ಬೆಂಗಳೂರು: ರಾಜ್ಯದ 28 ಸಂಸದರ ಪೈಕಿ 25 ಮಂದಿ ಬಿಜೆಪಿಯವರೇ ಇದ್ದಾರೆ. ಹೀಗಾಗಿ ಬಜೆಟ್ ಕನ್ನಡಿಗರಿಗೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಅದ್ರಲ್ಲೂ ನಿರ್ಮಲಾ ಸೀತಾರಾಮನ್ ರಾಜ್ಯದಿಂದ ಆಯ್ಕೆಯಾಗಿರೋದು ಕೂಡ ನಿರೀಕ್ಷೆ ಹೆಚ್ಚಾಗಲು ಕಾರಣವಾಗಿದೆ. ಹಾಗಾದ್ರೆ ಕೇಂದ್ರ ಬಜೆಟ್ನಲ್ಲಿ ಕರ್ನಾಟಕ ನಿರೀಕ್ಷೆ ಮಾಡ್ತಿರೋ ಅಂಶಗಳೇನು..? ಯಾವ್ಯಾವುದಕ್ಕೆ ಮಣೆ ಹಾಕೋ ಸಾಧ್ಯತೆಯಿದೆ ಅನ್ನೋದ್ರ ಡೀಟೆಲ್ಸ್ ಇಲ್ಲಿದೆ ಓದಿ.
ನೆರೆ-ಬರ ಪರಿಹಾರಕ್ಕೆ ವಿಶೇಷ ಪ್ಯಾಕೇಜ್!
ನೆರೆ ಹಾಗೂ ಬರ. ಈ ಎರಡು ಕೂಡ ರಾಜ್ಯವನ್ನ ಹಿಂಡಿ ಹಿಪ್ಪೆ ಮಾಡಿದ್ವು. ನೆರೆ ಹಾವಳಿಗೆ ಸಿಲುಕಿ ಜನರು ಪತರಗುಟ್ಟಿ ಹೋಗಿದ್ರು. ಬರದ ಬರಸಿಡಿಲಿಗೆ ವಿಲವಿಲ ಒದ್ದಾಡಿದ್ರು. ಹೀಗಾಗಿ ಈ ಬಾರಿ ಕೇಂದ್ರ ಬಜೆಟ್ನಲ್ಲಿ ನೆರೆ ಪರಿಹಾರ ಹಾಗೂ ಬರ ಪರಿಹಾರಕ್ಕೆ ಹೆಚ್ಚು ಒತ್ತು ಕೊಡಲಾಗುತ್ತೆ ಅನ್ನೋ ನಿರೀಕ್ಷೆಯಿದೆ. 2019-2020 ರ ಬಜೆಟ್ನಲ್ಲಿ 38,134 ಕೋಟಿ ಮೊತ್ತದ ಯೋಜನೆಗಳು ರಾಜ್ಯದ ಪಾಲಾಗಿದ್ವು. ಆದ್ರೆ ಈ ಪೈಕಿ ಶೇ. 70ರಷ್ಟು ಅಂದ್ರೆ 32,252 ಕೋಟಿ ಮಾತ್ರ ನಾನಾ ರೂಪದಲ್ಲಿ ರಾಜ್ಯಕ್ಕೆ ಹರಿದು ಬಂದಿತ್ತು. ಹೀಗಾಗಿ ಬಾಕಿ ಹಣ ಸೇರಿದಂತೆ ಈ ಬಾರಿ ಹೆಚ್ಚು ಅನುದಾನದ ನೀಡ್ಬಹುದು ಎನ್ನಲಾಗ್ತಿದೆ. ಇನ್ನು ಈ ಬಗ್ಗೆ ಸಿಎಂ ಪ್ರಧಾನಿಗೆ ಮನವಿ ಮಾಡಿದ್ದು, 30 ಸಾವಿರ ಕೋಟಿ ರೂಪಾಯಿ ಸ್ಪೆಷಲ್ ಪ್ಯಾಕೇಜ್ ಸಿಗುತ್ತೆ ಅಂತಾ ನಿರೀಕ್ಷಿಸಲಾಗಿದೆ.
ರಾಜ್ಯದ ನಿರೀಕ್ಷೆಗಳೇನು?
ನೆರೆಯಿಂದ ಮನೆಗಳನ್ನ ಕಳೆದುಕೊಂಡವರಿಗೆ ನೂತನ ವಸತಿ ಯೋಜನೆ ಜಾರಿ ಬಗ್ಗೆ ಭರವಸೆ ಇಟ್ಟುಕೊಳ್ಳಲಾಗಿದೆ. ನಮ್ಮ ಮೆಟ್ರೋ 2ನೇ ಫೇಸ್ ಅನುದಾನಕ್ಕೂ ರಾಜ್ಯ ಕಾದು ಕುಳಿತಿದೆ. ಈ ಬಾರಿಯಾದ್ರೂ ರಾಜ್ಯಕ್ಕೆ AIIMS ಬರಬಹುದು . ಇನ್ನು ದೇಶದ 80ರಷ್ಟು ಐಟಿ-ಬಿಟಿ ಕಂಪನಿಗಳು ರಾಜ್ಯದಲ್ಲಿರೋದ್ರಿಂದ ವಿಶೇಷ ಪ್ರೋತ್ಸಾಹದ ನಿರೀಕ್ಷೆಯಲ್ಲಿದೆ. ಜೊತೆಗೆ ಎರಡು ಕಂತುಗಳ ಜಿಎಸ್ಟಿ ಬಾಕಿ 6500 ಕೋಟಿ ರೂಪಾಯಿಗಳನ್ನ ಕೇಂದ್ರ ನೀಡ್ಬಹುದು ಅಂತಾ ರಾಜ್ಯ ಆಸೆ ಕಣ್ಣುಗಳಿಂದ ಕಾಯ್ತಿದೆ.
ರೈಲ್ವೆ ವಿಭಾಗದ ನಿರೀಕ್ಷೆಗಳೇನು?
ಅಂದ್ಹಾಗೇ, ಸುರೇಶ್ ಅಂಗಡಿ ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವರಾಗಿರೋದ್ರಿಂದ ರಾಜ್ಯದ ಜನರ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಏನೇನ್ ನಿರೀಕ್ಷೆಗಳಿವೆ ಅನ್ನೋದನ್ನ ನೋಡೋದಾದ್ರೆ, ಕರ್ನಾಟಕಕ್ಕೆ ಸಬ್ ಅರ್ಬನ್ ರೈಲು. ಬೆಂಗಳೂರು ರೈಲು ನಿಲ್ದಾಣವನ್ನ ವಿಶ್ವ ದರ್ಜೆಗೇರಿಸುವುದು. ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ. ಮಂಗಳೂರನ್ನ ರೈಲ್ವೆ ವಿಭಾಗವೆಂದು ಘೋಷಿಸುವುದು. ಧಾರವಾಡ-ಬೆಳಗಾವಿ ನಡುವೆ ಹೊಸ ರೈಲು ಮಾರ್ಗ ಹಾಗೂ ಹೈಸ್ಪೀಡ್ ರೈಲ್ವೆ ಕಾರಿಡಾರ್ ಯೋಜನೆಗೆ ರಾಜ್ಯವನ್ನ ಒಳಪಡಿಸುವ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಒಟ್ನಲ್ಲಿ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಆಡಳಿತದಲ್ಲಿರೋದ್ರಿಂದ ಮತ್ತು ರಾಜ್ಯದ ನಾಲ್ವರು ಕೇಂದ್ರದಲ್ಲಿ ಮಹತ್ವದ ಖಾತೆಗಳನ್ನು ವಹಿಸಿಕೊಂಡಿರೋದ್ರಿಂದ ಬಜೆಟ್ ಹೆಚ್ಚು ನಿರೀಕ್ಷೆ ಮೂಡಿಸಿರುವುದು ಸುಳ್ಳಲ್ಲ.
Published On - 9:40 am, Sat, 1 February 20