- Kannada News Photo gallery 30 lakh tourists who came to Chikkamagaluru in 6 months do you know how many tourists were packed in one month of June
ಕಾಫಿನಾಡಿಗೆ ಆರೇ ತಿಂಗಳಿಗೆ ಬಂದ 30 ಲಕ್ಷ ಪ್ರವಾಸಿಗರು; ಜೂನ್ ಒಂದೇ ತಿಂಗಳಿಗೆ ಲಗ್ಗೆಯಿಟ್ಟ ಟೂರಿಸ್ಟ್ಗಳು ಎಷ್ಟು ಗೊತ್ತಾ?
ಕಾಫಿನಾಡು ಚಿಕ್ಕಮಗಳೂರೆಂದರೆ ನಿಸರ್ಗ ಮಾತೆಯೇ ತವರು. ವರ್ಷಪೂರ್ತಿ ಹಚ್ಚಹಸಿರಿನಿಂದ ಕಂಗೊಳಿಸುವ ತುಂಬುಮತ್ತೈದೆ. ಜಗನ್ಮಾತೆ ಅನ್ನಪೂರ್ಣೇಶ್ವರಿ-ಶಾರದಾಂಭೆಯ ನೆಲಬೀಡು. ಕಾಫಿನಾಡು ಕೇವಲ ಜಿಲ್ಲೆಯಲ್ಲ. ಧಾರ್ಮಿಕತೆ ಜೊತೆ ಪ್ರವಾಸಿಗರಿಗೆ ಕೇಳಿದ್ದೆಲ್ಲವನ್ನೂ ನೀಡೋ ಅಕ್ಷಯಪಾತ್ರೆ. ಪ್ರವಾಸಿಗರಿಗಂತೂ ನಿಂತಲ್ಲೆ ಮೈಮರೆಸೋ ಹಾಟ್ ಸ್ಪಾಟ್. ಅದರಂತೆ ಪ್ರತಿ ವರ್ಷ ಕಾಫಿನಾಡಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತೆ. ಈ ವರ್ಷ ಆರೇ ತಿಂಗಳಿಗೆ ಬಂದ ಟೂರಿಸ್ಟ್ ಎಷ್ಟು ಗೊತ್ತಾ? ಇಲ್ಲಿದೆ ನೋಡಿ.
Updated on: Jul 22, 2023 | 7:34 AM

ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಕೆಮ್ಮಣ್ಣುಗುಂಡಿ, ಕಲ್ಲತ್ತಿಗರಿ, ದತ್ತಪೀಠ, ಮಾಣಿಕ್ಯಧಾರ, ಶಿಶಿಲ ಗುಡ್ಡ, ದೇವರಮನೆಗುಡ್ಡ, ಶೃಂಗೇರಿ, ಹೊರನಾಡು ಹೇಳ್ತಾ ಹೋದರೆ, ಕಾಫಿನಾಡ ಪ್ರವಾಸಿ ತಾಣಗಳ ಸಂಖ್ಯೆ ಒಂದೋ ಎರಡೋ. ಧಾರ್ಮಿಕವಾಗಿ ಬಂದರಂತೂ ಒಬ್ಬಳು ಅನ್ನ ನೀಡೋ ಅನ್ನದಾತೆ. ಮತ್ತೊಬ್ಬಳು ವಿಧ್ಯೆ ನೀಡೋ ವಿದ್ಯಾದೇವತೆ.

ಕಾಫಿನಾಡನ್ನ ರಾಜ್ಯದ ಅತೀ ದೊಡ್ಡ ಜಿಲ್ಲೆ ಅಂತಾನೂ ಕರೆಯಲಾಗುತ್ತೆ. ಎರಡು ತಾಲೂಕುಗಳನ್ನ ಹೊರತು ಪಡಿಸಿದ್ರೆ, ಉಳಿದೆಲ್ಲಾ ತಾಲೂಕುಗಳು ಪ್ರವಾಸಿ ಹಾಗೂ ಧಾರ್ಮಿಕ ತಾಣಗಳೇ. ಕಾಫಿನಾಡ ಭೌಗೋಳಿಕತೆಯಲ್ಲಿ ಅರ್ಧಕರ್ಧ ಅರಣ್ಯವೇ ಇದ್ದು, ಅಸಂಖ್ಯಾತ ವನ್ಯ ಮೃಗಗಳ ನಾಡು ಕೂಡ.

ಇಲ್ಲಿನ ಪ್ರಕೃತಿ ಸೌಂದರ್ಯವನ್ನ ಸವಿಯೋಕೆಂದು ವರ್ಷಪೂರ್ತಿ ಪ್ರವಾಸಿಗರು ಹರಿದು ಬರುತ್ತಾರೆ. ಎರಡು ವರ್ಷಗಳಿಗೆ ಹೋಲಿಸಿದ್ರೆ, ಈ ವರ್ಷ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಜೂನ್ ಒಂದೇ ತಿಂಗಳಿಗೆ ಜಿಲ್ಲೆಗೆ 7 ಲಕ್ಷ ಟೂರಿಸ್ಟ್ಗಳು ಭೇಟಿ ನೀಡಿದ್ದಾರೆ.

2023ರ ಜನವರಿಯಿಂದ ಜೂನ್ 30ರವರೆಗೆ ಸುಮಾರು 30 ಲಕ್ಷದಷ್ಟು ಪ್ರವಾಸಿಗರು ಭೇಟಿ ಜಿಲ್ಲೆಗೆ ನೀಡಿದ್ದಾರೆ. ಅದರಲ್ಲಿ ಗ್ಯಾರಂಟಿ ಸರ್ಕಾರದ ಶಕ್ತಿಯ ಯೋಜನೆಯ ಪಾಲು ಕೂಡ ಒಂದಷ್ಟು ಇದ್ದೇ ಇದೆ.

ಹೌದು, ಕಾಫಿನಾಡು ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಲ್ಲಿ ಇಷ್ಟು ದೊಡ್ಡ ಮಟ್ಟದ ಪ್ರವಾಸಿಗರು ಬರಲು ಗ್ಯಾರಂಟಿ ಸರ್ಕಾರದ ಶಕ್ತಿ ಯೋಜನೆ ಪಾಲು ಇದೆ. ಯಾಕಂದ್ರೆ, ಈ ವರ್ಷ ಜನವರಿಯಿಂದ ಜುಲೈವರೆಗೆ ಸುಮಾರು 30 ಲಕ್ಷದಷ್ಟು ಪ್ರವಾಸಿಗರ ಜಿಲ್ಲೆಗೆ ಭೇಟಿ ನೀಡಿದ್ದಾರೆ.

ಕಳೆದ ವರ್ಷ ಇಡೀ ವರ್ಷಕ್ಕೆ 50 ಲಕ್ಷವಿತ್ತು, 2021ರಲ್ಲಿ ಇನ್ನೂ ಕಡಿಮೆ ಇತ್ತು. ಈ ಬಾರಿ ಜನವರಿಯಿಂದ ಆರೇ ತಿಂಗಳಿಗೆ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿದೆ. ಆರು ತಿಂಗಳಲ್ಲಿ 30 ಲಕ್ಷ. ಜೂನ್ ಒಂದೇ ತಿಂಗಳಿಗೆ 7 ಲಕ್ಷ. ಇನ್ನು ಈ ವರ್ಷದ ಕೊನೆಗೆ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕೋಟಿ ದಾಟೋದ್ರಲ್ಲಿ ಅನುಮಾನವಿಲ್ಲ.

ಒಟ್ಟಾರೆ, ಚಿಕ್ಕಮಗಳೂರು ಜಿಲ್ಲೆ ದಿನದಿಂದ ದಿನಕ್ಕೆ ಹೆಚ್ಚು ಪ್ರವಾಸಿಗರನ್ನ ಆಕರ್ಷಿಸುತ್ತಿದೆ. ಇಲ್ಲಿಯ ಪ್ರವಾಸಿ ತಾಣಗಳು ಹಾಗೂ ಇಬ್ಬರು ಅಧಿದೇವತೆಯರನ್ನ ನಂಬಿಕೊಂಡೇ ಬದುಕುತ್ತಿರೋ ಜನಸಾಮಾನ್ಯರ ಬಾಳು ಕೂಡ ಪ್ರವಾಸಿಗರು ಹೆಚ್ಚಾದಂತೆ ಅವರ ಆರ್ಥಿಕ ಗುಣಮಟ್ಟ ಕೂಡ ಹೆಚ್ಚಿದೆ.

ಸರ್ಕಾರ ಕೂಡಲೇ ಇತ್ತಗಮನ ಹರಿಸಿ ಪ್ರವಾಸಿಗರಿಗೆ ಬೇಕಾದ ಮೂಲಭೂತ ಸೌಲಭ್ಯ ಕಲ್ಪಿಸಿದ್ರೆ, ಮುಂದಿನ ದಿನಗಳಲ್ಲಿ ಚಿಕ್ಕಮಗಳೂರು ತಾನಾಗೇ ಪ್ರವಾಸಿ ಜಿಲ್ಲೆಯಾಗೋದ್ರಲ್ಲಿ ಎರಡು ಮಾತಿಲ್ಲ.



















