ಕರ್ನಾಟಕದ ಹಲವೆಡೆ ಭಾರಿ ಮಳೆ: ಸಿಡಿಲಿನ ಹೊಡೆತಕ್ಕೆ ಶಿವಮೊಗ್ಗದಲ್ಲಿ ರೈತ ಬಲಿ

|

Updated on: Apr 20, 2024 | 10:57 AM

ರಾಜ್ಯದಲ್ಲಿ ಕೊನೆಗೂ ಮಳೆಯಾಗಿದೆ. ಬಿಸಿಲ ಬೇಗೆಯಿಂದ ಬೆಂದ ಭೂಮಿಗೆ ವರುಣ ತಂಪೆರೆದಿದ್ದಾನೆ. ಬೆಂಗಳೂರಿನ ಹಲವು ಪ್ರದೇಶಗಳು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ರಾಜ್ಯದ ಹಲವೆಡೆ ಶುಕ್ರವಾರ ಮಳೆಯಾಗಿದೆ. ಶಿವಮೊಗ್ಗದಲ್ಲಿ ಸಿಡಿಲಿಗೆ ರೈತರೊಬ್ಬರು ಬಲಿಯಾಗಿದ್ದಾರೆ.

ಕರ್ನಾಟಕದ ಹಲವೆಡೆ ಭಾರಿ ಮಳೆ: ಸಿಡಿಲಿನ ಹೊಡೆತಕ್ಕೆ ಶಿವಮೊಗ್ಗದಲ್ಲಿ ರೈತ ಬಲಿ
ನೆಲಮಂಗಲದಲ್ಲಿ ಮಳೆ
Follow us on

ಬೆಂಗಳೂರು, ಏಪ್ರಿಲ್ 20: ಬಿಸಿಲ ಬೇಗೆಯಿಂದ ಬಸವಳಿದಿದ್ದ ಕರ್ನಾಟಕದಲ್ಲಿ ಕೊನೆಗೂ ಮಳೆರಾಯ (Karnataka Rains) ತಂಪೆರೆದಿದ್ದಾನೆ. ಆದರೆ, ಮಳೆಯು (Rain) ಸಂತಸದ ಜತೆ ಸಂಕಟವನ್ನೂ ತಂದಿದೆ. ತಡವಾಗಿ ಆರಂಭವಾದ ಪೂರ್ವ ಮುಂಗಾರು ಮಳೆ ತುಸು ತಂಪೆರೆದಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಶುಕ್ರವಾರ ಮಳೆಯಾಗಿದೆ. ಈ ಮಧ್ಯೆ, ಸಿಡಿಲು ಬಡಿದು ಶಿವಮೊಗ್ಗ (Shivamogga) ತಾಲೂಕಿನ ಹರಮಘಟ್ಟ ಗ್ರಾಮದಲ್ಲಿ ರೈತರೊಬ್ಬರು ಮೃತಪಟ್ಟಿದ್ದಾರೆ. ತೋಟದಲ್ಲಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಾಗ ಸಿಡಿಲು ಬಡಿದು ರಾಕೇಶ್ ಕೊನೆಯುಸಿರೆಳೆದಿದ್ದಾರೆ.

30 ಮರಗಳು ಬುಡಮೇಲು: ಹಾರಿಹೋದ ಮನೆ ಮೇಲ್ಛಾವಣಿ

ತುಮಕೂರು ಜಿಲ್ಲೆಯಲ್ಲಿ ಗಾಳಿ, ಮಳೆಯಿಂದ ಅವಾಂತರವನ್ನೇ ಸೃಷ್ಟಿಸಿದೆ. ಕುಣಿಗಲ್ ತಾಲೂಕಿನ ಡಿ. ಹೊಸಹಳ್ಳಿಯಲ್ಲಿ ಗಾಳಿಯ ರಭಸಕ್ಕೆ 30ಕ್ಕೂ ಹೆಚ್ಚು ಮರಗಳು ನೆಲಸಮವಾಗಿವೆ. ಶಾಲಾ ಕಟ್ಟಡದ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದೆ. ಇನ್ನು ರಾಜೇಂದ್ರಪುರ ಗ್ರಾಮದಲ್ಲಿ 3ಮನೆಗಳ ಮೇಲ್ಛಾವಣಿ ಹಾರಿಹೋಗಿವೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ತಡರಾತ್ರಿ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದಿದೆ. ಕೊಪ್ಪ ರಸ್ತೆಯ ಇಸಾಕ್ ಎಂಬುವರ ಮನೆಯ ತೆಂಗಿನ ಮರ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

ಹವಾಮಾನ ಮುನ್ಸೂಚನೆಗೆ ಇಲ್ಲಿ ಕ್ಲಿಕ್ ಮಾಡಿ: WEATHER FORECAST NEWS

ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶಕ್ಕೆ ಮಳೆ‌ ಕಾಟ ನೀಡಿದೆ. ಡಿಸಿಎಂ ಡಿಕೆ ಭಾಷಣ ಮುಗಿಸಿ, ಸಿಎಂ ಮಾತು ಆರಂಭಿಸ್ತಿದ್ದಂತೆ ವರುಣ ಅಬ್ಬರಿಸಿದ್ದಾನೆ. ರಕ್ಷಣೆಗಾಗಿ ಜನರು ಪರದಾಡಿದದ್ರು. ಕೊನೆಗೆ ಪ್ಲಾಸ್ಟಿಕ್ ಚೇರ್​​ಗಳನ್ನೇ ಆಶ್ರಯ ಪಡೆದು, ಸಿಎಂ ಭಾಷಣ ಆಲಿಸಿದರು.

ಬೆಂಗಳೂರಿನಲ್ಲಿ ಎಲ್ಲೆಲ್ಲಿ ಮಳೆ?

ಬೆಂಗಳೂರಿನ ಕೆಂಗೇರಿ, ಕುಂಬಳಗೋಡು, ಯಲಹಂಕ ಸುತ್ತಮುತ್ತಲಿನ ಜನ ಈ ವರ್ಷದ ಮೊದಲ ಮಳೆ ಕಂಡು ಖುಷಿಯಾದರು. ಬ್ಯಾಟರಾಯನಪುರ ಸೇರಿದಂತೆ ಹಲವೆಡೆ ತುಂತುರು ಹನಿಗಳು ಮಂದಹಾಸ ಮೂಡಿಸಿದವು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲೂ ಮಳೆರಾಯನ ದರ್ಶನವಾಯ್ತು.

ಇದನ್ನೂ ಓದಿ: ಬೆಂಗಳೂರಿಗೆ ಬಂತು ಮೊದಲ ವರ್ಷಧಾರೆ

ಈ ಮಧ್ಯೆ, ಮುಂದಿನ 2 ದಿನ ರಾಜ್ಯದ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ