ದರ್ಶನ್ಗೆ ಮಂಡ್ಯದ ರಾಜಕೀಯ ನಂಟೇನು? ಸುಮಲತಾ ಮಾನಸ ಪುತ್ರ ‘ಕೈ’ ಪರ ಅಖಾಡಕ್ಕಿಳಿದಿದ್ದೇಕೆ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೆ ಮಂಡ್ಯ ಚುನಾವಣಾ ಅಖಾಡಕ್ಕಿಳಿದಿದ್ದಾರೆ. 2019ರಲ್ಲಿ ಸುಮಲತಾ ಅಂಬರೀಷ್ ಪರ ಚುನಾವಣಾ ಪ್ರಚಾರ ನಡೆಸಿದ್ದ ದರ್ಶನ್, ಇದೀಗ ಸುಮಲತಾರ ಮಿತ್ರಪಕ್ಷದ ಅಭ್ಯರ್ಥಿ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿರುವ ಕಾಂಗ್ರೆಸ್ನ ಸ್ಟಾರ್ ಚಂದ್ರು ಪರ ಮತಯಾಚನೆ ಮಾಡಿದ್ದಾರೆ. ದರ್ಶನ್ಗೆ ಮಂಡ್ಯ ರಾಜಕೀಯದ ಜತೆಗಿರುವ ನಂಟಿನ ಹಿನ್ನೋಟ ಇಲ್ಲಿದೆ.
ಬೆಂಗಳೂರು, ಏಪ್ರಿಲ್ 18: ಮಂಡ್ಯ ಸಂಸದೆ ಸುಮಲತಾ (Sumalatha) ಮಾನಸ ಪುತ್ರ ಎಂದೇ ಕರೆಸಿಕೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಇದೀಗ ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು (Star Chandru) ಪರ ಪ್ರಚಾರ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಸುಮಲತಾ ಅಂಬರೀಷ್ ಅವರನ್ನು ಅಮ್ಮಾ ಎಂದೇ ಕರೆಯುವ, ಅವರು ಏನು ಹೇಳಿದರೂ ಮಾಡುವೆ ಎನ್ನುತ್ತಿದ್ದ ದರ್ಶನ್ ಇದೀಗ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್ಡಿ ಕುಮಾರಸ್ವಾಮಿಯವರ ಎದುರಾಳಿ ಸ್ಟಾರ್ ಚಂದ್ರು ಪರ ಪ್ರಚಾರ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ಸೇರ್ಪಡೆಯಾಗಿ ಹಲವು ದಿನಗಳು ಕಳೆದರೂ ಸುಮಲತಾ ಮಂಡ್ಯದಲ್ಲಿ ಪ್ರಚಾರ ನಡೆಸದೇ ಇರುವುದು, ಇದೀಗ ದರ್ಶನ್ ‘ಕೈ’ ಅಭ್ಯರ್ಥಿ ಪರ ಪ್ರಚಾರಕ್ಕಿಳಿದಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
2019ರ ಲೋಕಸಭೆ ಚುನಾವಣೆ ವೇಳೆ ನಟ ದರ್ಶನ್ ಹಾಗೂ ಯಶ್ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಬಿರುಸಿನ ಪ್ರಚಾರ ನಡೆಸಿದ್ದರು. ಅಂದಿನ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಪಕ್ಷದಿಂದ ಲೋಕಸಭೆ ಚುನಾವಣೆಗೆ ಅಭ್ಯರ್ಥಿಯಾಗಿದ್ದರು. ಅವರ ವಿರುದ್ಧ ಪಕ್ಷೇತರವಾಗಿ ಸ್ಪರ್ಧಿಸಿದ್ದ ಸುಮಲತಾಗೆ ಬಿಜೆಪಿ ಬಾಹ್ಯ ಬೆಂಬಲ ಘೋಷಿಸಿತ್ತು. ಹೀಗಾಗಿ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ.
ಸದ್ದು ಮಾಡಿದ್ದ ಜೋಡೆತ್ತುಗಳು
ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಪರ ಚುನಾವಣೆ ಪ್ರಚಾರ ನಡೆಸಿದವರಲ್ಲಿ ಮೊದಲಿಗರಾಗಿ ಕಂಡುಬಂದಿದ್ದೇ ದರ್ಶನ್ ಹಾಗೂ ಯಶ್. ಕನ್ನಡ ಚಿತ್ರರಂಗದ ಇಬ್ಬರು ಸ್ಟಾರ್ ನಟರು ಸುಮಲತಾ ಪರ ಭರ್ಜರಿ ಪ್ರಚಾರ ನಡೆಸಿದ್ದರು. ರಾಜ್ಯದ ಮುಖ್ಯಮಂತ್ರಿಯ ಮಗನ ಪ್ರತಿಸ್ಪರ್ಧಿಯ ಪರ ಪ್ರಚಾರ ನಡೆಸುತ್ತಿದ್ದೇವೆ ಎಂಬುದನ್ನೂ ಲೆಕ್ಕಿಸದೆ ಇಬ್ಬರೂ ಜೋಡೆತ್ತುಗಳಂತೆ ಸುಮಲತಾ ಗೆಲುವಿಗೆ ಅವಿರತ ಶ್ರಮಿಸಿದ್ದರು. ಇಡೀ ರಾಜ್ಯದಲ್ಲಿ ಲೋಕಸಭೆ ಚುನಾವಣೆ ಅಖಾಡದಲ್ಲಿ ಮಂಡ್ಯ ಕ್ಷೇತ್ರ ಗಮನ ಸೆಳೆದಿತ್ತು. ಇದಕ್ಕೆ ಯಶ್ ಮತ್ತು ದರ್ಶನ್ ಅವರ ಪ್ರಚಾರವೂ ಕಾರಣ.
ಸಾಕಷ್ಟು ವೈಯಕ್ತಿಕ ಟೀಕೆ, ಆರೋಪ ಪ್ರತ್ಯಾರೋಪಗಳಿಗೂ ಮಂಡ್ಯ ಪ್ರಚಾರ ಕಣ ಸಾಕ್ಷಿಯಾಗಿತ್ತು. ಮಾಧ್ಯಮಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಸಹ ಯಶ್ ಹಾಗೂ ದರ್ಶನ್ ಅವರನ್ನು ಜೋಡೆತ್ತುಗಳು ಎಂದೇ ಬಣ್ಣಿಸಿದ್ದವು.
ರಾಜಕೀಯವಾಗಿ ಗುರುತಿಸಿಕೊಂಡಿದ್ದೇ ಮಂಡ್ಯದಲ್ಲಿ
ಅಂದಹಾಗೆ, ದರ್ಶನ್ ರಾಜಕೀಯವಾಗಿ ಹೆಚ್ಚು ಗುರುತಿಸಿಕೊಂಡಿದ್ದೇ ಮಂಡ್ಯದಲ್ಲಿ ಎನ್ನಬಹುದು. ಇದಕ್ಕೆ ಕಾರಣ ಸುಮಲತಾ ಪಕ್ಷೇತರ ಸ್ಪರ್ಧೆ. ಸುಮಲತಾ ಪರ ಪ್ರಚಾರ ನಡೆಸುವ ಮೂಲಕವೇ ನಟ ದರ್ಶನ್ ರಾಜಕೀಯವಾಗಿ ಮಂಡ್ಯ ವ್ಯಾಪ್ತಿಯಲ್ಲಿ ಗುರುತಿಸಿಕೊಂಡರು. ಆ ಪ್ರಭಾವದಿಂದಲೇ ಈಗಲೂ ಅವರನ್ನು ಚುನಾವಣಾ ಪ್ರಚಾರಕ್ಕೆ ಕರೆಯಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. 2019ರ ಚುನಾವಣೆಯ ಫಲಿತಾಂಶ ಪ್ರಕಟವಾದಾಗ ಗೆಲುವು ಸುಮಲತಾ ಅವರದ್ದಾಗಿತ್ತು. ಇದರ ಹಿಂದೆ ದರ್ಶನ್, ಯಶ್ ಪ್ರಚಾರದ ಶ್ರಮ ಮರೆಯುವಂತಿಲ್ಲ. ಆನಂತರ ಅವರು ಬಿಜೆಪಿ ಜೊತೆಗೆ ಹೆಚ್ಚು ಗುರುತಿಸಿಕೊಂಡರು. ಈ ಬಾರಿ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಸೇರ್ಪಡೆಯಾಗುವುದಾಗಿ ಘೋಷಿಸಿದ್ದ ಅವರು, ಬಿಜೆಪಿಯಿಂದ ಟಿಕೆಟ್ಗೆಟ್ಟಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದ್ದರು.
ಇಷ್ಟೆಲ್ಲ ಬೆಳವಣಿಗೆಗಳ ಹೊರತಾಗಿಯೂ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕುಮಾರಸ್ವಾಮಿಯನ್ನು ಮಂಡ್ಯದಲ್ಲಿ ಕಣಕ್ಕಿಳಿಸಲಾಯಿತು. ನಂತರ ಬಿಜೆಪಿ ಸೇರ್ಪಡೆಗೊಂಡ ಸುಮಲತಾ, ಪಕ್ಷದ ಸೂಚನೆ ಮೇರೆಗೆ ಕಾರ್ಯನಿರ್ವಹಿಸುವೆ ಎಂದು ಹೇಳಿದ್ದರು.
ಇದನ್ನೂ ಓದಿ: ‘ಏನೇನೋ ಅಂದ್ಕೊಬೇಡಿ’; ಮಂಡ್ಯದಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕೆ ದರ್ಶನ್ ಸ್ಪಷ್ಟನೆ
ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಪರ ಸುಮಲತಾ ಚುನಾವಣಾ ಪ್ರಚಾರ ನಡೆಸಿದ್ದಾರೆ. ಆದರೆ, ಮಂಡ್ಯದಲ್ಲಿ ಕುಮಾರಸ್ವಾಮಿ ಪರ ಇನ್ನೂ ಪ್ರಚಾರಕ್ಕೆ ಇಳಿದಿಲ್ಲ. ಇದರ ಬೆನ್ನಲ್ಲೇ, ಅವರ ಮಾನಸ ಪತ್ರ ದರ್ಶನ್ ಮೈತ್ರಿ ಅಭ್ಯರ್ಥಿಯ ಎದುರಾಳಿ ಟಾರ್ ಚಂದ್ರು ಪರ ಮತಯಾಚನೆ ಮಾಡಿದ್ದಾರೆ.
ಪಕ್ಷದ ಪರ ಪ್ರಚಾರ ಅಲ್ಲ: ದರ್ಶನ್
ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಪ್ರಚಾರ ನಡೆಸಿ ಮತಯಾಚಿಸಿದ ದರ್ಶನ್, ನಾನು ಪಕ್ಷದ ಪರ ಬಂದಿಲ್ಲ, ಅಭ್ಯರ್ಥಿ ಪರವಾಗಿ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರುಗೆ ಮತ ಹಾಕಿ. ನರೇಂದ್ರಸ್ವಾಮಿ, ಉದಯ್ರನ್ನ ಬಲಪಡಿಸಿ ಎಂದು ಮನವಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ