
ಬೆಂಗಳೂರು, ಏಪ್ರಿಲ್ 30: ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ (HSRP) ಅಳವಡಿಕೆಗೆ ಇನ್ನೊಂದೇ ತಿಂಗಳು ಅವಕಾಶ ಇರುವುದು. ಅಷ್ಟರಲ್ಲೇ ಇದೀಗ ಮತ್ತೊಂದು ಹೊಸ ಸಮಸ್ಯೆ ಕಾಣಿಸಿಕೊಂಡಿದೆ. ಕೆಲವೊಂದು ಹಳೇ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಸಿಕೊಡುವುದು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಫಿಯೆಟ್, ಅಂಬಾಸಿಡರ್, ಸಿಯೆಲೊ, ಮ್ಯಾಟಿಜ್, ಒಪೆಲ್, ಹೀರೋ ಪುಚ್, ಎಲ್‌ಎಂಎಲ್, ಕೈನೆಟಿಕ್ ಹೋಂಡಾ ಮತ್ತಿತರ ಮಾಡೆಲ್ನ ವಾಹನ ಹೊಂದಿರುವ ಹೊಂದಿರುವ ಹಲವು ಮಂದಿ ಮಾಲೀಕರು ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣವೂ ಇದೆ. ಇದೀಗ ಈ ಸಮಸ್ಯೆಗೆ ಸಂಬಂಧಿಸಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ (MoRTH) ಪತ್ರ ಬರೆಯಲು ಕರ್ನಾಟಕ ಸಾರಿಗೆ ಇಲಾಖೆ (Karnataka transport dept) ಮುಂದಾಗಿದೆ.
ಆಯಾ ಮಾಡೆಲ್ನ ವಾಹನ ತಯಾರಿಕಾ ಕಂಪನಿಗಳ ಮೂಲಕ ಮಾತ್ರವೇ ಎಚ್‌ಎಸ್‌ಆರ್‌ಪಿ ಅಳವಡಿಸಲು ಸದ್ಯ ಅವಕಾಶವಿದೆ. ಮೇಲೆ ಉಲ್ಲೇಖಿಸಿರುವ ಮಾಡೆಲ್ಗಳ ಹಳೆಯ ವಾಹನಗಳ ತಯಾರಿಕಾ ಕಂಪನಿಗಳು ಈಗ ಮುಚ್ಚಿವೆ. ಹೀಗಾಗಿ ಆ ವಾಹನಗಳ ಮಾಲೀಕರಿಗೆ ಎಚ್‌ಎಸ್‌ಆರ್‌ಪಿ ಅರ್ಜಿ ಸಲ್ಲಿಸಲು ಆಯ್ಕೆಯೇ ಇಲ್ಲವಾಗಿದೆ.
ಎಚ್‌ಎಸ್‌ಆರ್‌ಪಿ ಪಡೆಯಲು ವಾಹನ ಮಾಲೀಕರು ರಾಜ್ಯ ಸಾರಿಗೆ ಇಲಾಖೆಯ ವೆಬ್‌ಸೈಟ್ (transport.karnataka.gov.in) ಅಥವಾ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅಲ್ಲಿ ತಮ್ಮ ವಾಹನಗಳ ಕಂಪನಿಯನ್ನು ಆಯ್ಕೆ ಮಾಡುವ ಮೂಲಕ ಅದನ್ನು ಬುಕ್ ಮಾಡಬೇಕು. ಹಳೆಯ ವಾಹನ ಮಾಲೀಕರಿಗೆ ಕಂಪನಿಯೇ ಮುಚ್ಚಿರುವುದರಿಂದ ಎಚ್‌ಎಸ್‌ಆರ್‌ಪಿ ಬುಕ್ ಮಾಡಲು ಸಾಧ್ಯವಾಗುತ್ತಿಲ್ಲ.
ರಾಜ್ಯ ಸಾರಿಗೆ ಇಲಾಖೆಯು ಕೂಡ ಹಳೆಯ ವಾಹನ ಮಾಲೀಕರಿಂದ ಮನವಿಗಳನ್ನು ಸ್ವೀಕರಿಸಿದೆ. ಇಂತಹ ಕೆಲವು ಸಾವಿರ ವಾಹನಗಳು ರಾಜ್ಯದಲ್ಲಿದ್ದು, ಯಾವುದೇ ಆಯ್ಕೆಗಳಿಲ್ಲದ ಕಾರಣ ಅವರಿಗೆ ಎಚ್‌ಎಸ್‌ಆರ್‌ಪಿ ಅಳವಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾವು ಪರಿಸ್ಥಿತಿಯನ್ನು ವಿವರಿಸಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಪತ್ರ ಬರೆಯಲು ನಿರ್ಧರಿಸಿದ್ದೇವೆ ಎಂದು ಕರ್ನಾಟಕ ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ (ಎನ್ಫೋರ್ಸ್ಮೆಂಟ್) ಮಲ್ಲಿಕಾರ್ಜುನ ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಅಂಥ ಹಳೆಯ ವಾಹನಗಳಿಗೆ ನಂಬರ್ ಪ್ಲೇಟ್ ಒದಗಿಸಲು ಇತರ ಕಂಪನಿಗಳಿಗೆ ಅವಕಾಶ ನೀಡುವಂತೆ ವಿನಂತಿಸುತ್ತೇವೆ ಎಂದೂ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಇನ್ನೂ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಲ್ಲವೇ? ಮತ್ತೆ ಗಡುವು ವಿಸ್ತರಣೆ ಅನುಮಾನ
ಕಳೆದ ವರ್ಷ ಆಗಸ್ಟ್‌ನಲ್ಲಿ ಸಾರಿಗೆ ಇಲಾಖೆ ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಅಧಿಸೂಚನೆಯನ್ನು ಹೊರಡಿಸಿತ್ತು. ಅದರಂತೆ, 2019 ರ ಏಪ್ರಿಲ್ 1 ರ ಮೊದಲು ನೋಂದಣಿಯಾದ ಎಲ್ಲಾ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈವರೆಗೆ, ಗಡುವನ್ನು ಎರಡು ಬಾರಿ ವಿಸ್ತರಿಸಲಾಗಿದ್ದು, ಪ್ರಸ್ತುತ ಗಡುವು ಮೇ 31 ಕ್ಕೆ ಕೊನೆಗೊಳ್ಳಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:51 am, Tue, 30 April 24