ಸಾಂದರ್ಬಿಕ ಚಿತ್ರ
ಬೆಂಗಳೂರು, ಜನವರಿ 9: ಕರ್ನಾಟಕ ಹಾಗೂ ನೆರೆಯ ರಾಜ್ಯಗಳಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ನಕ್ಸಲರು 6 ಮಂದಿ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಶರಣಾಗಿದ್ದಾರೆ. ಆ ಮೂಲಕ ಅರಣ್ಯ ಪ್ರದೇಶಗಳ ರಕ್ತಚರಿತ್ರೆಯ ಅಧ್ಯಾಯದಿಂದ ಮುಖ್ಯವಾಹಿನಿಯ ಬದುಕಿನತ್ತ ಇವರು ಮುಖಮಾಡಿದ್ದಾರೆ. ಆದರೆ, ಶರಣಾದ ನಕ್ಸಲರು ತಕ್ಷಣದಿಂದಲೇ ಸಾಮಾನ್ಯ ಪ್ರಜೆಗಳಂತೆ ಜೀವನ ಮಾಡಲು ಸಾಧ್ಯವಾಗುತ್ತದೆಯೇ? ನಕ್ಸಲರು ಶರಣಾದ ನಂತರದ ಪ್ರಕ್ರಿಯೆಗಳೇನು? ಕಾನೂನು ಪ್ರಕ್ರಿಯೆಗಳು ಏನೇನಿರುತ್ತವೆ ಎಂಬ ಮಾಹಿತಿ ಇಲ್ಲಿದೆ.
ನಕ್ಸಲರು ಶರಣಾದ ಬಳಿಕ ಏನೆಲ್ಲ ಪ್ರಕ್ರಿಯೆಗಳು ಇರುತ್ತವೆ?
- ಶರಣಾಗತರಾದವರು ಮಾಧ್ಯಮಗಳ ಮುಂದೆ ತಾನಾಗಿಯೇ ಸ್ವ ಇಚ್ಛೆಯಿಂದ ಶರಣಾಗುತ್ತಿರುವುದಾಗಿ ಸಾರ್ವಜನಿಕ ಹೇಳಿಕೆ ನೀಡಬೇಕು.
- ಶರಣಾದ ವ್ಯಕ್ತಿಯು ಸದರಿ ಸ್ಥಳದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಪೂರ್ಣ ಮಾಹಿತಿ, ನೀಡಬೇಕು.
- ಭೂಗತವಾಗಿರುವ ಎಲ್ಲಾ ಸದಸ್ಯರ ಹೆಸರುಗಳನ್ನು ಬಹಿರಂಗ ಪಡಿಸಬೇಕು.
- ಶರಣಾದವರ ಈ ಸ್ವ ಇಚ್ಛಾ ಹೇಳಿಕೆಯನ್ನು ಇನ್ ಕ್ಯಾಮರಾ ವಿಧಾನದಲ್ಲಿ ದಾಖಲಿಸಬೇಕು.
- ಒಂದು ಶರಣಾಗತಿ ವರದಿಯನ್ನು ತಯಾರಿಸಿ, ಜಿಲ್ಲಾ ಶರಣಾಗತಿ ಸಮಿತಿಯ ಮುಂದಿಡಬೇಕು.
- ಜಿಲ್ಲಾ ಶರಣಾಗತಿ ಸಮಿತಿಯು ಈ ವರದಿಯನ್ನು ರಾಜ್ಯ ಶರಣಾಗತಿ ಸಮಿತಿಗೆ ಅನುಮೋದನೆಗಾಗಿ ಕಳುಹಿಸಿಕೊಡಬೇಕು.
- ಶರಣಾಗತನಾದ ನಂತರ ಆತನಿಗೆ ಅನ್ವಯವಾಗುವಂತಹ ಶರಣಾಗತಿ ಸೌಲಭ್ಯಗಳನ್ನು ಜಿಲ್ಲಾ ಸಮಿತಿಯು ನೀಡಬೇಕು.
- ಶರಣಾಗತನಾದ ಸದಸ್ಯನ ಮೇಲೆ ಎರಡು ವರ್ಷಗಳ ಅವಧಿಯವರೆಗೆ ನಿಗಾ ಇಡಲಾಗುತ್ತದೆ.
- ಆಂತರಿಕ ಭದ್ರತಾ ವಿಭಾಗದ ಡಿವೈಎಸ್ಪಿ ಶ್ರೇಣಿಯ ಅಧಿಕಾರಿಯು ಸಂಪರ್ಕಾಧಿಕಾರಿಯಾಗಿರುತ್ತಾರೆ.
- ಈ ಸಂಪರ್ಕಾಧಿಕಾರಿಯು ಶರಣಾಗತರಾದ ವ್ಯಕ್ತಿಗಳ ಚಲನವಲನದ ಬಗ್ಗೆ ನಿಗಾವಹಿಸಿ ತಿಂಗಳಿಗೊಮ್ಮೆಯಂತೆ ಎರಡು ವರ್ಷದವರೆಗೆ ವರದಿ ಸಲ್ಲಿಸುತ್ತಾರೆ.
ಕಾನೂನು ಪ್ರಕ್ರಿಯೆಗಳು ಏನೇನಿರುತ್ತವೆ?
- ಶರಣಾದವರ ಮೇಲೆ ಇರುವ ಪ್ರಕರಣಗಳ ಮೇಲೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ.
- ಶರಣಾಗತಿಗೆ ಇರುವ ರಾಜ್ಯ ಸಮಿತಿ ಪ್ರಕರಣಗಳನ್ನ ವಾಪಸ್ ತೆಗೆದುಕೊಳ್ಳಲು ಸರ್ಕಾರಕ್ಕೆ ಮನವಿ ಮಾಡಬೇಕು.
- ಇದಕ್ಕೆ ಸಚಿವ ಸಂಪುಟ ಅನುಮತಿ ನೀಡಬೇಕು.
- ಬಳಿಕ ಸರ್ಕಾರಿ ಅಭಿಯೋಜಕರು ಕೋರ್ಟ್ ಅರ್ಜಿ ಸಲ್ಲಿಸಬೇಕು.
- ಅರ್ಜಿಯ ವಾಸ್ತವವನ್ನು ಪರಿಗಣಿಸಿ ಕೋರ್ಟ್ ಪ್ರಕರಣ ವಾಪಸ್ ತೆಗೆದುಕೊಳ್ಳಲು ಅನುಮತಿ ನೀಡಿದರೆ ಪ್ರಕರಣ ಹಿಂಪಡೆಯಲಾಗುತ್ತದೆ.
- ಆರೋಪಿಗಳ ರಾಷ್ಟ್ರೀಯ ತನಿಖಾ ದಳದಲ್ಲಿ ಇರುವ ಪ್ರಕರಣ ವಾಪಸ್ ತೆಗೆದುಕೊಳ್ಳುವ ಸಾಧ್ಯತೆ ಇದೆ.
- ಕೇಂದ್ರ ನಕ್ಸಲ್ ಶರಣಾಗತಿ ಸಮತಿಯಿಂದ ಕೆಂದ್ರ ಸಚಿವ ಸಂಪುಟಕ್ಕೆ ಮನವಿ ಮಾಡಬೇಕು.
- ಈ ವೇಳೆ ಸಚಿವ ಸಂಪುಟ ಗೃಹ ಇಲಾಖೆಗೆ ಈ ಕಡತವನ್ನು ಕಳಿಸುತ್ತದೆ. ಗೃಹ ಇಲಾಖೆ ಅದನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರಿಗೆ ಕಳುಹಿಸುತ್ತದೆ.ಈ ಎಲ್ಲ ಕಡೆ ಒಪ್ಪಿಗೆ ಸಿಕ್ಕರೆ ಕೇಂದ್ರ ಸಚಿವ ಸಂಪುಟ ಪ್ರಕರಣ ವಾಪಸಾತಿಗೆ ಸಮ್ಮತಿಸಬಹುದು.
ನಂತರ ಈ ವಿಚಾರವನ್ನ ಕೋರ್ಟ್ ಗಮನಕ್ಕೆ ತಂದು ಕೋರ್ಟ್ನಿಂದ ಅನುಮತಿ ಪಡೆಯಬೇಕು.
ಇದನ್ನೂ ಓದಿ: ಶರಣಾಗತಿ ಆಯ್ತು, ಆದರೆ ನಕ್ಸಲರ ಬಳಿ ಇದ್ದ ಶಸ್ತ್ರಾಸ್ತ್ರ ಎಲ್ಲಿ ಹೋಯ್ತು!?
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ