ರಾಜ್ಯದಲ್ಲಿ 10 ಕಾಲರಾ ಕೇಸ್ ಪತ್ತೆ, ಬೀದಿಬದಿ ಹೋಟೆಲ್​ಗಳ ತೆರವಿಗೆ ಆಗ್ರಹ!

|

Updated on: Apr 08, 2024 | 6:34 AM

ರಾಜ್ಯದಲ್ಲಿ ಬಿಸಿಲಿನ ತಾಪಕ್ಕೆ ಜನರು ಬಸವಳಿದಿದ್ದಾರೆ. ಬಿರು ಬಿಸಿಲಿಗೆ ಹೈರಾಣದ ಜನರು ಯಾವಾಗ ಮಳೆ ಬರುತ್ತೊ ಎಂಬ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಶನಿವಾರ (ಏ.06) ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಇಬ್ಬರು ವಿದ್ಯಾರ್ಥಿನಿಯರಿಗೆ ಕಾಲರಾ ದೃಡಪಟ್ಟಿವೆ.

ರಾಜ್ಯದಲ್ಲಿ 10 ಕಾಲರಾ ಕೇಸ್ ಪತ್ತೆ, ಬೀದಿಬದಿ ಹೋಟೆಲ್​ಗಳ ತೆರವಿಗೆ ಆಗ್ರಹ!
ಕಾಲರಾ
Follow us on

ಬೆಂಗಳೂರು, ಏಪ್ರಿಲ್​ 07: ರಣಬಿಸಿಲು ನೆತ್ತಿ ಸುಡುತ್ತಿದೆ. ನೀರಿಲ್ಲದೆ ಜನ ಹೈರಾಣಾಗಿದ್ದಾರೆ. ನೆರಳು-ನೀರು ಸಿಕ್ಕರೆ ಸಾಕಪ್ಪ ಅನ್ನೋ ಹೊತ್ತಲ್ಲೇ, ಬೆಂಗಳೂರಿಗರಿಗೆ (Bengaluru) ಮತ್ತೊಂದು ಕಂಟಕ ಎದುರಾಗಿದೆ. ತಾಪಮಾನ ಏರಿಕೆ, ನೀರಿನ ಕೊರತೆಗೆ ಬಸವಳಿದ ಜನರು ಕಾಲರಾದ (Cholera) ವಿರುದ್ಧ ಹೋರಾಡುವ ಸ್ಥಿತಿ ಎದುರಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಕಾಲರಾ ಆತಂಕವನ್ನು ಸೃಷ್ಟಿಸಿದೆ. ಬೊಮ್ಮನಹಳ್ಳಿಯಲ್ಲಿ 3ನೇ ಪ್ರಕರಣ ಪತ್ತೆಯಾಗಿದ್ದು, ರಾಜ್ಯದಲ್ಲಿ ಕಾಲರಾ ಕೇಸ್​ಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರ ಒಂದರಲ್ಲೇ ಬರೋಬ್ಬರಿ 9 ಕೇಸ್​ಗಳ ದೃಡಪಟ್ಟಿವೆ. ಇತ್ತ ರಾಮನಗರದ ಓರ್ವ ವ್ಯಕ್ತಿಗೆ ಕಾಲರಾ ಚಿಕಿತ್ಸೆ ಕೊಡಿಲಾಗುತ್ತಿದೆ.

ಇನ್ನು ನಿನ್ನೆಯಷ್ಟೇ (ಏ.06) ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಇಬ್ಬರು ವಿದ್ಯಾರ್ಥಿನಿಯರಿಗೆ ಕಾಲರಾ ದೃಡಪಟ್ಟಿತ್ತು. ಎಚ್ಚೆತ್ತುಕೊಂಡಿರುವ ಅಧಿಕಾರಿಗಳು BCM ಹಾಸ್ಟೆಲ್​ನ ಆಹಾರ ಪದಾರ್ಥಗಳನ್ನು ಪರೀಕ್ಷೆಗೆ ಕಳಿಸಿದ್ದಾರೆ. ಆದರೆ, ಹಾಸ್ಟೆಲ್​ನಲ್ಲಿ ಇರಲು ಭಯಪಡ್ತಿರುವ ವಿದ್ಯಾರ್ಥಿನಿಯರು ಬೇರೆ ಕಡೆಗೆ ಶಿಫ್ಟ್ ಆಗುತ್ತಿದ್ದಾರೆ.

ಬೀದಿಬದಿ ಹೋಟೆಲ್​ಗಳ ತೆರವಿಗೆ ಆಗ್ರಹ, ಬಿಬಿಎಂಪಿಗೆ ಪತ್ರ

ಇತ್ತ ಬೀದಿಬದಿ ಹೋಟೆಲ್​ಗಳ ತೆರವಿಗೆ ಆಗ್ರಹ ಕೇಳಿಬಂದಿದೆ. ಬೆಂಗಳೂರಿನ ಹೋಟೆಲ್ ಮಾಲೀಕರ ಸಂಘ ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆಗೆ ಪತ್ರ ಬರೆದಿದೆ. 30 ಸಾವಿರ ಬೀದಿಬದಿ ಹೋಟೆಲ್​ಗಳಿದ್ದು, ಇವುಗಳಿಂದ ಜನರ ಆರೋಗ್ಯ ಹದಗೆಡುತ್ತಿದೆ ಎಂದು ಆರೋಪಿಸಿದೆ.

ಇದನ್ನೂ ಓದಿ:  ಇಬ್ಬರು ವೈದ್ಯಕೀಯ ವಿದ್ಯಾರ್ಥಿನಿಯರಲ್ಲಿ ಕಾಲರಾ ಪತ್ತೆ: ಸ್ವಯಂ ಪ್ರೇರಿತ ಪ್ರಕರಣ ದಾಖಲು

ಕಾಲರಾಗೆ ಕಡಿವಾಣ ಹಾಕಲು ಪಾಲಿಕೆ ಅಲರ್ಟ್

ಬೆಂಗಳೂರಿನಲ್ಲಿ 3 ಕೇಸ್​ಗಳು ಪತ್ತೆಯಾಗಿರುವ ಬೆನ್ನಲ್ಲೇ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಆರೋಗ್ಯ ವಿಭಾಗದ ವಿಶೇಷ ಆಯುಕ್ತರು ಜಲಮಂಡಳಿಗೆ ಪತ್ರ ಬರೆದಿದ್ದಾರೆ. ಜಲಮೂಲಗಳ ಕ್ಲೋರಿನೇಷನ್ ಮಟ್ಟ ಪರೀಕ್ಷಿಸಲು ಸೂಚನೆ ಕೊಟ್ಟಿದ್ದಾರೆ.

ಮುಂದುವರೆದ ಜಲಗಂಡಾಂತರ, ಡ್ರಮ್​ಗಳಲ್ಲಿ ನೀರು ಶೇಖರಿಸುತ್ತಿರುವ ಜನ!

ಕಾಲರಾ ಕಾಡುತ್ತಿರುವ ಹೊತ್ತಲ್ಲೇ ಜಲಗಂಡಾಂತರ ಮುಂದುವರೆದಿದೆ. ನೀರಿಲ್ಲದೆ ಬೀಡಿ ಕೆಂಗೇರಿ ಬಳಿ ಇರುವ ಕಾರ್ಮಿಕರ ಕಾಲೋನಿ ಜನ ಹೈರಾಣಾಗಿದ್ದಾರೆ. ದೊಡ್ಡ ದೊಡ್ಡ ಡ್ರಮ್​ಗಳಲ್ಲಿ ನೀರು ಶೇಖರಿಸಿ ಬಳಕೆ ಮಾಡಲಾಗುತ್ತಿದ್ದು, ಕಾಲರ ಮತ್ತಷ್ಟು ಹರಡುವ ಭೀತಿ ಎದುರಾಗಿದೆ.

ಒಟ್ಟಿನಲ್ಲಿ ಒಂದುಕಡೆ ನೀರಿಲ್ಲದ ಪರದಾಟ, ಮತ್ತೊಂದ್ಕಡೆ ರಣಬಿಸಿಲಿನ ತಾಪ. ಈ ನಡುವೆ ಕಾಲರಾದ ಕಾಟ ಎದುರಾಗಿದ್ದು ಜನರಿಗೆ ದಿಕ್ಕು ತೋಚದಂತಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:40 pm, Sun, 7 April 24