ಕಾಮಗಾರಿ ಗುಂಡಿಯಲ್ಲಿ ಬಿದ್ದು ಯುವಕ ಸಾವು: ಬಿಡಬ್ಲ್ಯೂಎಸ್ಎಸ್ಬಿ ವಿರುದ್ಧ ಎಫ್ಐಆರ್ ದಾಖಲು
ಬೆಂಗಳೂರಿನ ಉಲ್ಲಾಳ ಬಳಿಯ ಅರುಣಾಚಲಂ ಲೇಔಟ್ನಲ್ಲಿ ಪೈಪ್ ಲೈನ್ ಅಳವಡಿಸಲು ತೋಡಲಾಗಿದ್ದ 20 ಅಡಿಯ ಗುಂಡಿಯಲ್ಲಿ ಬಿದ್ದು ಯುವಕ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ BWSSB ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬೆಂಗಳೂರು ಏಪ್ರಿಲ್ 15: ಜಲಮಂಡಳಿಯ ಕಾಮಗಾರಿ ಗುಂಡಿಗೆ ಬಿದ್ದು ಯುವಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚಂಡಿ ಮಂಡಳಿ (BWSSB) ಕಾಮಗಾರಿ ವೇಳೆ ಮುಂಜಾಗ್ರತಾ ಕ್ರಮ ಕೈಗೊಳ್ಳದ ಕಾರಣ ಅವಘಡ ಸಂಭವಿಸಿದೆ ಎಂದು ಬಿಡಬ್ಲ್ಯೂಎಸ್ಎಸ್ಬಿ ಮತ್ತು ಕಾಂಟ್ರ್ಯಾಕ್ಟರ್ ವಿರುದ್ಧ ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ.
ಪ್ರಕರಣ ಸಂಬಂಧ ಪಶ್ಚಿಮ ವಿಭಾಗ ಸಂಚಾರ ಡಿಸಿಪಿ ಅನಿತಾ. ಬಿ. ಹದ್ದಣ್ಣವರ್ ಮಾತನಾಡಿ, ರವಿವಾರ (ಏ.14)ರ ರಾತ್ರಿ ಮೂವರು ಯುವಕರು ಅತಿವೇಗವಾಗಿ ಬಂದು ಗುಂಡಿಯಲ್ಲಿ ಬಿದ್ದಿದ್ದಾರೆ. ಮೂವರಲ್ಲಿ ಸದ್ದಾಂ ಪಾಷಾ ಎಂಬ ಯುವಕ ಮೃತಪಟ್ಟಿದ್ದಾನೆ. ಇಬ್ಬರಿಗೆ ಗಂಭೀರವಾಗಿ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಘಡದಲ್ಲಿ ಗಾಯಗೊಂಡಿರುವ ಉಮ್ರಾನ್ ಪಾಷಾ ದೂರು ನೀಡಿದ್ದಾರೆ. ಮೃತ ಚಾಲಕ ಸದ್ದಾಂ ಪಾಷಾ ಹಾಗೂ ಗುತ್ತಿಗೆದಾರ ಹಾಗೂ ಎಂಜಿನಿಯರ್ ಮೇಲೆ ಎಫ್ಐಆರ್ ದಾಖಲಾಗಿದೆ. ತನಿಖೆ ಮಾಡಲಾಗುತ್ತಿದೆ ಎಂದರು.
ಏನಿದು ಘಟನೆ
ಬೆಂಗಳೂರಿನ ಉಲ್ಲಾಳ ಬಳಿಯ ಅರುಣಾಚಲಂ ಲೇಔಟ್ನಲ್ಲಿ ಪೈಪ್ ಲೈನ್ ಅಳವಡಿಸಲು ಜಲಮಂಡಳಿಯವರು 20 ಅಡಿಯ ಗುಂಡಿ ತೋಡಿದ್ದರು. ರವಿವಾರ (ಏ.14)ರ ರಾತ್ರಿ ಜೆಜೆ ನಗರ ಮೂಲದ ಸದ್ದಾಂ ಪಾಷ, ಉಮ್ರಾನ್ ಪಾಷ, ಮುಬಾರಕ್ ಪಾಷ ಮೂವರು ಒಂದೇ ಬೈಕ್ನಲ್ಲಿ ವೇಗವಾಗಿ ಮೂವರು ಬಿಡಿ ಕಾಲೋನಿಗೆ ತೆರಳುತ್ತಿದ್ದರು. ಈ ವೇಳೆ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದು, ಗುಂಡಿಗೆ ಬಿದ್ದಿದ್ದಾರೆ. ಘಟನೆಯಲ್ಲಿ ಸದ್ದಾಂ ಪಾಷ (20) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಮ್ರಾನ್ ಪಾಷ, ಮುಬಾರಕ್ ಪಾಷಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ, ಎರಡು ಗುಂಪುಗಳ ನಡುವೆ ಗಲಾಟೆ
ಜಲಮಂಡಳಿ ವಿರುದ್ಧ ಆಕ್ರೋಶ
ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿರುವ ಮೃತ ಸದ್ದಾಂ ಪಾಷ ಸಂಬಂಧಿಕರು ಜಲಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಮಧ್ಯೆ ದೊಡ್ಡ ಗುಂಡಿ ಅಗೆದು ಸೂಚನ ಫಲಕ ಕೂಡ ಅಳವಡಿಸಿಲ್ಲ. ಬ್ಯಾರಿಕೆಡ್ ಕೂಡ ಸರಿಯಾಗಿ ಅಳವಡಿಸಿರಲಿಲ್ಲ. ಘಟನೆ ಆದ ಬಳಿಕ ಬ್ಯಾರಿಕೆಡ್ ಜೋಡಿಸಿಟ್ಟಿದ್ದಾರೆ. ಅನ್ಯಾಯವಾಗಿ ಒಂದು ಸಾವು ಸಂಭವಿಸಿದೆ. ಅವರ ಕುಟುಂಬಕ್ಕೆ ಯಾರು ದಿಕ್ಕು ಎಂದು ಸ್ಥಳೀಯರು ಆಕ್ರೋಶಗೊಂಡರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ