ಪ್ರತ್ಯೇಕ ಘಟನೆ: ಹೆತ್ತ ಮಕ್ಕಳಿಗೆ ವಿಷ ಉಣಿಸಿದ ತಾಯಿ, ಬಿಸ್ಕತ್ತು ತಿಂದು ಮಗು ಅಸ್ವಸ್ಥ
ಮಕ್ಕಳ ಬಗ್ಗೆ ಎಷ್ಟೇ ಕಾಳಜಿ ವಹಿಸಿದರೂ ಅದು ಕಮ್ಮಿಯೇ, ಹೌದು, ಶ್ರೀರಂಗಪಟ್ಟಣ(Srirangapatna) ತಾಲ್ಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಹೆತ್ತ ಮಕ್ಕಳಿಗೆ ವಿಷ ಉಣಿಸಿದರೆ, ಇತ್ತ ದಾವಣಗೆರೆಯಲ್ಲಿ ಸ್ಮೋಕ್ ಬಿಸ್ಕೆಟ್ ತಿಂದು ಬಾಲಕ ಅಸ್ವಸ್ಥನಾಗಿದ್ದಾನೆ.
ಮಂಡ್ಯ, ಏ.18: ಶ್ರೀರಂಗಪಟ್ಟಣ(Srirangapatna) ತಾಲ್ಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಐಸ್ ಕ್ರೀಂ(Ice cream) ತಿಂದ ಬಳಿಕ ಅವಳಿ ಕಂದಮ್ಮಗಳು ಸಾವನ್ನಪ್ಪಿದ ಧಾರುಣ ಘಟನೆ ನಿನ್ನೆ(ಏ.17) ಮಧ್ಯಾಹ್ನ ನಡೆದಿತ್ತು. ಪೂಜಾ ಮತ್ತು ಪ್ರಸನ್ನ ದಂಪತಿಗಳ ಒಂದೂವರೆ ವರ್ಷದ ತ್ರಿಶುಲ್ ಹಾಗೂ ತ್ರಿಶಾ ಸಾವನ್ನಪ್ಪಿದ ಮಕ್ಕಳು. ನಿನ್ನೆ ಮಧ್ಯಾಹ್ನ ತಳ್ಳುವ ಗಾಡಿಯಲ್ಲಿ ಐಸ್ ಕ್ರೀಂ ತೆಗೆದುಕೊಂಡು ತಾಯಿ ಪೂಜಾ ಸೇರಿದಂತೆ ಇಬ್ಬರು ಮಕ್ಕಳು ಕೂಡ ಸೇವಿಸಿದ್ದಾರೆ. ಆ ನಂತರ ಮಕ್ಕಳು ಅಸ್ವಸ್ಥವಾಗಿದ್ದರು ಎಂದು ಆರೋಪಿಸಲಾಗಿತ್ತು. ಇದೀಗ ತಾಯಿಯೇ ವಿಷ ಹಾಕಿರುವುದು ವಿಚಾರಣೆ ಬಳಿಕ ತಿಳಿದು ಬಂದಿದೆ.
ಕೌಟುಂಬಿಕ ಕಲಹದಿಂದ ಮೂರು ಮಕ್ಕಳಿಗೆ ವಿಷ ಉಣಿಸಿದ ತಾಯಿ
ಘಟನೆ ಕುರಿತು ಪೊಲೀಸ್ ವಿಚಾರಣೆ ಬಳಿಕ ಸತ್ಯಾಂಶ ಬಯಲಾಗಿದ್ದು, ತಾಯಿಯೇ ಕೌಟುಂಬಿಕ ಕಲಹದಿಂದ ಮೂರು ಮಕ್ಕಳಿಗೆ ವಿಷ ಉಣಿಸಿರುವುದು ಬಯಲಾಗಿದೆ. ಪೂಜಾ ಪತಿ ಪ್ರಸನ್ನ ಜೊತೆ ಪದೇ ಪದೇ ಜಗಳವಾಡುತ್ತಿದ್ದರು. ಮನೆಯಲ್ಲಿ ಜಗಳ ವಿಕೋಪಕ್ಕೆ ತಿರುಗಿದ್ದು, ಜಗಳದಿಂದ ಬೇಸತ್ತು ನಿನ್ನೆ ಮಕ್ಕಳಿಗೆ ತಾಯಿ ವಿಷ ಉಣಿಸಿದ್ದಾರೆ. ಬಳಿಕ ತಾನೂ ಸೇವಿಸಿದ್ದಳು, ಕೂಡಲೇ ಮಕ್ಕಳು ಹಾಗೂ ಪೂಜಾಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿ, ಆಸ್ಪತ್ರೆಯಲ್ಲಿ ಅವಳಿ ಜವಳಿ ಕಂದಮ್ಮಗಳು ಕೊನೆಯುಸಿರೆಳೆದಿದ್ದವು. ತಾಯಿ ಪೂಜಾ ಹಾಗೂ ಮೊದಲ ಮಗಳು ಬೃಂದಾಗೆ ಚಿಕಿತ್ಸೆ ಮುಂದುವರಿದೆ.
ಇದನ್ನೂ ಓದಿ:ಕಾಮಗಾರಿ ಗುಂಡಿಯಲ್ಲಿ ಬಿದ್ದು ಯುವಕ ಸಾವು: ಬಿಡಬ್ಲ್ಯೂಎಸ್ಎಸ್ಬಿ ವಿರುದ್ಧ ಎಫ್ಐಆರ್ ದಾಖಲು
ಸ್ಮೋಕ್ ಬಿಸ್ಕೆಟ್ ತಿಂದು ಬಾಲಕ ಅಸ್ವಸ್ಥ
ದಾವಣಗೆರೆ: ನಗರದ ಅರುಣ್ ಸರ್ಕಲ್ ಬಳಿಯ ಎಕ್ಸಿಬಿಷನ್ ವೊಂದರಲ್ಲಿ ಸ್ಮೋಕ್ ಬಿಸ್ಕೆಟ್ ತಿಂದು ಬಾಲಕನೊರ್ವ ಅಸ್ವಸ್ಥನಾದ ಘಟನೆ ನಡೆದಿದೆ. ದಾವಣಗೆರೆಯ ಅರುಣಾ ಸರ್ಕಲ್ ಬಳಿ ಪ್ರತಿ ಬೇಸಿಗೆ ಕಾಲದಲ್ಲಿ ಮಕ್ಕಳ ಮನರಂಜನೆಗಾಗಿ ಖಾಸಗಿ ಕಂಪನಿಯಿಂದ ಎಕ್ಸಿಬಿಷನ್ ನಡೆಯುತ್ತದೆ. ಈ ಎಕ್ಸಿಬಿಷನ್ನಲ್ಲಿ ಸ್ಮೋಕ್ ಬಿಸ್ಕೆಟ್ ದೊಡ್ಡವರಿಂದ ಚಿಕ್ಕ ಮಕ್ಕಳವರೆಗೂ ಗಮನ ಸೆಳೆದಿತ್ತು. ಒಂದು ಕಪ್‌ನಲ್ಲಿ 80 ರೂಪಾಯಿಗೆ ಐದು ಚಿಕ್ಕ ಚಿಕ್ಕ ಬಿಸ್ಕೆಟ್ನ್ನು ಕೊಡಲಾಗುತ್ತದೆ. ಹೀಗೆ ಕೊಟ್ಟ ಬಿಸ್ಕೆಟ್ನ್ನು ಮಗುವೊಂದು ಒಂದೇ ಸಲ ಬಾಯಿಗೆ ಹಾಕಿಕೊಂಡು ಉಗಿಯಲು ಆಗದೇ ನುಂಗಲು ಆಗದೇ ಕಷ್ಟಪಟ್ಟು ಅಸ್ವಸ್ಥವಾಗಿದೆ.
ಮಗು ಆಸ್ಪತ್ರೆಗೆ ದಾಖಲು
ಇನ್ನು ಅಸ್ವಸ್ಥಗೊಂಡ ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಗುವಿಗೆ ಚಿಕಿತ್ಸೆ ನೀಡಿದ ನಂತರ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಈ ಘಟನೆಯಿಂದ ಆಕ್ರೋಶಗೊಂಡು ಪೋಷಕರು, ಎಕ್ಸಿಬಿಷನ್ನಲ್ಲಿ ಹಾಕಲಾಗಿದ್ದ ಸ್ಟಾಲ್ ನ್ನು ಕಿತ್ತುಬಿಸಾಕಿದ್ದಾರೆ. ರಾಜ್ಯದ ಯಾವುದೇ ಮೂಲೆಯಲ್ಲಿ ಇಂತಹ ಸ್ಮೋಕ್ ಬಿಸ್ಕೆಟ್ನ್ನು ಮಕ್ಕಳಿಗೆ ಕೊಡಬೇಡಿ ಎಂದು ಎಚ್ಚರಿಸುವ ಆಡಿಯೋ ವೈರಲ್ ಆಗಿದೆ. ಇನ್ನು ಘಟನೆ ಕುರಿತು ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಗೆ ಪಾಲಕರು ದೂರು ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:25 pm, Thu, 18 April 24