ಕರ್ನಾಟಕ ವಿಧಾನಸಭೆ ಅಧಿವೇಶನ ಆರಂಭವಾಗಿದೆ. ಅಧಿವೇಶನ ಆರಂಭವಾದ ದಿನದಿಂದಲೂ ಗದ್ದಲಮಯವಾಗಿದೆ. ಬುಧವಾರ ಸದನದಲ್ಲಿ ಪ್ರತಿಪಕ್ಷ ಬಿಜೆಪಿ ನಾಯಕರು ವಿದಯೇಕದ ಹಾಳೆಯನ್ನು ಹರಿದು ಉಪಸಭಾಪತಿ ಮೇಲೆ ಎಸೆದ ಪರಿಣಾಮ 10 ಶಾಸಕರನ್ನು ಅಮಾನತು ಮಾಡಲಾಗಿದೆ. ಈ ಹಿನ್ನಲೆ ಇಂದು(ಜು.22) ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಿಂದ ಕಾಂಗ್ರೆಸ್ ವಿರುದ್ದ ಬೆಂಗಳೂರು ಸೇರಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಲಿದ್ದಾರೆ. ಈ ಮಧ್ಯೆ ಇಂದು ಬೆಳಿಗ್ಗೆ 10.30 ರಿಂದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬೆಂಗಳೂರು ಸಿಟಿ ರೌಂಡ್ಸ್ ನಡೆಸಲಿದ್ದಾರೆ. ಇನ್ನು ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಶಂಕಿತ ಉಗ್ರರರನ್ನು ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕದಲ್ಲಿ ಮಳೆ ಮತ್ತೆ ಚುರುಕಾಗಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ ಕಲ್ಯಾಣ ಕರ್ನಾಟಕ ಭಾಗದ ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಹಾಗೇ ಟೊಮೇಟೊ ಬೆಲೆ ಶತಕ ದಾಟಿದೆ. ಇದರೊಂದಿಗೆ ಇಂದಿನ ಲೇಟೆಸ್ಟ್ ಅಪ್ಡೇಟ್ಸ್..
ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಭದ್ರಾ ನದಿಯು ಪ್ರವಾಹದ ಮಟ್ಟ ಮೀರಿ ಹರಿಯುತ್ತಿದೆ. ಹೆಬ್ಬಾಳೆ ಸೇತುವೆ ಮೇಲೆ ನದಿ ನೀರು ಹರಿಯುತ್ತಿದೆ. ಸಂಪೂರ್ಣ ಸೇತುವೆ ಮುಳುಗಡೆಗೆ ಕೇವಲ ಒಂದು ಅಡಿ ಬಾಕಿ ಇದೆ. ಕುದುರೆಮುಖ ಭಾಗದಲ್ಲಿ ಭಾರೀ ಮಳೆಯಿಂದ ನದಿ ಉಕ್ಕಿ ಹರಿಯುತ್ತಿದೆ.
ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಭಾರೀ ಗಾಳಿ ಮಳೆ ಮುಂದುವರಿದಿದೆ. ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದ್ದು, ಕಾಲು ಮುರಿತವಾಗಿದೆ. ಸಂಪಿಖಾನ್ ಗ್ರಾಮದ ನಿವಾಸಿ ಶಂಕರೇಗೌಡ ಗಂಭೀರವಾಗಿ ಗಾಯಗೊಂಡವರು. ಕಳಸ ತಾಲೂಕು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯೊಲಾಗಿದೆ.
ಕೋಲಾರ: ನನಗೆ ಸಿಎಂ ಮಾಡುವುದೂ ಗೊತ್ತು, ಕೆಳಗಿಳಿಸುವುದೂ ಗೊತ್ತು ಎಂಬ ಎಂಎಲ್‌ಸಿ ಬಿಕೆ ಹರಿಪ್ರಸಾದ್ ಹೇಳಿಕೆಯನ್ನು ವ್ಯಂಗ್ಯವಾಡಿದ ಕೊತ್ತೂರು ಮಂಜುನಾಥ್, ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್ ಅವರಿಗೆ ಎಲ್ಲಾ ಗೊತ್ತೇ ಇರುತ್ತೆ. ಗೊತ್ತಿರುವ ಕೆಲಸವನ್ನ ಹೇಳೋದಲ್ಲ ಮಾಡಬೇಕು ಎಂದರು. ದೊಡ್ಡವರು ಏನೋ ಸ್ವಲ್ಪ ಬೇಜಾರಾಗಿ ಮಾತನಾಡಿಕೊಳ್ಳುತ್ತಾರೆ. ಅವರವರ ಖುಷಿಗೆ ಏನು ಬೇಕಾದರೂ ಮಾತನಾಡಿಕೊಳ್ಳುತ್ತಾರೆ ಎಂದರು.
ಸ್ವಪಕ್ಷದ ಎಂಎಲ್‌ಸಿ ಬಿಕೆ ಹರಿಪ್ರಸಾದ್ ಅವರು ಸಿಎಂ ವಿರುದ್ಧ ಅಸಮಾಧಾನ ಹೊರಹಾಕಿದ ವಿಚಾರವಾಗಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ನಾನು ತಿಳ್ಕೊಂಡಿಲ್ಲ ಅದರ ಬಗ್ಗೆ ತಿಳ್ಕೊಂಡು ಹೇಳುತ್ತೇನೆ. ಆ ವಿಚಾರ ನನಗೆ ಗೊತ್ತಿಲ್ಲ, ರಾಜಕಾರಣದಲ್ಲಿ ಎಲ್ಲರೂ ಸಮಾನರಾಗಿ ಕೆಲಸ ಮಾಡಬೇಕು ಎಂದಷ್ಟೇ ಹೇಳಿದರು.
ಬಾಗಲಕೋಟೆ: ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಹಣ ಪಡೆದ ಹಿನ್ನೆಲೆ ಶೂರ್ಪಾಲಿಯ ಗ್ರಾಮ ಒನ್ ಸಿಬ್ಬಂದಿ ಲಾಗಿನ್ ಐಡಿ ರದ್ದುಗೊಳಿಸಲಾಗಿದೆ. ಸಾರ್ವಜನಿಕರ ದೂರಿನ ಮೇರೆಗೆ ಬಾಗಲಕೋಟೆ ಜಿಲ್ಲಾಡಳಿತವು, ಗ್ರಾಮ ಒನ್ ಸಿಬ್ಬಂದಿ ದಾನಯ್ಯ ಮಠಪತಿ ಲಾಗಿನ್ ಐಡಿ ರದ್ದುಗೊಳಿಸಿದೆ. ನಂದಗಾಂವ ಗ್ರಾಮ ಒನ್ ಕೇಂದ್ರದ ಸಿಬ್ಬಂದಿ ಸಿದ್ದಪ್ಪ ಪೂಜಾರಿ ಲಾಗಿನ್ ಐಡಿ ಸಹ ಡಿಸೇಬಲ್ ಮಾಡಲಾಗಿದೆ. ಹಣ ಕೇಳಿದ್ದಕ್ಕೆ ಸಿದ್ದಪ್ಪರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದರು. ಇದರ ವಿಡಿಯೋ ಆಧರಿಸಿ ಐಡಿ ರದ್ದುಗೊಳಿಸಲು ಜಿಲ್ಲಾಧಿಕಾರಿಯವರು ಸೂಚಿಸಿದ್ದರು.
ಸಿಎಂ ಸಿದ್ದರಾಮಯ್ಯರಿಂದ ಹಲವು ಇಲಾಖೆಗಳ ಪರಿಶೀಲನಾ ಸಭೆ ನಡೆಯುತ್ತಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಉನ್ನತ ಶಿಕ್ಷಣ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೇರಿ ಒಟ್ಟು 6 ಇಲಾಖೆಗಳ ಪ್ರಗತಿ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
ಸಿಎಂ ಮಾಡೋದು ಗೊತ್ತು, ಕೆಳಗಿಳಿಸೋದು ಗೊತ್ತಿದೆ ಎಂದು ಹೇಳಿಕೆ ನೀಡಿದ ಸ್ವಪಕ್ಷದ ಎಂಎಲ್‌ಸಿ ಬಿಕೆ ಹರಿಪ್ರಸಾದ್ಗೆ ಟಾಂಗ್ ನೀಡಿದ ಸಚಿವ ಜಮೀರ್ ಅಹ್ಮದ್ ಖಾನ್, ಸಿಎಂ ಮಾಡೋದು ಬಿಡೋದು ಅವರ ಕೈಲೂ ಇಲ್ಲ, ನನ್ನ ಕೈಲೂ ಇಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಆ ನಿರ್ಧಾರವನ್ನು ಮಾಡುತ್ತಾರೆ ಎಂದರು. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಈ ಹೇಳಿಕೆ ನೀಡಿದರು. ಬಿಜೆಪಿ, ಜೆಡಿಎಸ್ ನಡುವೆ ಹೊಂದಾಣಿಕೆ ಬಗ್ಗೆ ಅವರನ್ನೇ ಕೇಳಬೇಕು. ಜೆಡಿಎಸ್ ಪಕ್ಷದ ನಿರ್ಧಾರದ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ ಎಂದರು.
ತೆಲಂಗಾಣದ ಕೊತ್ತೂರು ಡ್ಯಾಂನಿಂದ ಅಪಾರ ನೀರು ಬಿಟ್ಟ ಹಿನ್ನೆಲೆ ಬೀದರ್ ತಾಲೂಕಿನ ಸಿಂದೋಲ್ ಬಳಿಯ ಸೇತುವೆ ಮುಳುಗಡೆಯಾಗಿದೆ. ಪರಿಣಾಮ ಮನ್ನಳ್ಳಿ, ಭಂಗೂರು, ಸಿಂದೋಲ್ ಗ್ರಾಮಗಳ ನಡುವೆ ಸಂಪರ್ಕ ಕಡಿತಗೊಂಡಿದೆ. ಸೇತುವೆ ಮೇಲೆ ನೀರು ಹರಿಯುತ್ತಿದ್ರೂ, ಆಟೋ, ಬೈಕ್ಗಳನ್ನು ಓಡಿಸಲಾಗುತ್ತಿದೆ. ಸೇತುವೆ ಮೇಲೆ ಓಡಾಡದಂತೆ ಸೂಚಿಸಿದರೂ ಕ್ಯಾರೇ ಎನ್ನದ ಜನ ಸಂಚರಿಸುತ್ತಿದ್ದಾರೆ.
ಮಂಗಳೂರು: ಸಿದ್ದರಾಮಯ್ಯ ವಿರುದ್ದ ಎಂಎಲ್ ಸಿ ಬಿ.ಕೆ.ಹರಿಪ್ರಸಾದ್ ಅಸಮಾಧಾನ ವಿಚಾರವಾಗಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಬಿ.ಕೆ.ಹರಿಪ್ರಸಾದ್ ಅವರು ಹೇಳಿದ ಮಾತಿನ ಬಗ್ಗೆ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಅವರು ಹಿರಿಯರು ಅವರ ಮಾತುಗಳಲ್ಲಿ ಏನಾದ್ರೂ ಇದ್ದರೆ ಗಮನಿಸಬೇಕು. ಅವರ ಮಾತಿಗೆ ನಾನು ಪ್ರತಿಕ್ರಿಯೆ ಕೊಡೋದು ಸರಿ ಇರಲ್ಲ. ಅದು ಪಕ್ಷದ ವೇದಿಕೆಗಳಲ್ಲಿ ಚರ್ಚೆಯಾಗಬೇಕಾದ ವಿಚಾರ. ಅವರು ಹಿರಿಯರಿದ್ದಾರೆ, ಹಾಗಾಗಿ ಅದರ ಬಗ್ಗೆ ಮಾತನಾಡಲ್ಲ ಎಂದರು.
ಹುಬ್ಬಳ್ಳಿ: ವಿಧಾನಸಭೆ, ಪರಿಷತ್ ವಿಪಕ್ಷ ನಾಯಕರ ಆಯ್ಕೆ ವಿಳಂಬ ವಿಚಾರವಾಗಿ ಮಾತನಾಡಿದ ಕಾಂಗ್ರೆಸ್ ಎಂಎಲ್‌ಸಿ ಜಗದೀಶ್ ಶೆಟ್ಟರ್, ರಾಜ್ಯ ಬಿಜೆಪಿ ಕೆಲವು ವ್ಯಕ್ತಿಗಳ ಕಪಿಮುಷ್ಟಿಯಲ್ಲಿರೋದು ಸಾಬೀತಾಗಿದೆ. ರಾಜ್ಯ ಬಿಜೆಪಿ ಲೀಡರ್ ಲೆಸ್ ಪಾರ್ಟಿ ಎಂದರು.
ವಿಪಕ್ಷ ನಾಯಕನಿಲ್ಲದೆ ಅಧಿವೇಶನ ನಡೆಸುವ ಶೋಚನೀಯ ಸ್ಥಿತಿ ಬಂದಿದೆ. ರಾಷ್ಟ್ರೀಯ ಪಕ್ಷಕ್ಕೆ ವಿಪಕ್ಷ ನಾಯಕನಿಲ್ಲದಿರುವುದನ್ನು ನೋಡಿಲ್ಲ. ದಿನದಿಂದ ದಿನಕ್ಕೆ ಬಿಜೆಪಿ ಕುಸಿಯುತ್ತಿದೆ, ಕಾಂಗ್ರೆಸ್ ಬಲಿಷ್ಠ ಆಗುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅತೀ ಹೆಚ್ಚು ಸ್ಥಾನ ಗೆಲ್ಲುತ್ತದೆ ಎಂದರು.
ಬೆಂಗಳೂರು: ಸಿಎಂ ಬದಲಾವಣೆ ಬಗ್ಗೆ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಲು ಸಿಎಂ ಸಿದ್ದರಾಮಯ್ಯ ನಿರಾಕರಿಸಿದರು. ಅಧಿವೇಶನದ ಬಗ್ಗೆ ಮಾತನಾಡಿದ ಅವರು, ಅಸೆಂಬ್ಲಿಯಲ್ಲಿ ಬಂದು ಅನೇಕ ವಿಷಯಗಳ ಬಗ್ಗೆ ಮಾಡಬೇಕಿತ್ತು. ವಿರೋಧ ಪಕ್ಷಗಳು ಆಕ್ಟಿವ್ ಆಗಿ ಪಾಟಿಸಿಪೇಟ್ ಮಾಡಬೇಕು ಅಂತ ಮೂರು ವಾರಗಳ ಕಾಲ ಅಧಿವೇಶನ ನಡೆಸಿದ್ದೆವು. ಸಾಮಾನ್ಯವಾಗಿ ಎರಡು ವಾರ ನಡೆಯುತ್ತಿತ್ತು. ಅವರು ಅಸೆಂಬ್ಲಿಗೆ ಬರದೇ ಇದ್ದರೆ ಹೇಗೆ? ಗಲಾಟೆ, ಗದ್ದಲದಲ್ಲೇ ಸಮಯ ವ್ಯರ್ಥ ಮಾಡಿದರೆ ಜನರಿಗೆ ಯಾವ ಸಂದೇಶ ಹೋಗಲಿದೆ? ನಾನು ಉತ್ತರ ಕೊಡುವಾಗ 40 ವರ್ಷದ ಇತಿಹಾಸದಲ್ಲಿ 14 ಬಜೆಟ್ ಮಂಡಿಸಿದ್ದೇನೆ. ಮೊದಲ ಬಾರಿಗೆ ವಿರೋಧ ಪಕ್ಷದವರು ಇಲ್ಲದೆಯೇ ಉತ್ತರ ಕೊಟ್ಟಿರುವುದು. ಯಾವಾಗಲೂ ಈ ರೀತಿ ಆಗಿರಲಿಲ್ಲ ಎಂದರು.
ನೆಲಮಂಗಲ: ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ವಿಳಂಬ ವಿಚಾರವಾಗಿ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ಬಿಜೆಪಿ 4 ವರ್ಷಗಳ ಆಡಳಿತದಲ್ಲೂ ಸಂಪೂರ್ಣ ವಿಫಲವಾಗಿದೆ. ಬಿಜೆಪಿ ಅವಧಿಯಲ್ಲಿ ಜನರ ನಿರೀಕ್ಷೆ, ಅಪೇಕ್ಷೆಗಳು ಮಣ್ಣುಪಾಲಾಗಿವೆ. ಅಕ್ರಮ, ಅವ್ಯವಹಾರ ಮಾಡಿ ಜಾತಿ ಜಾತಿಗಳ ನಡುವೆ ಸಂಘರ್ಷ ಸೃಷ್ಟಿ ಮಾಡಲಾಗಿತ್ತು. ಬಿಜೆಪಿಯವರು ಸಮಾಜದಲ್ಲಿ ಸಾಮರಸ್ಯ ಕದಡುವ ಕೆಲಸ ಮಾಡಿದ್ದರು. ಜನ ಪಾಠ ಕಲಿಸಿದ್ದಾರೆ, ಈಗಲಾದ್ರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಪ್ರತಿಪಕ್ಷದಲ್ಲಿ ಇದ್ದುಕೊಂಡು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು. ಆದರೆ ಪ್ರತಿಪಕ್ಷ ಸ್ಥಾನದಲ್ಲೂ ಬಿಜೆಪಿ ಸಂಪೂರ್ಣವಾಗಿ ವಿಫಲವಾಗುತ್ತಿದೆ. ಬಿಜೆಪಿಯವರು ಬೇರೆ ಏನ್ ಹೇಳುತ್ತಾರೆ, ಅವರಿಗೆ ಏನು ನೈತಿಕತೆ ಇದೆ. 3 ವಾರ ಸದನ ನಡೆದರೂ ವಿಪಕ್ಷ ನಾಯಕನ ಆಯ್ಕೆ ಮಾಡಲು ಆಗಿಲ್ಲ ಎಂದರು.
ಶಿವಮೊಗ್ಗ: ರಾಜ್ಯದಲ್ಲಿ ಜನವಿರೋಧಿ ಕಾಂಗ್ರೆಸ್ ಸರ್ಕಾರ ಇದ್ದು, ಅವಧಿಗೂ ಮುನ್ನವೇ ಮತ್ತೆ ವಿಧಾನಸಭೆ ಚುನಾವಣೆ ಬರಬಹುದು ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು ‘ ಬಿ.ಕೆ.ಹರಿಪ್ರಸಾದ್ ಸೇರಿ ಹಲವರು ಕಾಂಗ್ರೆಸ್ಗೆ ತಿರುಗಿ ಬೀಳಲಿದ್ದಾರೆ. ಇವರೆಲ್ಲರೂ ಸೇರಿಕೊಂಡು ಸಿದ್ದರಾಮಯ್ಯ ಕುರ್ಚಿ ಕಿತ್ತು ಹಾಕುತ್ತಾರೆ ಎಂದಿದ್ದಾರೆ.
ಮೈಸೂರು: ಕಾಂಗ್ರೆಸ್ ಸರ್ಕಾರ ಮೊನ್ನೆಯಷ್ಟೇ ಗೃಹ ಲಕ್ಷ್ಮಿ ಯೋಜನೆ ಅರ್ಜಿಗೆ ಚಾಲನೆ ನೀಡಿತ್ತು. ಅದರಂತೆ ರಾಜ್ಯದ ಎಲ್ಲಾ ಮಹಿಳೆಯರು ಅರ್ಜಿ ಹಾಕಲು ಮುಂದಾಗಿದ್ದಾರೆ. ಆದರೆ, ಇದೀಗ ಮೈಸೂರ್ ಒನ್ನಲ್ಲಿ ಅರ್ಜಿ ಸಲ್ಲಿಸಲು ಬೆಳಿಗ್ಗೆ 8 ಗಂಟೆಯಿಂದ ನಿಂತಿದ್ದ ಮಹಿಳೆಯರು. ಸರ್ವರ್ ಇರದ ಹಿನ್ನಲೆ ನಿಂತಲ್ಲೇ ನಿಂತು ಸುಸ್ತಾಗಿದ್ದಾರೆ. ಬಳಿಕ ಮೈಸೂರ್ ಒನ್ ಸಿಬ್ಬಂದಿಗಳು ಮತ್ತೊಂದು ದಿನಕ್ಕೆ ಬರುವಂತೆ ಟೋಕನ್ ಕೊಟ್ಟು ಕಳುಹಿಸಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಸಮಾಜವಿರೋಧಿ ಶಕ್ತಿಗಳು ತಲೆ ಎತ್ತಿವೆ ಎಂದು ಮಾಜಿ ಸಚಿವ ಡಾ.ಅಶ್ವತ್ಥ್ ನಾರಾಯಣ ಹೇಳಿದರು. ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ವೇಳೆ ಮಾತನಾಡಿದ ಅವರು ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಟಿ.ನರಸೀಪುರದಲ್ಲಿ ಸಮಾಜದ್ರೋಹಿಗಳಿಂದ ವೇಣುಗೋಪಾಲ್ ಹತ್ಯೆಯಾಯಿತು, ಹಲವು ಕಡೆ ಇಂತಹ ಕೃತ್ಯಗಳು ನಡೆಯುತ್ತಿವೆ ಎಂದು ಅಶ್ವತ್ಥ್ ನಾರಾಯಣ ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ.
ಬೆಂಗಳೂರು: ಇಂದು ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಯುತ್ತಿದ್ದು, ಅದರಂತೆ ಫ್ರೀಡಂಪಾರ್ಕ್ನಲ್ಲಿ ಮಾತನಾಡಿದ ಬಿಜೆಪಿ ಎಂಎಲ್‌ಸಿ ಎನ್.ರವಿಕುಮಾರ್ ‘ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಜೋಡಿ ರಾಜ್ಯಕ್ಕೆ ಶಾಪ ಎಂದಿದ್ದಾರೆ. ಸಿದ್ದರಾಮಯ್ಯನವರೇ ನೀವು ವ್ಯಾಕರಣ ಮೇಷ್ಟ್ರು ಅಲ್ವಾ, ಸ್ಪೀಕರ್ ಖಾದರ್ಗೆ ಮೊದಲು ಕನ್ನಡ ಕಲಿಸಿ ಎಂದಿದ್ದಾರೆ.
ಬಳ್ಳಾರಿ: ನನಗೆ ಸಿಎಂ ಆಯ್ಕೆ ಮಾಡೋದು ಗೊತ್ತು, ಕೆಳಗೆ ಇಳಿಸೋದು ಗೊತ್ತಿದೆ ಎಂಬ ಬಿ.ಕೆ.ಹರಿಪ್ರಸಾದ್ ಹೇಳಿಕೆ ವಿಚಾರ ‘ಸಿಎಂ ಸ್ಥಾನದಿಂದ ಸಿದ್ದರಾಮಯ್ಯರನ್ನು ಕೆಳಗೆ ಇಳಿಸಲು ಸಾಧ್ಯವಿಲ್ಲ, ಯಾರೋ ಒಬ್ಬರು ಮನಸ್ಸು ಮಾಡಿದ್ರೆ ಸಿಎಂ ಸ್ಥಾನದಿಂದ ಇಳಿಸಲು ಆಗಲ್ಲ ಎಂದು ಕ್ರೀಡಾ ಸಚಿವ ಬಿ.ನಾಗೇಂದ್ರ ಅವರು ಬಿಕೆ ಹರಿಪ್ರಸಾದ್ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಪಕ್ಷದಲ್ಲಿ ಯಾವ ಅಸಮಾಧಾನವಿಲ್ಲ, ಹರಿಪ್ರಸಾದ್ ಹಿರಿಯ ರಾಜಕಾರಣಿ ಸಿಎಂ ಸಿದ್ದರಾಮಯ್ಯ ವಿರುದ್ಧ ಟೀಕೆ ಟಿಪ್ಪಣಿ ಬರುತ್ತೆ ಅದು ಸಾಮಾನ್ಯ ಎಂದಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು, ಭಯೋತ್ಪಾದನಾ ಚಟುವಟಿಕೆಗಳು, ಬೆಲೆಯೇರಿಕೆ, ಗ್ಯಾರಂಟಿ ಘೋಷಣೆ ಅನುಷ್ಠಾನದಲ್ಲಿ ವೈಫಲ್ಯ ಮತ್ತು ಬಿಜೆಪಿ ಶಾಸಕರ ಅಮಾನತು ವಿಚಾರವಾಗಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ ಸೇರಿದಂತೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಬೆಂಗಳೂರು: ನನಗೆ ಸಿಎಂ ಆಯ್ಕೆ ಮಾಡೋದು ಗೊತ್ತು, ಕೆಳಗೆ ಇಳಿಸೋದು ಗೊತ್ತಿದೆ ಎಂದಿದ್ದ ಕಾಂಗ್ರೆಸ್ ನಾಯಕ್ ಬಿ.ಕೆ ಹರಿಪ್ರಸಾದ್ ಅವರು ‘ನಾನು ಹೇಳಿದ್ದು ನಿಜ ಎಂದು ಒಪ್ಪಿಕೊಳ್ಳುತ್ತೇನೆ. ಆದ್ರೆ, ನಿನ್ನೆಯ ಹೇಳಿಕೆ ಬಗ್ಗೆ ನಾನು ಮತ್ತೆ ಪ್ರತಿಕ್ರಿಯೆ ಕೊಡುವುದಿಲ್ಲ. ನಿನ್ನೆ ಸಭೆಗೆ ಆಹ್ವಾನ ಮಾಡಿದ್ದರು, ಹೋಗಿದ್ದೆ ಅಷ್ಟೇ ಎಂದಿದ್ದಾರೆ.
ಬೆಂಗಳೂರು: ಹಾಲಿನ ದರ 3 ರೂಪಾಯಿ ಏರಿಕೆ ಮಾಡಿದ ಸರ್ಕಾರದ ವಿರುದ್ದ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಹೌದು ಸರಣಿ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದು, ‘ಆಲ್ಕೋಹಾಲಿನ ಬೆಲೆ ಏರಿಸಿದ ನಂತರ ಸರಕಾರ ಹಾಲಿನ ಬೆಲೆಯನ್ನೂ ಲೀಟರಿಗೆ ₹3 ಹೆಚ್ಚಿಸಿದೆ. ಶ್ರಮಜೀವಿಗಳ ಕಿಸೆಗೆ ಕನ್ನ ಕೊರೆದಿದೆ. ಒಂದು ಕೈಯ್ಯಲ್ಲಿ ಕೊಟ್ಟು, ಇನ್ನೊಂದು ಕೈಯ್ಯಲ್ಲಿ ಕಸಿದುಕೊಳ್ಳುತ್ತಿದೆ! ಸ್ವತಃ ತಾವೇ ಕಿವಿಯಲ್ಲಿ ಹೂವಿಟ್ಟುಕೊಂಡಿದ್ದ ಕಾಂಗ್ರೆಸ್ಸಿಗರು, ಈಗ ಜನರ ತಲೆಯ ಮೇಲೆ ಫ್ಲವರ್ ಪಾಟ್ ಇಡುತ್ತಿದ್ದಾರೆ. ಚುನಾವಣೆಗೆ ಮುನ್ನ ಬೆಲೆ ಏರಿಕೆ ಬಗ್ಗೆ ಕಾಂಗ್ರೆಸ್ ಬಾಯಿಬಾಯಿ ಬಡಿದುಕೊಂಡಿತ್ತು. ದೊಡ್ಡ ಬಾನಗಡಿಯನ್ನೇ ಎಬ್ಬಿಸಿತ್ತು. ಅಧಿಕಾರಕ್ಕೆ ಬಂದೊಡನೆ ಬೆಲೆ ಏರಿಕೆಯ ಸರಣಿ ಶಾಕ್ ನೀಡುತ್ತಿದೆ. ಹೀಗಿದೆ ಕೈ ಕರಾಮತ್ತು. ಅನ್ನಭಾಗ್ಯದ ಹಣವನ್ನು ಹಾಲು, ಆಲ್ಕೋಹಾಲಿನಿಂದಲೇ ವಸೂಲಿಗೆ ಇಳಿದಿರುವ ಕಾಂಗ್ರೆಸ್ ಕ್ಷುದ್ರ ವಿತ್ತನೀತಿಗೆ ಧಿಕ್ಕಾರ ಎಂದಿದ್ದಾರೆ.
ಆಲ್ಕೊಹಾಲಿನ ಬೆಲೆ ಏರಿಸಿದ ನಂತರ @INCKarnataka ಸರಕಾರ ಹಾಲಿನ ಬೆಲೆಯನ್ನೂ ಲೀಟರಿಗೆ ₹3 ಹೆಚ್ಚಿಸಿ ಶ್ರಮಜೀವಿಗಳ ಕಿಸೆಗೆ ಕನ್ನ ಕೊರೆದಿದೆ. ಒಂದು ಕೈಯ್ಯಲ್ಲಿ ಕೊಟ್ಟು, ಇನ್ನೊಂದು ಕೈಯ್ಯಲ್ಲಿ ಕಸಿದುಕೊಳ್ಳುತ್ತಿದೆ! ಸ್ವತಃ ತಾವೇ ಕಿವಿಯಲ್ಲಿ ಹೂವಿಟ್ಟುಕೊಂಡಿದ್ದ ಕಾಂಗ್ರೆಸ್ಸಿಗರು, ಜನರ ತಲೆಯ ಮೇಲೆ ಫ್ಲವರ್ ಪಾಟ್ ಇಡುತ್ತಿದ್ದಾರೆ!!! 1/4
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) July 22, 2023
ಕೊಡಗು: ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಮುಂದುವರೆದಿದ್ದು, ಮಳೆಗೆ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಮರಬಿದ್ದು ಮಡಿಕೇರಿ-ಮಾಂದಲಪಟ್ಟಿ ರಸ್ತೆ ಸಂಪರ್ಕ ಬಂದ್ ಆಗಿದೆ. ಇದೀಗ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ, ಚೆಸ್ಕಾಂ ಸಿಬ್ಬಂದಿ ಮರ ತೆರವುಗೊಳಿಸಿದ್ದಾರೆ.
ಬೆಂಗಳೂರು: ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಲು ಮುಂಜಾನೆಯೇ ಬೆಂಗಳೂರು ಒನ್ ಕೇಂದ್ರಕ್ಕೆ ಮಹಿಳೆಯರು ಬಂದಿದ್ದಾರೆ. ಆದರೆ, ಸರ್ವರ್ ಕೈ ಕೊಟ್ಟ ಹಿನ್ನಲೆ ಬೆಳ್ಳಗ್ಗೆಯಿಂದಲೂ ಸರದಿ ಸಾಲಿನಲ್ಲಿ ನಿಂತುಕೊಂಡಿರುವ ಘಟನೆ ನಡೆದಿದೆ. ಇನ್ನು ಸರ್ವರ್ ಬ್ಯುಸಿ ಹಿನ್ನೆಲೆ ಮೊಬೈಲ್ನಲ್ಲಿ ಅಪ್ಲಿಕೇಶನ್ ಹಾಕಲಾಗುತ್ತಿದ್ದು, ಆದ್ರೆ, ಮೊಬೈಲ್ನಲ್ಲಿ ಒಂದು ಅಪ್ಲಿಕೇಷನ್ಗೆ 10 ರಿಂದ 15 ನಿಮಿಷ ಸಮಯ ಹಿಡಿಯುತ್ತಿದೆ. ಹೀಗಾಗಿ ಮಹಿಳೆಯರು ಕಾದು ಕಾದು ಸುಸ್ತಾಗಿದ್ದಾರೆ.
ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ಐದು ದಿನಳಿಂದ ನಿರಂತರ ಮಳೆಯಾಗುತ್ತಿದ್ದು, 235 ಮಿಮೀವರೆಗೂ ಮಳೆಯ ಪ್ರಮಾಣ ದಾಖಲಾಗಿದೆ. ಇದರಿಂದ ಮಲಪ್ರಭಾ ನದಿಯ ಒಳ ಹರಿವು ಹೆಚ್ಚಳವಾಗಿದ್ದು, ಕಣಕುಂಬಿ ಗ್ರಾಮದ ರಸ್ತೆ ಮತ್ತು ಬ್ರಿಡ್ಜ್ಗಳು ಕೊಚ್ಚಿಹೋಗುತ್ತಿವೆ. ಇದರಿಂದ ರಸ್ತೆ ಸಂಪರ್ಕ ಕೂಡ ಸಂಪೂರ್ಣ ಬಂದ್ ಆಗಿದೆ.
ಬೆಂಗಳೂರು: ಕರೆಂಟ್ ಫ್ರೀ, ಬಸ್ ಫ್ರೀ ಎಂದು ಯೋಚಿಸುತ್ತಿರುವ ಜನರಿಗೆ ಸರ್ಕಾರ ದೊಡ್ಡ ಶಾಕ್ ಕೊಟ್ಟಿದೆ. ಹೌದು ನಂದಿನಿ ಹಾಲು ದರ ಪ್ರತಿ ಲೀಟರ್‌ಗೆ 3 ರೂಪಾಯಿ ಏರಿಕೆಯಾಗಿದೆ. ಹೀಗ ಹೆಚ್ಚುವರಿ ಹಣವನ್ನ ರೈತರಿಗೆ ವರ್ಗಾವಣೆ ಮಾಡಲಿ ಮಂಡಳಿ ನಿರ್ಧಾರ ಮಾಡಿದೆ. ಆರ್ಥಿಕ ನಷ್ಟದ ಕಾರಣ ಹೇಳಿ ಕೆಎಂಎಫ್ ಹಾಲಿನ ದರವನ್ನ 5 ರೂಪಾಯಿ ಹೆಚ್ಚಳಕ್ಕೆ ಬೇಡಿಕೆ ಇಟ್ಟಿತ್ತು. ಆದ್ರೆ, ಸರ್ಕಾರ 3 ರೂಪಾಯಿ ಹೆಚ್ಚಳಕ್ಕೆ ಅನುಮತಿ ನೀಡಿದೆ. ಮತ್ತು ಆಗಸ್ಟ್ 1 ರಿಂದಲೇ ಹೊಸ ದರ ಜಾರಿಯಾಗಲಿದೆ.
ರಾಮನಗರ: ಜಿಲ್ಲೆಯ ಕನಕಪುರದ SLV ರಸ್ತೆಯಲ್ಲಿರುವ ಗ್ರಾಮ ಒನ್ ಕೇಂದ್ರಕ್ಕೆ ಖುದ್ದು ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿ ‘ಗೃಹಲಕ್ಷ್ಮೀ’ ಯೋಜನೆಯ ನೋಂದಣಿ ಪರಿಶೀಲಿಸಿದ್ದಾರೆ. ಈ ವೇಳೆ ಅಲ್ಲಿ ನೆರದಿದ್ದ ಮಹಿಳೆಯು ಡಿಸಿಎಂ ಡಿ.ಕೆ.ಶಿವಕುಮಾರ್ಗೆ ಧನ್ಯವಾದ ತಿಳಿಸಿದ್ದಾರೆ.
ಬೆಂಗಳೂರು: ವಿಧಾನಸಭೆಯಿಂದ ಬಿಜೆಪಿಯ 10 ಶಾಸಕರ ಅಮಾನತು ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು (ಜು.22) ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಿಂದ ಪ್ರತಿಭಟನೆ ಮಾಡಲಿದ್ದಾರೆ. ಹೌದು ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಲಿದೆ.
ಬೆಂಗಳೂರು: ಇಂದು(ಜು.22) ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು ಸಿಟಿ ರೌಂಡ್ಸ್ ಹಾಕಲಿದ್ದಾರೆ. ಬೆಳಗ್ಗೆ 10.30ಕ್ಕೆ ಸದಾಶಿವನಗರದ ನಿವಾಸದಿಂದ ಹೊರಡಲಿದ್ದು, ಬೆಂಗಳೂರಿನ ಕೆಲವೆಡೆ ದಿಢೀರ್ ಭೇಟಿ ನೀಡಿ, ಪರಿಶೀಲಿಸಲಿದ್ದಾರೆ. ಇತ್ತೀಚೆಗೆ ಪದೇಪದೆ ಸಿಟಿ ರೌಂಡ್ಸ್ ನಡೆಸುತ್ತಿದ್ದಾರೆ.
Published On - 7:58 am, Sat, 22 July 23