ಪರಿಷತ್ ಚುನಾವಣೆಯಲ್ಲಿ ಕುಲಗೆಟ್ಟ ಮತಗಳದ್ದೇ ಕಾರುಬಾರು: ಅಭ್ಯರ್ಥಿ ಗೆದ್ದ ಅಂತರದ ಮತಗಳಿಗಿಂತ ತಿರಸ್ಕೃತ ಮತಗಳೇ ಅಧಿಕ
ಕರ್ನಾಟಕದ ನಾಲ್ಕು ಪರಿಷತ್ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ನಾಲ್ಕಕ್ಕೇ ನಾಲ್ಕು ಸ್ಥಾನಗಳಲ್ಲಿ ಎನ್ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇನ್ನು ಆಡಳಿತರೂಢ ಕಾಂಗ್ರೆಸ್ಗೆ ಮುಖಂಭವಾಗಿದೆ. ಗೆದ್ದವರು ಸಂಭ್ರಮಿಸುತ್ತಿದ್ದರೆ, ಸೋತವರು ಸೋಲಿನ ಪರಾಮರ್ಶೆ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ ಪ್ರಜ್ಞಾವಂತ ಮತದಾರರಾಗಿರೋ ಶಿಕ್ಷಕರು ಮತ್ತು ಪದವೀಧರರಿಗೆ ಹತ್ತಾರು ಬಾರಿ ಮತ ಹಾಕೋ ಬಗ್ಗೆ ಜಾಗೃತಿ ಮೂಡಿಸಿದ್ರು ಕೂಡಾ ಈ ಬಾರಿಯೂ ಸಾವಿರಾರು ಮತಗಳು ಕುಲಗೆಟ್ಟಿದ್ದು, ಸಾವಿರ ಸಾವಿರ ಮತಗಳು ಅಸಿಂಧುಗೊಂಡು ಕಸದ ಬುಟ್ಟಿ ಸೇರಿವೆ.

ಹುಬ್ಬಳ್ಳಿ, ಅಕ್ಟೋಬರ್ 28): ಕರ್ನಾಟಕ ವಿಧಾನ ಪರಿಷತ್ ನ ನಾಲ್ಕು ಸ್ಥಾನಗಳಿಗೆ ಇದೇ ಅಕ್ಟೋಬರ್ 23 ರಂದು ನಡೆದಿದ್ದ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿಯ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಪಶ್ಟಿಮ ಪದವೀಧರ ಕ್ಷೇತ್ರ, ಆಗ್ನೇಯ ಪದವೀಧರ ಕ್ಷೇತ್ರ, ಈಶಾನ್ಯ ಶಿಕ್ಷಕರ ಕ್ಷೇತ್ರ, ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಎನ್ಡಿಎ ಗೆದ್ದು ಬೀಗಿದೆ. ಆದ್ರೆ, ಗೆಲುವಿನ ಅಂತರದ ಮತಗಳಿಗಿಂತ ಕುಲಗೆಟ್ಟ ಅಂದ್ರೆ ಮತಗಳು ರಿಜೆಕ್ಟ್ ವೋಟ್ ಗಳೇ ಅಧಿಕವಾಗಿವೆ. ಹೌದು…ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿಗಿಂತ ಬಿಜೆಪಿ ಅಭ್ಯರ್ಥಿ ಎಸ್ ವಿ ಸಂಕನೂರ 9323 ಮತಗಳಿಂದ ಗೆದ್ದಿದ್ದಾರೆ. ಆದ್ರೆ ಗೆದ್ದ ಅಂತರದ ಮತಗಳಿಗಿಂತ ಅಸಿಂಧುಗೊಂಡ ಮತಗಳ ಸಂಖ್ಯೆಯೇ ಹೆಚ್ಚಾಗಿದ್ದು, ಬರೋಬ್ಬರಿ 10245 ಮತಗಳು ತಿರಸ್ಕೃತಗೊಂಡಿವೆ. ಇದು ಚರ್ಚೆಗೆ ಗ್ರಾಸವಾಗಿದೆ.
ಗೆದ್ದ ಅಂತರದ ಮತಗಳಿಗಿಂತ ಅಸಿಂಧು ಮತಗಳೇ ಹೆಚ್ಚು
ಪಶ್ಚಿಮ ಪದವೀಧರ ಕ್ಷೇತ್ರದ ಮತಪತ್ರಗಳಲ್ಲಿ ತಮ್ಮ ಅಮೂಲ್ಯವಾದ ಮತವನ್ನು ತಮ್ಮ ಇಷ್ಟದ ಅಭ್ಯರ್ಥಿಗೆ ಹಾಕಬೇಕಾದ ಪ್ರಜ್ಞಾವಂತ ಪದವೀಧರ ಮತದಾರರು ಮತಪತ್ರಗಳ ತುಂಬಾ ರಾಡಿ ರಂಪಾಟ ಮಾಡಿದ್ದಾರೆ. ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಒಟ್ಟು 97 ಸಾವಿರ ಮತದಾರಿದ್ದಾರೆ. ಈ ಪೈಕಿ ಶೇ.75.61 ಅಂದರೆ 73658 ಮತದಾರರು ಮತ ಚಲಾಯಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿಗಿಂತ ಬಿಜೆಪಿ ಅಭ್ಯರ್ಥಿ ಎಸ್ ವಿ ಸಂಕನೂರ 9323 ಮತಗಳಿಂದ ಗೆದ್ದಿದ್ದಾರೆ. ಆದ್ರೆ ಗೆದ್ದ ಅಂತರದ ಮತಗಳಿಗಿಂತ ಹೆಚ್ಚು ಅಂದರೆ 10245 ಮತಗಳು ತಿರಸ್ಕೃತಗೊಂಡಿವೆ. ಶೇ.10ಕ್ಕಿಂತಲೂ ಹೆಚ್ಚು ಕುಲಗೆಟ್ಟ ಮತಗಳಾಗಿದ್ದು ವಿಪರ್ಯಾಸ. ಇನ್ನು ಗೆದ್ದ ಅಭ್ಯರ್ಥಿಯನ್ನೇ ಅಸಿಂಧು ಮತಗಳು ಸೋಲಿಸಿವೆ.
ಇದನ್ನೂ ಓದಿ: 1 ವರ್ಷ ಮುಂಚೆ ಅಭ್ಯರ್ಥಿ ಆಯ್ಕೆ ಮಾಡಿದ್ರೂ ವರ್ಕೌಟ್ ಆಗ್ಲಿಲ್ಲ: ಪರಿಷತ್ನಲ್ಲಿ ಕೈ ಸೋಲಿಗೆ ಕಾರಣಗಳು ಹೀಗಿವೆ
ಅಸಿಂಧು ಮತಗಳು ಚುನಾವಣೆಯಿಂದ ಚುನಾವಣೆಗೆ ಹೆಚ್ಚಳ
2014ರ ಪಶ್ಚಿಮ ಪದವೀಧರ ಚುನಾವಣೆಯಲ್ಲಿ 3240 ಇದ್ದ ಅಸಿಂಧು ಮತಗಳ ಸಂಖ್ಯೆ 2020ರಲ್ಲಿದ್ದಿಗುಣವಾಗಿ 8772 ಆಗಿತ್ತು. ಪ್ರಜ್ಞಾವಂತಿಕೆಯ ಲೆಕ್ಕದಲ್ಲಿ ಇದು ಕಡಿಮೆಯಾಗುತ್ತ ಸಾಗಬೇಕಿತ್ತು. ಆದ್ರೆ, 2026ರ ಈ ಚುನಾವಣೆಯಲ್ಲಿ ಇದು 10 ಸಾವಿರದ ಗಡಿ ದಾಟಿದೆ. ಚುನಾವಣೆಯಿಂದ ಚುನಾವಣೆಗೆ ಹೆಚ್ಚಾಗುತ್ತಲೇ ಸಾಗುತ್ತಿರುವುದು ಪದವೀಧರ ಮತದಾರರ ಪ್ರಜಾಪ್ರಭುತ್ವದ ಪ್ರಶ್ನಿಸುವಂತೆ ಮಾಡಿದೆ.
ಪದವೀಧರರ ಪಜ್ಞಾವಂತಿಕೆಗೆ ಕಪ್ಪುಚುಕ್ಕೆ
2020ರ ಚುನಾವಣೆಯಲ್ಲೂ ಪದವೀಧರ ಮತದಾರರು ಇದೇ ರೀತಿಯಾಗಿ ತಮ್ಮ ಅಮೂಲ್ಯ ಮತವನ್ನು ಹಾಳು ಮಾಡಿಕೊಂಡಿದ್ದ ಇತಿಹಾಸವಿದೆ. ಇದನ್ನು ತಡೆಯಲು ಚುನಾವಣಾ ಆಯೋಗ ಈ ಬಾರಿ ಹರಸಾಹಸಪಟ್ಟಿತ್ತು. ಮೊದಲೇ ಜಾಗೃತಿ ಮೂಡಿಸುವ ಕೆಲಸ ಮಾಡಿತ್ತು. ರಾಜಕೀಯ ಪಕ್ಷಗಳ ಮುಖಂಡರು, ಪಕ್ಷೇತರ ಅಭ್ಯರ್ಥಿಗಳಿಗೂ ಈ ಕುರಿತು ಸಾಕಷ್ಟು ತಿಳಿವಳಿಕೆ ನೀಡುವ ಕೆಲಸ ಮಾಡಿತ್ತು. ಆದರೂ ಕುಲಗೆಟ್ಟಮತಗಳು ಆವರಿಸಿಕೊಂಡಿದ್ದು ವಿದ್ಯಾಕಾಶಿ ಧಾರವಾಡ ಸೀಮೆಯ ಪದವೀಧರರ ಪಜ್ಞಾವಂತಿಕೆಗೆ ಕಪ್ಪುಚುಕ್ಕೆ ಆದಂತಾಗಿದೆ.
ಇನ್ನು ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 521 ಮತಗಳು ತಿರಸ್ಕೃತಗೊಂಡಿದ್ದವೆ, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಸಾವಿರಾದ ಐನೂರಕ್ಕೂ ಹೆಚ್ಚು ಮತಗಳು ತಿರಸ್ಕೃತಗೊಂಡಿವೆ. ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಕೂಡಾ ಸಾವಿರಾರು ಮತಗಳು ತಿರಸ್ಕೃತಗೊಂಡಿವೆ. ಇನ್ನು ಪರಿಷತ್ ಚುನಾವಣೆಯ ಮತದಾನ ಪ್ರಾಶಸ್ತ್ಯದ ಆಧಾರದ ಮೇಲೆ ಇರೋದರಿಂದ ಇವಿಎಂ ಮಷಿನ್ ಬದಲಾಗಿ ಬ್ಯಾಲೇಟ್ ಪೇಪರ್ ಬಳಸಲಾಗುತ್ತದೆ. ಆದ್ರೆ ಇದೇ ಬ್ಯಾಲೇಟ್ ಪೇಪರ್ ನಲ್ಲಿ ಮತದಾರರ ಪೈಕಿ ಸಾವಿರಾರು ಮತದಾರರು ಸರಿಯಾಗಿ ಮತ ಹಾಕದೇ ಇರುವುದರಿಂದ ಮತ ಹಾಕಿದ್ರು ಕೂಡಾ ಅವರ ಮತಗಳು ತಿರಸ್ಕೃತಗೊಂಡಿವೆ.
ಇಷ್ಟೊಂದು ಮತಗಳು ಅಸಿಂಧುಗೊಂಡಿದ್ಯಾಕೆ?
ಪರಿಷತ್ ಚುನಾವಣೆಗೂ ಮೊದಲೇ ಎಲ್ಲಾ ಪಕ್ಷದವರು, ಮತ ಹಾಕೋ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದ್ದರು. ತಮಗೆ ಸೂಕ್ತವೆನಿಸಿದ ಅಭ್ಯರ್ಥಿ ಹೆಸರಿನ ಮುಂದಿರೋ ಬಾಕ್ಸ್ ನಲ್ಲಿ ಮೊದಲ ಪ್ರಾಶಸ್ತ್ಯದ ಮತವಾಗಿದ್ದರೆ ಇಂಗ್ಲಿಷ್ ಅಂಕಿಯಲ್ಲಿ ಒಂದು, ಎರಡನೇ ಪ್ರಾಶಸ್ತ್ಯದ ಮತವಾಗಿದ್ದರೆ ಎರಡು ಬರೆಯುವಂತೆ ತಿಳಿಸಲಾಗಿತ್ತು. ಆದ್ರೆ ಅನೇಕರು, ರೈಟ್ ಮಾರ್ಕ್ ಹಾಕಿದ್ದಾರೆ. ಕನ್ನಡದ ಅಂಕಿಗಳನ್ನು ಬರೆದಿದ್ದಾರೆ. ಕೆಲವರು ಬ್ಯಾಲೇಟ್ ಪೇಪರ್ ನಲ್ಲಿ ಸಹಿ ಹಾಕಿದ್ದಾರೆ. ಇನ್ನು ಕೆಲವರು, ಅಭ್ಯರ್ಥಿಗಳ ಬಗ್ಗೆ ಬ್ಯಾಲೇಟ್ ಪೇಪರ್ ನಲ್ಲಿಯೇ ಅನೇಕ ಬರಹಗಳನ್ನು ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ಮತಗಳೆಲ್ಲವನ್ನು ರಿಜಕ್ಟ್ ಮಾಡಲಾಗಿದೆ. ಪ್ರತಿ ಬಾರಿಯ ಎಂಎಲ್ಸಿ ಚುನಾವಣೆ ನಡೆದಾಗಲು ಕೂಡಾ ರಿಜೆಕ್ಟ್ ಮತಗಳು ಹೆಚ್ಚಾಗುತ್ತಿವೆ. ಪದವೀಧರರು, ಶಿಕ್ಷಕರು ಎನಿಸಿಕೊಂಡವರೇ, ಸರಿಯಾಗಿ ಮತ ಹಾಕದೇ ಇರೋದೋ ಹತ್ತಾರು ಚರ್ಚೆಗೆ ಕಾರಣವಾಗುತ್ತಿದೆ.
ಒಟ್ಟಿನಲ್ಲಿ ದೇಶದಲ್ಲಿ ಇವಿಎಂ ಬೇಡ, ಬ್ಯಾಲೇಟ್ ಪೇಪರ್ ಮೇಲೆ ಚುನಾವಣೆ ನಡೆಯಬೇಕು ಅಂತ ಕೆಲ ರಾಜಕೀಯ ಪಕ್ಷಗಳು ಆಗ್ರಹಿಸುತ್ತಿವೆ. ಆದ್ರೆ ಬ್ಯಾಲೇಟ್ ಪೇಪರ್ ಮೇಲೆ ನಡೆದ ಚುನಾವಣೆಯಲ್ಲಿ, ಪ್ರಜ್ಞಾವಂತ ಮತದಾರರ ಪೈಕಿ ಸಾವಿರಾರು ಮತದಾರರು ಸರಿಯಾಗಿ ಮತಚಲಾವಣೆ ಮಾಡಲು ಬರದಿರುವುದು ವಿಪರ್ಯಾಸವೇ ಸರಿ.




