Bengaluru News Live Updates: ಕರ್ನಾಟಕದಲ್ಲಿ 16ನೇ ವಿಧಾನಸಭೆಯ ಮೊದಲ ಅಧಿವೇಶನ (Legislature Session) ಆರಂಭವಾಗಿದೆ. ರಾಜ್ಯಪಾರ ಭಾಷಣದ ಮೇಲೆ ಚರ್ಚೆ ಆರಂಭವಾಗಿದೆ. ನಿನ್ನೆ (ಜು.10) ಅಧಿವೇಶನ ಆರಂಭವಾಗುತ್ತಿದ್ದಂತೆ ಚಿಕ್ಕೋಡಿಯ ಜೈನಮುನಿ ಕಾಮಕುಮಾರನಂದಿ ಮಹಾರಾಜರ ಹತ್ಯೆ ಮತ್ತು ಮೈಸೂರಿನ ಯುವಾ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಕೊಲೆ ಪ್ರಕರಣ ಸಾಕಷ್ಟು ಚರ್ಚೆಯಾಯಿತು. ವಿಪಕ್ಷ ಬಿಜೆಪಿ ನಾಯಕರು ಜೈನಮುನಿಯವರ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿದರು. ಅಲ್ಲದೇ ಪೊಲೀಸರ ತನಿಖೆಯಲ್ಲಿ ನಂಬಿಕೆ ಇಲ್ಲ ಎಂದರು. ಮತ್ತೊಂದಡೆ ಜಮ್ಮು ಮತ್ತು ಕಾಶ್ಮೀರ ಗುಡ್ಡ ಕುಸಿದಿದ್ದು, ಹಿಮಾಚಲ ಪ್ರದೇಶ ರಾಜ್ಯದಲ್ಲಿ ಪ್ರವಾಹವಾಗಿದೆ. ಇದರಿಂದ ಪ್ರವಾಸಕ್ಕೆ ತೆರಳಿದ್ದ ಕನ್ನಡಿಗರು ಸಿಲುಕಿದ್ದಾರೆ. ಇದರೊಂದಿಗೆ ಇಂದಿನ ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ…
ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್ಗೆ ಮುಂದುವರಿದ ಚಿಕಿತ್ಸೆ ಮುಂದುವರಿದಿದೆ. ಈ ಬಗ್ಗೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ ಬೆಂಗಳೂರಿನ ನಾರಾಯಣ ಹೃದಯಾಲಯ, ಡಾ.ದೇವಿಪ್ರಸಾದ್ ಶೆಟ್ಟಿ ಮಾರ್ಗದರ್ಶನದಲ್ಲಿ ವೈದ್ಯರ ತಂಡ ಕಸ್ತೂರಿ ರಂಗನ್ಗೆ ಸ್ಟಂಟ್ ಅಳವಡಿಕೆ ಮಾಡಿದ್ದು, ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಮುಂದಿನ ವಾರ ಆಸ್ಪತ್ರೆಯಿಂದ ಕಸ್ತೂರಿ ರಂಗನ್ ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದೆ. ನಿನ್ನೆ ಕೊಲಂಬೋದಲ್ಲಿ ಕಸ್ತೂರಿ ರಂಗನ್ಗೆ ಲಘು ಹೃದಯಾಘಾತವಾಗಿತ್ತು.
ರಸ್ತೆಯಲ್ಲಿ ತಲ್ವಾರ್ ಹಿಡಿದು ರೌಡಿಶೀಟರ್ ಸಮೀರ್ ಗಲಾಟೆ ಮಾಡಿದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ ಬಸ್ ನಿಲ್ದಾಣದ ಬಳಿ ನಡೆಇದೆ. ಕುಡಿದ ಮತ್ತಿನಲ್ಲಿ ಜೀವಿತ್ ಮತ್ತು ಅಫ್ರಜ್ ಎಂಬುವರ ಮೇಲೆ ಹಲ್ಲೆ ನಡೆಸಿದ ನಂತರ ಸಮೀರ್ ಪರಾರಿಯಾಗಿದ್ದಾನೆ. ಪ್ರಕರಣ ಸಂಬಧ ಪೊಲೀಸರು ಆರೋಪಿಯ ಬಂಧನಕ್ಕೆ ಶೋಧಕಾರ್ಯ ಆರಂಭಿಸಿದ್ದಾರೆ.
ಬೆಳಗಾವಿ: ಜೈನಮುನಿ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್, ಪೊಲೀಸ್ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ಕಸ್ಟಡಿಗೆ ಪಡೆದಿದ್ದಾರೆ. ತನಿಖೆಯಲ್ಲಿ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲಿದೆ. ಪ್ರಮುಖ ಅಂಶಗಳ ಕುರಿತು ತನಿಖಾ ತಂಡದ ಜತೆ ಚರ್ಚೆ ಮಾಡಿದ್ದೇನೆ. ಪ್ರಕರಣದ ಮೇಲ್ವಿಚಾರಣೆಯನ್ನ ಉತ್ತರ ವಲಯ ಐಜಿಪಿಗೆ ವಹಿಸಬೇಕು. ಈ ಕುರಿತು ಸರ್ಕಾರಕ್ಕೆ ಒಂದು ವಾರದೊಳಗೆ ವರದಿ ಸಲ್ಲಿಸಲಾಗುವುದು. ಐಜಿಪಿ ಮೇಲ್ವಿಚಾರಣೆಯಲ್ಲಿ 6 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಬೇಕು. ಪ್ರತ್ಯಕ್ಷ, ಪರೋಕ್ಷವಾಗಿ ಕೃತ್ಯಕ್ಕೆ ಸಹಕರಿಸಿದವರನ್ನು ಬಂಧಿಸಬೇಕು. ಯಾವುದೇ ಸಂಸ್ಥೆ ತನಿಖೆ ಮಾಡಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದರು.
ಸ್ಪೀಕರ್ ಯುಟಿ ಖಾದರ್ ಅವರು ವಿಧಾನಸಭೆ ಕಲಾಪವನ್ನು ನಾಳೆ ಬೆಳಗ್ಗೆ 10.30ಕ್ಕೆ ಮುಂದೂಡಿಕೆ ಮಾಡಿದ್ದಾರೆ.
ವಿಧಾನಸಭೆ: ಜೈನಮುನಿ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣದ ತನಿಖೆ ಪ್ರಾರಂಭವಾಗಿದೆ, ಅದಕ್ಕಾಗಿ ಕೆಲವು ವಿಷಯ ಹೇಳಲು ಬರಲ್ಲ ಎಂದು ಸದಬದಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ನಿಮಗೆ ವಿಶ್ವಾಸ ಇಲ್ಲದೆ ಇರಬಹುದು, ಆದರೆ ನಮಗೆ ವಿಶ್ವಾಸ ಇದೆ. ಜೈನಮುನಿ ಹತ್ಯೆ ಪೂರ್ವ ನಿಯೋಜಿತ ಎಂದಿದ್ದೀರಿ, ಇರಬಹುದು. ತನಿಖೆ ಆದಮೇಲೆ ತಾನೇ ಗೊತ್ತಾಗೋದು ಎಂದರು. ತನಿಖೆ ಮಾಡಿದರೆ ಸತ್ಯ ಹೊರಗೆ ಬರುವುದು ಎಂದು ಬೊಮ್ಮಾಯಿ ಹೇಳಿದಾಗ, ಇಂತಹ ಕೊಲೆ ಉತ್ತರ ಭಾರತದಲ್ಲಿ ನಡೆದ ಉದಾಹರಣೆ ಇಲ್ಲವೇ? ಎಂದು ಪರಮೇಶ್ವರ್ ಪ್ರಶ್ನಿಸಿದರು. ಇದಕ್ಕೆ ಪ್ರತಿಯಾಗಿ ಬೊಮ್ಮಾಯಿ, ಇದನ್ನು ಅದಕ್ಕೆ ಹೋಲಿಕೆ ಮಾಡಿ ಹೇಳುತ್ತೀರಾ? ಆ ರೀತಿ, ಈ ರೀತಿ ಅನ್ನೋದು ಅಲ್ಲ, ಪ್ರತಿಷ್ಠೆ ಬಿಡಿ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ಇದರಲ್ಲಿ ಯಾವುದೇ ರೀತಿಯ ಪ್ರತಿಷ್ಠೆ ಇಲ್ಲ, ತನಿಖೆ ಮಾಡುತ್ತಿದ್ದೇವೆ. ಪೊಲೀಸರು ಸಮರ್ಥವಾಗಿದ್ದಾರೆ, ಸಿಬಿಐಗೆ ಕೊಡುವ ಅವಶ್ಯಕತೆ ಇಲ್ಲ ಎಂದರು.
ವಿಧಾನಸಭೆ: ಜೈನಮುನಿ ಹತ್ಯೆ ಕೇಸ್ ತನಿಖೆ ಸಿಬಿಐಗೆ ವಹಿಸುವಂತೆ ಬಿಜೆಪಿ ಧರಣಿ ನಡೆಸುತ್ತಿರುವ ನಡುವೆ ಸಿಎಜಿ ವರದಿ ಮಂಡನೆ ಮಾಡಲಾಗಿದೆ.
ವಿಧಾನಸಭೆ: ಜೈನಮುನಿ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣ ಸಂಬಂಧ ರಾಜ್ಯ ಸರ್ಕಾರದ ಉತ್ತರಕ್ಕೆ ತೃಪ್ತರಾಗದ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಸಾಮಾನ್ಯ ಕೊಲೆ ಎಂಬಂತೆ ಭಾವಿಸಿದ್ದೀರಿ ಎಂದು ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಸ್ಥಳೀಯ ಪೊಲೀಸರು ಸಾಮಾನ್ಯ ಪ್ರಕರಣದಂತೆ ತನಿಖೆ ನಡೆಸುತ್ತಾರೆ. ಹಾಗಾಗಿ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಬೊಮ್ಮಾಯಿ ಆಗ್ರಹಿಸಿದರು. ಈ ವೇಳೆ ಬಿಜೆಪಿ, ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ನಡೆದಿದೆ. ಪರಿಣಾಮ ಸ್ಪೀಕರ್ ಖಾದರ್ ಅವರು ಕೆಲಕಾಲ ಕಲಾಪ ಮುಂದೂಡಿದರು.
ವಿಧಾನಸಭೆ: ಜೈನಮುನಿ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣ ಸಂಬಂಧ ಸದನದಲ್ಲಿ ಮಾತನಾಡಿದ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ, ಪೊಲೀಸರ ಸಾಮರ್ಥ್ಯದ ಬಗ್ಗೆ ನಮಗೆ ಯಾವುದೇ ಆಕ್ಷೇಪ ಇಲ್ಲ. ಆದರೆ ಕೆಲವೊಮ್ಮೆ ಬೇರೆ ಒತ್ತಡ ಬಂದಾಗ ಏನೂ ಮಾಡಲು ಆಗುವುದಿಲ್ಲ ಎಂದರು. ಈ ವೇಳೆ ಆಕ್ಷೇಪ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ, ಆರಗ ಜ್ಞಾನೇಂದ್ರ ಗೃಹಸಚಿವರಾಗಿ ಕೆಲಸ ಮಾಡಿದವರು. ಒತ್ತಡಕ್ಕೆ ಏನೋ ನಡೆದು ಬಿಡುತ್ತದೆ ಅನ್ನೋದು ಏನು? ಆ ರೀತಿ ನಿಮ್ಮ ಕಾಲದಲ್ಲಿ ಇತ್ತೇನ್ರಿ ಎಂದು ಪ್ರಶ್ನಿಸಿದರು.
ಜೈನಮುನಿ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣ ಸಂಬಂಧ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲು ಅವರಿಗೆ ಮುಜುಗರ ಉಂಟಾಗಿದೆ. ಪೊಲೀಸರ ಮೇಲೆ ಸಂಶಯ ವ್ಯಕ್ತಪಡಿಸಿದ ಬಿಜೆಪಿಗರು ಸತ್ಯಶೋಧನೆಗೆ ಹಿರೇಕೋಡಿ ನಂದಿಪರ್ವತ ಆಶ್ರಮಕ್ಕೆ ಬಂದಿದ್ದರು. ಈ ವೇಳೆ ಜೈನಮುನಿಗಳ ಪೂರ್ವಾಶ್ರಮದ ಅಣ್ಣನ ಮಗ hಆಗೂ ಕಾಮಕುಮಾರನಂದಿ ಮಹಾರಾಜರ ಚಾರಿಟಬಲ್ ಟ್ರಸ್ಟ್ ಕಮಿಟಿ ಅಧ್ಯಕ್ಷ ಭೀಮಪ್ಪ ಉಗಾರೆ ಅವರು ಘಟನೆ ನಡೆದ 4 ಗಂಟೆಯಲ್ಲೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಪೊಲೀಸರಿಗೆ ಧನ್ಯವಾದಗಳು ಎಂದು ಕಟೀಲ್ ಬಳಿ ಹೇಳಿದ್ದಾರೆ. ಅಲ್ಲದೆ, ಪಾರದರ್ಶಕ ತನಿಖೆಯಾಗಿ ಆರೋಪಿಗಳಿಗೆ ಶಿಕ್ಷೆಯಾಗಲಿ ಎಂದಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ ಪೆನ್ಡ್ರೈವ್ನಲ್ಲಿ ಏನೂ ಇಲ್ಲ ಎಂದು ಬೆಂಗಳೂರು ನಗರದ ಆನೇಕಲ್ ತಾಲೂಕಿನ ಇಂಡ್ಲವಾಡಿ ಗ್ರಾಮದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಅವರು ಖಾಲಿ ಪೆನ್ಡ್ರೈವ್ ತೋರಿಸಿ ಯಾಮಾರಿಸುತ್ತಿದ್ದಾರೆ. ಪೆನ್ಡ್ರೈವ್ ತೆಗೆದು ತೋರಿಸಿ ಮತ್ತೆ ಜೇಬಿಗೆ ಹಾಕಿಕೊಳ್ಳುತ್ತಾರೆ. ಒಂದು ವಾರದಿಂದ ಹೆಚ್.ಡಿ.ಕುಮಾರಸ್ವಾಮಿ ಇದನ್ನೇ ಮಾಡುತ್ತಿದ್ದಾರೆ. ಪೆನ್ಡ್ರೈವ್ನಲ್ಲಿ ಏನಾದರೂ ಇದ್ದರೆ ಇಷ್ಟೊತ್ತಿಗೆ ತೋರಿಸುತ್ತಿದ್ದರು ಎಂದರು.
ವಿಧಾನಸಭೆ: ಶೂನ್ಯವೇಳೆ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಸಿಟ್ಟಿಗೆದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನನ್ನ ಉಚ್ಛಾಟನೆ ಮಾಡುತ್ತೇನೆ ಅಂತಾ ಹೇಳೋಕೆ ಇವರು ಯಾರು? ನಮ್ಮ ಪಕ್ಷದವರಲ್ಲ. ನಾನೇನು ಅವರ ಪಕ್ಷದಲ್ಲಿದ್ದೀನಾ? ಎಂದರು. ಗದ್ದಲದ ಮಧ್ಯೆ ಬೊಮ್ಮಾಯಿಯವರನ್ನು ಪದೇ ಪದೇ ಪ್ರತಿಪಕ್ಷ ನಾಯಕರೇ ಎಂದು ಕರೆದ ಸ್ಪೀಕರ್ ಖಾದರ್, ಕೊನೆಗೆ ಪ್ರತಿಪಕ್ಷ ನಾಯಕರಾಗಿಲ್ಲ ಎಂದ ಹೇಳಿದರು.
ಬೆಳಗಾವಿ: ಜೈನಮುನಿ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಹಿಂದೆ ಯಾರ ಯಾರ ಕೈವಾಡ ಇದೆ ಅನ್ನೋದು ಬಯಲಾಗಬೇಕು. ಸಮಗ್ರ ತನಿಖೆ ಆಗಲಿ ಅಂತಾ ಸತ್ಯಶೋಧನಾ ಸಮಿತಿ ರಚಿಸಿದ್ದೇವೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಟಿ.ನರಸೀಪುರದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆಯಾಗಿದೆ. ಕಳೆದ ಒಂದು ತಿಂಗಳಿನಲ್ಲಿ 10-11 ಹತ್ಯೆಗಳಾಗಿವೆ ಎಂದು ಬೆಳಗಾವಿಯಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕಟೀಲು ಆಗ್ರಹಿಸಿದ್ದಾರೆ.
ಬೆಂಗಳೂರು: ಟಿ. ನರಸೀಪುರದಲ್ಲಿ ಯುವಾ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ನಾಯಕ್ ಹತ್ಯೆ ಪ್ರಕರಣವನ್ನು ವಿಧಾನ ಪರಿಷತ್ನ ಶೂನ್ಯವೇಳೆಯಲ್ಲಿ ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಪ್ರಸ್ತಾಪಿಸಿದರು. ಉನ್ನತ ಮಟ್ಟದ ತನಿಖೆ ಹಾಗೂ 25 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಒತ್ತಾಯಿಸಿದರು. ಗೃಹ ಸಚಿವರು ಖುದ್ದು ಉತ್ತರ ನೀಡುವಂತೆ ಕೋಟ ಶ್ರೀನಿವಾಸ್ ಪೂಜಾರಿ ಒತ್ತಾಯಿಸಿದರು. ಗೃಹ ಸಚಿವರ ಸದನದಲ್ಲಿ ಇಲ್ಲದ ಕಾರಣ ಉತ್ತರ ಕೊಡಿಸುವುದಾಗಿ ಸಚಿವ ಕೆಎನ್ ರಾಜಣ್ಣ ತಿಳಿಸಿದರು. ಈ ವೇಳೆ ಸದನದಲ್ಲಿ ಗದ್ದಲವಾಯಿತು. ಈ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಬಿಜೆಪಿ ಸದಸ್ಯರು ಒತ್ತಾಯಿಸಿದರು.
ಬೆಂಗಳೂರು: ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ಗದ್ದಲವಾದ ನಂತರ ಸ್ಪೀಕರ್ ಯುಟಿ ಖಾದರ್ ಸಂಧಾನ ಸಭೆ ಕರೆದರು. ಈ ವೇಳೆ ಸಂಧಾನ ಸಭೆಗೆ ತೆರಳಲು ವಿಪಕ್ಷ ಬಿಜೆಪಿ ಸದಸ್ಯರ ನಿರಾಕರಿಸಿದರು.
ನಾವಂತೂ ಬರಲ್ಲ, ಸದನದಲ್ಲೇ ಸಚಿವರು ಬಂದು ಕ್ಷಮೆ ಕೇಳಬೇಕು ಎಂದು ಬಿಜೆಪಿ ಸದಸ್ಯರು ಹೇಳಿದರು.
ಬೆಂಗಳೂರು: ಸದನದಲ್ಲಿ ಆಡಳಿತ, ವಿಪಕ್ಷಗಳ ನಡುವೆ ತೀವ್ರ ಗದ್ದಲ ಹಿನ್ನೆಲೆ ವಿಧಾನಸಭೆ ಕಲಾಪವನ್ನು ಸ್ಪೀಕರ್ ಯುಟಿ ಖಾದರ್ ಹತ್ತು ನಿಮಿಷ ಮುಂದೂಡಿದರು.
ಬೆಂಗಳೂರು: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತ ಪ್ರಕರಣ ಹೆಚ್ಚಳವಾಗಿದೆ ಎಂದು ವಿಧಾನಸಭೆಯಲ್ಲಿ ರಾಜಾಜಿನಗರ ಶಾಸಕ ಸುರೇಶ್ಕುಮಾರ್ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸರಿಯಾಗಿ ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣ ಮಾಡಿಲ್ಲ. ಬಹಳಷ್ಟು ನ್ಯೂನತೆಗಳೊಂದಿಗೆ ದಶಪಥ ನಿರ್ಮಾಣ ಮಾಡಲಾಗಿದೆ. ರಸ್ತೆ ತಿರುವುಗಳಿಗೆ, ವೇಗ ಮಿತಿ ಇಳಿಕೆಗೆ ಯಾವುದೇ ಸೂಚನಾ ಫಲಕಗಳಿಲ್ಲ. ವೇಗವಾಗಿ ವಾಹನ ಓಡಿಸಿ ಬಂದಾಗ ಅಪಘಾತಗಳಾಗುತ್ತಿವೆ ಎಂದರು.
ಬೆಂಗಳೂರು: ಹಳ್ಳಿಗಳಲ್ಲಿನ ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಮಹಿಳೆಯರು ನಮಗೆ ಘೇರಾವ್ ಹಾಕಿ ಪ್ರಶ್ನೆ ಮಾಡುತ್ತಿದ್ದಾರೆ. ಇದರ ಬಗ್ಗೆ ಸರ್ಕಾರ ಏನು ಕ್ರಮ ಕೈಕೊಂಡಿದೆ ಎಂದು ಶಾಸಕ ರಾಜುಕಾಗೆ ಪ್ರಶ್ನೆ ಮಾಡಿದ್ದಾರೆ. ರಾಜು ಕಾಗೆ ಪ್ರಶ್ನೆಗೆ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಉತ್ತರಿಸಿ ವಹಿವಾಟು ಆಧರಿಸಿ MSILಗೆ ಅವಕಾಶ ಕೊಟ್ಟಿದ್ದೇವೆ. ಈವರೆಗೂ ಗ್ರಾಮೀಣ ಭಾಗದಲ್ಲಿ ಯಾವುದೇ ಲೈಸೆನ್ಸ್ ಕೊಟ್ಟಿಲ್ಲ. ಹಳ್ಳಿಗಳ ಅಂಗಡಿಯಲ್ಲೂ ಮಾರಾಟ ಮಾಡ್ತಿರೋದು ಗಮನಕ್ಕೆ ಬಂದಿದೆ. ಮೈದಾನ, ಶಾಲೆಗಳ ಬಳಿಯೂ ಕೆಲವರು ಮದ್ಯ ಕುಡಿಯುತ್ತಿದ್ದಾರೆ. ಈ ಬಗ್ಗೆ ಗೃಹ ಸಚಿವರ ಜತೆ ಮಾತನಾಡಿ ಕಂಟ್ರೋಲ್ ಮಾಡುತ್ತೇನೆ ಎಂದು
ವಿಧಾನಸಭೆಯಲ್ಲಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಹುಬ್ಬಳ್ಳಿ: ವಿಧಾನಸಭೆಯಲ್ಲಿ ನಮಾಜ್ಗೆ ಅವಕಾಶ ಕೊಡೋ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಪ್ರಮೋದ್ ಮುತಾಲಿಕ್ ಮಾತನಾಡಿ ವಿಧಾನಸೌಧ ಏನ ಮೆಕ್ಕಾ ಮದೀನಾ ? ಇದನ್ನೆನು ಮೆಕ್ಕಾ ಮದೀನಾ ಅಂತಾ ತಿಳಿದುಕೊಂಡಿದ್ದೀರಾ ? ಇದು ಡೆಂಜರಸ್ ಮಾನಸಿಕತೆ. ವಿಧಾನಸೌಧ ಪವಿತ್ರ ದೇಗುಲ ಅಲ್ಲಿ ನಮಾಜ್ ಮಾಡ್ತೀರಾ ನೀವು. ಕಡತದಿಂದ ವಾಪಸ್ ಆ ಮಾತು ತಗಿಬೇಕು. ಅವರಿಗೆ ಶಿಕ್ಷೆಯಾಗಬೇಕು. ಇದೇ ಕೋಮುವಾದ ಎಂದು ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ಸ್ಥಾಪಕ ಪ್ರಮೋದ್ ಮುತಾಲಿಖ್ ಹೇಳಿದರು.
ಬೆಂಗಳೂರು: ಏತ ನೀರಾವರಿ ಯೋಜನೆಗೆ ಉಚಿತ ವಿದ್ಯುತ್ ಕೊಡಿ ಎಂದು ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ಪ್ರಶ್ನೆಗೆ ಉಪಮುಖ್ಯ ಡಿಕೆ ಶಿವಕುಮಾರ್ ಉತ್ತರಿಸಿದರು. ಏತ ನೀರಾವರಿ ಯೋಜನೆಗೆ ಬಳಕೆ ಮಾಡಿಕೊಳ್ಳುತ್ತಿರುವ ವಿದ್ಯುತ್ಗೆ ಬಿಲ್ ಕಟ್ಟಿಲ್ಲ. ಕೋಟಿ ಕೋಟಿ ಹಣ ಬಾಕಿ ಇಟ್ಟುಕೊಂಡಿದ್ದಾರೆ. ತುಮಕೂರು ಗ್ರಾಮಾಂತರ, ಚನ್ನಪಟ್ಟಣದಲ್ಲಿ ಕೆರೆ ತುಂಬಿಸಲು ಏತ ನೀರಾವರಿ ಯೋಜನೆ ಬೇಕು ಅಂತಾರೆ. ಯಾರು ಸಹ ಇಂಧನ ಇಲಾಖೆಗೆ ಹಣ ಕೊಡುತ್ತಿಲ್ಲ. ತುಮಕೂರು ಗ್ರಾಮಾಂತರದಲ್ಲಿ ಆರು ಕೋಟಿ ಹಣ ಕೊಡಬೇಕು. ಚನ್ನಪಟ್ಟಣದಲ್ಲಿ ಐದು ಕೋಟಿ ಬಾಕಿ ಇದೆ. ಪಂಚಾಯತ್ ಅವರಿಗೆ ನೀರು ಬೇಕು ಅಂದ್ರೇ ಹಣ ಕೊಡಲ್ಲ. ಇಂಧನ ಇಲಾಖೆ ಮತ್ತು ಜಲಸಂಪನ್ಮೂಲ ಇಲಾಖೆಗಳ ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ ಎಂದು ಸದನದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಂಗಳೂರು: ಶಾಲೆಗಳಲ್ಲಿ ವಾರಕ್ಕೆ 2 ಮೊಟ್ಟೆ ನೀಡಲು ನಿರ್ಧರಿಸಲಾಗಿದೆ. ವಾರಕ್ಕೆ 2 ಮೊಟ್ಟೆ ಕೊಡುವ ಬಗ್ಗೆ ಮುಖ್ಯಮಂತ್ರಿಗೆ ಮನವಿ ಮಾಡಿಕೊಂಡಿದ್ದೆ. ಸಿಎಂ ಒಪ್ಪಿಗೆ ನೀಡಿ ವಾರಕ್ಕೆ 2 ಮೊಟ್ಟೆ ನೀಡಲು ಅನುಮೋದಿಸಿದ್ದಾರೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ಹೇಳಿದ್ದಾರೆ.
ಬೆಂಗಳೂರು: ಕೊರೋನಾದಿಂದ ತತ್ತರಿಸಿದ್ದ ನೇಯ್ಗೆ ಉದ್ಯಮಕ್ಕೆ ನಮ್ಮ ಸರ್ಕಾರ ಸಬ್ಸಿಡಿ ಮತ್ತು ಸಹಕಾರ ನೀಡುವ ಮೂಲಕ ತನ್ನ ಕಾಲ ಮೇಲೆ ನಿಲ್ಲುವಂತೆ ಮಾಡಿತ್ತು.ಆದರೆ #ATMSarkara ದ ಗ್ಯಾರಂಟಿ ಪ್ರಸಾದವಾಗಿ ವಿದ್ಯುತ್ ಮಗ್ಗಗಳ ಬಿಲ್‌ಗಳು ನಾಲ್ಕು ಪಟ್ಟು ಹೆಚ್ಚಾಗಿದೆ. ರಾಜ್ಯಾದ್ಯಂತ 1.2 ಲಕ್ಷ ವಿದ್ಯುತ್ ಮಗ್ಗಗಳ ಮೇಲೆ ಅವಲಂಬಿತವಾಗಿರುವ ಲಕ್ಷಾಂತರ ಕುಟುಂಬಗಳಿಗೆ ಸಿದ್ದರಾಮಯ್ಯ ಅವರು ದೌರ್ಭಾಗ್ಯ ಒದಗಿಸಿದ್ದಾರೆ.
ಕೂಡಲೇ ಮಗ್ಗಗಳ ವಿದ್ಯುತ್ ದರ ಇಳಿಸಿ, ಉದ್ಯಮ ಉಳಿಸಿ, ನೇಕಾರರಿಗೆ ಗೌರವಯುತ ಬದುಕು ಬದುಕಲು ಅವಕಾಶ ಕಲ್ಪಿಸಿ ಎಂದು ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದೆ.
ಬೆಂಗಳೂರು: ವಿಧಾನಸೌಧದ ಸುತ್ತಮುತ್ತ ಟ್ರಾಫಿಕ್ಜಾಮ್ ಹಿನ್ನೆಲೆ ವಿಧಾನಸೌಧದ ಪೂರ್ವ ಗೇಟ್ ತೆರೆಯುವಂತೆ ಸ್ಪೀಕರ್ ಯುಟಿ ಖಾದರ್ ಅವರಿಗೆ ಸಚಿವ ಕೆ.ಜೆ.ಜಾರ್ಜ್ ಮನವಿ ಮಾಡಿದ್ದಾರೆ. ಇದಕ್ಕೆ ಸ್ಪೀಕರ್ ಅರ್ಧ ಗಂಟೆ ಮೊದಲೇ ಬಂದರೆ ಬೇಗ ಸದನಕ್ಕೆ ತಲುಪಬಹುದು ಎಂದರು. ಪ್ರತಿಯಾಗಿ ಕೆ ಜೆ ಜಾರ್ಜ್ ಬೇಕಾದರೆ 3 ಗಂಟೆಗಳ ಕಾಲ ಮೊದಲೇ ಹೊರಡುತ್ತೇವೆ. ಕನಿಷ್ಠ ಅಧಿವೇಶನದ ಸಮಯದಲ್ಲಾದರೂ ಗೇಟ್ ಓಪನ್ ಮಾಡಿಸಿ. ಈ ಬಗ್ಗೆ ಚರ್ಚೆ ಮಾಡಿ ಪರಿಶೀಲನೆ ಮಾಡುತ್ತೇವೆ ಎಂದು ಸ್ಪೀಕರ್ ಹೇಳಿದರು.
ಬೆಂಗಳೂರು: ಕಲಾಪಕ್ಕೆ ನಗುತ್ತಾ ಸ್ಪೀಕರ್ ಯುಟಿ ಖಾದರ್ ಸದನಕ್ಕೆ ಬಂದರು. ಸದನಕ್ಕೆ ಬಂದ ಕೂಡಲೇ ಏನು ಖುಷಿಯಾಗಿದ್ದೀರಿ ಎಂದು ವಿಪಕ್ಷ ಬಿಜೆಪಿ ಸದಸ್ಯರು ಕೇಳಿದರು. ಇದಕ್ಕೆ ಸ್ಪೀಕರ್ ನಾನು ನಗುತ್ತಾ ಇದ್ದರೆ ನೀವು ನಗುತ್ತಾ ಇರುತ್ತೀರಿ. ನಾನು ಟೆನ್ಷನ್ನಲ್ಲಿ ಇದ್ದರೇ ನೀವೂ ಟೆನ್ಷನ್ನಲ್ಲಿ ಇರುತ್ತೀರಿ. ಅದಕ್ಕೆ ನಾನು ನಗುತ್ತಾ ಇರುತ್ತೇನೆ ಎಂದರು.
ಬೆಳಗಾವಿ: ಹಿರೇಕೋಡಿ ನಂದಿಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಸಿ ಇಂದು ಚಿಕ್ಕೋಡಿ ತಾಲೂಕಿನ ಬೋರಗಾಂವ ಪಟ್ಟಣ ಬಂದ್‌ಗೆ ಜೈನ ಸಮುದಾಯ ಕರೆ ನೀಡಿದೆ. ಬೋರಗಾಂವ ಪಟ್ಟಣ ಬಂದ್ ಮಾಡಿ ಜೈನ ಸಮುದಾಯದ ಜನರನ್ನು ಪ್ರತಿಭಟನೆ ಮಾಡಲು ಮುಂದಾಗಿದೆ. ಜೈನ ಸಮುದಾಯದ ಮುಖಂಡ ಉತ್ತಮ ಪಾಟೀಲ್ ನೇತೃತ್ವದಲ್ಲಿ ಪ್ರತಿಭಟನಾ ರ್ಯಾಲಿ ನಡೆಯಲಿದೆ. ಜೈನಮುನಿ ಹಂತಕರನ್ನು ಗಲ್ಲಿಗೇರಿಸಬೇಕೆಂದು ಒತ್ತಾಯಿಸಿದ್ದಾರೆ.
ಮಂಡ್ಯ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಚಾಲಕ ಜಗದೀಶ್ ರನ್ನ ಚಿಕಿತ್ಸೆಗೆ ಕರೆದೊಯ್ಯುವಾಗ ನಾಗಮಂಗಲ ಮಾಜಿ ಶಾಸಕ ಸುರೇಶ್ ಗೌಡ ಆಂಬುಲೆನ್ಸ್ ತಡೆದಿದ್ದರು ಎಂದು ಸಚಿವ ಚೆಲುವರಾಯಸ್ವಾಮಿ ಆರೋಪಿಸಿದ್ದರು.
ಜಗದೀಶ್ರನ್ನು ಬಿಜಿಎಸ್ ಆಸ್ಪತ್ರೆಯಿಂದ ಹೆಚ್ಚುವರಿ ಚಿಕಿತ್ಸೆಗೆ ಮೈಸೂರಿನ ಕೊಲಂಬಿಯಾ ಆಸ್ಪತ್ರೆಗೆ ಕರೆದೊಯ್ಯುವಾಗ ಮಾಜಿ ಶಾಸಕ ಸುರೇಶ್ ಗೌಡ ತಡೆದಿದ್ದರು. ಈ ಬಗ್ಗೆ ಸಿಸಿ ಕ್ಯಾಮರಾದ ವಿಡಿಯೋ ಲಭ್ಯವಾಗಿದೆ.
ಬೆಳಗಾವಿ: ಜೈನಮುನಿ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪೊಲೀಸರು ಆರೋಪಿಗಳನ್ನು ಕೋರ್ಟ್ಗೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಿದ್ದಾರೆ. ಪ್ರಕರಣದ ಎ1 ಆರೋಪಿ ನಾರಾಯಣ ಮಾಳಿ, ಎ2 ಆರೋಪಿ ಹಸನಸಾಬ್ ದಲಾಯತ್.
ಬೆಂಗಳೂರು: ಇಂದಿರಾ ಕ್ಯಾಂಟಿನ್ನ ಅಭಿವೃದ್ಧಿಗಾಗಿ ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ 100 ಕೋಟಿ ಬಿಡುಗಡೆ ಮಾಡಿದ್ದಾರೆ. ಆದ್ರೆ ಇಲ್ಲಿ ಊಟ, ತಿಂಡಿಗೆ ಹೆಚ್ಚಿನ ಹಣ ಪಡೆಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಸರಿಪಡಿಸಲು ಬಿಬಿಎಂಪಿ ಮುಂದಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರ ಭೇಟಿ ವೇಳೆ ಇಂದಿರಾ ಕ್ಯಾಂಟೀನ್ನಲ್ಲಿ ಹಚ್ಚಿನ ಹಣ ಪಡೆಯುತ್ತಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಈ ಹಿನ್ನಲೆ ಈಗ ಪ್ರತಿ ಇಂದಿರಾ ಕ್ಯಾಂಟೀನ್ಗೆ ಪಾಲಿಕೆ ಅಧಿಕಾರಿ ನೇಮಕ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ.
ಮಂಡ್ಯ: ಕೆಎಸ್ಆರ್ಟಿಸಿ ಬಸ್ ಚಾಲಕ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಮಂಗಲಕ್ಕೆ ಇಂದು ಸಿಐಡಿ ತಂಡ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ನಿನ್ನೆ (ಜು.10) ಸಂಜೆ ತನಿಖಾ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇಂದು ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಕರೆ ನೀಡಿದೆ. ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದಲ್ಲಿ ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ಬಂದ್‌ಗೆ ಕರೆ ನೀಡಿದ್ದಾರೆ.
ಬೆಳಗಾವಿ: ಚಿಕ್ಕೋಡಿಯ ಜೈನಮುನಿ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಸತ್ಯಾಸತ್ಯತೆ ಅರಿಯಲು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ನೇತೃತ್ವದ ತಂಡ ಇಂದು (ಜು.11) ಸ್ಥಳಕ್ಕೆ ಭೇಟಿ ನೀಡಲಿದೆ. ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿಪರ್ವತ ಆಶ್ರಮ ಹಾಗೂ ರಾಯಬಾಗ ತಾಲೂಕಿನ ಕಟಕಬಾವಿಯ ಕಬ್ಬಿನ ಗದ್ದೆಗೆ ಮಧ್ಯಾಹ್ನ 12 ಗಂಟೆಗೆ ನೀಡಲಿದ್ದಾರೆ.
ಬೆಂಗಳೂರು: ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಬರ್ಬರ ಹತ್ಯೆ ಮತ್ತು ಮೈಸೂರು ಜಿಲ್ಲೆ ಟಿ. ನರಸೀಪುರದ ಯುವಾ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಕೊಲೆ ಪ್ರಕರಣವನ್ನು ಅಸ್ತ್ರವಾಗಿ ಬಳಸಲು ಹೊರಟಿರುವ ಬಿಜೆಪಿ ಇಂದು ವಿಧಾನಸಭೆ ಮತ್ತು ವಿಧಾನ ಪರಿಷತ್ನಲ್ಲಿ ಧರಣಿ ನಡೆಸಲಿದೆ. ಬಿಜೆಪಿ ಹೀಗಾಗಿ ಈ ಎರಡೂ ಕೊಲೆಗಳನ್ನು ಖಂಡಿಸಿ ಇಂದು ವಿಪಕ್ಷ ಬಿಜೆಪಿ ಸದಸ್ಯರು ಉಭಯ ಸದನದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
Published On - 8:03 am, Tue, 11 July 23