ಬೆಂಗಳೂರು, ಮೇ 26: ವಿದ್ಯಾರ್ಥಿಗಳ (Students) ಭವಿಷ್ಯ ರೂಪಿಸಬೇಕಾಗಿರುವ ವಿದ್ಯಾ ದೇಗುಲಗಳು ಮಕ್ಕಳ ಜೀವನದ ಜೊತೆ ಚಲ್ಲಾಟವಾಡುತ್ತಿವೆ. ಪೋಷಕರ ನೂರಾರು ಕನಸುಗಳು ನುಚ್ಚು ನೂರು ಮಾಡುತ್ತಿವೆ. ಸದ್ಯ ಬೆಂಗಳೂರು (Bengaluru) ಸೇರಿದಂತೆ ರಾಜ್ಯದಲ್ಲಿ ತಲೆ ಎತ್ತಿರುವ ಅನಧಿಕೃತ ಶಾಲೆಗಳು (School) ಪೋಷಕರ ನಿದ್ದೆಗೆಡಸಿವೆ. ಕಾನೂನು ಕ್ರಮವಹಿಸಿ ಕಡಿವಾಣ ಹಾಕಬೇಕಿದ್ದ ಶಿಕ್ಷಣ ಇಲಾಖೆ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದು ಅನಧಿಕೃತ ಶಾಲೆಗಳ ವಿಚಾರದಲ್ಲಿ ಮತ್ತೆ ಯೂ ಟರ್ನ್ ಹೊಡೆದಿದೆ.
ಬೆಂಗಳೂರು ಸೇರಿದ್ದಂತೆ ರಾಜ್ಯದಲ್ಲಿ ಅನಧಿಕೃತ ಶಾಲೆಗಳು ತಲೆ ಎತ್ತಿದ್ದು ಕಡಿವಾಣ ಹಾಕಬೇಕಿದ್ದ ಶಿಕ್ಷಣ ಇಲಾಖೆ ದಿವ್ಯ ನಿರ್ಲಕ್ಷ್ಯ ವಹಿಸಿದೆ. ಕಳೆದೊಂದು ವರ್ಷದಿಂದ ಪೋಷಕರು ಅನಧಿಕೃತ ಶಾಲೆಗಳ ಪಟ್ಟಿ ಬಿಡುಗಡೆಗೆ ಒತ್ತಾಯ ಮಾಡಿದರೂ, ಶಿಕ್ಷಣ ಇಲಾಖೆ ಮಾತ್ರ ಅನಧಿಕೃತ ಶಾಲೆಗಳ ಪಟ್ಟಿ ನೀಡದೆ ಈಗ 17,000 ಅಧಿಕೃತ ಶಾಲೆಗಳ ಪಟ್ಟಿ ಬಿಡುಗಡೆ ಮಾಡಿದೆ. ಅನಧಿಕೃತ ಶಾಲೆಗಳ ಪರವಾಗಿಯೇ ನಿಂತಿದೆನಾ ಅನ್ನೊ ಅನುಮಾನ ಶುರುವಾಗಿದೆ. ಅನಧಿಕೃತ ಶಾಲೆಗಳ ವಿಚಾರದಲ್ಲಿ ಮತ್ತೆ ಯೂ ಟರ್ನ್ ಹೊಡೆದಿರುವ ಶಾಲಾ ಶಿಕ್ಷಣ ಇಲಾಖೆ, ಅನಧಿಕೃತ ಶಾಲೆಗಳ ಪಟ್ಟಿ ಬಿಡುಗಡೆ ಮಾಡದೆ ಎಡವಟ್ಟು ಮುಂದುವರೆಸಿದೆ.
ಅನಧಿಕೃತ ಶಾಲೆಗಳ ವಿಚಾರದಲ್ಲಿ ಶಿಕ್ಷಣ ಇಲಾಖೆ ಮತ್ತೆ ಯೂಟರ್ನ್ ಹೊಡೆದಿದ್ದು. ಅನಧಿಕೃತ ಶಾಲೆಗಳ ಕಥೆಯೇನು ಅಂತ ಮತ್ತೆ ಆತಂಕದಲ್ಲಿ ಪೋಷಕರು ಪರದಾಡುವಂತಾಗಿದೆ. ಅನಧಿಕೃತ ಶಾಲೆ ಪಟ್ಟಿ ಪ್ರಕಟಿಸದೆ ಮತ್ತೆ ಪೋಷಕರ ಜೊತೆ ಕಣ್ಣಾಮುಚ್ಚಾಲೆಗೆ ಮುಂದಾಗಿದ್ದು ಶಿಕ್ಷಣ ಇಲಾಖೆ ವಿರುದ್ಧ ಪ್ರತಿಭಟನೆ ಮಾಡಲು ಖಾಸಗಿ ಶಾಲೆಗಳ ಒಕ್ಕೂಟ ಮುಂದಾಗಿದೆ.
ಇದನ್ನೂ ಓದಿ: ಪಾಳುಬಿದ್ದ ಸರ್ಕಾರಿ ಶಾಲೆಗೆ ಲಕ್ಷ ಲಕ್ಷ ಸುರಿದು ಅಭಿವೃದ್ಧಿ ಮಾಡಿದ ಸಮಾಜಮುಖಿ ತಂಡ! ಉಜಿರೆಯಲ್ಲೊಂದು ಮಾದರಿ ಕೆಲಸ
ಕರ್ನಾಟಕದಲ್ಲಿರುವ 17,000 ಕ್ಕೂ ಹೆಚ್ಚು ಅಧಿಕೃತ ಖಾಸಗಿ ಶಾಲೆಗಳ ಪಟ್ಟಿಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬಿಡುಗಡೆ ಮಾಡಿದೆ. ಆದರೆ ಅನಧಿಕೃತ ಶಾಲೆಗಳ ಪಟ್ಟಿ ಬಿಡುಗಡೆ ಮಾಡಿಲ್ಲ. ಈಗಾಗಲೇ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯವೇನು ಎಂಬ ಬಗ್ಗೆ ಪೋಷಕರು ಆತಂಕದಲ್ಲಿದ್ದಾರೆ. ಅನಧಿಕೃತ ಪಟ್ಟಿ ಕೂಡ ನೀಡಿ ಅಂತ ಪೋಷಕಿ ಗೀತಾ ಒತ್ತಾಯಿಸಿದ್ದಾರೆ.
ಶಿಕ್ಷಣ ಇಲಾಖೆ ಡಿಎಸ್‌ಇಎಲ್‌ನ ವೆಬ್‌ಸೈಟ್‌ನಲ್ಲಿ 17 ಸಾವಿರ ಅಧಿಕೃತ ಶಾಲೆಗಳ ಪಟ್ಟಿಯನ್ನ ಅಪ್‌ಲೋಡ್ ಮಾಡಿದೆ. ಪಟ್ಟಿಯು ಜಿಲ್ಲಾವಾರು ಶಾಲೆಗಳ ಹೆಸರುಗಳನ್ನು ಪ್ರಕಟಿಸಲಾಗಿದೆ. ಇದರ ಅಡಿಯಲ್ಲಿ ಬ್ಲಾಕ್ ಆಯ್ಕೆ ಮಾಡಬೇಕು ಮತ್ತು ಅವರ ಮಗುವಿನ ಶಾಲೆಯು ಅಧಿಕೃತವಾಗಿದೆಯೇ ಎಂದು ನೋಡಲು ಪಟ್ಟಿ ಮಾಡಲಾದ ಹೆಸರುಗಳ ಸರಣಿಯನ್ನು ನೋಡಬೇಕು ಜೊತೆಗೆ ಅನುಮತಿ ನೀಡಿದ ಅವಧಿಯನ್ನು ಪರಿಶೀಲಿಸಬೇಕು. ಪಟ್ಟಿಯಲ್ಲಿ ಶಾಲೆಯು ನೀಡಬಹುದಾದ ಬೋರ್ಡ್‌ಗಳು ಮತ್ತು ತರಗತಿಗಳನ್ನು ಸಹ ಉಲ್ಲೇಖಿಸಲಾಗಿದೆ.
ಸದ್ಯ ಬೆಂಗಳೂರು ಒಂದರಲ್ಲೇ, 3,064 ಶಾಲೆಗಳು ಅನುಮೋದನೆಯ ಮುದ್ರೆಯನ್ನು ಪಡೆದಿದ್ದು, ಬೆಂಗಳೂರು ದಕ್ಷಿಣ- 1,312 ಉತ್ತರ- 1,302 ಮತ್ತು ಗ್ರಾಮಾಂತರದಲ್ಲಿ 449 ಗರಿಷ್ಠ ಅಧಿಕೃತ ಶಾಲೆಗಳಿವೆ. ಆದರೆ ಎಷ್ಟು ಶಾಲೆಗಳನ್ನು ತಿರಸ್ಕರಿಸಲಾಗಿದೆ ಎಂಬುದರ ಕುರಿತು ಯಾವುದೇ ಮಾಹಿತಿ ನೀಡದೆ ಇರುವುದ ಈಗ ಪೋಷಕರ ಆತಂಕಕ್ಕೆ ಕಾರವಣಾಗಿದೆ. ಹೀಗಾಗಿ ಅನಧಿಕೃತ ಶಾಲೆಗಳ ಪಟ್ಟಿ ನೀಡದೆ ಇದ್ದರೆ ಪ್ರತಿಭಟಿಸುವುದಾಗಿ ಖಾಸಗಿ ಶಾಲೆಗಳ ಒಕ್ಕೂಟ ಇಲಾಖೆಗೆ ಪತ್ರ ಬರೆದಿದೆ.
ಒಂದು ವಾರಗಳ ಕಾಲ ಗಡುವು ನೀಡಿದ್ದು ಪಟ್ಟಿ ಪ್ರಕಟಿಸದೆ ಇದ್ದರೆ ಶಿಕ್ಷಣ ಇಲಾಖೆ ಮುಂದೆ ಪ್ರತಿಭಟನೆ ಮಾಡವುದಗಿ ಖಾಸಗಿ ಶಾಲೆಗಳ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಶಶೀಕುಮಾರ್ ಹೇಳಿದ್ದಾರೆ.
ಒಟ್ಟಿನಲ್ಲಿ ಬೆಂಗಳೂರು ಸೇರಿದಂತೆ ಹಲವಡೆ ಪೋಷಕರಿಗೆ ಮಕಮಲ್ ಟೋಪಿ ಹಾಕಿರುವ ಅನಧಿಕೃತ ಶಾಲೆಗಳ ಕಳ್ಳಾಟದ ವಿರುದ್ಧ ಚಾಟಿ ಬೀಸಬೇಕಿದ್ದ ಶಿಕ್ಷಣ ಇಲಾಖೆಯೇ ಈಗ ಅನಧಿಕೃತವಾದ ಶಾಲೆಗಳ ಪಟ್ಟಿ ನೀಡಲು ಹಿಂದೇಟು ಹಾಕಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ