ಇದೇ ಮೊದಲ ಬಾರಿಗೆ ಶಾಲೆ ಮೆಟ್ಟಿಲು ಹತ್ತುವ ಮಕ್ಕಳಿಗೆ ಕೊಪ್ಪಳದ ಗವಿಮಠದಲ್ಲಿ ಅಕ್ಷರಾಭ್ಯಾಸ
2024-25ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಕ್ಕಳು ಶಾಲೆಗೆ ತೆರಳಲು ಸಜ್ಜಾಗಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ಶಾಲೆ ಮೆಟ್ಟಿಲು ಹತ್ತುವ ಮಕ್ಕಳಿಗೆ ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ಅಕ್ಷರಾಭ್ಯಾಸ ಮಾಡಿಸುತ್ತಾರೆ. ಮಗುವಿಗೆ ಸರಸ್ವತಿಯ ಕೃಪೆ ಇರಲಿ ಎನ್ನುವುದು ಪೋಷಕರ ನಂಬಿಕೆ. ಅದರಂತೆ ಉತ್ತರ ಕರ್ನಾಟಕ ಭಾಗದ ಕೊಪ್ಫಳದ ಪ್ರಸಿದ್ಧ ಗವಿಮಠದಲ್ಲೂ ಸಹ ಇದೇ ಮೊದಲ ಬಾರಿಗೆ ಶಾಲೆಗೆ ತೆರಳುವ ಮಕ್ಕಳಿಗೆ ಪೋಷಕರು ಗವಿಶ್ರೀಗಳಿಂದ ಅಕ್ಷರಭ್ಯಾಸ ಮಾಡಿಸಿದ್ದಾರೆ.
ಕೊಪ್ಪಳ, ಮೇ.24: ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳಿಗೆ ತಾಯಿ ಸರಸ್ವತಿ ದೇವಿ ಕೃಫೆ ಸಿಗಬೇಕು, ವಿದ್ಯಾಭ್ಯಾಸದಲ್ಲಿ ಮಕ್ಕಳು ಸದಾ ಮುಂದೆ ಇರಬೇಕು ಎಂಬ ಮಹಾ ಆಸೆ ಇರುತ್ತದೆ. ಅದಕ್ಕಾಗಿ ಅನೇಕರು ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ಅಕ್ಷರಾಭ್ಯಾಸ(Aksharabhyasa) ಮಾಡಿಸಲು ಕರೆದುಕೊಂಡು ಹೋಗುತ್ತಾರೆ. ಆದ್ರೆ, ಉತ್ತರ ಕರ್ನಾಟಕದ ಭಾಗದಲ್ಲಿನ ಸಾಮಾನ್ಯ ಜನರಿಗೆ ಅದು ಕಷ್ಟ ಸಾಧ್ಯ. ಅದಕ್ಕಾಗಿ ಶಿಕ್ಷಣಕ್ಕೆ ಹೆಸರಾದ ಕೊಪ್ಪಳ(Koppal)ದ ಗವಿ ಸಿದ್ದೇಶ್ವರ ಮಠದಲ್ಲೇ ಕಳೆದ ಕೆಲ ವರ್ಷಗಳಿಂದ ಅಕ್ಷರಾಭ್ಯಾಸ ಆರಂಭಿಸಿದ್ದಾರೆ. ಅದರಂತೆ ಇಂದು(ಮೇ.24) ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ (Abhinava Gavisiddeshwara Swamiji)ಸಾವಿರಾರು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು. ಮಕ್ಕಳ ಮೊದಲ ಬರಹವನ್ನು ಬರೆಯಿಸಿ, ಅವರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು.
ಇನ್ನೇನು ನಾಲ್ಕೈದು ದಿನ ಕಳೆದರೆ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಈ ಹಿನ್ನಲೆಯಲ್ಲಿ ಚಿಣ್ಣರು ಹೊಸದಾಗಿ ಶಾಲೆಗೆ ಹೋಗಲು ಸಿದ್ದರಾಗುತ್ತಿದ್ದಾರೆ. ಈ ವೇಳೆಯಲ್ಲಿ ಹೊಸದಾಗಿ ಶಾಲೆಗ ಹೋಗುವ ಮಕ್ಕಳಿಗೆ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ಅಕ್ಷರಾಭ್ಯಾಸ ಮಾಡಿಸಿದರು. ಸ್ವಾಮೀಜಿಗಳು ಚಿಣ್ಣರ ಕೈ ಹಿಡಿದು ಓಂಕಾರ ಹಾಗೂ ಓಂ ಗವಿಸಿದ್ದೇಶ್ವರಾಯನಮಃ ಎಂದು ಬರೆಸುತ್ತ ಮೊದಲ ಅಕ್ಷರಭ್ಯಾಸ ಮಾಡಿಸಿದರು. ತಮ್ಮ ಮಕ್ಕಳೊಂದಿಗೆ ಆಗಮಿಸಿದ ಪೊಷಕರು, ಶ್ರೀಗಳ ಹಸ್ತದಿಂದ ಅಕ್ಷರಾಭ್ಯಾಸ ಮಾಡಿಸಿ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ತಾಯಿ ಸರಸ್ವತಿಯಲ್ಲಿ ಪ್ರಾರ್ಥನೆ ಮಾಡಿದರು.
ಶಿಕ್ಷಣಕ್ಕೆ ಹೆಸರುವಾಸಿಯಾದ ಕೊಪ್ಪಳದ ಗವಿಮಠ
ಬೆಳಿಗ್ಗೆಯಿಂದಲೇ ಪಾಲಕರು ತಮ್ಮ ಮಕ್ಕಳನ್ನು ಕರೆದುಕೊಂಡು ಮಠಕ್ಕೆ ಆಗಮಿಸುತ್ತಿದ್ದರು. ಸರತಿ ಸಾಲಿನಲ್ಲಿ ತಮ್ಮ ಪುಟ್ಟ ಪುಟ್ಟ ಕಂದಮ್ಮಗಳ ಜೊತೆಗೆ ಸ್ಲೇಟು, ಬಳಪ ಹಿಡಿದುಕೊಂಡು ಮೊದಲ ಅಕ್ಷರಗಳನ್ನ ಶ್ರೀಗಳಿಂದ ಬರೆಸಲು ಉತ್ಸುಕರಾಗಿದ್ದರು. ಕಳೆದ ಎಂಟು ವರ್ಷಗಳಿಂದ ಗವಿಮಠದಲ್ಲಿ ಶ್ರೀಗಳು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಾ ಬಂದಿದ್ದಾರೆ. ಮಕ್ಕಳಿಗೆ ಅಕ್ಷರಾಭ್ಯಾಸ ಪದ್ಧತಿಯ ದೂರದ ಶೃಂಗೇರಿ, ಕೋಲ್ಲೂರಿನಲ್ಲಿ ನಡೆಯುತ್ತ ಬಂದಿವೆ. ಆದ್ರೆ, ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಎಂಟು ವರ್ಷಗಳ ಹಿಂದೆ ಗವಿಮಠದಲ್ಲಿ ಅಭಿನವ ಶ್ರೀಗಳು ಅಕ್ಷರಾಭ್ಯಾಸ ಶುರು ಮಾಡಿದರು.
ಈ ಹಿನ್ನೆಲೆ ಇಂದು ಮಠಕ್ಕೆ ಸಾವಿರಾರು ಜನ ಪೋಷಕರು ತಮ್ಮ ಮಕ್ಕಳನ್ನ ಕರೆದುಕೊಂಡು ಬಂದು ಶ್ರೀಗಳಿಂದ ಅಕ್ಷರಾಭ್ಯಾಸ ಮಾಡಿಸಿದರು. ಗವಿಮಠದ ಶ್ರೀ ಗಳ ಆಶಿರ್ವಾದ ಪಡೆದ್ರು. ಶ್ರೀ ಗಳಿಂದ ಅಕ್ಷರಾಭ್ಯಾಸ ಮಾಡಿಸಿದ್ದು ತುಂಬಾ ಖುಷಿಯಾಗಿದೆ ಎಂದು ಪೊಷಕರು ಖುಷಿ ಹಂಚಿಕೊಂಡಿದ್ದಾರೆ. ಕೊಪ್ಪಳದ ಗವಿಮಠ ಶಿಕ್ಷಣಕ್ಕೆ ಹೆಸರುವಾಸಿಯಾದ ಮಠ, ಸಾವಿರಾರು ಮಕ್ಕಳು ಈ ಮಠದ ನೆರಳಲ್ಲಿ ವಿದ್ಯೆ ಕಲಿತಾರೆ, ಉಜ್ವಲ ಭವಿಷ್ಯ ಕಟ್ಟಿಕೊಂಡಿದ್ದಾರೆ. ಇಂತಹ ಪವಿತ್ರ ಸ್ಥಳದಲ್ಲಿ ಪೂಜ್ಯ ಶ್ರೀಗಳ ಕೈಯಲ್ಲಿ ಮೊದಲ ಅಕ್ಷರ ಬರೆದ ಈ ಪುಟಾಣಿ ಮಕ್ಕಳು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗ್ತಾರೆ ಸಮಾಜದ ಗಣ್ಯ ವ್ಯಕ್ತಿಗಳಾಗ್ತಾರೆ ಎನ್ನುವುದು ಈ ಪೋಷಕರ ನಂಬಿಕೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:02 pm, Fri, 24 May 24