುಳುವಾಯ್ತು ನೋಡಿ!

ಸಹಕಾರ ಸಚಿವ ಕೆಎನ್​ ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿರುವುದು ಕರ್ನಾಟಕ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವುದರ ಜತೆಗೆ ಸಂಚಲನಕ್ಕೂ ಕಾರಣವಾಗಿದೆ. ಪಕ್ಷ ವಿರೋಧಿ ಹೇಳಿಕೆಗಳೇ ಕಾರಣ ಎನ್ನಲಾಗುತ್ತಿದೆಯಾದರೂ ಅವರ ವಿರುದ್ಧದ ಕ್ರಮಕ್ಕೆ ಅಂಶವಾದ ವಿಚಾರಗಳು ಒಂದೆರಡಲ್ಲ. ರಾಜಣ್ಣ ವಿರುದ್ಧ ಕ್ರಮಕ್ಕೆ ಕಾರಣವಾದ ಅಂಶಗಳ ಪಟ್ಟಿ ಇಲ್ಲಿದೆ.

ಕೆಎನ್ ರಾಜಣ್ಣ ತಲೆದಂಡಕ್ಕೆ ಕಾರಣ ಒಂದೆರಡಲ್ಲ: ಈ ವಿಚಾರಗಳೇ ಮುಳುವಾಯ್ತು ನೋಡಿ!
ಕೆಎನ್ ರಾಜಣ್ಣ

Updated on: Aug 12, 2025 | 7:13 AM

ಬೆಂಗಳೂರು, ಆಗಸ್ಟ್ 12: ಸಹಕಾರ ಸಚಿವರಾಗಿದ್ದ ಕೆಎನ್ ರಾಜಣ್ಣ (KN Rajanna) ತಲೆದಂಡವಾಗಿದೆ. ಹಾಗಾದರೆ ಇದಕ್ಕೆ ಕಾರಣವೇನು? ಪ್ರಭಾವಿ ಸಚಿವರನ್ನು ಏಕಾಏಕಿ ಹೈಕಮಾಂಡ್‌ (Congress High Command) ಕಿಕ್‌ಔಟ್‌ ಮಾಡಿದ್ದೇಕೆ? ಈ ಬಗ್ಗೆ ಹಲವು ಸಂಗತಿಗಳು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿವೆ. ರಾಜಣ್ಣಗೆ ಯಾವೆಲ್ಲ ಹೇಳಿಕೆಗಳು, ಯಾವೆಲ್ಲ ವಿಚಾರಗಳು ಮುಳುವಾದವು ಎಂಬುದನ್ನು ಗಮನಿಸಿದರೆ ಒಂದೆರಡಂತೂ ಅಲ್ಲವೇ ಅಲ್ಲ. ಪ್ರಮುಖವಾಗಿ ನಾಲ್ಕೈದು ವಿಚಾರಗಳು ರಾಜಣ್ಣ ತಲೆದಂಡಕ್ಕೆ ಕಾರಣವಾದವು ಎನ್ನಲಾಗುತ್ತಿದೆ.

ರಾಜಣ್ಣ ವಜಾಕ್ಕೆ ಮೊದಲ ಕಾರಣ: ರಾಹುಲ್‌ ಆರೋಪಕ್ಕೆ ತದ್ವಿರುದ್ಧ ಹೇಳಿಕೆ!

ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಮತಗಳ್ಳತನ ಆಗಿದೆ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದರು. ಖುದ್ದು ಬೆಂಗಳೂರಿಗೆ ಬಂದು ಪ್ರತಿಭಟನೆ ಕೂಡ ನಡೆಸಿದ್ದರು. ಆದರೆ, ಮತಗಳ್ಳತನ ಆರೋಪದ ಬಗ್ಗೆ ರಾಜಣ್ಣ ಮಾತ್ರ ಉಲ್ಟಾ ಮಾತನಾಡಿದ್ದರು. ಮತ ಕಳ್ಳತನ ಆರೋಪದ ಬಗ್ಗೆ ಕಳೆದ ಶುಕ್ರವಾರ ಪ್ರತಿಕ್ರಿಯಿಸಿದ್ದ ರಾಜಣ್ಣ, ಮತದಾರರ ಪಟ್ಟಿ ಸಿದ್ಧವಾಗಿದ್ದು ನಮ್ಮ ಸರಕಾರದ ಅವಧಿಯಲ್ಲೇ, ಆಗ ಯಾಕೆ ಮೌನವಾಗಿದ್ದರು ಎಂದು ಸ್ವಪಕ್ಷೀಯರನ್ನು ಪ್ರಶ್ನಿಸಿದ್ದರು.

ಕಾರಣ ನಂ.2: ಶಾಸಕರ ಜತೆ ಸುರ್ಜೆವಾಲ ಸಭೆಗೆ ಆಕ್ಷೇಪ

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತ ಹೇಳಿಕೆಗಳ ಬೆನ್ನಲ್ಲೇ ಶಾಸಕರ ಜತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಒನ್‌ ಟು ಒನ್ ಸಭೆ ನಡೆಸಿದ್ದರು. ಆದರೆ, ಈ ಸಭೆಗೆ ನೇರವಾಗಿಯೇ ರಾಜಣ್ಣ ಆಕ್ಷೇಪ ಎತ್ತಿದ್ದರು. ಈ ರೀತಿ ಸಭೆ ಮಾಡುವುದು ಉಸ್ತುವಾರಿ ಕೆಲಸ ಅಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದರು.

ಇದನ್ನೂ ಓದಿ
ನನ್ನನ್ನು ವಜಾ ಮಾಡಿರುವುದರ ಹಿಂದೆ ಷಡ್ಯಂತ್ರ, ಪಿತೂರಿ ಇದೆ: ಕೆಎನ್​ ರಾಜಣ್ಣ
ಕೆಪಿಸಿಸಿ ಅಧ್ಯಕ್ಷನ ಜೊತೆಗಿನ ತಿಕ್ಕಾಟವೇ ರಾಜಣ್ಣನಿಗೆ ಮುಳುವಾಯಿತೇ?
ಕೆಎನ್​ ರಾಜಣ್ಣ ರಾಜೀನಾಮೆ ನೀಡಿದ್ದಲ್ಲ ಸಂಪುಟದಿಂದ ತೆಗೆದಿದ್ದು!
ಸಚಿವ ರಾಜಣ್ಣ ರಾಜೀನಾಮೆ ರಹಸ್ಯ; ದಿಢೀರ್ ನಿರ್ಧಾರದ ಹಿಂದಿನ ಕೈವಾಡ ಯಾರದ್ದು?

ಒನ್ ಟು ಒನ್ ಸಭೆಗೆ ಗೈರಾಗಿದ್ದ ರಾಜಣ್ಣ?

ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಶಾಸಕರ ಜೊತೆಗೆ ಒನ್ ಟು ಒನ್ ಸಭೆ ನಡೆಸಿದ ಮೇಲೆ ಸಚಿವರ ಜೊತೆಗೂ ಒನ್ ಟು ಒನ್ ಸಭೆ ನಡೆಸಿದ್ದರು. ಆದರೆ, ಇದೇ ಹೊತ್ತಲ್ಲೇ ರಾಜಣ್ಣ ವಿದೇಶ ಪ್ರವಾಸಕ್ಕೆ ಹೊರಟಿದ್ದರು. ಉದ್ದೇಶಪೂರ್ವಕವಾಗಿಯೇ ಸುರ್ಜೇವಾಲ ಜತೆಗಿನ ಸಭೆಗೆ ರಾಜಣ್ಣ ಹೋಗಿಲ್ಲ ಎಂಬ ಚರ್ಚೆ ನಡೆದಿತ್ತು.

ಸಂವಿಧಾನ ವಿರೋಧಿ ಎಂಬ ಟೀಕೆ

ಶಾಸಕರು, ಸಚಿವರ ಜೊತೆಗೆ ಸಭೆ ನಡೆಸಿದ ಬಳಿಕ ಸುರ್ಜೇವಾಲ ಸರ್ಕಾರಿ ಅಧಿಕಾರಿಗಳ ಜೊತೆಗೂ ಮಾತುಕತೆ ನಡೆಸಿದ್ದಾರೆಂಬ ಸುದ್ದಿ ಹರಿದಾಡಿತ್ತು. ಈ ಬೆಳವಣಿಗೆಯನ್ನೂ ರಾಜಣ್ಣ ವಿರೋಧಿಸಿದ್ದಲ್ಲದೇ, ಇದು ಸಂವಿಧಾನ ವಿರೋಧಿ ನಡೆ ಎಂದು ಟೀಕಿಸಿದ್ದರು.

ಸೆಪ್ಟೆಂಬರ್ ಕ್ರಾಂತಿಯ ಬಾಂಬ್

ಹೋದಲ್ಲಿ ಬಂದಲ್ಲಿ ರಾಜಣ್ಣ, ಸೆಪ್ಟೆಂಬರ್‌ನಲ್ಲಿ ಕ್ರಾಂತಿ ಆಗುತ್ತದೆ ಎಂದು ಪದೇ ಪದೆ ಹೇಳಿಕೆ ಕೊಡುತ್ತಿದ್ದರು. ಇದು ಸಹಜವಾಗಿ ವಿಪಕ್ಷ ಬಿಜೆಪಿಗೆ ಆಹಾರವಾಗಿತ್ತು. ಸಿಎಂ ಬದಲಾಗುತ್ತಾರೆ ಎಂದು ಬಿಜೆಪಿ ನಾಯಕರು ನೀಡುತ್ತಿದ್ದ ಹೇಳಿಕೆಗಳಿಗೆ ಇಂಬು ಕೊಡುತ್ತಿತ್ತು.

ರಾಜಣ್ಣ ತಗಾದೆಗಳಿಗೆ ತಲೆದಂಡ?

ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಪದೇಪದೆ ಆಗ್ರಹಿಸುತ್ತಿದ್ದ ರಾಜಣ್ಣ ಅದರೊಂದಿಗೆ, ಡಿಸಿಎಂ ಹುದ್ದೆಗೆ ಸಾಂವಿಧಾನಿಕ ಸ್ಥಾನಮಾನ ಇಲ್ಲ ಎಂಬ ಮಾತುಗಳನ್ನಾಡಿದ್ದರು. 4 ಹೆಚ್ಚುವರಿ ಡಿಸಿಎಂ ಹುದ್ದೆಗಳ ಸೃಷ್ಟಿ ಬಗ್ಗೆ ಪ್ರಸ್ತಾಪಿಸಿದ್ದ ರಾಜಣ್ಣ, ಹಾಸನ ಜಿಲ್ಲಾ ಉಸ್ತುವಾರಿ ಬೇಡ ಎಂದೂ ಪಟ್ಟು ಹಿಡಿದಿದ್ದರು. ರಾಜಣ್ಣ ವಿರುದ್ಧ 6ಕ್ಕೂ ಹೆಚ್ಚು ಬಾರಿ ಕೈ ಕಾರ್ಯಕರ್ತರು ದೂರು ನೀಡಿದ್ದರು ಎನ್ನಲಾಗಿದೆ. ರಾಜಣ್ಣ ಪ್ರತಿ ಹೇಳಿಕೆ ಬಗ್ಗೆಯೂ ಹೈಕಮಾಂಡ್​ಗೆ ದೂರು ಸಲ್ಲಿಕೆಯಾಗಿತ್ತು ಎನ್ನಲಾಗುತ್ತಿದೆ.

ಇದನ್ನೂ ಓದಿ: ನನ್ನನ್ನು ವಜಾ ಮಾಡಿರುವುದರ ಹಿಂದೆ ಷಡ್ಯಂತ್ರ, ಪಿತೂರಿ ಇದೆ: ಕೆಎನ್​ ರಾಜಣ್ಣ

ರಾಜಣ್ಣರ ಈ ಹೇಳಿಕೆಗಳಿಂದ ಪಕ್ಷಕ್ಕೆ ಡ್ಯಾಮೇಜ್‌ ಆಗುತ್ತಿದೆ ಎಂಬುದು ಹೈಕಮಾಂಡ್‌ ಗಮನಕ್ಕೆ ಬಂದಂತಿದೆ. ಹೀಗಾಗಿ ಸಂಪುಟದಿಂದ ಕಿತ್ತುಹಾಕುವ ನಿರ್ಧಾರ ಕೈಗೊಂಡಿದೆ. ಈ ಮೂಲಕ ಪಕ್ಷದ ನಿರ್ಧಾರಗಳನ್ನು ಪ್ರಶ್ನಿಸುವುದನ್ನು ಸಹಿಸಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ