ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿ ಈಗ ವರುಣರಾಯನ ಆರ್ಭಟ ಕಡಿಮೆಯಾಗಿದೆ. ಅಧಿಕ ಮಳೆಯಿಂದ ಜಲಾಶಯಗಳಲ್ಲಿ ಒಳಹರಿವು ಹೆಚ್ಚಾಗಿದೆ ಕೆಲ ಡ್ಯಾಂಗಳು ತುಂಬಿವೆ. ಮಳೆಯಿಂದ ರೈತನ ಮೊಗದಲ್ಲಿ ಸಂತಸ ಮೂಡಿದ್ದು, ಮಳೆ ಬಿಡುವು ಕೊಟ್ಟ ಹಿನ್ನೆಲೆ ಬಿತ್ತನೆ ಕಾರ್ಯ ಆರಂಭಿಸಿದ್ದಾನೆ. ಇನ್ನು ರಾಜ್ಯ ರಾಜಕೀಯದಲ್ಲಿ ಬೆಳವಣಿಗೆಗಳು ನಡೆಯುತ್ತಿದ್ದು, ಕಾಂಗ್ರೆಸ್ ಪಕ್ಷದ ಶಾಸಕರು ತಮ್ಮ ಸಚಿವರ ವಿರುದ್ಧವೇ ಸಿಎಂಗೆ ಪತ್ರ ಬರೆದು ಅಸಮಾಧನ ತೋಡಿಕೊಂಡಿದ್ದು ಸಾಕಷ್ಟು ಚರ್ಚೆಯಾಗಿತ್ತು. ಬಿಜೆಪಿ ಪಾಳಯದಲ್ಲಿ ರಾಜ್ಯಾಧ್ಯಕ್ಷನ ಪಟ್ಟದ ವಿಚಾರವಾಗಿ ಮುಸುಕಿನ ಗುದ್ದಾಟ ನಡೆದಿದೆ. ಹಾಗೇ ಉಡುಪಿಯ ಕಾಲೇಜು ವಿದ್ಯಾರ್ಥಿನಿಯರ ವಿಡಿಯೋ ಪ್ರಕರಣ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಇದರೊಂದಿಗೆ ಇಂದಿನ ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ.
ನಂದಿನಿ ಹಾಲಿನ ದರ ಹಾಗೂ ಅಬಕಾರಿ ಸುಂಕ ಏರಿಕೆ ಮಾಡಿದ್ದಾರೆ. ಬೆಲೆ ಏರಿಕೆ ಮಾಡಿ ಅಂತಾ ರಾಜ್ಯದ ಜನ ನಿಮಗೆ ಅಧಿಕಾರ ಕೊಟ್ಟಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಸಿ.ಟಿ.ರವಿ ಆಕ್ರೋಶ ಹೊರಹಾಕಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಜನ ಅಧಿಕಾರ ಕೊಟ್ಟಿದ್ದು ನೀವು ಹೇಳಿದ ಗ್ಯಾರಂಟಿ ನಂಬಿ. ಬೆಲೆ ಏರಿಕೆ ಬರೆ ಎಳೆಯುತ್ತಾರೆ ಅಂತಾ ಯಾರೂ ಊಹಿಸಿರಲಿಲ್ಲ. ರೈತರಿಗೆ ಸಹಾಯ ಮಾಡುವ ಸದುದ್ದೇಶದಿಂದ ಅಮುಲ್ ಮತ್ತು ನಂದಿನಿ ತಾಂತ್ರಿಕ ಸಹಕಾರ ಬಗ್ಗೆ ಅಮಿತ್ ಶಾ ಸಲಹೆ ನೀಡಿದ್ದರು. ಆದರೆ ಚುನಾವಣೆ ವೇಳೆ ಅಮಿತ್ ಶಾ ಹೇಳಿಕೆ ಬಗ್ಗೆ ಅಪಪ್ರಚಾರ ಮಾಡಿದರು. ಕಳೆದ 50 ವರ್ಷದಿಂದ ಟಿಟಿಡಿಗೆ ನಂದಿನಿ ತುಪ್ಪ ಪೂರೈಕೆ ಆಗುತ್ತಿದೆ. ನಂದಿನಿ ತುಪ್ಪ ಸರಬರಾಜು ಸ್ಥಗಿತ ಸುದ್ದಿ ಕೇಳಿ ದುಃಖವಾಗಿದೆ. ತಿರುಪತಿ ಪ್ರಸಾದಕ್ಕೆ ನಂದಿನಿ ತುಪ್ಪ ಸೇರುತ್ತೆ ಅನ್ನೋದೆ ಹೆಮ್ಮೆ ಸಂಗತಿ. ಸಹಕಾರ ಸಚಿವರು, KMF ಅಧ್ಯಕ್ಷರು ಪ್ರತಿಷ್ಠೆ ಬಿಟ್ಟು ಮಾತನಾಡಬೇಕು. ಪ್ರತಿಷ್ಠೆ ಬಿಟ್ಟು ಟಿಟಿಡಿ ಜೊತೆ ಮಾತನಾಡುವಂತೆ ಸಲಹೆ ನೀಡುತ್ತೇನೆ. 50 ವರ್ಷದ ವ್ಯವಹಾರಿಕ ಸಂಬಂಧವನ್ನು ಮುಂದುವರಿಸಬೇಕು. ಸಲಹೆ ಸ್ವೀಕಾರ ಮಾಡದಿದ್ದರೆ ಹಾಲು ಉತ್ಪಾದಕರಿಗೆ ನಷ್ಟವಾಗುತ್ತದೆ ಎಂದರು.
ದಾವಣಗೆರೆ: ಸಂಸದ ಜಿ.ಎಂ.ಸಿದ್ದೇಶ್ವರ್ ವಿರುದ್ಧ ಸಚಿವ S.S.ಮಲ್ಲಿಕಾರ್ಜುನ್ ಆಕ್ರೋಶ ಹೊರಹಾಕಿದ್ದಾರೆ. ನಾನು, ನಮ್ಮಪ್ಪ ಈವರೆಗೂ ಬಡ್ಡಿ ವ್ಯವಹಾರ ಮಾಡಿಲ್ಲ. ನಾನು ಬಿಜೆಪಿ ಸಂಸದ ಸಿದ್ದೇಶ್ವರ್ರಿಂದ ಸಂಸ್ಕಾರವನ್ನು ಕಲಿಯಬೇಕಿಲ್ಲ. ನಾನು ಬೇಕಾದರೆ ಸಂಸದ ಸಿದ್ದೇಶ್ವರ್ಗೆ ಸಂಸ್ಕಾರ ಹೇಳಿಕೊಡುತ್ತೇನೆ ಎಂದರು. ಬಡ್ಡಿ ಸಮೇತ ವಸೂಲಿ ಮಾಡಿದ್ದಾರೆಂದು ಮೊನ್ನೆ ಹೇಳಿಕೆ ಕೊಟ್ಟಿದ್ದಾರೆ. ಬಡ್ಡಿ ಸಮೇತ ವಸೂಲಿ ಮಾಡಿ ಸಂಸದರು ಊರು ಹಾಳುಮಾಡಿದ್ದಾರೆ. ದಾವಣಗೆರೆಯಲ್ಲಿ ಸರ್ಕಾರಿ ಪಾರ್ಕನ್ನು ನೋಂದಣಿ ಮಾಡಿಕೊಟ್ಟಿದ್ದಾರೆ. ಖಾತೆ ಮಾಡಿಕೊಟ್ಟ ಅಧಿಕಾರಿಯನ್ನು ಕೂಡ ಸಸ್ಪೆಂಡ್ ಮಾಡಿದ್ದಾರೆ. ಇದಕ್ಕೆಲ್ಲಾ ಸಂಸದ ಜಿ.ಎಂ.ಸಿದ್ದೇಶ್ವರ್ ಕಾರಣ ಎಂದರು. ಮೈನಿಂಗ್ನಲ್ಲಿ 220 ಕೋಟಿ ಅಕ್ರಮವಾಗಿದೆ, ಈ ಬಗ್ಗೆ ಚರ್ಚೆಗೆ ಬರಲಿ ಎಂದರು.
ಕೊಪ್ಪಳ: ನನಗೆ ಹೈಕಮಾಂಡ್ನಿಂದ ಅಧಿಕೃತ ಆಹ್ವಾನ ಬಂದಿಲ್ಲ. ಹೀಗಾಗಿ ದೆಹಲಿ ಸಭೆಗೆ ನಾನು ಹೋಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಬೇವೂರು ಗ್ರಾಮದಲ್ಲಿ ಮಾತನಾಡಿದ ಅವರು, ನನ್ನ ಕ್ಷೇತ್ರದಲ್ಲಿ ಪೂರ್ವ ನಿಗದಿತ ಕಾರ್ಯಕ್ರಮಗಳಿವೆ. ಮಾಹಿತಿ ಪ್ರಕಾರ ಲೋಕಸಭೆ ಚುನಾವಣೆ ಬಗ್ಗೆ ಸಭೆ ಕರೆದಿದ್ದಾರೆ ಎಂದರು.
ಕೊಪ್ಪಳ: ಸಿಎಲ್ಪಿ ಸಭೆಯಲ್ಲಿ ಶಾಸಕರು ಕ್ಷಮೆ ಕೇಳಿದ್ದಾರೆಂದು ಗೃಹ ಸಚಿವರು ಹೇಳಿದ್ದು ಮಾದ್ಯಮದಲ್ಲಿ ವರದಿಯಾಗಿತ್ತು. ಹೀಗಾಗಿ ನಾನು ಪರಮೇಶ್ವರ ಅವರನ್ನು ಪ್ರಶ್ನಿಸಿದ್ದೆ. ಇದು ಸತ್ಯ ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಟ್ವಿಟ್ ಮಾಡಿದ್ದೆ, sorry ಕೆಳೋ ಪ್ರಶ್ನೆಯೇ ಬಂದಿಲ್ಲ ಅಂತ ಹೇಳಿದ್ದೆ. ಅವರು ಇಲ್ಲ ಬ್ರದರ್ ನಾನು ಆರ್ಥದಲ್ಲಿ ಹೇಳಿಲ್ಲ ಅಂತ ಪ್ರತಿಕ್ರಿಯೆ ನೀಡಿದ್ದಾರೆ ಎಂದರು. ನಮ್ಮಲ್ಲಿ ಅಸಮಧಾನ ಎನ್ನೋದು ಇಲ್ಲ. ಕೆಲವರು ಬಂದು ಶಾಸಕರ ಸಹಿ ಸಂಗ್ರಹ ಮಾಡಿದ್ದರು. ಅದಕ್ಕೆ ನಾನು ಸಹಿ ಮಾಡಿದ್ದೆನೆ.
ಅದಕ್ಕೆ ಸಿಎಂ ಏನು ತಪ್ಪು ತಿಳಿದುಕೊಂಡಿಲ್ಲ. ಆಡಳಿತ ಸುಧಾರಣೆಗಾಗಿ ಸಲಹೆ ನೀಡಿದ್ದೇವೆ. ಇನ್ನು ಹದಿನೈದು ಮತ್ತೆ ಸಲಹೆ ನೀಡುತ್ತೇವೆ ಎಂದರು.
ದಾವಣಗೆರೆ: ರಾಜಕೀಯವಾಗಿ, ಮುಂದಿನ ಚುನಾವಣೆ ಬಗ್ಗೆ ಮಾತನಾಡಲು ಹೋಗುತ್ತಿದ್ದೇವೆ. ಯಾವ ಅಪರೇಷನ್ ಇಲ್ಲ ಎಂದು ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿದರು. ಬಿಜೆಪಿ ರೀತಿ ಭ್ರಷ್ಟಾಚಾರದ ಸರ್ಕಾರ ನಮ್ಮದಲ್ಲ. ಯಾವ ಶಾಸಕರದ್ದು ಏನೂ ತೊಂದರೆ ಇಲ್ಲ. ಒಂದೊಂದು ವರ್ಗಾವಣೆ ಸಮಸ್ಯೆ ಆಗಿರುತ್ತವೆ. ಎಲ್ಲವನ್ನು ಕೂತು ಸರಿಪಡಿಸಿಕೊಳ್ಳಿ ಎಂದು ಹೇಳಿದ್ದಾರೆ. ಸ್ವಲ್ಪ ಅಸಮಧಾನ ಇರಬಹುದು ಇದಕ್ಕೆ ಸಿಎಲ್ಪಿ ಸಭೆ ಕರೆದಿದ್ದು ಎಂದರು. ಸಿಂಗಾಪುರದಲ್ಲಿ ಆಪರೇಷನ್ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಗಟ್ಟಿಯಾಗಿಯೇ ಇದ್ದಾರೆ. ಒಳ್ಳೆಯ ಆಡಳಿತ ಕೊಡುತ್ತಿದ್ದಾರೆ ಎಂದರು.
ಮಾಜಿ ಶಾಸಕ ಸಿಟಿ ರವಿ ಅವರು ಇಂದು ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ದೆಹಲಿಗೆ ತೆರಳಬೇಕಿತ್ತು. ಈ ಬಗ್ಗೆ ಸ್ವತಃ ರವಿ ಅವರೇ ಹೇಳಿಕೆ ನೀಡಿದ್ದರು. ಆದರೆ ಅವರು ಬೆಂಗಳೂರಿನಿಂದ ನೇರವಾಗಿ ಚಿಕ್ಕಮಗಳೂರಿಗೆ ತೆರಳಿದ್ದಾರೆ. ಬುಧವಾರ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಜೊತೆ ಚರ್ಚೆ ನಡೆಸುವ ಸಾಧ್ಯತೆ ಇದೆ.
ನಾನು ಕೊಟ್ಟ ಭರವಸೆ ಈಡೇರಿಸದಿದ್ದರೆ ಮತ್ತೆ ಮತ ಕೇಳುವುದಿಲ್ಲ ಎಂದು ಕೆಆರ್ಪಿಪಿ ಶಾಸಕ ಜನಾರ್ದನರೆಡ್ಡಿ ಹೇಳಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರ ವ್ಯಾಪ್ತಿಯ ಹಾಸಗಲ್ ಗ್ರಾಮದಲ್ಲಿ ಮಾತನಾಡಿದ ಅವರು, ಈಗಾಗಲೇ ನಾನು ಎಲ್ಲಾ ಕೆಲಸಗಳನ್ನು ಪ್ರಾರಂಭ ಮಾಡುತ್ತಿದ್ದೇನೆ. ಗ್ರಾಮ ಪಂಚಾಯಿತಿಗಳಿಗೆ ಒಂದು ಕೋಟಿ ಅನುದಾನ ನೀಡುತ್ತೇನೆ ಎಂದರು.
ಬೆಂಗಳೂರು: ಹೈಕಮಾಂಡ್ ಬುಲಾವ್ ವಿಚಾರವಾಗಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಲೋಕಸಭೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚೆ ಮಾಡುತ್ತೇವೆ. ನವದೆಹಲಿಯಲ್ಲಿ ಎರಡು ಮೂರು ಸಭೆ ಇದೆ. ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆಗಳ ಜಾರಿಗೆ ಕ್ರಮ ಆಗಿದೆ. ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ವರಿಷ್ಠರ ಸಲಹೆ ಕೇಳುತ್ತೇವೆ ಎಂದರು.
SC,ST ಸಮುದಾಯಕ್ಕೆ ಮೀಸಲಾದ ಹಣ ಅನ್ಯ ಉದ್ದೇಶಗಳಿಗೆ ದುರ್ಬಳಕೆ ಆಗದಂತೆ ಎಸ್ಸಿಪಿ-ಟಿಎಸ್ಪಿ ರಾಜ್ಯ ಅಭಿವೃದ್ಧಿ ಪರಿಷತ್ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಹೆಚ್.ಸಿ.ಮಹದೇವಪ್ಪ ಹೇಳಿದ್ದಾರೆ. ಬಿಜೆಪಿ ಸರ್ಕಾರ SC,STಗೆ ಮೀಸಲಾದ ಹಣ ಅನ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿತ್ತು. 7ಡಿ ನಿಯಮದಡಿ ಅನ್ಯ ಉದ್ದೇಶಗಳಿಗೆ ಹಣ ಬಳಸಿಕೊಂಡಿದ್ದರು.ಸಿಎಂ ಈ ಬಾರಿ ಬಜೆಟ್ನಲ್ಲಿ ಈ ನಿಯಮವನ್ನು ತೆಗೆದಿದ್ದಾರೆ. SC,STಗೆ ಮೀಸಲಾದ ಹಣ ಕಡ್ಡಾಯ ಬಳಕೆಗೆ ಸೂಚನೆ ನೀಡಲಾಗಿದೆ ಎಂದರು.
ಓಲಾ, ಉಬರ್ನಿಂದ ಸಮಸ್ಯೆಯಾಗುತ್ತಿದೆ ಅಂತಾ ತಿಳಿಸಿದ್ದಾರೆ. ರ್ಯಾಪಿಡೋ ವಿಚಾರವಾಗಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ ಎಂದು ಆಟೋ ಚಾಲಕರ ಸಭೆ ಬಳಿಕ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ವಿಮೆ ಮಾಡಿಸಬೇಕು ಅಂತಾ ಚಾಲಕರು ಮನವಿ ಮಾಡಿದ್ದಾರೆ. ಚಾಲಕರ ದಿನಾಚರಣೆ ಮಾಡಲು ಕೋರಿದ್ದಾರೆ. ಕಾನೂನುಬಾಹಿರ ಆ್ಯಪ್‌ಗಳನ್ನು ಬ್ಯಾನ್ ಮಾಡುವಂತೆ ಕೋರಿದ್ದಾರೆ, ಏರ್ಪೋರ್ಟ್ ಬಳಿ ಇಂದಿರಾ ಕ್ಯಾಂಟೀನ್ ಓಪನ್ಗೆ ಬೇಡಿಕೆ ಇದೆ. ಜಾಗ ಕೊಟ್ಟರೆ ಕೂಡಲೇ ಇಂದಿರಾ ಕ್ಯಾಂಟೀನ್ ಓಪನ್ ಮಾಡುತ್ತೇವೆ. ಖಾಸಗಿ ಬಸ್ಗಳ ಚಾಲಕರು ಕೂಡ ಸಮಸ್ಯೆ ಹೇಳಿಕೊಂಡಿದ್ದಾರೆ. ವಾಹನಗಳ ಮೇಲೆ ಬ್ಲಾಕ್ ಲಿಸ್ಟ್ ತೆಗೆಯಲು ಅದಾಲತ್ ಮಾಡುತ್ತೇವೆ ಎಂದರು.
ಸಿ.ಎಂ., ಡಿ.ಸಿ.ಎಂ. ಹಾಗೂ ಸಚಿವರಿಗೆ ಹೈಕಮಾಂಡ್ ಬುಲಾವ್ ಹಿನ್ನೆಲೆ ಸಚಿವರು ಫುಲ್ ಅಲರ್ಟ್ ಆಗಿದ್ದಾರೆ. ಕಳೆದ ಎರಡು ದಿನಗಳಿಂದ ಸಚಿವರು, ಶಾಸಕರಿಂದ ಸರಣಿ ಸಭೆ ನಡೆಸಲಾಗುತ್ತಿದೆ. ಈ ನಡುವೆ ಸದಾಶಿವನಗರದ ನಿವಾಸದಲ್ಲಿ ಎಂಎಲ್ಸಿ ಎಂ.ಬಿ.ಪಾಟೀಲ್ ಅವರನ್ನು ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಮೈಸೂರಿನಲ್ಲಿ ಸಿ.ಎಂ. ಸಿದ್ದರಾಮಯ್ಯರ ಹೊಸ ಮನೆ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ ತಲುಪಿದೆ. ನಿನ್ನೆ ಪುತ್ರ ದಿ.ರಾಕೇಶ್ ಪುಣ್ಯತಿಥಿಗೆ ಆಗಮಿಸಿದ್ದಾಗ ಸಿದ್ದರಾಮಯ್ಯ ಅವರು ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ನೂತನ ಬಂಗಲೆ ವೀಕ್ಷಣೆ ಮಾಡಿದ್ದಾರೆ.
ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಅಸಮಾಧಾನ ಮೂಡಿದ ಹಿನ್ನೆಲೆ ಹೈಕಮಾಂಡ್ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ 19 ಸಚಿವರಿಗೆ ದೆಹಲಿಗೆ ಕರೆದಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಜಿ. ಪರಮೇಶ್ವರ್, ಎಂ.ಬಿ ಪಾಟೀಲ್, ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ, ಹೆಚ್. ಕೆ ಪಾಟೀಲ್, ಮುನಿಯಪ್ಪ, ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ, ಜಮೀರ್ ಅಹ್ಮದ್, ಚೆಲುವರಾಯಸ್ವಾಮಿ, ಶಿವಾನಂದ ಪಾಟೀಲ್, ಎಸ್ .ಎಸ್ ಮಲ್ಲಿಕಾರ್ಜುನ, ಮಧು ಬಂಗಾರಪ್ಪ, ಎನ್. ಎಸ್ ಬೋಸರಾಜು, ಪ್ರಿಯಾಂಕ್ ಖರ್ಗೆಗೆ ಬುಲಾವ್ ಬಂದಿದೆ.
ಬೆಂಗಳೂರು: ಖಾಸಗಿ ವಾಹನ ಚಾಲಕ ಮತ್ತು ಮಾಲಿಕರ ಜತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶಾಂತಿನಗರದ ಸಾರಿಗೆ ಇಲಾಖೆ ಮುಖ್ಯ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದಾರೆ. ಆದರೆ ಸಭೆಯಲ್ಲಿ ಓಲಾ, ಉಬರ್ ಸಂಸ್ಥೆಗಳು ಮಾತ್ರ ಭಾಗಿಯಾಗಿವೆ. ಆಟೋ, ಖಾಸಗಿ ಬಸ್, ಟ್ಯಾಕ್ಸಿ ಚಾಲಕರ ಜೊತೆ ಪ್ರತ್ಯೇಕ ಸಭೆ ನಡೆಸುವುದಾಗಿ ತಿಳಿಸಿದ ಹಿನ್ನೆಲೆ ಸಾರಿಗೆ ಒಕ್ಕೂಟದಿಂದ ಎಲ್ಲರೂ ಬಂದ್ಗೆ ಕರೆ ಕೊಟ್ಟಿದ್ದೇವೆ. ಹೀಗಾಗಿ ಒಟ್ಟಿಗೆ ಸಭೆ ಕರೆಯುವಂತೆ ಆಗ್ರಹಿಸಿವೆ.
ಬೆಂಗಳೂರು: ಬಿಜೆಪಿ ಅವಧಿಯ ಕೊರೊನಾ ಹಗರಣಗಳ ಬಗ್ಗೆ ತನಿಖೆ ನಡೆಸುತ್ತೇವೆ. ಕೊರೊನಾ ಹಗರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವ ಚಿಂತನೆ ಇದೆ. ನ್ಯಾಯಾಂಗ ತನಿಖೆ ವಿಚಾರವನ್ನು ಸಿಎಂ ಮುಂದೆ ಪ್ರಸ್ತಾಪಿಸಿದ್ದೇವೆ. ಸಾರ್ವಜನಿಕರ ಹಣ ದುರುಪಯೋಗದ ಬಗ್ಗೆ ವರದಿ ಬಂದಿದೆ. ಕೊರೊನಾ ಹಗರಣದ ಬಗ್ಗೆ ತನಿಖೆ ನಡೆಸುವುದು ನಿಶ್ಚಿತ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ನವದೆಹಲಿ: ಕಾಂಗ್ರೆಸ್ ನಾಯಕರು ಭಯೋತ್ಪಾದಕರನ್ನು ರಕ್ಷಣೆ ಮಾಡ್ತಿದ್ದಾರೆ. ಕರ್ನಾಟಕ ರಾಜ್ಯ ಭಯೋತ್ಪಾದಕರಿಗೆ ಅಡಗುತಾಣವಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣವೇ ಇದಕ್ಕೆಲ್ಲ ಕಾರಣ. ಕಾರಾಗೃಹಗಳಲ್ಲಿ ಭಯೋತ್ಪಾದನ ಚಟುವಟಿಕೆಗಳು ನಡೆಯುತ್ತಿವೆ. ಯುವಕರು ಐಸಿಎಸ್ ಸೇರಿ ಬೇರೆ ಸಂಘಟನೆಗಳ ಜತೆ ಸಂಪರ್ಕ ಹೊಂದುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ಮಾಡಿದರು.
ಬೆಂಗಳೂರು: ಮೊದಲೇ ತಿಳಿಸಿ ನಾನು ಆಸ್ಪತ್ರೆಗೆ ಬೇಟಿ ಕೊಟ್ಟಿದ್ದೇನೆ. ಇಲ್ಲಿ ಸ್ವಚ್ಚತೆ, ಡಾಕ್ಟರ್ಗಳ ಹಾಜರಾತಿ ಬಗ್ಗೆ ಸಾಮಾಜಿಕ ಕಾರ್ಯಕರ್ತನ ಮೂಲಕ ದೂರು ಬಂದಿತ್ತು. ವಿಧಾನಸಭೆಯಲ್ಲಿ ಜಯನಗರ ಆಸ್ಪತ್ರೆಗೆ ಭೇಟಿ ನೀಡುತ್ತೇನೆ ಎಂದಿದ್ದೆ. ಆದೇ ರೀತಿ ಇಂದು ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಇನ್ನು ಆಸ್ಪತ್ರೆ ಪರಿಶೀಲನೆ ನಡೆಸುತ್ತಿದ್ದೇನೆ. ದಿಢೀರ್ ಭೇಟಿ ಕೊಡುವುದನ್ನು ಮುಂದಿನ ದಿನಗಳಲ್ಲಿ ಮಾಡುತ್ತೇನೆ. ಹೊರಗಿನಿಂದ ಬಂದು ಆಸ್ಪತ್ರೆಯಲ್ಲಿ ಹಸ್ತಕ್ಷೇಪ ಮಾಡುವುದು ತಪ್ಪು. ಏನೆಲ್ಲಾ ತೊಂದರೆ ಆಗುತ್ತಿದೆ ಅದಕ್ಕೆ ಅಗತ್ಯ ಕ್ರಮಗಳನ್ನ ತೆಗೆದುಕೊಳ್ಳುತ್ತೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಒಂಬತ್ತು ವರ್ಷ ಪೂರೈಸಿದ ಹಿನ್ನೆಲೆ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹಳ್ಳಿ ಹಳ್ಳಿ ಸುತ್ತಿ ಕೇಂದ್ರ ಸರ್ಕಾರದ ಸಾಧನೆ ಹೇಳುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಫಲವನಹಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳಿಗೆ ತೆರಳಿ ಪ್ರಧಾನಿ ಮೋದಿ ಸಾಧನೆ ಹೇಳುತ್ತಿದ್ದಾರೆ. ಇದೇ ವೇಳೆ ರಾಜ್ಯದ ಗ್ಯಾರೆಂಟಿ ಯೋಜನೆಗಳು ವಿಫಲವಾಗಿವೆ ಎಂದು ಹೇಳಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಹಚ್ಚುತ್ತಿರು ಮದ್ರಾಸ್ ಐ ಹಿನ್ನಲೆ ಆರೋಗ್ಯ ಇಲಾಖೆ ಮಾರ್ಗಸೂಚಿ ಹಾಗೂ ಸಲಹೆ ನೀಡಿದೆ.
ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಕುರಟ್ಟಿಹೊಸೂರು, ಭದ್ರಯ್ಯನಹಳ್ಳಿ ಗ್ರಾಮಗಳಲ್ಲಿ ವಿಚಿತ್ರ ಚರ್ಮರೋಗ ಪತ್ತೆಯಾಗಿದೆ. ಈ ವಿಚಿತ್ರ ಚರ್ಮರೋಗದಿಂದ ನಾಲ್ವರು ಮಕ್ಕಳು ಬಳಲುತ್ತಿದ್ದಾರೆ.
ಹುಬ್ಬಳ್ಳಿ: ಶಕ್ತಿ ಯೋಜನೆ ವಿರೋಧಿಸಿ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಆಟೋ ಚಾಲಕರು ಪ್ರತಿಭಟನೆ ಮಾಡುತ್ತಿದ್ದಾರೆ. ನೂರಾರು ಆಟೋ ಚಾಲಕರು, ಮಾಲೀಕರು ಪ್ರತಿಭಟನೆ ಮಾಡುತ್ತಿದ್ದು, ಶಕ್ತಿ ಯೋಜನೆಯನ್ನು ರದ್ದು ಮಾಡಿ, ನಮ್ಮನ್ನ ರಕ್ಷಿಸಿ ಎಂದು ಆಗ್ರಹಿಸಿದ್ದಾರೆ. ಸಿದ್ದರಾಮಯ್ಯನವರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಆಟೋ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಬೆಂಗಳೂರು: ಎಸ್ಸಿಪಿ-ಟಿಪಿಎಸ್ಪಿ ಸಮುದಾಯಗಳಿಗೆ ಮೀಸಲಿಟ್ಟಿರುವ ಅನುದಾನ ಹಂಚಿಕೆ, ಬಳಕೆಗೆ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡುವ ವಿಚಾರವಾಗಿ ವಿಧಾನಸೌಧದ ಸಮ್ಮೇಳನದ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಪರಿಷತ್ ಸಭೆ ನಡೆಯಲಿದೆ. ಸೆಕ್ಷನ್ (ಡಿ) ಕೈಬಿಟ್ಟ ಹಿನ್ನಲೆಯಲ್ಲಿ ಅನುದಾನ ಬಳಕೆಯ ಖಾತರಿ ಬಗ್ಗೆ ಚೆರ್ಚೆ ನಡೆಯಲಿದೆ. ಪ್ರಸಕ್ತ ಸಾಲಿನಲ್ಲಿ 34, 294 ಕೋಟಿ ರೂ ಎಸ್ಸಿಪಿ-ಟಿಪಿಎಸ್ಪಿಗೆ ಹಣ ಮರು ಹಂಚಿಕೆ ಮಾಡುವ ಕುರಿತು ಸಭೆ ಕರೆಯಲಾಗಿದೆ.
ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಟೊಮೇಟೊ ಬೆಲೆ ಗಗನಕ್ಕೇರಿದ್ದು, 200 ರೂ. ಗಡಿ ತಲುಪಿದೆ. 26 ಕೆ.ಜೆ ಟೊಮೇಟೊ ಐದು ಸಾವಿರ ರೂಪಾಯಿಗೆ ಹರಾಜಾಗಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಚಿಕ್ಕಮಗಳೂರು ಟೊಮೇಟೊಗೆ ಭಾರಿ ಡಿಮ್ಯಾಂಡ್ ಹಿನ್ನೆಲೆ ಬೆಲೆ ಏರಿಕೆಯಾಗಿದೆ.
ಬೆಂಗಳೂರು: ಟೊಮೇಟೊ ದರ ಮತ್ತೆ ಏರಿಕೆಯಾಗಿದೆ. ಇಂದು ಕೇಜಿ ಟೊಮೇಟೊಗೆ 150 ರಿಂದ 160 ರೂ. ಇದೆ. ಕಳೆದ ಒಂದು ವಾರದಿಂದ 80 ರಿಂದ 90, ಆಗಾಗ 100ರ ಗಡಿಯಲ್ಲಿದ್ದ ಟೊಮೇಟೊ ಈಗ ದಿಢೀರ್ ಏರಿಕೆಯಾಗಿದೆ.
ಹುಬ್ಬಳ್ಳಿ: ಶಕ್ತಿ ಯೋಜನೆ ವಿರೋಧಿಸಿ ಇಂದು ಹುಬ್ಬಳ್ಳಿಯಲ್ಲಿ ಆಟೋ ಚಾಲಕರು ಪ್ರತಿಭಟನೆ ಮಾಡಲಿದ್ದಾರೆ. ಈ ಹಿನ್ನೆಲೆ ಅವಳಿ ನಗರದಲ್ಲಿ ಆಟೋ ಸಂಚಾರ ಬಂದ್ ಇರಲಿದೆ. ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಆಟೋ ಸಂಚಾರಕ್ಕೆ ನಿಷೇಧವಿದೆ. ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಆಟೋ ಚಾಲಕರು ಜಮಾಯಿಸಿ ಧರಣಿ ನಡೆಸುತ್ತಿದ್ದಾರೆ.
Published On - 8:08 am, Mon, 31 July 23