ಮಂಡ್ಯದಲ್ಲಿ ಸುಮಲತಾ ಪ್ರಚಾರದ ಬಗ್ಗೆ ಹೆಚ್ಡಿ ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಸುಮಲತಾ ಅಂಬರೀಶ್ ಪ್ರಚಾರದ ಬಗ್ಗೆ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಕೇವಲ ಹೇಳಿಕೆ ನೀಡುವ ಮೂಲಕ ಅಷ್ಟೇ ಬೆಂಬಲ ಕೊಡಬೇಕು ಎಂದೇನಿಲ್ಲವಲ್ಲ. ಹೇಳಿಕೆಗಳನ್ನು ನೀಡದೆಯೂ ಬೆಂಬಲ ಕೊಡಲು ಅವಕಾಶವಿದೆಯಲ್ಲ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಮೈಸೂರು, ಏಪ್ರಿಲ್ 20: ಲೋಕಸಭೆ ಚುನಾವಣೆಗೆ ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ ನಾಯಕಿ ಸುಮಲತಾ ಅಂಬರೀಶ್ (Sumalatha Ambareesh) ಲೋಕಸಭೆ ಚುನಾವಣೆ ಪ್ರಚಾರದ ಬಗ್ಗೆ ಮೈತ್ರಿ ಅಭ್ಯರ್ತಿ, ಜೆಡಿಎಸ್ ಪಕ್ಷದ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಪ್ರತಿಕ್ರಿಯಿಸಿದ್ದಾರೆ. ಸುಮಲತಾ ಇಂದು ಮೈಸೂರಿನಲ್ಲಿ ಬಿಜೆಪಿ (BJP) ಪರ ಪ್ರಚಾರ ನಡೆಸಲಿದ್ದಾರೆ. ಆದರೆ ಮಂಡ್ಯದಲ್ಲಿ ಇನ್ನೂ ಪ್ರಚಾರ ಕೈಗೊಂಡಿಲ್ಲ. ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಅವರು ಈಗ ಬಿಜೆಪಿ ಸೇರಿದ್ದಾರೆ. ಪಕ್ಷ ಹೇಳಿದ ಕಡೆಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಇನ್ನು ಮೂರು ದಿನ ಇದೆ, ನೋಡೋಣ ಎಂದರು.
ಸುಮಲತಾ ನಮ್ಮಲ್ಲಿ ಕೂಡ ಬಂದು ಪ್ರಚಾರ ಮಾಡಬಹುದು. ಕೇವಲ ಹೇಳಿಕೆಗಳನ್ನು ನೀಡುವುದರಿಂದ ಏನೂ ಆಗುವುದಿಲ್ಲ. ಹೇಳಿಕೆ ಕೊಡದೆಯೂ ಬೆಂಬಲ ನೀಡಬಹುದು ಅಲ್ಲವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಪುತ್ರ ನಿಖಿಲ್ ವಿರುದ್ಧ ಸ್ಪರ್ಧಿಸಿದ್ದ ಸುಮಲತಾ ಭರ್ಜರಿ ಗೆಲುವು ಸಾಧಿಸಿದ್ದರು. ಚುನಾವಣೆಯಲ್ಲಿ ಅವರಿಗೆ ಬಿಜೆಪಿ ಬಾಹ್ಯ ಬೆಂಬಲ ಘೋಷಿಸಿತ್ತು. ನಂತರ ಸುಮಲತಾ ಬಿಜೆಪಿ ಸೇರುವ ವದಂತಿಗಳಾಗಿದ್ದವು. ಆದರೆ ಕಾನೂನಾತ್ಮಕ ಸಮಸ್ಯೆಗಳಿಂದ ಅವರ ಪಕ್ಷ ಸೇರ್ಪಡೆಯಾಗಿರಲಿಲ್ಲ. ಇದೀಗ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಸೇರಿದ್ದಾರೆ. ಹಲವಾರು ಕಡೆಗಳಲ್ಲಿ ಪಕ್ಷದ ಪರ ಪ್ರಚಾರವನ್ನು ಮಾಡಿದ್ದಾರೆ. ಈ ಮಧ್ಯೆ, ಸುಮಲತಾ ಮಂಡ್ಯದಲ್ಲಿ ಕುಮಾರಸ್ವಾಮಿ ಪರ ಪ್ರಚಾರ ನಡೆಸದಿರುವುದು ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಸುಮಲತಾ ಪಕ್ಷದ ನಾಯಕರು ಹೇಳಿದ ಕಡೆ ಪ್ರಚಾರ ಮಾಡಲಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದರು.
ಇದನ್ನೂ ಓದಿ: ದರ್ಶನ್ಗೆ ಮಂಡ್ಯದ ರಾಜಕೀಯ ನಂಟೇನು? ಸುಮಲತಾ ಮಾನಸ ಪುತ್ರ ‘ಕೈ’ ಪರ ಅಖಾಡಕ್ಕಿಳಿದಿದ್ದೇಕೆ?
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಸುಮಲತಾ ಮಾನಸ ಪುತ್ರ ನಟ ದರ್ಶನ್, ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರ ನಡೆಸಿದ್ದು ಬಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ಸುಮಲತಾ, ಅವರಿಗೆ ಇಷ್ಟವಾದವರ ಪರ ಪ್ರಚಾರ ನಡೆಸುತ್ತಾರೆ. ಅದನ್ನು ನಾನು ಕೇಳಲು ಸಾಧ್ಯವಿಲ್ಲ. ನಾನು ಪಕ್ಷ ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ