Karnataka News Highlights Updates: ಕರ್ನಾಟಕದಲ್ಲಿ 16ನೇ ವಿಧಾನಸಭೆಯ ಮೊದಲ ಅಧಿವೇಶನ (Legislature Session) ಆರಂಭವಾಗಿದೆ. ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಆರಂಭವಾಗಿದೆ. ಇಂದು ರಾಹುಲ್ ಗಾಂಧಿ ಅನರ್ಹತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ ವಿಚಾರವಾಗಿ ಇಂದು(ಜು.12) ಕಾಂಗ್ರೆಸ್ ನಾಯಕರಿಂದ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇನ್ನು ಅಧಿವೇಶನ ಆರಂಭವಾಗುತ್ತಿದ್ದಂತೆ ಚಿಕ್ಕೋಡಿಯ ಜೈನಮುನಿ ಕಾಮಕುಮಾರನಂದಿ ಮಹಾರಾಜರ ಹತ್ಯೆ ಮತ್ತು ಮೈಸೂರಿನ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಕೊಲೆ ಪ್ರಕರಣ ಸಾಕಷ್ಟು ಚರ್ಚೆಯಾಗುತ್ತಿದೆ. ವಿಪಕ್ಷ ಬಿಜೆಪಿ ನಾಯಕರು ಜೈನಮುನಿಯವರ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದರು. ಅಲ್ಲದೇ ಪೊಲೀಸರ ತನಿಖೆಯಲ್ಲಿ ನಂಬಿಕೆ ಇಲ್ಲ ಎಂದರು. ಮತ್ತೊಂದೆಡೆ ಜಮ್ಮು ಮತ್ತು ಕಾಶ್ಮೀರ ಗುಡ್ಡ ಕುಸಿದಿದ್ದು, ಹಿಮಾಚಲ ಪ್ರದೇಶ ರಾಜ್ಯದಲ್ಲಿ ಪ್ರವಾಹವಾಗಿದೆ. ಇದರಿಂದ ಪ್ರವಾಸಕ್ಕೆ ತೆರಳಿದ್ದ ಕನ್ನಡಿಗರು ಸಿಲುಕಿದ್ದಾರೆ. ಇದರೊಂದಿಗೆ ಇಂದಿನ ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ……
ಗಿಫ್ಟ್ ಕೂಪನ್ ಬಗ್ಗೆ ಪ್ರಸ್ತಾಪ ಮಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ₹5,000 ಗಿಫ್ಟ್ ಕೊಟ್ಟು, ಈಗ ಗಿಫ್ಟ್ಗಳನ್ನು ಕೊಟ್ಟಿಲ್ಲ ಎನ್ನುತ್ತಾರೆ ಎಂದು ಸದನದಲ್ಲಿ ಗಿಫ್ಟ್ ಕೂಪನ್ ಪ್ರದರ್ಶಿಸಿದರು. ಹೆಚ್ಡಿಕೆ ಆರೋಪಕ್ಕೆ ಕುಣಿಗಲ್ ಶಾಸಕ ಡಾ.ರಂಗನಾಥ್ ಆಕ್ಷೇಪ ವ್ಯಕ್ತಪಡಿಸಿದ್ದು, ನಾನು ನಿಮ್ಮ ಹೆಸರು ಹೇಳಿಲ್ಲ ಎಂದ ಹೆಚ್.ಡಿ.ಕುಮಾರಸ್ವಾಮಿ.
ಶಕ್ತಿ ಯೋಜನೆಗೆ ನಮ್ಮದೇನೂ ತಕರಾರು ಇಲ್ಲ. ಆದರೆ ಇನ್ನೊಬ್ಬರ ಬದುಕಿನ ಬಗ್ಗೆಯೂ ಯೋಚನೆ ಮಾಡಬೇಕು. ಹೆಚ್ಡಿಕೆ ಮಾತಿನ ವೇಳೆ ಮಧ್ಯಪ್ರವೇಶಿಸಿದ ಶಾಸಕ ಆರಗ ಜ್ಞಾನೇಂದ್ರ, ಖಾಸಗಿ ಬಸ್ಗಳಲ್ಲಿನ ಟಿಕೆಟ್ ದರವನ್ನೂ ಸರ್ಕಾರ ಭರಿಸಬೇಕು ಎಂದರು.
ವಿಧಾನಸಭೆಯಲ್ಲಿ ಗ್ಯಾರಂಟಿ ಯೋಜನೆ ಬಗ್ಗೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಪ್ರಸ್ತಾಪ ಮಾಡಿದ್ದು, ಗ್ಯಾರಂಟಿ ಯೋಜನೆಗಳ ಕುರಿತು ಫೋಟೋ ಹಾಕಿಕೊಂಡಿದ್ದೀರಿ. ವಿದ್ಯುತ್ ದರ ಏರಿಕೆ ಮಾಡಿದ್ದಕ್ಕೂ ಫೋಟೋ ಹಾಕಿ. ಎಲ್ಲರಿಗೂ ವಿದ್ಯುತ್ ಉಚಿತವಾಗಿ ಕೊಡ್ತಿದ್ದೇವೆ ಎಂದು ಹೇಳಿದ್ದೀರಿ. ಸಿಎಂ, ಡಿಸಿಎಂ, ಇಂಧನ ಸಚಿವರ ಫೋಟೋ ಸಹ ಹಾಕಿದ್ದೀರಿ. ವಿದ್ಯುತ್ ದರ ಏರಿಕೆ ಆಗಿದೆ, ಅದಕ್ಕೂ ಫೋಟೋ ಹಾಕಿ ಎಂದರು.
ನಾನು ನೋಡಿಲ್ಲ, ಸದನದಲ್ಲಿ ನಾನು ಇರಲಿಲ್ಲ, ನನ್ನ ಗಮನಕ್ಕೆ ಬಂದಿಲ್ಲ. ನೇರವಾಗಿ ನಮ್ಮನ್ನು ಕೇಳಿದರೆ ಉತ್ತರ ನೀಡಬಹುದು ಎಂದು ಕೃಷಿ ಇಲಾಖೆಯ ಸಚಿವ ಚಲುವರಾಯಸ್ವಾಮಿ ಹೇಳಿದರು. ಜನರಲ್ ಆಗಿ ಕೇಳಿದ್ರೂ ಉತ್ತರ ಕೊಡಬಹುದು. ಪರ್ಟಿಕ್ಯುಲರ್ ಆಗಿ ಇಂತಹ ಇಲಾಖೆ ಅಂತಾನೂ ಆರೋಪ ಮಾಡಿಲ್ಲ. ಹೀಗಾಗಿ ನಾನು ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದರು.
ಆರ್.ಆರ್.ನಗರ ಕ್ಷೇತ್ರದಲ್ಲಿ ಅಧಿಕಾರಿಗಳ ಅಮಾನತು ವಿಚಾರವಾಗಿ ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆ ವೇಳೆ ಮುನಿರತ್ನ ಪ್ರಸ್ತಾಪ ಮಾಡಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್‌ರಿಂದಲೇ ಉತ್ತರಕ್ಕೆ ಪಟ್ಟು ಹಿಡಿದರು. ಆರ್.ಆರ್.ನಗರ ಶಾಸಕ ಮುನಿರತ್ನ ಬೆಂಬಲಕ್ಕೆ ಶಾಸಕ ಡಾ.ಅಶ್ವತ್ಥ್ ನಾರಾಯಣ ನಿಂತರು.
ಅನ್ನಭಾಗ್ಯದ ಡಿಬಿಟಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಉಂಟಾಗಿದ್ದು, ಈವರೆಗೆ ಒಟ್ಟು 115,34,74,140 ನಗದು ಜಮಾವಣೆ ಆಗಿದೆ. 2 ದಿನದಲ್ಲಿ 5 ಜಿಲ್ಲೆಗಳಾದ ಮೈಸೂರು, ಕೋಲಾರ, ಬಾಗಲಕೋಟೆ
ಬೆಂಗಳೂರು ನಗರ, ಬೆಂಗಳೂರು ಗ್ರಾ. ಜಿಲ್ಲೆಯ ಫಲಾನುಭವಿಗಳಿಗೆ 20,04,407 ಪಡಿತರದಾರರಿಗೆ ಹಣ ಹಾಕಲಿದೆ.
ರಾತ್ರಿ 9 ಗಂಟೆಯಾದರೂ ಮುಗಿಯದ ಅಧಿವೇಶನ. ಗಮನ ಸೆಳೆಯುವ ಸೂಚನೆ ಮೇಲೆ ಚರ್ಚೆ ನಡೆದಿದ್ದು, ವಿಧಾನಸಭಾ ಕಲಾಪ ನಾಳೆ ಬೆಳಗ್ಗೆ 10:30 ಕ್ಕೆ ಮುಂದೂಡಿಕೆ ಮಾಡಲಾಯಿತು.
ಸಾವರ್ಕರ್ ವಿಚಾರವಾಗಿ ಬಿಜೆಪಿ, ಕಾಂಗ್ರೆಸ್ ಸದಸ್ಯರ ನಡುವೆ ಜಟಾಪಟಿ ಉಂಟಾಗಿದೆ. ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ವೇಳೆ ಸದಸ್ಯರ ನಡುವೆ ವಾಗ್ವಾದ ಮಾಡಿದ್ದಾರೆ. ಶಿವಮೊಗ್ಗ ಕ್ಷೇತ್ರದ ಬಿಜೆಪಿ ಶಾಸಕ ಚನ್ನಬಸಪ್ಪ ಮಾತನಾಡಿದ್ದು, ರಾಜ್ಯಪಾಲರ ಭಾಷಣದಲ್ಲಿ ಶಿಕ್ಷಣ ವ್ಯವಸ್ಥೆ ಬದಲಾಯಿಸಿದ್ದೇವೆ ಅಂದಿದ್ದಾರೆ.
ವಿಜಯಪುರ: ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ ನೇತೃತ್ವದಲ್ಲಿ ಡಿಸಿ ಕಚೇರಿ ಎದುರು ಒಂದು ದಿನದ ಸಾಂಕೇತಿಕ ಪ್ರತಿಭಟನೆ ಮಾಡಿದ್ದು, ಘೋಷಣೆಗಳನ್ನು ಕೂಗದೆ ಭಿತ್ತಿಪತ್ರ ಪ್ರದರ್ಶಿಸಿ ಹೋರಾಟ ಮಾಡಲಾಯಿತು.
ವಿಧಾನಸಭೆ: ಮೊದಲ ಬಾರಿ ಶಾಸಕರಾದರೂ ಬಿ.ವೈ ವಿಜಯೇಂದ್ರ ಅವರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಂತೆ ಛಾತಿಯಿಂದ ಮಾತಾಡುತ್ತಿದ್ದಾರೆ. ಎರಡನೇ ಸೀಟು ಖಾಲಿ ಇದೆ, ಅವರನ್ನು ಅಲ್ಲಿ ಕೂರಿಸಿಬಿಡಿ. ನಮ್ಮದೇನೂ ಅಭ್ಯಂತರ ಇಲ್ಲ ಎಂದು ಆಡಳಿತ ಪಕ್ಷದ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಹೇಳಿದರು.
ಮೇಕೆದಾಟು ಸೇರಿ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸುವಂತೆ ವಿಧಾನಸಭೆಯಲ್ಲಿ ಹೊಳೆನರಸೀಪುರ JDS ಶಾಸಕ H.D.ರೇವಣ್ಣ ಪಟ್ಟು ಹಿಡಿದರು. ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಹಿನ್ನೆಲೆ ಅವಕಾಶ ನಿರಾಕರಿಸಲಾಯಿತು. ಅವಕಾಶಕ್ಕೆ ಒತ್ತಾಯಿಸಿ ಶಾಸಕ H.D.ರೇವಣ್ಣ ಸದನದ ಬಾವಿಗೆ ಇಳಿದರು.
5 ವರ್ಷ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ಇರಲಿದೆ ಎಂದು ಸದನದಲ್ಲಿ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು. ಈ ವೇಳೆ ಬಸವರಾಜ ರಾಯರೆಡ್ಡಿ ಕಾಲೆಳೆದ ವಿಪಕ್ಷ ಬಿಜೆಪಿ ಸದಸ್ಯರು ಡಿಸಿಎಂ ಡಿ.ಕೆ.ಶಿವಕುಮಾರ್ ಸಿಎಂ ಆಗಲ್ವಾ ಎಂದು ಕಾಲೆಳೆದರು. ಡಿಕೆ ಬಗ್ಗೆ ಪಕ್ಷ ತೀರ್ಮಾನ ಮಾಡಿದ್ರೆ ನನ್ನ ಅಭ್ಯಂತರವಿಲ್ಲ ಎಂದು ಬಸವರಾಜ ರಾಯರೆಡ್ಡಿ ಹೇಳಿದರು.
ಈ ಹಿಂದೆ ಡಿಕೆ ಇಂಧನ ಸಚಿವರಾಗಿದ್ದಾಗ ದುಬಾರಿ ದರಕ್ಕೆ ಸೋಲಾರ್ ವಿದ್ಯುತ್ ಖರೀದಿ ಕುರಿತು ಆರೋಪ ಮಾಡಲಾಗಿದೆ. ಒಂದು ಯೂನಿಟ್ಗೆ 9.60 ರೂ. ನಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ. 25 ವರ್ಷಕ್ಕೆ ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮಾಜಿ ಸಿಎಂ H.D.ಕುಮಾರಸ್ವಾಮಿ ಹೇಳಿದರು.
ಸ್ಪೀಕರ್ಗೆ ವರ್ಗಾವಣೆ ದಂಧೆ ಲಿಸ್ಟ್ ಕಳುಹಿಸುತ್ತೇನೆ ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ನಮಗೂ ಆ ಲಿಸ್ಟ್ ಕೊಡಿ ಎಂದು ಬಿಜೆಪಿ ಶಾಸಕ ಯತ್ನಾಳ್ ಹೇಳಿದರು. ಬೆಂಗಳೂರು ಸ್ಟಾಕ್ ಎಕ್ಸ್ಚೇಂಜ್ ರೇಟ್ ಎಷ್ಟಿದೆ ನೋಡಬೇಕು. ಆಯ್ತು ಕಳುಹಿಸಿ ಕೊಡುತ್ತೇನೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.
ನಮ್ಮ ಕುಟುಂಬದಲ್ಲಿ ಇವೆಲ್ಲಾ ನೋಡಿದ್ದೇವೆ. ನನಗೆ ಅಧಿಕಾರ ಕೊಟ್ಟಿರೋದು ದೇವರು, ಶಾಸಕರಿಂದ ಸಿಎಂ ಆಗಿದ್ನಾ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿದರು. ನಮ್ಮ ಹಣೆಯಲ್ಲಿ ಏನು ಬರೆದಿರುತ್ತೋ ಹಾಗೇ ಆಗೋದು. ಇಲಾಖಾವಾರು ವರ್ಗಾವಣೆಗೆ ಹಣ ನಿಗದಿ ಮಾಡಿದ ಬಗ್ಗೆ ವರದಿ ಪತ್ರ ತೋರಿಸಿ ಸರಿಪಡಿಸಿಕೊಳ್ಳಿ ಎಂದಷ್ಟೇ ಹೇಳಿ ಚರ್ಚೆ ಮುಗಿಸಿದರು.
ಸದನದಲ್ಲಿ ಮಾತನಾಡಲು ಅವಕಾಶ ಸಿಗುತ್ತಿಲ್ಲ ಎಂದು ಹಾಸನ ಜಿಲ್ಲೆ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿಟ್ಟಿಗೆದ್ದು ಹಳೇ ಶಾಸಕರು ಸದನಕ್ಕೆ ಬರುವುದೇ ಬೇಡ ಎಂದು ನಿಯಮ ಮಾಡಿ ಎಂದು ಅರಸೀಕೆರೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಹೇಳಿದರು.
ಪ್ರಿಯಾಂಕ್ ಖರ್ಗೆ ಬಹಳ ನೈತಿಕ ಹಾಗೂ ಬಹಳ ಪ್ರಾಮಾಣಿಕ ವ್ಯಕ್ತಿ ಎಂದು ಸದನದಲ್ಲಿ ಪ್ರಿಯಾಂಕ್ ಖರ್ಗೆ ಬಗ್ಗೆ ಅಶ್ವತ್ಥ್ ನಾರಾಯಣ ಲೇವಡಿ ಮಾಡಿದ್ದಾರೆ. ಈ ವೇಳೆ ಅಶ್ವತ್ಥ್ ನಾರಾಯಣಗೆ ಟಾಂಗ್ ಕೊಟ್ಟ ಪ್ರಿಯಾಂಕ್ ಖರ್ಗೆ, ಮೈಸೂರು ಸಂಸದರು ವಿಸಿ ನೇಮಕಕ್ಕೆ ಹಣ ಕೊಟ್ಟು ಬರ್ತಾರೆ ಎಂದರು. ಹಿಂದಿನ ಸರ್ಕಾರದಲ್ಲಿ ಭ್ರಷ್ಟಾಚಾರ ಬಗ್ಗೆ ಅವರ ಸಂಸದರೇ ಹೇಳಿದ್ದಾರೆ ಎಂದು ಹೇಳಿದರು.
ನಮ್ಮ ಪಕ್ಷ ಅವಕಾಶ ಕೊಟ್ಟರೆ ಖಂಡಿತ ಈ ಹಾವೇರಿಯಿಂದ ಸ್ಪರ್ದಿಸುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಪುತ್ರ ಕಾಂತೇಶ್ ಹೇಳಿದರು. ಈ ಜಿಲ್ಲೆಯಲ್ಲಿ ನಾನು ಮತ್ತು ನನ್ನ ತಂದೆಯವರು ಪಕ್ಷದ ಸಂಘಟನೆ ಮಾಡಿದ್ದೇವೆ. ಅನೇಕರ ಅಪೆಕ್ಷೆಯೂ ಕೂಡ ಇದೆ ಎಂದಿದ್ದಾರೆ.
ಸದ್ಯ ಬೆಲೆ ಏರಿಕೆಯ ಪರಿಸ್ಥಿತಿ ನೋಡಿದರೆ ನಮಗೆ ಎರಡನೇ ಕೊರೊನಾದ ಅನುಭವಾಗುತ್ತಿದೆ ಎಂದು ಕೋಲಾರದಲ್ಲಿ ಸಹನಾ ದರ್ಶಿನಿ ಹೋಟೆಲ್ ಮಾಲೀಕ ನವೀನ್ ಶೆಟ್ಟಿಯವರ ಹೇಳಿದ್ದಾರೆ. ಇತ್ತೀಚೆಗೆ ತರಕಾರಿಯಷ್ಟೇ ಅಲ್ಲಾ ಬೇಳೆ ಕಾಳುಗಳು, ಅಡುಗೆ ಎಣ್ಣೆ ಅಲ್ಲಾ ಬೆಲೆ ಏರಿಕೆಯಾಗಿದೆ. ಸರ್ಕಾರ ಎಲ್ಲಾ ಉಚಿತ ಮಾಡಿರೋದರಿಂದ ನಮಗೆ ಲೇಬರ್ ಸಮಸ್ಯೆ ಹೆಚ್ಚಾಗಿದೆ, ಗ್ರಾಹಕರು ಬರುತ್ತಿಲ್ಲ. ಇನ್ನು ಟೊಮೆಟೊ ಬೆಲೆ ಏರಿಕೆಯಿಂದ ಸಾಕಷ್ಟು ನಷ್ಟವಾಗುತ್ತಿದೆ ಎಂದಿದ್ದಾರೆ.
ಸರ್ಕಾರ ನಡೆಸುವ ಕಷ್ಟ ನಮಗೂ ಗೊತ್ತಿದೆ ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರವೋ, ಲಾಟರಿ ಸಿಎಂ ಆಗೋ ಸರ್ಕಾರ ಮಾಡಿದ್ದೇವೆ. ಅಡ್ಜಸ್ಟ್‌ಮೆಂಟ್ ಮಾಡ್ಕೋಬೇಕಾದರೆ ಓಪನ್ ಆಗಿಯೇ ಮಾಡಿದ್ದೇವೆ. ಆದರೆ ಕದ್ದುಮುಚ್ಚಿ ಅಡ್ಜಸ್ಟ್‌ಮೆಂಟ್ ಮಾಡಿಕೊಂಡಿಲ್ಲ ಎಂದಿದ್ದಾರೆ.
ಬೆಂಗಳೂರು: ಬಿಜೆಪಿ ಕುತಂತ್ರದಿಂದ ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ವಜಾ ಆಗಿದ್ದಾರೆ ಎಂದು ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಆರೋಪಿಸಿದ್ದಾರೆ. 9 ವರ್ಷದಿಂದ ನೆಹರು ಕುಟುಂಬ ಮೇಲೆ ಗದಾಪ್ರಹಾರ ಮಾಡ್ತಿದ್ದಾರೆ ಎಂದರು.
ಬೆಂಗಳೂರು: ವಿಧಾನಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಸ್ತಾಪ ಮಾಡಿದ ಹೆಚ್.ಡಿ.ಕುಮಾರಸ್ವಾಮಿಯವರು ‘ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿಗೆ ಕೊರತೆ ಇದೆ. ಸಮಸ್ಯೆ ಬಗೆಹರಿಯುವವರೆಗೆ ಬೇಳೆ, ಎಣ್ಣೆ, ಬೆಲ್ಲ ವಿತರಿಸಬಹುದು ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದರು.
ಹಾವೇರಿ: ಜಿಲ್ಲೆಯಲ್ಲಿ ಮಳೆಯಾಗದ ಹಿನ್ನಲೆ ಬರಗಾಲ ಆವರಿಸುವ ಮುನ್ಸೂಚನೆ ಹಿನ್ನಲೆ ಖಾಸಗಿಯಾಗಿ ಮೋಡ ಬಿತ್ತನೆ ಮಾಡಿಸಲು ಶಾಸಕ ಪ್ರಕಾಶ್ ಕೋಳಿವಾಡ ನಿರ್ಧಾರ ಮಾಡಿದ್ದಾರೆ. ಇನ್ನು ಈಗಾಗಲೇ ಮಳೆಯ ಕೊರತೆ ತೀವ್ರವಾಗಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಶಾಸಕರ ಮೋಡ ಬಿತ್ತನೆ ನಿರ್ಧಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಇದೀಗ ಕೇಂದ್ರ ಸರ್ಕಾರದಿಂದ ಅನುಮತಿ ಮಾತ್ರ ಬಾಕಿಯಿದ್ದು, ಜುಲೈ ಅಂತ್ಯದ ವೇಳೆಗೂ ಮಳೆ ಕೊರತೆ ಕಾಣಿಸಿಕೊಂಡರೆ ಮೋಡ ಬಿತ್ತನೆ ಮಾಡಲಾಗುತ್ತದೆ ಎಂದರು.
ಬೆಂಗಳೂರು: ವಿಧಾನಸಭೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ ‘5 ಗ್ಯಾರಂಟಿ ಮೇಲೆ ಕಾಂಗ್ರೆಸ್ ಗೆದ್ದಿದೆಯೆಂದು ವಿಶ್ಲೇಷಣೆ ಮಾಡ್ತಾರೆ, ಆದರೆ, ಅದಕ್ಕೆ ನಾನು ಮಹತ್ವ ಕೊಡಲ್ಲ. ಯಾವ ನಿರೀಕ್ಷೆ ಇಟ್ಟುಕೊಂಡು ಜನ ಮತ ಕೊಟ್ಟಿದ್ದಾರೆ ಗೊತ್ತಾಗುತ್ತೆ ಎಂದರು.
ಬೆಂಗಳೂರು: ಫ್ರೀಡಂಪಾರ್ಕ್ನಲ್ಲಿ ಕಾಂಗ್ರೆಸ್ ನಾಯಕರಿಂದ ಮೌನ ಪ್ರತಿಭಟನೆ ಹಿನ್ನಲೆ ರಾಜಭವನದ ಬಳಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಸಂವಿಧಾನ, ಕಾನೂನಿಗೂ ಸಂಬಂಧವಿಲ್ಲ ಎಂಬ ರೀತಿ ವರ್ತಿಸುತ್ತಿದ್ದು, ಕೋರ್ಟ್ ಆದೇಶದ ವಿರುದ್ಧ ಕಾಂಗ್ರೆಸ್ಸಿಗರು ಪ್ರತಿಭಟನೆ ಮಾಡುತ್ತಿದ್ದಾರೆ. ಅವರೆಲ್ಲರೂ ಒಂದು ಕುಟುಂಬದ ಸಲುವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಬೊಮ್ಮಾಯಿ ಕಿಡಿ ಕಾರಿದರು.
ಶಿವಮೊಗ್ಗ: ಜೈನಮುನಿಗಳ ಹತ್ಯೆ ಖಂಡಿಸಿ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಜೈನ್ ಸಮುದಾಯ, ಹಿಂದೂಪರ ಸಂಘಟನೆಗಳಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಪ್ರತಿಭಟನೆಯಲ್ಲಿ ಈಶ್ವರಪ್ಪ, ಜೈನ ಸಮಾಜದ ಮುಖಂಡರು ಭಾಗಿಯಾಗಿದ್ದಾರೆ. ಜೈನಮುನಿಗಳಿಗೆ ರಾಜ್ಯ ಸರ್ಕಾರ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಫ್ರೀಡಂ ಪಾರ್ಕ್ ಬಳಿ ಮೌನ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ ಅಧಿಕಾರಿಗಳು ಕಡತಗಳನ್ನ ಫ್ರೀಡಂ ಪಾರ್ಕ್ಗೆ ತೆಗೆದುಕೊಂಡು ಬಂದಿದ್ದಾರೆ. ಈ ವೇಳೆ ಅಧಿಕಾರಿಗಳು ತಂದಿದ್ದ ಕಡತಗಳಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಸಹಿ ಹಾಕಿದ್ದಾರೆ. ಸಹಿ ಹಾಕಿದ ಬಳಿಕ ಕಡತಗಳನ್ನ ಅಧಿಕಾರಿಗಳು ಹೊತ್ತೊಯ್ದಿದ್ದಾರೆ.
ಬೆಂಗಳೂರು: ರಾಜ್ಯಪಾಲರ ಭೇಟಿ ಬಳಿಕ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ ‘ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಜನಸಾಮಾನ್ಯರ ಕೊಲೆಗಳಾಗುತ್ತಿದೆ. ಕೊಲೆಗಡುಕರಿಗೆ ಯಾರ ಭಯವೂ ಇಲ್ಲ. ಆಡಳಿತ ವ್ಯವಸ್ಥೆ ಬದಲಾಗಿದೆ. ಆಡಳಿತ ಪಕ್ಷದಿಂದ ರಕ್ಷಣೆ ಸಿಗುತ್ತದೆ ಎಂಬ ಧೈರ್ಯ ಕೊಲೆಗಡುಕರಿಗೆ ಬಂದಿದೆ. ಸರ್ಕಾರಕ್ಕೆ ಸೂಕ್ತ ಎಚ್ಚರಿಕೆ ಕೊಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ ಎಂದರು.
ಬೆಂಗಳೂರು: ರಾಹುಲ್ ಗಾಂಧಿ ಅನರ್ಹತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ ವಿಚಾರವಾಗಿ ಬೆಂಗಳೂರಿನಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಿಂದ ಮೌನ ಪ್ರತಿಭಟನೆ ನಡೆಯುತ್ತಿದೆ. ಇದೀಗ ಪ್ರತಿಭಟನೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಆಗಮಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವ ಆರೋಪ ವಿಚಾರವಾಗಿ ಇಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಸರ್ಕಾರದ ವಿರುದ್ದ ವಿಧಾನಸೌಧ ಆವರಣದ ಗಾಂಧಿ ಪ್ರತಿಮೆ ಎದುರು ವಿಪಕ್ಷ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ. ಬಿಜೆಪಿ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆ ಕೂಗುತ್ತಿದ್ದಾರೆ.
ಬೆಂಗಳೂರು: ರಾಹುಲ್ ಗಾಂಧಿ ಅನರ್ಹತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ ವಿಚಾರವಾಗಿ BJP ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಇಂದು ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಕಾಂಗ್ರೆಸ್ ಮೌನ ಪ್ರತಿಭಟನೆ ನಡೆಸುತ್ತಿದೆ. ಈಗಾಗಲೇ ನಡೆಸುತ್ತಿರುವ ಕಾಂಗ್ರೆಸ್ ನಾಯಕರು ಆಗಮಿಸುತ್ತಿದ್ದು, ಸಚಿವರುಗಳಾದ ಪ್ರಿಯಾಂಕ ಖರ್ಗೆ, ಸತೀಶ್ ಜಾರಕಿಹೊಳಿ, ಶರಣ ಬಸಪ್ಪ, ಸಂತೋಷ್ ಲಾಡ್, ಶಾಸಕರಾದ ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ತುಕಾರಾಂ, ಮಹಂತೇಶ್, ಯುಬಿ ಬಣಕಾರ್, ಬಸವರಾಜ್ ದದ್ದಲ್, ಭೀಮ್ ಸೇನ್ ಸೇರಿದಂತೆ ಹಲವರು ಬಾಯಿಗೆ ಕಪ್ಪು ಪಟ್ಟಿ ಧರಿಸಿಕೊಂಡು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ.
ಬೆಂಗಳೂರು: ರಾಜ್ಯ ಸರ್ಕಾರದಿಂದ ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರ ಕುರಿತಂತೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಬಿಜೆಪಿ ಶಾಸಕರು, ಪರಿಷತ್ ಸದಸ್ಯರು ಸಭೆ ನಡೆಸುತ್ತಿದ್ದಾರೆ. ಸದನದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿಚಾರ ಪ್ರಸ್ತಾಪಿಸುವ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.
ರಾಮನಗರ: ಕೆಎಸ್ಆರ್ಟಿಸಿ ಬಸ್ಗೆ ಬೈಕ್ ಡಿಕ್ಕಿಯಾಗಿ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಜೋಡಗಟ್ಟೆ ಗ್ರಾಮದ ಬಳಿ ನಡೆದಿದೆ. ಮತ್ತೋರ್ವನಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಈ ವಿದ್ಯಾರ್ಥಿಗಳು ಹಾರೋಹಳ್ಳಿಯಿಂದ ಐಟಿಐ ಪರೀಕ್ಷೆ ಬರೆಯಲು ಮಾಗಡಿಗೆ ಹೋಗುತ್ತಿದ್ದರು ಎನ್ನಲಾಗಿದೆ. ರಸ್ತೆ ತಿರುವಿನಲ್ಲಿ ಈ ಅವಘಡ ನಡೆದಿದೆ. ಈ ಕುರಿತು ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಪ್ಪಳ: ರಸ್ತೆ ತಡೆದು ಪ್ರತಿಭಟನೆ ನಡೆಸಿದ ಆರೋಪದ ಮೇಲೆ ಗಂಗಾವತಿ ಪೊಲೀಸ್ ಠಾಣೆಯಲ್ಲಿ 20 ಜನರ ವಿರುದ್ಧ FIR ದಾಖಲಾಗಿದೆ. ನಿನ್ನೆ(ಜು.11) ಸದನದಲ್ಲಿ ಆನೆಗುಂದಿ ಭಾಗವನ್ನು ಡ್ರಗ್ಸ್ ಸೆಂಟರ್ ಎಂದಿದ್ದ ರಾಯರೆಡ್ಡಿ ಹೇಳಿಕೆ ಖಂಡಿಸಿ ಹಲವರು ಪ್ರತಿಭಟನೆ ನಡೆಸಿದ್ದರು. ಯಾವುದೇ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ ಹಿನ್ನೆಲೆ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಬೆಂಗಳೂರು: ಒಂದು ಕಡೆ ರಾಹುಲ್ ಗಾಂಧಿ ಅನರ್ಹತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ ವಿಚಾರವಾಗಿ ಇಂದು(ಜು.12) ಕಾಂಗ್ರೆಸ್ ನಾಯಕರಿಂದ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇನ್ನೊಂದು ಕಡೆ ರಾಜ್ಯದಲ್ಲಿ ಆಗುತ್ತಿರುವ ಹತ್ಯೆ ಪ್ರಕರಣಗಳ ಖಂಡಿಸಿ ಇಂದು ಬಿಜೆಪಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಿದ್ದಾರೆ.
ಬೆಂಗಳೂರು: ರಾಹುಲ್ ಗಾಂಧಿ ಅನರ್ಹತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ ವಿಚಾರವಾಗಿ ಇಂದು(ಜು.12) ಕಾಂಗ್ರೆಸ್ ನಾಯಕರಿಂದ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇನ್ನು ಈ ಪ್ರತಿಭಟನೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ನಡೆಯಲಿದೆ. ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಸಚಿವರು, ಶಾಸಕರು, ಕೆಪಿಸಿಸಿ ಕಾರ್ಯಾಧ್ಯಕ್ಷರು, ಮುಖಂಡರು ಭಾಗಿಯಾಗಲಿದ್ದಾರೆ.
Published On - 8:06 am, Wed, 12 July 23